84ನೇ ಸಾಹಿತ್ಯ ಸಮ್ಮೇಳನದ ಖರ್ಚು ಉದ್ರಿ!

Team Udayavani, Jan 31, 2019, 12:30 AM IST

ಧಾರವಾಡ: ಅದ್ಧೂರಿಯಾಗಿ ನಡೆದ 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಖರ್ಚು-ವೆಚ್ಚ ಮಾಡಿದವರಿಗೆ ಸದ್ಯಕ್ಕೆ ಜಿಲ್ಲಾಡಳಿತ ಉದ್ರಿ ಹೇಳಿದ್ದು, 6 ಕೋಟಿ ರೂ. ಹಣ ಸರ್ಕಾರದಿಂದ ಇನ್ನೂ ಬಂದಿಲ್ಲ!

ಸಮ್ಮೇಳನ ನಡೆಯುವ ಮೂರು ತಿಂಗಳು ಮುಂಚೆಯಿಂದಲೂ ಸರ್ಕಾರದಿಂದ 12 ಕೋಟಿ ರೂ.ಗೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ, ಸರ್ಕಾರದಿಂದ 8 ಕೋಟಿ ರೂ.ಬಿಡುಗಡೆ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದ್ದರು.

ಸಮ್ಮೇಳನ ಮುಗಿದು ಒಂದು ತಿಂಗಳಾಗುತ್ತ ಬಂದರೂ ಇಂದಿಗೂ ಸಮ್ಮೇಳನಕ್ಕಾಗಿ ಖರ್ಚು ಮಾಡಿದ ಊಟ, ವಸತಿ, ಶಾಮಿಯಾನ, ಕಲಾವಿದರ ಗೌರವಧನ ಸೇರಿದಂತೆ ಯಾವ ಹಣವೂ ಜಿಲ್ಲಾಡಳಿತದ ಕೈ ಸೇರಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿಗೆ ಸರ್ಕಾರ 2 ಕೋಟಿ ರೂ.ಬಿಡುಗಡೆ ಮಾಡಿತ್ತು. ಈ ಪೈಕಿ ಕಸಾಪ ಕೇವಲ 1 ಕೋಟಿ ರೂ.ಮಾತ್ರ ಖರ್ಚು ಮಾಡಿದ್ದಾಗಿ ಹೇಳಿದ್ದು, ಇನ್ನುಳಿದ ಒಂದು ಕೋಟಿ ರೂ.ಗಳನ್ನು ಶೀಘ್ರವೇ ಜಿಲ್ಲಾಡಳಿತಕ್ಕೆ ವರ್ಗಾವಣೆ ಮಾಡುವುದಾಗಿ ಹೇಳಿತ್ತು. ಆದರೆ ಈವರೆಗೂ ಹಣ ಬಂದಿಲ್ಲ.

ಏಳು ಸಮಿತಿಗಳಿಂದ ಮಾತ್ರ ಬಿಲ್‌: ಸದ್ಯಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನದ ಎಲ್ಲಾ ಹಣಕಾಸಿನ ಬಾಬ್ತುಗಳನ್ನು ತುಂಬಿ ಕೊಡುವ ಹೊಣೆ ಧಾರವಾಡ ಜಿಲ್ಲಾಡಳಿತದ ಮೇಲಿದೆ. ಸಮ್ಮೇಳನಕ್ಕೂ ಮುಂಚೆ ಒಟ್ಟು 16 ಸಮಿತಿಗಳನ್ನು ರಚನೆ ಮಾಡಿ ಆ ಮೂಲಕವೇ ಎಲ್ಲ ಕೆಲಸ ಕಾರ್ಯಗಳನ್ನು ಮಾಡಲಾಗಿತ್ತು. ಇದೀಗ ಈ ಎಲ್ಲಾ ಸಮಿತಿಗಳು ತಾವು ಮಾಡಿದ ಖರ್ಚು ವೆಚ್ಚದ ಬಾಬ್ತುಗಳನ್ನು ಸರಿಯಾದ ರಶೀದಿಗಳೊಂದಿಗೆ ಸಲ್ಲಿಸಬೇಕಿದೆ. ಒಟ್ಟು 16 ಸಮಿತಿಗಳ ಪೈಕಿ ಸದ್ಯಕ್ಕೆ 7 ಸಮಿತಿಗಳು ಮಾತ್ರ ಬಾಬ್ತುಗಳನ್ನು (ಬಿಲ್‌) ಜಿಲ್ಲಾಡಳಿತಕ್ಕೆ ಒಪ್ಪಿಸಿದ್ದು, ಇನ್ನುಳಿದ 9 ಸಮಿತಿಗಳು ಇನ್ನೂ ಬಿಲ್‌ಗ‌ಳನ್ನು ಸಲ್ಲಿಸಿಲ್ಲ ಎನ್ನಲಾಗಿದೆ. ಈ ಬಿಲ್‌ಗ‌ಳನ್ನು ಸಮ್ಮೇಳನದ ಹಣಕಾಸು ಸಮಿತಿ ಪರಿಶೀಲನೆ ನಡೆಸಿದ ನಂತರ ಜಿಲ್ಲಾಧಿಕಾರಿಗೆ ಹೋಗಲಿದ್ದು, ಜಿಲ್ಲಾಧಿಕಾರಿ ಹಣವನ್ನು ಆಯಾ ಸಮಿತಿಗಳಿಗೆ ಬಿಡುಗಡೆ ಮಾಡುತ್ತಾರೆ.

ವಿಳಂಬಕ್ಕೆ ಕಾರಣವೇನು?: ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್‌, ಬಿಲ್‌ಗ‌ಳ ಪರಿಶೀಲನೆ ಮತ್ತು ಅವುಗಳ ವೆಚ್ಚವನ್ನು ಜ.20ರ ಒಳಗಾಗಿಯೇ ಬಿಡುಗಡೆ ಮಾಡುವುದಾಗಿ ವಿಶ್ವಾಸದಿಂದ ಹೇಳಿದ್ದರು. ಆದರೆ, ಸದ್ಯಕ್ಕೆ ಸರ್ಕಾರದಿಂದ ಬರಬೇಕಿರುವ ಹಣ ಬಂದಿಲ್ಲ. ಹಿರಿಯ ಅಧಿಕಾರಿಯೊಬ್ಬರು ಹೇಳುವಂತೆ ಹಣ ಬಿಡುಗಡೆಗೆ ವಿಳಂಬವಾಗಿರುವುದಕ್ಕೆ ಪ್ರಮುಖ ಕಾರಣ ಆನ್‌ಲೈನ್‌ ವ್ಯವಸ್ಥೆಯನ್ನು ಹಣ ಬಿಡುಗಡೆಗೆ ಬಳಸಿಕೊಂಡಿದ್ದು. ಆನ್‌ಲೈನ್‌ ಮೂಲಕ ಹಣ ಸಂದಾಯ ಮಾಡಲು ಅಗತ್ಯವಾದ ಎಲ್ಲ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಲೇಬೇಕು. ಅದೂ ಅಲ್ಲದೇ ಜಿಎಸ್‌ಟಿ ಸೇರಿ ಎಲ್ಲ ಮೂಲದಾಖಲೆ ಪತ್ರಗಳು ತಲುಪಿದ ಮೇಲೆಯೇ ಹಣ ಬಿಡುಗಡೆಯಾಗುತ್ತದೆ. ಹೀಗಾಗಿ (ಕೆ2) ಖಜಾನೆ ಮೂಲಕ ಸಂದಾಯ ಮಾಡಬೇಕಿರುವ ಹಣ ಮೊದಲಿನ ಪದ್ಧತಿಯಲ್ಲಿ ಕೆಂಪು, ಬಿಳಿ, ಹಳದಿ ರಶೀದಿ ಮೂಲಕ ಸಾಗುತ್ತಿತ್ತು. ಆದರೆ ಇದೀಗ ಆನ್‌ಲೈನ್‌ನಲ್ಲೆ ಎಲ್ಲಾ ದಾಖಲೆ ಸಲ್ಲಿಸಬೇಕಿರುವುದರಿಂದ ವಿಳಂಬವಾಗುತ್ತಿದೆ ಎನ್ನಲಾಗಿದೆ.

ಇನ್ನೆಷ್ಟು ದಿನ ಕಾಯುವಿಕೆ?
84ನೇ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭಕ್ಕೂ ಮೊದಲು ಹಣಕಾಸಿನ ತೊಂದರೆ ಇಲ್ಲ ಎನ್ನುತ್ತಿದ್ದ ರಾಜಕಾರಣಿಗಳು ಇದೀಗ ಈ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಿ ಹಣಕಾಸು ಇಲಾಖೆಗೆ ಸಲ್ಲಿಸಿದರೂ ಅಲ್ಲಿಂದ ಹಣ ಬಿಡುಗಡೆ ಮಾಡಿಸಲು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಈ ಭಾಗದ ಪ್ರಭಾವಿಗಳೇ ಒತ್ತಡ ತರಬೇಕಿದೆ. ಉದ್ರಿ ಹೇಳಿದವರು ಹಣಕ್ಕಾಗಿ ಎಷ್ಟು ದಿನ ಕಾಯಬೇಕೋ ಗೊತ್ತಿಲ್ಲ.

ಹಣಕಾಸು ಸಮಿತಿ ತನ್ನ ಕರ್ತವ್ಯಗ ಳನ್ನು ಸರಿಯಾಗಿ ಪೂರೈಸುತ್ತಿದ್ದು, ವಿವಿಧ ಸಮಿತಿಗಳು ಕೊಟ್ಟಿರುವ ಬಿಲ್‌ಗ‌ಳನ್ನು ಪರಿಶೀಲನೆ ಮಾಡುತ್ತಿದೆ. ಇನ್ನೊಂ ದು ವಾರದಲ್ಲಿ ಎಲ್ಲಾ ಬಿಲ್‌ಗ‌ಳ ಪರಿಶೀ ಲನೆ ಮುಗಿಸುವ ಗುರಿ ಇದ್ದು, ಅದನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು.
– ಡಾ. ಬಿ.ಸಿ. ಸತೀಶ, ಸಿಇಒ,

ಧಾರವಾಡ ಜಿಪಂ ಸರ್ಕಾರ ಮತ್ತು ರಾಜಕಾರಣಿಗಳಿಗೆ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದ ಆರಂಭಕ್ಕೆ ಇರುವ ಉತ್ಸಾಹ ಮುಗಿದ ಮೇಲೆ ಇರುವುದಿಲ್ಲ. ಕನ್ನಡ ಕಟ್ಟುವ ಕಾರ್ಯಕ್ರಮಕ್ಕೆ ಹಣ ಹಾಕಿದವರಿಗೆ ತೊಂದರೆಯಾಗದಂತೆ ಸರ್ಕಾರ ಕ್ರಮ ವಹಿಸಬೇಕು.
– ಹೆಸರು ಹೇಳಲಿಚ್ಛಿಸದ ಹಿರಿಯ ಸಾಹಿತಿ

– ಬಸವರಾಜ ಹೊಂಗಲ್

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ