ಇನ್ನೆರಡು ದಿನದಲ್ಲಿ ಕೊಲ್ಲಾಪುರಕ್ಕೆ ತನಿಖಾ ತಂಡ

Team Udayavani, Nov 18, 2019, 10:44 AM IST

ಹುಬ್ಬಳ್ಳಿ: ನಗರದ ರೈಲ್ವೆ ನಿಲ್ದಾಣದಲ್ಲಿ ಅ.21ರಂದು ಅನುಮಾನಾಸ್ಪದ ವಸ್ತುವೊಂದು ಸ್ಫೋಟಗೊಂಡು ಆತಂಕ ಸೃಷ್ಟಿಸಿದ್ದ ಘಟನೆಗೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರೈಲ್ವೆ ಪೊಲೀಸ್‌ ಹಿರಿಯ ಅಧಿಕಾರಿಗಳ ತಂಡ ಇನ್ನೆರಡು ದಿನಗಳಲ್ಲಿ ಕೊಲ್ಲಾಪುರಕ್ಕೆ ತೆರಳಿ ಶಾಸಕರನ್ನು ಭೇಟಿ ಮಾಡಿ, ಅವರಿಂದ ಇನ್ನಷ್ಟು ಮಾಹಿತಿ ಕಲೆ ಹಾಕಲು ಮುಂದಾಗಿದೆ.

ಅ.21ರಂದು ವಿಜಯವಾಡ- ಹುಬ್ಬಳ್ಳಿ ಅಮರಾವತಿ ಎಕ್ಸಪ್ರಸ್‌ (17225) ರೈಲಿನ ಸಾಮಾನ್ಯ ಬೋಗಿಯ ಸೀಟಿನ ಕೆಳಗಡೆ ಸಂಶಯಾಸ್ಪದ ಬಕೆಟ್‌ ನಲ್ಲಿಡಲಾಗಿದ್ದ ಊಟದ ಡಬ್ಬಿಗಳಲ್ಲಿನ ವಸ್ತು ಸ್ಫೋಟಗೊಂಡು ಓರ್ವ ವೆಂಡರ್‌ನ ಕೈಗೆ ಬಲವಾದ ಗಾಯವಾಗಿತ್ತು. ಅಲ್ಲದೆ ಸ್ಟೇಶನ್‌ ಮಾಸ್ಟರ್‌ ಅವರ ಕಚೇರಿಯ ಗಾಜು ಪುಡಿ ಪುಡಿಯಾಗಿತ್ತು. ಈ ಸ್ಫೋಟಕ ವಸ್ತುಗಳ ಬಕೆಟ್‌ನ ಮೇಲೆ “ಪ್ರಕಾಶ ಅಭಿತಕರ, ಬುಧರಘಡ ತಾಲೂಕು, ಎಂಎಲ್‌ಎ ಗರಗೋಟಿ, ಕೊಲ್ಹಾಪುರ ಜಿಲ್ಲೆ ಎಂಎಸ್‌ ಸ್ಟೇಟ್‌ ಎಂದು ಹಾಗೂ ನೋ ಬಿಜೆಪಿ, ನೋ ಆರ್‌ಎಸ್‌ ಎಸ್‌, ಓನ್ಲಿ ಶಿವಸೇನಾ’ ಎಂದು ಇಂಗ್ಲಿಷ್‌ ಹಾಗೂ ತಮಿಳು ಭಾಷೆಯಲ್ಲಿ ಪ್ರತ್ಯೇಕವಾಗಿ ಬರೆದ ಲೇಬಲ್‌ ಅಂಟಿಸಲಾಗಿತ್ತು. ಈ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯುತ್ತಿತ್ತು. ಹೀಗಾಗಿ ಈ ಸ್ಫೋಟಕವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಅ. 28ರಂದು ಬೆಂಗಳೂರಿನಿಂದ ಆಗಮಿಸಿದ್ದ ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ತಂಡ(ಬಿಡಿಡಿಎಸ್‌) ವು ಸ್ಫೋಟಕ ವಸ್ತುಗಳನ್ನು ಇಲ್ಲಿನ ಗೋಕುಲ ರಸ್ತೆಯ ಹೊಸ ಸಿಎಆರ್‌ ಮೈದಾನದಲ್ಲಿ ನಿಷ್ಕ್ರಿಯಯಗೊಳಿಸಿತ್ತು.

ಇನ್ನೂ ಸಿಗದ ಸುಳಿವು: ಸ್ಫೋಟಕ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಇಲಾಖೆ ಘಟನೆಗೆ ಸಂಬಂಧಿಸಿ ತನಿಖೆ ನಡೆಸಲು ರೈಲ್ವೆ ಪೊಲೀಸ್‌ ಠಾಣೆ ಡಿವೈಎಸ್‌ಪಿ ಬಸನಗೌಡ ಬಿ. ಪಾಟೀಲ ನೇತೃತ್ವದಲ್ಲಿ ಮೂರು ವಿಶೇಷ ತಂಡ ರಚಿಸಿದೆ. ಈ ತಂಡಗಳು ಈಗಾಗಲೇ ವಿಜಯವಾಡ, ಕೊಲ್ಲಾಪುರಕ್ಕೆ ಎರಡು ಬಾರಿ ತೆರಳಿ ಘಟನೆಯ ಕುರಿತು ಒಂದಿಷ್ಟು ಮಾಹಿತಿ ಕಲೆ ಹಾಕಿವೆ. ಅಲ್ಲದೆ ಹುಬ್ಬಳ್ಳಿಯಿಂದ ವಿಜಯವಾಡ ಹಾಗೂ ಕೊಲ್ಲಾಪುರವರೆಗಿನ ರೈಲ್ವೆ ನಿಲ್ದಾಣಗಳಲ್ಲಿ ಸಿಸಿಟಿವಿ ಫೂಟೇಜ್‌ಗಳನ್ನು ಸಂಗ್ರಹಿಸಿವೆ.

ಮೊಬೈಲ್‌ ಕರೆಗಳನ್ನು ಪರಿಶೀಲಿಸಿವೆ. ಆದರೆ ಇದುವರೆಗೂ ಈ ಸ್ಫೋಟಕ ವಸ್ತುಗಳು ಎಲ್ಲಿಂದ ಬಂದಿದ್ದವು. ಅವನ್ನು ರೈಲಿನಲ್ಲಿ ಯಾರು ತಂದು ಇಟ್ಟಿದ್ದರು. ಇವನ್ನು ಎಲ್ಲಿಗೆ ಒಯ್ಯಲಾಗುತ್ತಿತ್ತು ಎಂಬ ಕುರಿತು ಸುಳಿವು ದೊರೆತಿಲ್ಲ. ಅಲ್ಲದೆ ಈ ತನಿಖಾ ತಂಡಗಳಿಗೆ ಕೆಲವು ರೈಲ್ವೆ ನಿಲ್ದಾಣಗಳಲ್ಲಿ ಸಿಸಿಟಿವಿ ಫೂಟೇಜ್‌ಗಳು ಸಿಕ್ಕಿಲ್ಲ. ಹೀಗಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ಡಿವೈಎಸ್‌ಪಿ ಬಿ.ಬಿ. ಪಾಟೀಲ ಅವರು ಇನ್ನೆರಡು ದಿನಗಳಲ್ಲಿ ಕೊಲ್ಲಾಪುರಕ್ಕೆ ತೆರಳಿ, ಶಾಸಕರನ್ನು ಭೇಟಿ ಮಾಡಿ ಅವರಿಂದ ಒಂದಿಷ್ಟು ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ.

ಬಕೆಟ್‌ ಲೇಬಲ್‌ ಮೇಲೆ ಶಾಸಕರ ಹೆಸರೇಕೆ?: ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಸ್ಫೋಟಕ ವಸ್ತುಗಳನ್ನು ಹೊಂದಿದ್ದ ಬಕೆಟ್‌ನ ಲೇಬಲ್‌ ಮೇಲೆ ಬುಧರಘಡ ತಾಲೂಕ ಗರಗೋಟಿ ಶಾಸಕ ಪ್ರಕಾಶ ಅಭಿತಕರ ಹೆಸರನ್ನು ನಮೂದಿಸಲಾಗಿತ್ತು. ಶಾಸಕರ ಮೇಲೆ ವೈಯಕ್ತಿಕ ದ್ವೇಷ ಹೊಂದಿದವರೆ ಹೀಗೆ ಮಾಡಿದ್ದಾರೆಯೇಹೇಗೆ? ಬಕೆಟ್‌ ಮೇಲೆ ಶಾಸಕರ ಹೆಸರು ಹೇಗೆ ಬಂತು ಸೇರಿದಂತೆ ಇನ್ನಿತರೆ ಮಾಹಿತಿ ಕಲೆ ಹಾಕುವ ಸಲುವಾಗಿ ತನಿಖಾ ತಂಡವು ಶಾಸಕ ಪ್ರಕಾಶ ಅಭಿತಕರ ಅವರನ್ನು ಭೇಟಿ ಮಾಡಲು ಮುಂದಾಗಿದ್ದಾರೆ. ಆದರೆ ಮಹಾರಾಷ್ಟ್ರದಲ್ಲಿ ಶಿವಸೇನೆಯವರು ಸರಕಾರ ರಚನೆಯಲ್ಲಿ ಆಗಿರುವ ಸಮಸ್ಯೆಯಿಂದ ತಮ್ಮ ಶಾಸಕರನ್ನೆಲ್ಲ ಹೊಟೇಲ್‌ವೊಂದರಲ್ಲಿ ಕೂಡಿ ಹಾಕಿದ್ದರಿಂದ ತನಿಖಾ ತಂಡಕ್ಕೆ ಶಾಸಕರನ್ನು ಭೇಟಿ ಆಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇನ್ನೆರಡು ದಿನಗಳಲ್ಲಿ ಅಲ್ಲಿ ಸರಕಾರ ರಚನೆ ಸುಸೂತ್ರವಾಗುವ ಲಕ್ಷಣಗಳು ಇರುವ ಕಾರಣ ತಂಡವು ಶಾಸಕ ಪ್ರಕಾಶ ಅಭಿತಕರ ಅವರನ್ನು ಭೇಟಿ ಮಾಡಿ, ಅವರಿಂದಲೇ ಒಂದಿಷ್ಟು ಮಾಹಿತಿ ಕಲೆ ಹಾಕಲು ಯೋಚಿಸಿದೆ ಎಂದು ತಿಳಿದು ಬಂದಿದೆ.

 

-ಶಿವಶಂಕರ ಕಂಠಿ


ಈ ವಿಭಾಗದಿಂದ ಇನ್ನಷ್ಟು

  • ಹುಬ್ಬಳ್ಳಿ: ತಾಲೂಕಿನಾದ್ಯಂತ ಮಳೆಗೆ ಎಲ್ಲ ರಸ್ತೆಗಳು ಹಾಳಾಗಿದ್ದು, ಸಮರ್ಪಕ ದುರಸ್ತಿ ಕಾರ್ಯ ಕೈಗೊಳ್ಳದ ಬಗ್ಗೆ ತಾಪಂ ಸದಸ್ಯರು ಪಕ್ಷಭೇದ ಮರೆತು ಆಕ್ರೋಶ ವ್ಯಕ್ತಪಡಿಸಿದರು. ಗುರುವಾರ...

  • ಹುಬ್ಬಳ್ಳಿ: ಕಂಡರಿಯದ ದರ ಇದ್ದರೂ ನೀಡುವುದಕ್ಕೆ ಉಳ್ಳಾಗಡ್ಡಿಯೇ ಇಲ್ಲವಲ್ಲ ಎಂದು ರೈತ ಸಂಕಷ್ಟ ಪಡುತ್ತಿದ್ದರೆ, ಗಂಟೆಗೊಮ್ಮೆ ಹೆಚ್ಚುತ್ತಿರುವ ಉಳ್ಳಾಗಡ್ಡಿ...

  • ಧಾರವಾಡ: ನಲವತ್ತೆರಡು ಎಕರೆ ವ್ಯಾಪ್ತಿಯ ಕೆರೆಯ ತುಂಬೆಲ್ಲಾ ಬರೀ ಚರಂಡಿ ನೀರಿನ ಗಬ್ಬು ನಾತ. ಈ ಚರಂಡಿ ನೀರಿನಲ್ಲಿಯೇ ಆವರಿಸಿದೆ ಕಸ-ಕಳೆ. ಎಕರೆಯಷ್ಟು ಕೆರೆಯ ಒತ್ತುವರಿ....

  • ಧಾರವಾಡ: ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಬಳಕೆಯಾಗುವ ಒಟ್ಟು 58 ವಾದ್ಯಗಳ ಪೈಕಿ 48 ವಾದ್ಯಗಳು ರೂಪುಗೊಳ್ಳುವ ಮರಗಳ ಸಸಿಗಳನ್ನು, ಹಳ್ಳಿಗೇರಿಯ ನೇಚರ್‌...

  • ಹುಬ್ಬಳ್ಳಿ:ಮಹದಾಯಿ ನ್ಯಾಯಾಧಿಕರಣ ತೀರ್ಪಿನ ಅನ್ವಯ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದ್ದು, ಉಪ ಚುನಾವಣೆ ನಂತರ ನಾಲ್ಕು ಜಿಲ್ಲೆಗಳಲ್ಲಿ...

ಹೊಸ ಸೇರ್ಪಡೆ