ಕೆರೆಯಂಗಳದಲ್ಲಿ ವರುಣನ ನರ್ತನೆ

ಜಿಲ್ಲೆಯ 400 ಕೆರೆಯಂಗಳದಲ್ಲಿ ನೀರು |ಹೆಚ್ಚುತ್ತಿದೆ ಮಲೆನಾಡಿನ ಸೊಬಗು |ಕೋಡಿ ಬಿದ್ದಿವೆ 23 ಸಣ್ಣ ಕೆರೆಗಳು

Team Udayavani, Aug 2, 2019, 1:38 PM IST

ಧಾರವಾಡ: ಅಂತೂ ಇಂತು ಸತತ ನಾಲ್ಕು ವರ್ಷಗಳ ಬರಗಾಲದಿಂದ ಕಂಗೆಟ್ಟು ಹೋಗಿದ್ದ ಜಿಲ್ಲೆಯ ಜನರಿಗೆ ಈ ವರ್ಷದ ಆಷಾಡದ ಮಳೆ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆಗೆ ಕೆರೆಕುಂಟೆಗಳು, ಹಳ್ಳಕೊಳ್ಳಗಳು ಮತ್ತು ಕೃಷಿ ಹೊಂಡಗಳು ಮೈದುಂಬಿಕೊಂಡಿದ್ದು ಜೀವಸಂಕುಲಕ್ಕೆ ಹೊಸ ಕಳೆ ಬಂದಂತಾಗಿದೆ.

ಮೇ ತಿಂಗಳಿನಲ್ಲಿ 77 ಮಿ.ಮೀ. ಆಗಬೇಕಿದ್ದ ಮಳೆ ಬರೀ 16 ಮಿ.ಮೀ. ಆಗಿತ್ತು. ಜೂನ್‌ನಲ್ಲಿ ವಾಡಿಕೆ ಮಳೆ 107 ಮಿ.ಮೀ. ಆಗಬೇಕಿತ್ತು, ಆದರೆ 104 ಮಿ.ಮೀ.ಆಗಿತ್ತು. ಇದೀಗ ಜುಲೈ ತಿಂಗಳಿನಲ್ಲಿ 131 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆಸದ್ಯಕ್ಕೆ 230 ಮಿ.ಮೀ.ಮಳೆ ಸುರಿದಿದೆ. ಈ ವರ್ಷದ ಅಗತ್ಯದ ಶೇ.68 ಮಳೆ ಸುರಿದಿದೆ. ಅದರಲ್ಲೂ ಕಳೆದ ಒಂದು

ವಾರದಲ್ಲಿಯೇ 133 ಮಿ.ಮೀ.ಮಳೆ ಸುರಿದಿದೆ. ಹೀಗಾಗಿ ಜಿಲ್ಲೆಯಲ್ಲಿನ ಕೆರೆಕುಂಟೆಗಳು ಸತತ ಐದು ವರ್ಷಗಳ

ನಂತರ ಮತ್ತೇ ತಮ್ಮ ಒಡಲಿನ ಉಡಿಯಲ್ಲಿ ನೀರಿಟ್ಟುಕೊಂಡಿದ್ದು ರೈತರ ಮೊಗದಲ್ಲಿ ಸಂತಸ ಮೂಡುವಂತಾಗಿದೆ. ಜಿಲ್ಲೆಯಲ್ಲಿನ ಮಲೆನಾಡು ಪ್ರದೇಶವಾದ ಧಾರವಾಡ ಮತ್ತು ಕಲಘಟಗಿ ತಾಲೂಕಿನಲ್ಲಿ ಕೆರೆಕುಂಟೆಗಳು ತುಂಬಿಕೊಳ್ಳುತ್ತಿವೆ. ನೀರಾವರಿಗಾಗಿ

ನಿರ್ಮಿಸಿದ 150ಕ್ಕೂ ಅಧಿಕ ಕೆರೆಗಳು ಹೆಚ್ಚು ಕಡಿಮೆ ಭರ್ತಿಯಾಗುವ ಹಂತ ತಲುಪಿದ್ದು, ಹತ್ತು ವರ್ಷಗಳ ನಂತರ ಕೋಡಿ ಬೀಳುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿರುವ 500ಕ್ಕೂ ಅಧಿಕ ಸಣ್ಣ ಕೆರೆಗಳ ಪೈಕಿ 370ಕ್ಕೂ ಅಧಿಕ ಸಣ್ಣ ಕೆರೆಗಳಲ್ಲಿ ಉತ್ತಮ ನೀರು ಸಂಗ್ರಹವಾಗಿದೆ.

ಸಲಕಿನಕೊಪ್ಪ, ಬಾಡ, ನಿಗದಿ, ದೇವರಹುಬ್ಬಳ್ಳಿ, ಲಾಳಗಟ್ಟಿ,ದೇವಗಿರಿ, ಕಲಕೇರಿ, ಹೊಲ್ತಿಕೋಟೆ, ಜಮ್ಯಾಳ, ಜಿ.ಬಸವಣಕೊಪ್ಪ, ದೇವಿಕೊಪ್ಪ, ಗುಂಗಾರಗಟ್ಟಿ, ದಾಸ್ತಿಕೊಪ್ಪ, ಮನಗುಂಡಿ, ಮನಸೂರು, ಗರಗ, ಹಂಗರಕಿ, ದುಬ್ಬನಮರಡಿ, ನರೇಂದ್ರ ಸೇರಿದಂತೆ ಒಟ್ಟು ಜಿಲ್ಲೆಯ 145ಕ್ಕೂ ಹೆಚ್ಚು ಗ್ರಾಮಗಳಲ್ಲಿನ ಎಲ್ಲಾ ಕೆರೆಗಳು ಹೊಸ ನೀರಿನಿಂದ ಕಂಗೊಳಿಸುತ್ತಿವೆ.

ಎಲ್ಲೆಲ್ಲಿ ನೀರು?: ಇನ್ನು ಕಲಘಟಗಿ, ಧಾರವಾಡ ಮತ್ತು ಹುಬ್ಬಳ್ಳಿ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ಈ ತಾಲೂಕು ವ್ಯಾಪ್ತಿಯಲ್ಲಿನ ಶೇ.90 ಕೆರೆಗಳಲ್ಲಿ ಶೇ.60 ನೀರು ತುಂಬಿಕೊಂಡಿದೆ ಎಂದು ಜಿಪಂ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ನವಲಗುಂದ-ಕುಂದಗೋಳ ತಾಲೂಕುಗಳಲ್ಲಿ ಮಾತ್ರ ಸದ್ಯಕ್ಕೆ ಇನ್ನು ಕೆಲವು ಕೆರೆಯಂಗಳಕ್ಕೆ ಸಮರ್ಪಕ ನೀರು ತುಂಬಿಕೊಂಡಿಲ್ಲ. ಇಲ್ಲಿ ಜೂನ್‌ನಲ್ಲಿ ಸುರಿದ ಮಳೆ ಅಷ್ಟಾಗಿ ನಿಲುಕಿಲ್ಲವಾದರೂ ಜುಲೈ ತಿಂಗಳಿನ ಆಷಾಡದ ಮಳೆ ಕೊಂಚ ತಂಪರೆದಿದೆ.

ಹಳ್ಳಕೊಳ್ಳಗಳಲ್ಲಿ ನೀರು: ಸತತ ಮಳೆಯಿಂದ ಜಿಲ್ಲೆಯಲ್ಲಿನ ಬೇಡ್ತಿ, ತುಪರಿ, ಜಾತಗ್ಯಾನ ಹಳ್ಳ ಮತ್ತು ಸಣ್ಣಹಳ್ಳ ಸೇರಿದಂತೆ 24ಕ್ಕೂ ಅಧಿಕ ಹಳ್ಳ ಮತ್ತು ತೊರೆಗಳು ತುಂಬಿಕೊಂಡು ಹರಿಯುತ್ತಿವೆ. ಅದರಲ್ಲೂ ತಾಲೂಕಿನ ಮುಗದ ಗ್ರಾಮದ ಬಳಿ ಹುಟ್ಟಿ ಹರಿಯುವ ಮತ್ತು ನೀರಸಾಗರ ಕೆರೆಯ ಮೂಲ ನೀರಿನ ಸೆಲೆಯಾಗಿರುವ ಬೇಡ್ತಿ ಹಳ್ಳಕ್ಕೆ ಜೀವ ಕಳೆ ಬಂದಿದ್ದು, ರಭಸವಾಗಿ ಹರಿಯುತ್ತಿದೆ. ಈ ಹಳ್ಳಕ್ಕೆ ನಿರ್ಮಿಸಿರುವ 40ಕ್ಕೂ ಅಧಿಕ ಚೆಕ್‌ ಡ್ಯಾಂಗಳು ಭರ್ತಿಯಾಗಿದ್ದು ನೀರಸಾಗರ ಕೆರೆಯಲ್ಲಿ ನಾಲ್ಕು ಅಡಿಯಷ್ಟು ನೀರು ಸಂಗ್ರಹಣೆ ಹೆಚ್ಚಿದೆ. ಜೀವಕಳೆ ತುಂಬಿಕೊಂಡಿರುವ 200ಕ್ಕೂ ಅಧಿಕ ಕಿರುತೊರೆಗಳಲ್ಲಿ ಮಂದನೆಯ ಕೆಂಪು ನೀರು ಸಂಗ್ರಹವಾಗಿದೆ. ಮಳೆಯ ರಭಸಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿರುವ ಎರಡು ಸಣ್ಣ ಕೆರೆಗಳು ಸಂಪೂರ್ಣ ಭರ್ತಿಯಾಗಿವೆ. ಜಿಲ್ಲೆಯ ಐದು ದೊಡ್ಡ ಕೆರೆಗಳಿಗೂ ನೀರು ಹರಿದು ಬರುತ್ತಿದ್ದು, ಉಣಕಲ್‌, ಕೆಲಗೇರಿ, ಮುಗಳಿ ಕೆರೆ, ಸಲಕಿನಕೊಪ್ಪದ ಹಿರೇಕೆರೆಗಳಲ್ಲಿ ನೀರು ಉತ್ತಮ ಮಟ್ಟಕ್ಕೆ ಸಂಗ್ರಹವಾಗಿದೆ.

ರೈತರ ಮೊಗದಲ್ಲಿ ಸಂತಸ: ಸತತ ಬರಗಾಲದಿಂದ ಕಂಗೆಟ್ಟಿದ್ದ ರೈತರಿಗೆ ಈ ವರ್ಷ ಮುಂಗಾರು ವಿಳಂಬವಾಗಿ ಬಂದರೂ ಉತ್ತಮವಾಗಿ ಸುರಿಯುತ್ತಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಬೀರುವಂತೆ ಮಾಡಿದೆ. ಭತ್ತ ಬಿತ್ತನೆ ಮತ್ತು ಕಬ್ಬು

ಹಾಕಿದ ರೈತರು ಖುಷಿಯಾಗಿದ್ದು, ಸೋಯಾ, ಗೋವಿನಜೋಳಕ್ಕೆ ಸದ್ಯಕ್ಕೆ ತೊಂದರೆ ಇಲ್ಲ. ಆದರೆ ಬೆಳವಲದ ರೈತರು ಸದ್ಯಕ್ಕೆ ಹತ್ತಿ, ಮೆಣಸಿನಕಾಯಿ ಬೆಳೆಯತ್ತ ಮುಖ ಮಾಡಿದ್ದಾರೆ. ಜಿಲ್ಲೆಯಲ್ಲಿ ಸದ್ಯಕ್ಕೆ 31 ಸಾವಿರ ಹೆಕ್ಟೇರ್‌ ಹೆಸರು, 36 ಸಾವಿರ

ಹೆಕ್ಟೇರ್‌ ಗೋವಿನಜೋಳ, 38 ಸಾವಿರ ಹೆಕ್ಟೇರ್‌ ಸೋಯಾಬಿನ್‌, 13 ಸಾವಿರ ಹೆಕ್ಟೇರ್‌ನಷ್ಟು ದೇಶಿ ಭತ್ತ ಬಿತ್ತನೆಯಾಗಿದೆ. ಎಲ್ಲ ಬೆಳೆಗಳಿಗೆ ಮಳೆಯಿಂದ ಉತ್ತಮ ಕಳೆ ಬಂದಿದ್ದು ರೈತರು ಖುಷಿಯಲ್ಲಿದ್ದಾರೆ.

ಸತತ ಬರಗಾಲದಿಂದ ತೊಂದರೆಯಲ್ಲಿದ್ದ ಜಿಲ್ಲೆಗೆ ಈ ವರ್ಷ ಉತ್ತಮ ಮಳೆಯಾಗುತ್ತಿದ್ದು ಜಿಲ್ಲೆಯಲ್ಲಿನ 400ಕ್ಕೂ ಹೆಚ್ಚು ಕೆರೆಗಳಲ್ಲಿ ಉತ್ತಮ ನೀರು ಸಂಗ್ರಹವಾಗಿದೆ. ಕೆರೆಯಂಗಳಕ್ಕೆ ನೀರು ಬಂದರೆ ಬೇಸಿಗೆಯಲ್ಲಿ ಹಳ್ಳಿಗಳಲ್ಲಿನ ಶೇ.70 ನೀರಿನ ಬವಣೆ ನೀಗಿದಂತೆ. ಅದರಲ್ಲೂ ಧಾರವಾಡ, ಕಲಘಟಗಿ ಮತ್ತು ಹುಬ್ಬಳ್ಳಿ ತಾಲೂಕಿನ ಕೆರೆಗಳಲ್ಲಿ ಶೇ.50ಕ್ಕಿಂತಲೂ ಅಧಿಕ ನೀರು ಸಂಗ್ರಹಗೊಂಡಿದ್ದುಹರ್ಷ ತಂದಿದೆ.ಡಾ| ಬಿ.ಸಿ.ಸತೀಶ್‌, ಜಿಪಂ ಸಿಇಒ, ಧಾರವಾಡ

 

.ಬಸವರಾಜ ಹೊಂಗಲ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ