ಕುಂದದ ಆಶಾ ಕಂಗಳ ಗೋಳ ಕೇಳುವರಾರು?

Team Udayavani, Apr 20, 2019, 11:02 AM IST

ಕುಂದಗೋಳ: ಸ್ಥಳೀಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಲೋಕ ಸಮರದ ಕಾವು ಅಷ್ಟಾಗಿ ಕಂಡುಬಂದಿಲ್ಲ. ಕೇವಲ ಮುಖಂಡರ ರೋಡ್‌ ಶೋ, ಪ್ರಚಾರ ಸಭೆಗಳಿಗೆ ಮಾತ್ರ ಹೆಚ್ಚಿನ ಜನ ಸೇರುತ್ತಿದ್ದು, ತುರುಸಿನ ಪ್ರಚಾರ ಅಷ್ಟಕ್ಕಷ್ಟೆ.

ಮೋದಿ ಹಾಗೂ ರಾಹುಲ್ ವ್ಯಕ್ತಿತ್ವದ ಬಗ್ಗೆ ಸುದೀರ್ಘ‌ ಚರ್ಚೆಯಾಗುತ್ತಿದೆಯೇ ವಿನಃ ಕ್ಷೇತ್ರ ವ್ಯಾಪ್ತಿಯಲ್ಲಿನ ಸಮಸ್ಯೆಗಳ ಕುರಿತು ಯಾವ ರಾಜಕೀಯ ನಾಯಕರೂ ಮಾತೆತ್ತುತ್ತಿಲ್ಲ. ಯುವಕರು ಮೋದಿ ಪರ ಸಾಮಾಜಿಕ ಜಾಲತಾಣಗಳಲ್ಲಿ ವಿಚಾರ ವಿನಿಮಯ ನಡೆಸಿದ್ದರೆ, ಹಿರಿಯರು ಯಾರು ಬಂದರೇನು? ನಮ್ಮ ಗೋಳು ಕೇಳುವವರ್ಯಾರು? ಎಲ್ಲ ಪಕ್ಷಗಳೂ ಮೂಗಿಗೆ ತುಪ್ಪ ಸವರುತ್ತವೆ ಅಷ್ಟೆ ಎಂದು ಅರಳಿಕಟ್ಟೆ ಮೇಲೆ ಮಾತನಾಡಿಕೊಳ್ಳುತ್ತಿದ್ದಾರೆ.

ಕಳೆದ ನಾಲ್ಕೈದು ವರ್ಷಗಳಿಂದ ಸಮರ್ಪಕ ಮಳೆಯಾಗದೆ ರೈತರು ಸಾಲಕ್ಕೆ ಸಿಕ್ಕು ನರಳಾಡುತ್ತಿದ್ದು ರಾಜ್ಯ ಸರ್ಕಾರ ಸಾಲಮನ್ನಾ ಘೋಷಿಸಿದೆ. ಆದರೆ ಬ್ಯಾಂಕಿನಲ್ಲಿನ ರೈತರ ಸಾಲ ಮನ್ನಾ ಆಗಿಲ್ಲ. ಕ್ಷೇತ್ರದಲ್ಲಿ ಮೆಣಸಿನಕಾಯಿ, ಹತ್ತಿ, ಶೇಂಗಾ ಪ್ರಮುಖ ಬೆಳೆ. ಮಾರುಕಟ್ಟೆಯಲ್ಲಿ ರೈತರು ಬೆಳೆದ ಬೆಳೆಗೆ ಸೂಕ್ತ ಧಾರಣೆ ಸಿಗುತ್ತಿಲ್ಲ. ಮೆಣಸಿನಕಾಯಿ ಸಂರಕ್ಷಿಸಲು ವೇರ್‌ಹೌಸ್‌ ಇದುವರೆಗೂ ಯಾವ ಪಕ್ಷವೂ ನಿರ್ಮಿಸಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ಪ್ರಹ್ಲಾದ ಜೋಶಿ ಅವರು ಇಲ್ಲಿ ಶಾಲಾ ಕಾಲೇಜಿಗೆ ಸ್ಮಾರ್ಟ್‌ ಕ್ಲಾಸ್‌, ಡೆಸ್ಕ್, ಶೌಚಾಲಯ, ಶುದ್ಧ ನೀರಿನ ಘಟಕ, ಸಮುದಾಯ ಭವನಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಆದರೆ ದೊಡ್ಡ ಯೋಜನೆಗಳು, ಯುವಕರಿಗೆ ಉದ್ಯೋಗ ನೀಡುವಂತ ಕಾರ್ಯಗಳಾಗಿಲ್ಲ ಎಂಬುದು ಕ್ಷೇತ್ರ ಜನರ ಅಂಬೋಣ.

ನೋಟ್ ಬ್ಯಾನ್‌ ಸರ್ಜಿಕಲ್ ಸ್ಟ್ರೈಕ್‌: ಕಳೆದ 5 ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರ ನೋಟ್ಬ್ಯಾನ್‌ ಮಾಡಿರುವ ಕುರಿತು ಸುದಿಧೀರ್ಘ‌ ಚರ್ಚೆಯಾಗುತ್ತಿದ್ದು, ಪರ ವಿರೋಧಗಳು ಕೇಳುತ್ತಿವೆ. ಗಡಿಯಲ್ಲಿ ಉಗ್ರರ ಮೇಲೆ ಸರ್ಜಿಕಲ್ ಸ್ಟ್ರೈಕ್‌ ಮಾಡಿದ್ದಕ್ಕೆ ಮತದಾರ ಶಭಾಶ್‌ ಎನ್ನುತ್ತಿದ್ದಾನೆ. ರಫೇಲ್ ಆರೋಪ ಬಗ್ಗೆ ಗ್ರಾಮೀಣ ಜನರಲ್ಲಿ ಅಷ್ಟೊಂದು ಅರಿವಿಲ್ಲ. ಮೋದಿಯವರು ವಿದೇಶ ಸುತ್ತಿದ್ದಾರೆ, ದೇಶಕ್ಕೇನು ಮಾಡಿದ್ದಾರೆ? ಎಂಬುದರ ಬಗ್ಗೆಯೂ ಚರ್ಚೆ ಸಾಗಿದೆ. ಪ್ರಹ್ಲಾದ ಜೋಶಿ ಪರ ಚಿತ್ರನಟಿ ತಾರಾ ಅವರು ಕುಂದಗೋಳ ಪಟ್ಟಣದಲ್ಲಿ ಪ್ರಚಾರ ಕೈಗೊಂಡರೆ, ಕಾಂಗ್ರೆಸ್ಸಿನ ವಿನಯ ಕುಲಕರ್ಣಿ ಹಾಗೂ ಪಕ್ಷದ ಮುಖಂಡರು ವಿವಿಧೆಡೆ ಪ್ರಚಾರ ನಡೆಸಿದ್ದಾರೆ. ಕಾರ್ಯಕರ್ತರು ಮನೆ ಮನೆ ಪ್ರಚಾರಕ್ಕೆ ಒತ್ತು ನೀಡಿದ್ದಾರೆ.

ಸಾಲು ಸಾಲು ಸಮಸ್ಯೆ ಕುಂದಗೋಳ ಮತ ಕ್ಷೇತ್ರದಲ್ಲಿ ಕುಡಿಯುವ ನೀರಿನ ಹಾಹಾಕಾರ ಮುಗಿಲು ಮುಟ್ಟಿದೆ. ಸಂಶಿ ಜಿಪಂ ವ್ಯಾಪ್ತಿ ಗ್ರಾಮಗಳು ನಿತ್ಯ ನೀರಿಗಾಗಿ ಪರದಾಡುವಂತಾಗಿದೆ. ಕೆರೆಕಟ್ಟೆಗಳು ಬತ್ತಿದರೆ ಈ ಭಾಗದ ಜನರು ದೂರದೂರಿನಿಂದ ನೀರು ತರುವುದು ಸಾಮಾನ್ಯವಾಗುತ್ತಿದೆ. ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಕೋಟಿಗಟ್ಟಲೇ ಹಣ ಖರ್ಚಾದರೂ ಫಲಕಾರಿಯಾಗಿಲ್ಲ. ಅಲ್ಲದೆ ಈ ಭಾಗದಲ್ಲಿ ಭೂಮಿಯನ್ನೇ ಅವಲಂಬಿಸಿ ಜೀವನ ನಡೆಸುವರು ಹೆಚ್ಚಿದ್ದು, ಬರಗಾಲ ಬಂದರೆ ಗುಳೆ ಹೋಗುವುದು ಸಾಮಾನ್ಯವಾಗಿದೆ. ಉದ್ಯೋಗ ಸೃಷ್ಟಿಸುವ ಕಾರ್ಯವನ್ನು ಯಾವುದೇ ಸರ್ಕಾರ ಇದುವರೆಗೂ ಮಾಡಿಲ್ಲ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ನೂರರಷ್ಟು ಮತದಾನ ಮಾಡಿದಾಗ ಸುಭದ್ರ ಸರ್ಕಾರ ಸಾಧ್ಯ.
•ಯು.ಎನ್‌. ಮೆಣಸಿನಗೊಂಡ, ಶಿಕ್ಷಕ

ಸಂಸದ ಪ್ರಹ್ಲಾದ ಜೋಶಿ ಅವರು ಉತ್ತಮ ಕೆಲಸ ಮಾಡಿದ್ದು, ರೈಲು ನಿಲ್ದಾಣ, ವಿಮಾನ ನಿಲ್ದಾಣ, ರಸ್ತೆ ಅಭಿವೃದ್ಧಿ ಮಾಡಿದ್ದಾರೆ.
•ಶಿವಾನಂದ ಜವಳಿ

ಫಸಲ್ ಭಿಮಾ ಯೋಜನೆಯಿಂದ ರೈತರಿಗೆ ಭದ್ರತೆ ಸಿಕ್ಕರೂ ವಿಮಾ ಹಣವನ್ನು ವಿಳಂಬ ಮಾಡುತ್ತಿರುವುದರಿಂದ ತೊಂದರೆ ಆಗುತ್ತಿದೆ.
•ಬಸವರಾಜ ಘಾಟಗೆ

ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯಕ್ಕೆ ನೀಡಿದ ಕೊಡುಗೆ ಶೂನ್ಯವಾಗಿದ್ದು, ರೈತರು ಬರಗಾಲಕ್ಕೆ ಸಿಲುಕಿದರೂ ಸಾಲಮನ್ನಾ ಮಾಡಲಿಲ್ಲ.
•ಹರೀಶ ಲಕ್ಷ್ಮೇಶ್ವರ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ