ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಲಿ

Team Udayavani, Sep 9, 2019, 9:45 AM IST

ಹುಬ್ಬಳ್ಳಿ: ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಹಾಗೂ ಪೋಷಣ್‌ ಅಭಿಯಾನ ಮಾಸಾಚರಣೆ ಸಂದರ್ಭದಲ್ಲಿ ಗರ್ಭಿಣಿಯರಿಗೆ ಉಡಿ ತುಂಬಲಾಯಿತು.

ಹುಬ್ಬಳ್ಳಿ: ಜನಿಸುವ ಮಗುವಿನ ಆರೋಗ್ಯದ ದೃಷ್ಟಿಯಿಂದ ಗರ್ಭಿಣಿಯರು ಅಂಗನವಾಡಿಗಳಲ್ಲಿ ನೀಡುವ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕು ಎಂದು 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಕೆ.ಎನ್‌. ಗಂಗಾಧರ ಹೇಳಿದರು.

ಮಿನಿ ವಿಧಾನಸೌಧ ತಾಪಂ ಸಂಭಾಂಗಣದಲ್ಲಿ ವಿವಿಧ ಇಲಾಖೆಗಳ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಹಾಗೂ ಪೋಷಣಾ ಅಭಿಯಾನ ಮಾಸಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಅಂಗನವಾಡಿಗಳಲ್ಲಿ ನೀಡುವ ಆಹಾರ ಪದಾರ್ಥಗಳು ಪೌಷ್ಟಿಕತೆಯಿಂದ ಕೂಡಿರುತ್ತವೆ. ಹೀಗಾಗಿ ಜನಿಸುವ ಮಗುವಿನ ಆರೋಗ್ಯ ಹಾಗೂ ಬೆಳವಣಿಗೆ ದೃಷ್ಟಿಯಿಂದ ಪೌಷ್ಟಿಕ ಆಹಾರ ಸೇವಿಸುವುದು ಅಗತ್ಯವಿದೆ ಎಂದರು.

ಆರೋಗ್ಯವಂತ ಮಕ್ಕಳು ದೇಶದ ಆಸ್ತಿಯಾಗಿರುವುದರಿಂದ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ಆರೋಗ್ಯವಂತನಾಗಿ ಬದುಕುವುದೇ ನಿಜವಾದ ಜೀವನವಾಗಿದೆ. ಅಂಗನವಾಡಿಗಳಲ್ಲಿ ಎಲ್ಲ ಬಗೆಯ ಪೋಷಕಾಂಶ ಹಾಗೂ ಜೀವಸತ್ವಗಳು ಗರ್ಭಿಣಿಯರಿಗೆ ದೊರೆಯಬೇಕು ಎನ್ನುವ ಕಾರಣಕ್ಕೆ ನೀಡಲಾಗುತ್ತಿದೆ. ಯಾವುದೇ ಮಗು ಅಪೌಷ್ಟಿಕತೆಯಿಂದ ಬಳಲುಬಾರದು ಎನ್ನುವುದು ಸರಕಾರದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಗರ್ಭಿಣಿಯರಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಿತು. ಅಂಗನವಾಡಿ ಕೇಂದ್ರಗಳಿಂದ ನೀಡುವ ಆಹಾರ ಧಾನ್ಯ ಹಾಗೂ ಅವುಗಳಿಂದ ತಯಾರಿಸಬಹುದಾದ ಪದಾರ್ಥಗಳ ಪ್ರದರ್ಶನ ನಡೆಯಿತು.

ತಾಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿಗಳಾದ ನ್ಯಾಯಾಧೀಶರಾದ ಮಹೇಶ ಪಾಟೀಲ, ಜಿಪಂ ಸಿಇಒ ಡಾ| ಬಿ.ಸಿ. ಸತೀಶ, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್‌ ಸಂಗಪ್ಪ ಬಾಡಗಿ, ತಾಪಂ ಇಒ ಎಂ.ಎಂ. ಸವದತ್ತಿ, ವಕೀಲರ ಸಂಘದ ಅಧ್ಯಕ್ಷ ಅಶೋಕ ಬಳಿಗಾರ, ಸಹಾಯಕ ಅಭಿಯೋಜಕ ಪ್ರಕಾಶ ಸುಂಕದ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್‌.ಎ. ಪುಟ್ಟಪ್ಪನವರ, ದೀಪಾ ಸಿ. ಮೇದಾರ ಇನ್ನಿತರರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ