ನನಗೂ ಶಾಲೆ..

Team Udayavani, Sep 16, 2019, 10:25 AM IST

ಹುಬ್ಬಳ್ಳಿ: ಸಮಾಜದ ಎಲ್ಲರೂ ಮುಖ್ಯವಾಹಿನಿಗೆ ಬರಬೇಕೆಂಬ ಉದ್ದೇಶಕ್ಕಾಗಿ ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಪೂರಕವೆಂಬಂತೆ ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣ ಇಲಾಖೆ ಉತ್ತಮ ಕೆಲಸ ನಿರ್ವಹಿಸುತ್ತಿದೆ.

ಶಹರ ವ್ಯಾಪ್ತಿಯ ಸುಮಾರು 730 ಅಂಗವಿಕಲ ವಿದ್ಯಾರ್ಥಿಗಳಲ್ಲಿ 90 ಮಕ್ಕಳಿಗೆ ಹಳೇಹುಬ್ಬಳ್ಳಿ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.1ರ ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತಿದೆ. ಪ್ರತಿದಿನ 10 ಮಕ್ಕಳಿಗೆ ಶಾಲೆಗೆ ಕರೆಯಿಸಿ ವಿಶೇಷ ತರಬೇತಿ ನೀಡಲಾಗುತ್ತಿದೆ.

ಕಳೆದ ಮೂರು ವರ್ಷಗಳಿಂದ ಶಹರ ವ್ಯಾಪ್ತಿಯಲ್ಲಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. 2017-18ರಲ್ಲಿ 45, 2018-19ರಲ್ಲಿ 63 ಹಾಗೂ 2019-20ರಲ್ಲಿ 90 ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ. ಶಹರದಲ್ಲಿರುವ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಅಧ್ಯಯನ ಮಾಡುವ ಮಕ್ಕಳಿಗೆ ಈ ತರಬೇತಿ ನೀಡಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ 21 ಮಕ್ಕಳಿಗೆ ವಿಶೇಷ ತರಬೇತಿ ನೀಡಿ ಮುಖ್ಯವಾಹಿನಿಗೆ ತರಲಾಗಿದೆ.

 

ವಿಪ್ರೋಕೇರ್‌ ಸಹಯೋಗ: ವಿಪ್ರೋಕೇರ್‌ ಸಂಸ್ಥೆಯಡಿ ಫೋರ್ಥ್ ವೇವ್ಸ್‌ ಫೌಂಡೇಶನ್‌ ಆರಂಭಿಸಿದ್ದು, ಅದರ ಮೂಲಕ “ನನಗೂ ಶಾಲೆ’ ಎಂಬ ಶೀರ್ಷಿಕೆಯಡಿ ನಾಲ್ವರು ಸ್ವಯಂ ಸೇವಕರು ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಾರೆ. ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ಕೇಂದ್ರದಲ್ಲಿದ್ದು, ಮಕ್ಕಳಿಗೆ ಆಟೋಟದೊಂದಿಗೆ ತರಬೇತಿ ನೀಡುತ್ತಾರೆ. ಇವರೊಂದಿಗೆ ನಾಲ್ವರು ಸರಕಾರಿ ಶಿಕ್ಷಕರು ಬ್ಲಾಕ್‌ ಇನಕ್ಲುಸಿವ್‌ ಎಜುಕೇಶನ್‌ ರಿಸೋರ್ಸ್‌ ಸೆಂಟರ್‌(ಬಿಐಇಆರ್‌ಸಿ) ಮಕ್ಕಳಿಗೆ ತರಬೇತಿ ನೀಡುತ್ತಾರೆ. ಜೊತೆಗೆ ಶಹರದ 120 ಶಾಲೆಗಳನ್ನು ಈ ನಾಲ್ವರು ಶಿಕ್ಷಕರು ಹಂಚಿಕೊಂಡು ಆಯಾ ಶಾಲೆಗಳಿಗೆ ತೆರಳಿ ಅಂಗವಿಕಲ ಮಕ್ಕಳಿಗೆ ವಿಶೇಷ ತರಬೇತಿ ನೀಡಿ ಬರುತ್ತಾರೆ.

ಗೃಹಾಧಾರಿತ ಶಿಕ್ಷಣ: ಏಳಲು ಆಗದ ಸ್ಥಿತಿಯಲ್ಲಿರುವ ಮಕ್ಕಳಿಗೆ ಮನೆಗಳಿಗೆ ತೆರಳಿ ಗೃಹಾಧಾರಿತ ಶಿಕ್ಷಣ ತರಬೇತಿ ನೀಡಲಾಗುತ್ತದೆ. ಮಗುವಿಗೆ ಫಿಜಿಯೋಥೆರಪಿ, ವ್ಯಾಯಾಮ, ನಡೆದಾಟ, ಅವರ ಭಾವನೆಗಳಿಗೆ ತಕ್ಕ ಕೆಲಸಗಳನ್ನು ಮಾಡಿಸುವುದು ಸೇರಿದಂತೆ ಇನ್ನಿತರ ಕೆಲಸ ಮಾಡಿಸಿ ತರಬೇತಿ ನೀಡಲಾಗುತ್ತದೆ. ಖಾತೆಗೆ ಹಣ ಸಂದಾಯ: ಬಹು ವಿಧದಅಂಗವಿಕಲತೆಯಿಂದ ಬಳಲುತ್ತಿರುವ

ಮಕ್ಕಳಿಗೆ ಕೇಂದ್ರಕ್ಕೆ ಆಗಮಿಸಿ ತರಬೇತಿ ಕೊಡಿಸಲು ಮಗುವಿನ ಪಾಲಕರಿಗೆ ಸಾರಿಗೆ ಹಾಗೂ ರಕ್ಷಣೆ ಹಣವನ್ನು ಪ್ರತಿ ತಿಂಗಳು ಅವರ ಖಾತೆಗೆ ಜಮೆ ಮಾಡಲಾಗುತ್ತದೆ. ಇದರಿಂದ ಪಾಲಕರು ಸಹ ಮಕ್ಕಳ ತರಬೇತಿ ಸಮಯದಲ್ಲಿ ಅವರೊಂದಿಗೆ ಇದ್ದು, ತರಬೇತಿ ಪಡೆಯುವುದನ್ನು ನೋಡಬಹುದಾಗಿದೆ.

 

  • ಅಂಗವಿಕಲ ಮಕ್ಕಳಿಗೆ ವಿಶೇಷ ತರಬೇತಿ
  • ಕ್ಷೇತ್ರ ಶಿಕ್ಷಣ ಇಲಾಖೆಯ ಮಾದರಿ ಕಾರ್ಯ
  • ಮುಖ್ಯವಾಹಿನಿಗೆ ಕೆರೆತರುವ ಪ್ರಯತ್ನ
  • ಗೃಹಾಧಾರಿತ ಶಿಕ್ಷಣಕ್ಕೂ ಇಲ್ಲಿದೆ ಆದ್ಯತೆ
  • ಫೋರ್ಥ್ವೇವ್ಸ್‌ ಫೌಂಡೇಶನ್‌ ಹಾಥ್‌
  • ಸ್ವಯಂಸೇವಕರಿಗೆ ಸರ್ಕಾರಿ ಶಿಕ್ಷಕರ ಸಾಥ್‌
  • 90 ಮಕ್ಕಳಿಗೆ ಚೈತನ್ಯ ತುಂಬುವ ಕಾಯಕ

ಜನ್ಮತಾಳುವ ಮಕ್ಕಳು ಅಂಗವಿಕಲತೆ ಹೊಂದಿದ್ದರೆ ಪಾಲಕರು ಏನು ಮಾಡುವುದು ಎನ್ನುವ ಚಿಂತೆಯಲ್ಲಿ ತೊಡಗುತ್ತಾರೆ. ಆದರೆ ಸರಕಾರದ ನೆರವಿನಿಂದ ಬಡ ಅಂಗವಿಕಲ ಮಕ್ಕಳನ್ನು ಮುಖ್ಯವಾಹಿನಿಗೆ ತರಲೆಂದು ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರ ತೆರೆಯಲಾಗಿದೆ. ಸದ್ಯ ಇಲ್ಲಿ ಸುಮಾರು 90 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಇದರಿಂದ ಬಡವರಿಗೆ ತುಂಬಾ ಅನುಕೂಲವಾಗಿದೆ. -ಶ್ರೀಶೈಲ ಕರಿಕಟ್ಟಿ, ಶಹರ ಕ್ಷೇತ್ರ ಶಿಕ್ಷಣಾಧಿಕಾರಿ

ವಿಪ್ರೋಕೇರ್‌ ಸಹಯೋಗದಲ್ಲಿ ಫೋರ್ಥ್ ವೇವ್ಸ್‌ ಫೌಂಡೇಶನ್‌ ರಚಿಸಿದ್ದು, ಇಂತಹ ಕೇಂದ್ರಗಳಲ್ಲಿ ಫೌಂಡೇಶನ್‌ನ ಸ್ವಯಂ ಸೇವಕರನ್ನು ಬಿಟ್ಟು ಸೇವೆ ಮಾಡಿಸಲಾಗುತ್ತದೆ. ಬುದ್ಧಿಮಾಂದ್ಯ ಮಕ್ಕಳು ಸೇರಿದಂತೆ ಬಹುವಿಧದ ಅಂಗವಿಕಲ ಮಕ್ಕಳಿಗೆ ಹೊರಗಿನ ಜಗತ್ತು ಏನುಎನ್ನುವುದನ್ನು ಇಲ್ಲಿ ತೋರಿಸಲಾಗುತ್ತದೆ. ಇದರಿಂದ ಮಕ್ಕಳಲ್ಲಿ ಹೊಸ ಚೈತನ್ಯ ಮೂಡುತ್ತಿದೆ. ಹಲವಾರು ವಿದ್ಯಾರ್ಥಿಗಳು ತರಬೇತಿ ನಂತರ ತಮ್ಮ ಕೆಲಸ ತಾವೇ ಮಾಡಿಕೊಳ್ಳುತ್ತಿರುವುದು ನೋಡಿದರೆ ನಮ್ಮ ಕೆಲಸ ಸಂತಸ ಮೂಡಿಸುತ್ತದೆ. .ರುಕ್ಸಾನ್‌ ನದಾಫ್‌-ಭಾರತಿ ಜಾಲಿಬಡ್ಡಿ, ಸ್ವಯಂ ಸೇವಕರು

 

.ಬಸವರಾಜ ಹೂಗಾರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ