ಸೊರಗುತ್ತಿದೆ ಸೂಕ್ಷ್ಮನೀರಾವರಿ

Team Udayavani, Jul 24, 2019, 10:02 AM IST

ಹುಬ್ಬಳ್ಳಿ: ಏಷ್ಯಾದ ಅತಿದೊಡ್ಡ ಹಾಗೂ ಉತ್ತರ ಕರ್ನಾಟಕದ ಮೊದಲ ಸೂಕ್ಷ್ಮ ನೀರಾವರಿ ಯೋಜನೆ ಹೆಗ್ಗಳಿಕೆಗೆ ಪಾತ್ರವಾಗಿರುವ ಬಾಗಲಕೋಟೆ ಜಿಲ್ಲೆಯ ರಾಮಥಾಳ ಯೋಜನೆ ಹಾಗೂ ಹಾವೇರಿ ಜಿಲ್ಲೆ ಶಿಗ್ಗಾಂವಿ ಏತ ನೀರಾವರಿ ಯೋಜನೆ ಫ‌ಲಾನುಭವಿಗಳಿಗೆ ತಂತ್ರಜ್ಞಾನ ಹಾಗೂ ಮಾಹಿತಿ ಕೊರತೆಯಿಂದಾಗಿ ನಿರೀಕ್ಷಿತ ಮಟ್ಟದ ಬಳಕೆ ಇಲ್ಲದೆ ಪರಿತಪಿಸುವಂತಾಗಿದೆ.

ಎರಡು ಮಹತ್ವಾಕಾಂಕ್ಷಿ ಸೂಕ್ಷ್ಮ ನೀರಾವರಿ ಯೋಜನೆಗಳು ಹನಿ ಹಾಗೂ ತುಂತುರು ನೀರಾವರಿ ಸೌಲಭ್ಯದೊಂದಿಗೆ ರೈತರ ಮೊಗದಲ್ಲಿ ಹರ್ಷ ಮೂಡಿಸಿ ರಾಜ್ಯ ಹಾಗೂ ದೇಶದ ಗಮನ ಸೆಳೆಯಬೇಕಾಗಿತ್ತು. ಸೂಕ್ಷ್ಮ ನೀರಾವರಿ ಯೋಜನೆ ತಂತ್ರಜ್ಞಾನ, ಸಮರ್ಪಕ ಬಳಕೆ ವಿಚಾರದಲ್ಲಿ ಅಗತ್ಯ ತಿಳಿವಳಿಕೆ ಕೊರತೆಯಿಂದಾಗಿ ನಮ್ಮ ಪಾಲಿಗೆ ಯೋಜನೆ ಇದ್ದೂ ಇಲ್ಲದ ಸ್ಥಿತಿಯಲ್ಲಿದೆ ಎಂದು ಕೊರಗುವಂತಾಗಿದೆ.

ನೀರಿನ ಕೊರತೆ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಅತಿದೊಡ್ಡ ಹನಿ ನೀರಾವರಿ ಯೋಜನೆಯಾದ ರಾಮಥಾಲ ತಂತ್ರಜ್ಞಾನ ವಿಚಾರದಲ್ಲಿ ಅತ್ಯಾಧುನಿಕ ವ್ಯವಸ್ಥೆ ಹೊಂದಿದ್ದು, ಸುಮಾರು 60 ಸಾವಿರ ಎಕರೆಯಷ್ಟು ಭೂಮಿಗೆ ನೀರೊದಗಿಸುವ ಆಶಯ ಹೊಂದಿದೆ. ರೈತರಿಗೆ ಸಮರ್ಪಕ ತಿಳಿವಳಿಕೆಯೊಂದಿಗೆ ನಿರೀಕ್ಷಿತ ಸಾಧನೆ ತೋರಿದ್ದರೆ ಈ ವೇಳೆಗಾಗಲೇ ನೀರಿನ ಸದ್ಬಳಕೆ ನಿಟ್ಟಿನಲ್ಲಿ ದೇಶದ ಗಮನ ಸೆಳೆದು ವಿವಿಧ ರಾಜ್ಯಗಳ ರೈತರು, ಅಧಿಕಾರಿಗಳ ತಂಡ ಇಲ್ಲಿನ ಮಾದರಿ ವೀಕ್ಷಣೆಗೆ ಸರದಿಯಲ್ಲಿ ನಿಲ್ಲುವಂತಾಗುತ್ತಿತ್ತು. ಅದೇ ರೀತಿ ಸುಮಾರು 33 ಸಾವಿರ ಎಕರೆ ಭೂಮಿಗೆ ಹನಿ ಹಾಗೂ ತುಂತುರು ನೀರಾವರಿ ಯೋಜನೆ ಉದ್ದೇಶದ ಶಿಗ್ಗಾಂವಿ ಏತ ನೀರಾವರಿ ಯೋಜನೆ ರಾಜ್ಯದ ಗಮನೆ ಸೆಳೆಯುವ ಸಾಧನೆ ತೋರುತ್ತಿತ್ತು. ಎರಡು ಯೋಜನೆಗಳಲ್ಲಿ ಸಣ್ಣಪುಟ್ಟ ತೊಂದರೆ, ರೈತರಿಗೆ ಮಾಹಿತಿ ಕೊರತೆಯೇ ಸಮಸ್ಯೆಯಾಗಿ ಕಾಡತೊಡಗಿದೆ.

ತಂತ್ರಜ್ಞಾನ ಮನವರಿಕೆ ಅಗತ್ಯ: ರಾಮಥಾಲ ಹನಿ ನೀರಾವರಿ ಯೋಜನೆ ಏಷ್ಯಾದ ಅತಿದೊಡ್ಡ ಪ್ರೊಜೆಕ್ಟ್ ಆಗಿದ್ದು, ಬಾಗಲಕೋಟೆ, ಹುನಗುಂದ ತಾಲೂಕಿನ ಸುಮಾರು 15 ಸಾವಿರದಷ್ಟು ರೈತರ ಅಂದಾಜು 60 ಸಾವಿರ ಎಕರೆಗೆ ಹನಿ ನೀರಾವರಿ ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಇಸ್ರೆಲ್ ತಂತ್ರಜ್ಞಾನ ಆಧಾರದಲ್ಲಿ ಯೋಜನೆ ರೂಪುಗೊಂಡಿದೆ. ಒಂದು ಎಕರೆಗೆ ಸುಮಾರು 1.25 ಲಕ್ಷ ರೂ.ನಷ್ಟು ವೆಚ್ಚವಾಗಿದೆ.

ಯೋಜನೆ ಅನುಷ್ಠಾನಗೊಂಡು ಸುಮಾರು 4 ವರ್ಷವಾಗುತ್ತಿದ್ದರೂ ಇದರ ಸಮರ್ಪಕ ಮಾಹಿತಿ ರೈತರಿಗೆ ಇಲ್ಲವಾಗಿದೆ. ನೀರು ಬಳಕೆ ಕುರಿತಾಗಿ ಅನೇಕ ಗೊಂದಲ, ತಪ್ಪು ಕಲ್ಪನೆಗಳು ಇಂದಿಗೂ ಸುಳಿದಾಡುತ್ತಿವೆ. ಒಂದು ಟಿಎಂಸಿ ಅಡಿ ನೀರನ್ನು ಕಾಲುವೆ ಮೂಲಕ ನೀರಾವರಿಗೆ ನೀಡಿದರೆ ಇದರಿಂದ ಸುಮಾರು 4,538 ಹೆಕ್ಟೇರ್‌ ಪ್ರದೇಶಕ್ಕೆ ನೀರು ಕೊಡಬಹುದಾಗಿದೆ. ಅಷ್ಟೇ ಪ್ರಮಾಣದ ನೀರನ್ನು ಹನಿ ನೀರಾವರಿ ಮೂಲಕ ನೀಡಿದರೆ ಸುಮಾರು 8,664 ಹೆಕ್ಟೇರ್‌ ಭೂಮಿಗೆ ನೀರಾವರಿ ಭಾಗ್ಯ ಕಲ್ಪಿಸಬಹುದಾಗಿದೆ. ಎರಡು ಪ್ರದೇಶಕ್ಕೆ ನೀರು ಕೊಡುವ ಉದ್ದೇಶ ಹೊಂದಲಾಗಿದೆಯೋ ಅಥವಾ ಹನಿ ನೀರಾವರಿಯಿಂದ ಅಷ್ಟು ಪ್ರದೇಶಕ್ಕೆ ನೀರು ದೊರೆಯುತ್ತದೆ ಎಂಬುದನ್ನು ರೈತರಿಗೆ ಮೊದಲು ಮನದಟ್ಟು ಮಾಡಬೇಕಾಗಿದೆ. ಅವರಲ್ಲಿ ವಿಶ್ವಾಸ ಮೂಡಿಸುವ ಕೆಲಸಗಳು ಆಗಬೇಕಿದೆ.

ಶಿಗ್ಗಾಂವಿ ಏತ ನೀರಾವರಿ ಯೋಜನೆ ಅಡಿ ಹನಿ ಹಾಗೂ ತುಂತುರು ನೀರಾವರಿ, ಕೆರೆಗಳಿಗೆ ನೀರು ತುಂಬಿಸುವ ಉದ್ದೇಶಕ್ಕಾಗಿ ಯೋಜನೆ ರೂಪಿಸಲಾಗಿದೆ. ಹಾವೇರಿ ಜಿಲ್ಲೆ ಶಿಗ್ಗಾಂವಿ, ಸವಣೂರು ಹಾಗೂ ಹಾನಗಲ್ಲ ತಾಲೂಕುಗಳ ಸುಮಾರು 33,345 ಎಕರೆ ಪ್ರದೇಶಕ್ಕೆ ಹನಿ ಹಾಗೂ ತುಂತುರು ನೀರಾವರಿ ಸೌಲಭ್ಯ, ಸಣ್ಣ ನೀರಾವರಿ ಇಲಾಖೆ ಅಡಿಯ ಒಟ್ಟು 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಇದಕ್ಕಾಗಿ ಸವಣೂರು ತಾಲೂಕಿನ ಹಲಸೂರ ಬಳಿ ಡೈವರ್ಶನ್‌ ವಿಯರ್‌(ಬ್ಯಾರೇಜ್‌) ನಿರ್ಮಿಸಿ ವರದಾ ನದಿಯಿಂದ ಸುಮಾರು 1.5 ಟಿಎಂಸಿ ಅಡಿ ನೀರು ಪಡೆಯಲಾಗುತ್ತಿದೆ. ಈ ಯೋಜನೆಯಲ್ಲಿಯೂ ಸಮರ್ಪಕ ಮಾಹಿತಿ ಕೊರತೆ ಹಾಗೂ ನೀರು ಬರುತ್ತಿಲ್ಲ ಎಂಬ ಅನಿಸಿಕೆಯೊಂದಿಗೆ ರೈತರು ಯೋಜನೆ ಬಗ್ಗೆ ನಿರ್ಲಕ್ಷ್ಯ ತೋರಿರುವುದು, ವ್ಯವಸ್ಥೆ ನಿರ್ವಹಣೆ ಕೊರತೆಯಿಂದಾಗಿ ಸಾಕಷ್ಟು ಮುಂದಾಲೋಚನೆ, ಆಧುನಿಕ ತಂತ್ರಜ್ಞಾನದೊಂದಿಗೆ ರೂಪಿತಗೊಂಡಿದ್ದ ಯೋಜನೆ ನಿರೀಕ್ಷಿತ ಯಶಸ್ಸು ಸಾಧಿಸಲು ಸಾಧ್ಯವಾಗದೆ ಹೋಗಿದೆ.

ಇದರ ಜತೆಗೆ ನೀರಿನ ಬೇಡಿಕೆಯಲ್ಲಿ ಹೆಚ್ಚಳವಾಗಿರುವುದು, ಉದ್ದೇಶಿತ ಯೋಜನೆಗೆ ನೀರಿನ ಅಗತ್ಯ ಫ್ರೆಶರ್‌ ಇಲ್ಲದಿರುವುದು, ರೈತರ ಹೊಲಗಳಲ್ಲಿ ಅಲ್ಲಲ್ಲಿ ಪೈಪ್‌ಗ್ಳು ಮುರಿದಿರುವುದು, ನೀರು ಬಳಕೆದಾರರ ಸಂಘದಲ್ಲಿ ಸಂಗ್ರಹಿತ ಹಣ ಬ್ಯಾಂಕ್‌ನಲ್ಲಿ ಇದ್ದರೂ ಇಂತಹ ಸಣ್ಣಪುಟ್ಟ ದುರಸ್ತಿಗೂ ಮುಂದಾಗದಿರುವುದು ಯೋಜನೆಯ ಹಿನ್ನಡೆಗೆ ಕಾರಣವಾಗಿದೆ. ನಿರೀಕ್ಷಿ ಉದ್ದೇಶದೊಂದಿಗೆ ಸಾಗಿದ್ದರೆ ಈ ವೇಳೆಗಾಗಲೇ ಇತರೆ ಪ್ರದೇಶ-ರಾಜ್ಯಗಳಿಗೂ ಮಾದರಿಯಾಗಬೇಕಾಗಿದ್ದ ಎರಡು ಮಹತ್ವಾಕಾಂಕ್ಷಿ ಯೋಜನೆಗಳು ತಮ್ಮದೇ ಗುರಿ ತಲುಪಿಸಲು ಸಾಧ್ಯವಾಗದೆ ನಲುಗುವಂತಾಗಿದೆ.

ಜ್ಞಾನ, ಧೋರಣೆ, ಕೌಶಲ ಅವಶ್ಯ: ಎರಡು ಸೂಕ್ಷ್ಮ ನೀರಾವರಿ ಯೋಜನೆ ಉದ್ದೇಶ, ಅನುಷ್ಠಾನಗೊಂಡ ತಂತ್ರಜ್ಞಾನ ಅತ್ಯುತ್ತಮವಾಗಿದೆ. ರಾಮಥಾಲ ಸೂಕ್ಷ್ಮ ನೀರಾವರಿ ಯೋಜನೆಯಲ್ಲಿ ಸುಮಾರು 51 ನೀರು ಬಳಕೆದಾರರ ಸಂಘಗಳು ಇದ್ದರೆ, ಶಿಗ್ಗಾಂವಿ ಏತ ನೀರಾವರಿ ಯೋಜನೆಯಡಿ 40ಕ್ಕೂ ಅಧಿಕ ಸಂಘಗಳು ಇವೆ. ಸಂಘಗಳ ಜವಾಬ್ದಾರಿ, ಅವು ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ರೈತರಿಗೆ ಮಾಹಿತಿ ಇಲ್ಲವಾಗಿದೆ. ನೀರಾವರಿ ಹಾಗೂ ಹೊಸ ತಂತ್ರಜ್ಞಾನ ವಿಚಾರದಲ್ಲಿ ರೈತರಿಗೆ ಮುಖ್ಯವಾಗಿ ಜ್ಞಾನ, ಧೋರಣೆ, ಕೌಶಲದ ಬಗ್ಗೆ ತಿಳಿವಳಿಕೆ ಅವಶ್ಯವಾಗಿದೆ. ಯೋಜನೆ ಉದ್ದೇಶ-ಪ್ರಯೋಜ, ಬಳಕೆ ವಿಧಾನವನ್ನು ಮೊದಲು ಅರ್ಥೈಯಿಸಬೇಕಾಗಿದೆ. ನೂರಾರು ಕೋಟಿ ವೆಚ್ಚ ಮಾಡಿ ಹೊಸ ಯೋಜನೆ ನೀಡಲಾಗುತ್ತದೆ. ಆದರೆ, ಫ‌ಲಾನುಭವಿಗಳಿಗೆ ಅದರ ಮಾಹಿತಿ ಸಮರ್ಪಕವಾಗಿ ದೊರೆಯದೆ ಯೋಜನೆ ನಿರೀಕ್ಷಿತ ಸಾಫ‌ಲ್ಯ ಕಾಣದಾಗುತ್ತವೆ ಎಂಬುದಕ್ಕೆ ಈ ಎರಡು ಸೂಕ್ಷ್ಮ ನೀರಾವರಿ ಯೋಜನೆಗಳೇ ಸಾಕ್ಷಿ. ನೀರು ಬಳಕೆದಾರರ ಸಂಘಗಳ ಜವಾಬ್ದಾರಿ-ನಿರ್ವಹಿಸಬೇಕಾದ ಪಾತ್ರದ ಬಗ್ಗೆ ಸ್ಪಷ್ಟ ತರಬೇತಿ ಆಗಬೇಕಾಗಿದೆ. ವಾಲ್ಮಿ ಇದೀಗ ಅಂತಹ ತರಬೇತಿ ಕಾರ್ಯಕ್ಕೆ ಮುಂದಾಗಿದೆ ಎಂಬುದು ಸಂತಸದ ವಿಚಾರ. ಭವಿಷ್ಯದ ದೃಷ್ಟಿಯಿಂದ ನೀರಿನ ಸದ್ಬಳಕೆ ನಿಟ್ಟಿನಲ್ಲಿ ಎರಡು ಸೂಕ್ಷ್ಮ ನೀರಾವರಿ ಯೋಜನೆಗಳು ಅತ್ಯಂತ ಪರಿಣಾಮಕಾರಿಯಾಗಿದ್ದು, ಇವುಗಳ ಸದುಪಯೋಗ ಸಮರ್ಪಕ ರೀತಿಯಲ್ಲಿ ಆಗಬೇಕಾಗಿದೆ.

 

•ಅಮರೇಗೌಡ ಗೋನವಾರ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ