ಇನ್ನೂ ನಿಂತಿಲ್ಲ ಒಳ ಹೊಡೆತ ಆಂತರಿಕ ಬೆಂಕಿ ಕೊತ ಕೊತ

Team Udayavani, Jun 30, 2019, 9:16 AM IST

ಹುಬ್ಬಳ್ಳಿ: ಆಂತರಿಕ ಕಚ್ಚಾಟಕ್ಕೆ ಸಿಲುಕಿರುವ ಕಾಂಗ್ರೆಸ್‌ ಲೋಕಸಭೆ ಚುನಾವಣೆ ಹೀನಾಯ ಸೋಲಿನ ನಂತರವೂ ಕಚ್ಚಾಟದಿಂದ ಹೊರಬರದೆ ಇನ್ನಷ್ಟು ಆಳಕ್ಕಿಳಿಯುತ್ತಿದೆ. ಧಾರವಾಡ ಜಿಲ್ಲೆ ಮಹಾನಗರ- ಗ್ರಾಮೀಣ ಕಾಂಗ್ರೆಸ್‌ ಸ್ಥಿತಿ ಇದಕ್ಕೆ ಪುಷ್ಟಿ ನೀಡುವಂತಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷರಿಗೇ ಸೆಡ್ಡು ಹೊಡೆಯುವ ರೀತಿಯಲ್ಲಿ ಪರ್ಯಾಯ ಸಭೆ ನಡೆದಿದೆ.

ಲೋಕಸಭೆ ಚುನಾವಣೆ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಎಐಸಿಸಿ ರಾಜ್ಯ ಕಾಂಗ್ರೆಸ್‌ನ ಎಲ್ಲ ಘಟಕಗಳನ್ನು ರದ್ದುಗೊಳಿಸಿತ್ತು. ಇಷ್ಟಾದರೂ ಕಾಂಗ್ರೆಸ್‌ನಲ್ಲಿನ ಬೇಗುದಿ ಇನ್ನೂ ಶಮನಗೊಂಡಿಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪಾಲ್ಗೊಂಡ ಪಕ್ಷದ ಸಭೆಗೆ ಅನೇಕ ಜಿಲ್ಲಾ ಮುಖಂಡರು ಪಾಲ್ಗೊಳ್ಳದೆ, ಅದೇ ವೇಳೆ ಪರ್ಯಾಯ ಸಭೆ ನಡೆಸುವ ಮೂಲಕ ಕಾರ್ಯಾಧ್ಯಕ್ಷರಿಗೆ ಸೆಡ್ಡು ಹೊಡೆಯುವ ಯತ್ನ ತೋರಿದ್ದಾರೆ.

ಧಾರವಾಡ ಜಿಲ್ಲಾ ಕಾಂಗ್ರೆಸ್‌ ಬಗ್ಗೆ ಮಾತನಾಡಲು ಮುಂದಾದರೆ ಯಾವ ಗುಂಪಿನ ಕುರಿತಾಗಿ ಮಾತನಾಡುತ್ತಿದ್ದೀರಿ ಎಂದು ಕೇಳುವಂತಹ ಸ್ಥಿತಿ ಇದೆ. ಜಿಲ್ಲೆಗೊಂದು ಸ್ಪಷ್ಟ ನಾಯಕತ್ವವಿಲ್ಲದೆ, ಆಯಾ ಮುಖಂಡರು ತಮ್ಮ ತಮ್ಮ ಗುಂಪುಗಾರಿಕೆಯಲ್ಲಿ ತೊಡಗಿದ್ದಾರೆ. ಪಕ್ಷ ಸಂಘಟನೆ ಬದಲು ಒಂದು ಗುಂಪು, ಇನ್ನೊಂದು ಗುಂಪನ್ನು ಹಣಿಯುವುದು ಹೇಗೆ ಎಂಬುದರಲ್ಲೇ ಹೆಚ್ಚು ಮಗ್ನವಾಗಿರುತ್ತದೆ ಎಂಬುದನ್ನು ಕಾಂಗ್ರೆಸ್‌ ಕಾರ್ಯಕರ್ತರೇ ಒಪ್ಪುತ್ತಾರೆ. ಲೋಕಸಭೆ ಚುನಾವಣೆ ಸೋಲಿನ ನಂತರವಾದರೂ ಪಕ್ಷದಲ್ಲಿ ಒಗ್ಗಟ್ಟು ಬರುತ್ತದೆ, ಮುಂಬರುವ ಮಹಾನಗರ ಪಾಲಿಕೆ ಚುನಾವಣೆಗೆ ಸಂಘಟಿತ ಧ್ವನಿ ಮೊಳಗಲಿದೆ ಎಂಬ ಸಾಮಾನ್ಯ ಕಾರ್ಯಕರ್ತರ ನಿರೀಕ್ಷೆ ಹುಸಿಯಾಗುವ ಬೆಳವಣಿಗೆ ನಡೆಯತೊಡಗಿವೆ. ಇದಕ್ಕೆ ಪೂರಕವಾಗಿ ಒಂದೇ ದಿನ, ಒಂದೇ ಸಮಯಕ್ಕೆ ಕಾಂಗ್ರೆಸ್‌ನ ಎರಡು ಸಭೆಗಳು ನಡೆದಿವೆ. ಒಂದು ಆತ್ಮಾಲೋಕನ ಹೆಸರಲ್ಲಿ ನಡೆದರೆ, ಇನ್ನೊಂದು ಚಿಂತನ-ಮಂಥನ ಹೆಸರಲ್ಲಿ ನಡೆದಿದೆ.

ಪಕ್ಷಕ್ಕಿದು ಮುಜುಗರ ಸ್ಥಿತಿ: ವಿಧಾನಸಭೆ ಚುನಾವಣೆಯಲ್ಲಿ 2013ಕ್ಕೆ ಹೋಲಿಸಿದರೆ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಇದ್ದ ಸ್ಥಾನಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ, ಇದ್ದ ನಾಲ್ಕು ಸ್ಥಾನಗಳನ್ನು ಉಳಿಸಿಕೊಳ್ಳಲಾಗದೆ ಕೇವಲ ಎರಡು ಶಾಸಕ ಸ್ಥಾನಕ್ಕೆ ಕುಸಿದಿತ್ತು. 2019ರ ಲೋಕಸಭೆ ಚುನಾವಣೆಯಲ್ಲೂ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್‌ಗೆ ಪಕ್ಷದಲ್ಲಿ ಸಂಘಟನೆ ಬದಲು ವಿಘಟನೆ ಹೆಚ್ಚುತ್ತಿರುವುದು ಮುಜುಗರ ಸ್ಥಿತಿ ಸೃಷ್ಟಿಸತೊಡಗಿದೆ.

ಹತ್ತು ವರ್ಷಗಳಿಂದ ಪಾಲಿಕೆ ಅಧಿಕಾರ ಹಿಡಿಯುವಲ್ಲಿ ವಿಫ‌ಲವಾಗಿರುವ ಕಾಂಗ್ರೆಸ್‌, ಇದೇ ವರ್ಷ ನಡೆಯುವ ಪಾಲಿಕೆ ಚುನಾವಣೆಯಲ್ಲಿ ಆಂತರಿಕ ಕಚ್ಚಾಟಕ್ಕೆ ಸಿಲುಕಿದೆ. ಇದೇ ರೀತಿ ಮುಂದುವರೆದರೆ ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಇದ್ದ ಸ್ಥಾನಗಳನ್ನು ಗೆಲ್ಲುತ್ತೇವೆಯೇ ಎಂಬ ಆಂತಕದ ಪ್ರಶ್ನೆ ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತರದ್ದಾಗಿದೆ.

ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಸ್ಥಿತಿ ಎಷ್ಟು ದಯನಿಯವಾಗಿದೆ ಎಂದರೆ, ವಿಪಕ್ಷಗಳು ಕಾಂಗ್ರೆಸ್‌ ಪಕ್ಷ ಹಾಗೂ ನಾಯಕರ ವಿರುದ್ಧ ಆರೋಪಗಳ ಸುರಿಮಳೆಗೈದರೂ, ವಾಗ್ಧಾಳಿ ನಡೆಸಿದರೂ, ಆಡಳಿತದಲ್ಲಿರುವ ಸರ್ಕಾರ ಜನವಿರೋಧಿ ನೀತಿಗಳನ್ನು ಜಾರಿಗೊಳಿಸಿದರೂ ಗಟ್ಟಿ ಧ್ವನಿಯಲ್ಲಿ ಹೋರಾಟ ಮಾಡುವುದಿರಲಿ, ಆರೋಪಗಳಿಗೆ ಎದುರೇಟು, ಹೇಳಿಕೆ ನೀಡುವುದಕ್ಕೂ ಯಾರೂ ಇಲ್ಲವೇನೋ ಎನ್ನುವ ಸ್ಥಿತಿ ನಿರ್ಮಾಣಗೊಂಡಿದೆ.

 

•ಅಮರೇಗೌಡ ಗೋನವಾರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಅಳ್ನಾವರ: ತಾಲೂಕಿನ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹಳ್ಳಗಳು ತುಂಬಿಕೊಂಡಿವೆ. ಪಟ್ಟಣದ ಜನರಿಗೆ ಕುಡಿಯುವ ನೀರನ್ನು ಪೂರೈಸುವ ಡೌಗಿ ಹಳ್ಳದ...

  • ಧಾರವಾಡ: ದಡ್ಡಿ ಕಮಲಾಪುರ ಬಳಿ ಇರುವ ಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರಕ್ಕೆ ಇರುವ ಏಕೈಕ ದಾರಿಯನ್ನು ಅಧಿಕಾರಿಗಳು ಸೋಮವಾರ ದಿಢೀರ್‌ ಬಂದ್‌ ಮಾಡಿದ್ದಾರೆ. ಬೆಳ್ಳಂಬೆಳಗ್ಗೆ...

  • ನರಗುಂದ: ಕುಡಿಯುವ ನೀರಿಗಾಗಿ ನಡೆಯುತ್ತಿರುವ ಮಹದಾಯಿ ಮತ್ತು ಕಳಸಾ-ಬಂಡೂರಿ ಚಳವಳಿ ನಾಲ್ಕು ವರ್ಷ ಪೂರೈಸಿದೆ. ನ್ಯಾಯಾಧೀಕರಣ ಹಂಚಿಕೆ ಮಾಡಿದರೂ ಮಲಪ್ರಭೆ ಒಡಲು...

  • ಹುಬ್ಬಳ್ಳಿ: ಬೇಂದ್ರೆ ಸಾರಿಗೆಗೆ ತಾತ್ಕಾಲಿಕ ರಿಲೀಫ್‌ ದೊರೆತಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಮುಂದಿನ 15 ದಿನಗಳ ಕಾಲ ಯಥಾಸ್ಥಿತಿ (ಸ್ಟೆಟೆಸ್ಕೋ ) ಕಾಪಾಡುವಂತೆ...

  • ಹುಬ್ಬಳ್ಳಿ: ಕೇಶ್ವಾಪುರ ನಾಗಶೆಟ್ಟಿಕೊಪ್ಪ ಸರಕಾರಿ ಶಾಲೆಯಲ್ಲಿ ವಿ ಕೇರ್‌ ಫೌಂಡೇಶನ್‌ನಿಂದ ವಿದ್ಯಾರ್ಥಿಗಳಿಗೆ ಜಲಜಾಗೃತಿ ಕಾರ್ಯಕ್ರಮ ನಡೆಯಿತು. ಫೌಂಡೇಶನ್‌...

ಹೊಸ ಸೇರ್ಪಡೆ