ಮಹದಾಯಿ ಲೋಕ ಸಮರ

Team Udayavani, Apr 17, 2019, 11:06 AM IST

ನವಲಗುಂದ: ಲೋಕಸಭೆ ಚುನಾವಣೆ ಪ್ರಚಾರದ ಕಾವು ಸ್ಥಳೀಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುವುದರೊಂದಿಗೆ ಕಾರ್ಯಕರ್ತರಲ್ಲಿನ ಉತ್ಸಾಹ ಇಮ್ಮಡಿಗೊಳಿಸುತ್ತಿದೆ. ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಪರ ಪಕ್ಷದ ಕಾರ್ಯಕರ್ತರ ಪಡೆ ಪ್ರತಿದಿನ ಮತದಾರರ ಮನೆ ಮನೆ ತಲುಪಿ ಮತಯಾಚನೆ ಮಾಡುತ್ತಿದೆ.
ಅಲ್ಲದೇ ಕ್ಷೇತ್ರದಲ್ಲಿ ಚಿತ್ರನಟಿ ಶ್ರುತಿ ಬಿಜೆಪಿ ಮಹಿಳಾ ಸಮಾವೇಶ ನಡೆಸಿ ಮಹಿಳಾ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದ್ದಾರೆ. ಇನ್ನೊಂದೆಡೆ ಎಸ್ಸಿ-ಎಸ್ಟಿ ವಿಭಾಗದ ಪ್ರಮುಖರ ಸಭೆಯೂ ಮುಕ್ತಾಯಗೊಂಡು ಜೋಶಿ ಅವರು ಒಂದು ಸುತ್ತಿನ ಪ್ರಚಾರವನ್ನೂ ಮುಗಿಸಿದ್ದಾರೆ. ಕ್ಷೇತ್ರಾದ್ಯಂತ ಶಾಸಕ ಶಂಕರ ಪಾಟೀಲ್‌ ಮುನೇನಕೊಪ್ಪ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಮತ ಯಾಚನೆಯಲ್ಲಿ ತೊಡಗಿದ್ದಾರೆ.
ನಿಧಾನವಾಗಿ ಕೈ ಚುರುಕು: ಪಕ್ಷವು ಟಿಕೆಟ್‌ ಘೋಷಣೆಯಲ್ಲಿ ಮಾಡಿದ ವಿಳಂಬದಿಂದಾಗಿ ಗರಬಡಿದಂತಾಗಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಈಗಷ್ಟೇ ಮೇಲೇಳುವ ಪ್ರಯತ್ನ ಮಾಡುತ್ತಿದ್ದಾರೆ. ಯುಗಾದಿ ಪಾಡ್ಯದಂದು ತವರೂರು ನಾಯಕನೂರಿನಿಂದ ಪ್ರಚಾರ ಆರಂಭಿಸಿದ ವಿನಯ ಕುಲಕರ್ಣಿ 4 ಹಳ್ಳಿಗಳಲ್ಲಿ ಪ್ರಚಾರ ಕಾರ್ಯ ಮುಗಿಸಿದ್ದಾರೆ.
ವಿನಯ ಸಹೋದರ ವಿಜಯ ಕುಲಕರ್ಣಿ, ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ, ವಿನೋದ್‌ ಅಸೂಟಿ ಪಟ್ಟಣ ಹಾಗೂ
ಗ್ರಾಮಾಂತರ ಪ್ರದೇಶದಲ್ಲಿ ಪ್ರಚಾರ ಚುರುಕುಗೊಳಿಸಿದ್ದಾರೆ. ತಾಲೂಕಿನ ಮಗ ಎಂಬ ಕಾರಣಕ್ಕಾಗಿ ವಿಧಾನಸಭಾ ಕ್ಷೇತ್ರದಾದ್ಯಂತ 2014ರ ಲೋಕಸಭಾ ಚುನಾವಣೆಯಲ್ಲಿ 5 ಸಾವಿರಕ್ಕೂ ಹೆಚ್ಚು ಮತ ಅಂತರವನ್ನು ವಿನಯ ಸಾಧಿಸಿದ್ದರು.
ಕಳೆದ ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಕಾಂಗ್ರೆಸ್‌ ಕಾರ್ಯಕರ್ತರಿಗೆ ಶಕ್ತಿ ನೀಡುವ ಕೆಲಸವಾಗಬೇಕಿದೆ. ಈಗಿನ ಸ್ಥಿತಿ ನೋಡಿದರೆ ಇಂತಹ ಯಾವ ಕೆಲಸಗಳೂ ನಡೆದಿಲ್ಲ. ತಟಸ್ಥ ನಿಲುವು ತಾಳಿದ್ದ ಮಾಜಿ ಸಚಿವ ಕೆ.ಎನ್‌. ಗಡ್ಡಿ ಈಗಷ್ಟೇ ಪ್ರಚಾರಕ್ಕಾಗಿ ರಂಗಪ್ರವೇಶ ಮಾಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿದ್ದ ಆಂತರಿಕ ಕಚ್ಚಾಟ ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಸ್ವಲ್ಪ ಮಟ್ಟಿಗೆ ತಣ್ಣಗಾದ ಲಕ್ಷಣ ಕಂಡು ಬಂದರೂ ಬೂದಿ ಮುಚ್ಚಿದ ಕೆಂಡದಂತಿದೆ.
ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಹಿಂದಿನ ಯುಪಿಎ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರದ ಸಾಧನೆಗಳನ್ನು
ಮುಂದಿಟ್ಟು ಮತಯಾಚನೆ ಮಾಡಲಾಗುತ್ತಿದೆ. ಬಿಜೆಪಿ ಪಡೆ ನರೇಂದ್ರ ಮೋದಿ ಸರಕಾರದ ಸಾಧನೆ ಹಾಗೂ ಸಂಸದ
ಪ್ರಹ್ಲಾದ ಜೋಶಿ ಮಾಡಿದ ಕೆಲಸಗಳ ಆಧಾರದ ಮೇಲೆ ಮತಯಾಚನೆಗೆ ಇಳಿದಿದೆ.
ಸಮಸ್ಯೆಗಳಿಗೆ ದೊರೆಯದ ಉತ್ತರ
 ಮಹದಾಯಿ, ಕಳಸಾ ಬಂಡೂರಿ ಯೋಜನೆ ಅನುಷ್ಠಾನ ವಿಳಂಬ ನೀತಿಯಿಂದ ಮುಂದುವರಿದ ದೀರ್ಘಾವಧಿ ಧರಣಿ
 ಕಳೆದ ನಾಲ್ಕು ವರ್ಷಗಳಿಂದ ಬರ ಆವರಿಸಿದ್ದರಿಂದ ನಿರುದ್ಯೋಗ ಸಮಸ್ಯೆ. ಉದ್ಯೋಗ ಅರಸಿ ಬೇರೆ ಊರಿಗೆ ತೆರಳುತ್ತಿರುವ ಜನ
 ಅಣ್ಣಿಗೇರಿ ತಾಲೂಕಿನ ಮಜ್ಜಿಗೆಗುಡ್ಡ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ದೊರೆಯದ ಶಾಶ್ವತ ಪರಿಹಾರ
 ನವಲಗುಂದ ಪಟ್ಟಣದಲ್ಲಿ ಪಶು ಆಸ್ಪತ್ರೆ ವೈದ್ಯರ ಕೊರತೆಗೆ ದೊರೆಯದ ಸ್ಪಂದನೆ
 ಅಗ್ನಿಶಾಮಕ ದಳ ಕೇಂದ್ರ ಸ್ಥಾಪನೆಗೆ ಒತ್ತಾಯ
 ಕಳೆದ ಎರಡು ದಶಕದಿಂದ ಕೈಗಾರಿಕೆ- ಉದ್ಯೋಗವಿಲ್ಲದೆ ಕೃಷಿಯೊಂದೇ ಅವಲಂಬನೆ
 ಪಿಯು ಸರಕಾರಿ ಕಾಲೇಜು, ವೃತ್ತಿಪರ ಶಿಕ್ಷಣ ಕಾಲೇಜು ಕೊರತೆ, ವಿದ್ಯಾರ್ಥಿಗಳ ವಲಸೆ
ಕಳೆದ 15 ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿ ಜೋಶಿಯವರು ಯಾವುದೇ ಅಭಿವೃದ್ಧಿ ಮಾಡಿಲ್ಲ. ನಮ್ಮ
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಹೀಗಾಗಿ ನಮ್ಮ ಗ್ರಾಮದಲ್ಲಿ ಮತದಾರರು ಯಾವ ಅಭ್ಯರ್ಥಿಗೂ ಮತ ನೀಡದೆ ನೋಟಾ ಚಲಾವಣೆ ಮಾಡಲು ಇಚ್ಛಿಸಿದ್ದೇವೆ.
 ವಿರೂಪಾಕ್ಷಿ ಕುಲಕರ್ಣಿ, ಗೊಬ್ಬರಗುಂಪಿ
ನಮ್ಮ ದೇಶ ಸುಭದ್ರವಾಗಿರಬೇಕಾದರೆ ಮತ್ತೂಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಬೇಕು. ದೇಶದ
ಸೈನಿಕರಿಗೆ ಸಂರ್ಪೂಣ ಸ್ವಾತಂತ್ರ್ಯಾ ನೀಡಿ ವಿರೋಧಿ ದೇಶಗಳಿಗೆ ತಕ್ಕ ಪಾಠ ಕಲಿಸುವ ಶಕ್ತಿ ಅವರಿಗೆ ಮಾತ್ರ ಇದೆ. ಸ್ಥಳೀಯ ಅಭ್ಯರ್ಥಿಗಳಿಗೆ ನಮ್ಮ ಮತವಲ್ಲ, ಕೇವಲ ಮೋದಿಗಾಗಿ ನನ್ನ ಮತ.
 ಆನಂದ ಮರಿಗೌಡರ ಪಾಟೀಲ, ನವಲಗುಂದ
ಡಾ| ಅಂಬೇಡ್ಕರ ಅವರು ಬರೆದ ಸಂವಿಧಾನವನ್ನು ಉಳಿಸಲು ಕೇವಲ ಕಾಂಗ್ರೆಸ್‌ ಪಕ್ಷದಿಂದ ಸಾಧ್ಯ. ನನ್ನ ಮತ ಕೇವಲ ಕಾಂಗ್ರೆಸ್‌ ಪಕ್ಷಕ್ಕೆ.
  ಮಹೆಬೂಬಅಲಿ ಕೊಪ್ಪಳ, ನವಲಗುಂದ 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ