ಪ್ರಹ್ಲಾದ ಜೋಶಿ ಕಾರ್ಯ ವೈಖರಿಗೆ ಬೇಸತ್ತಿದ್ದಾರೆ ಜನ: ವಿನಯ್‌ ಕುಲಕರ್ಣಿ

Team Udayavani, Apr 4, 2019, 4:34 PM IST

ಹುಬ್ಬಳ್ಳಿ: ಮೂರು ಬಾರಿ ಕ್ಷೇತ್ರ ಪ್ರತಿನಿಧಿಸಿರುವ ಬಿಜೆಪಿ ಸಂಸದ ಪ್ರಹ್ಲಾದ ಜೋಶಿ ಅವರ ಕಾರ್ಯವೈಖರಿಯಿಂದ ಜನ ಬೇಸತ್ತಿದ್ದು, ಈ ಬಾರಿ ಕ್ಷೇತ್ರದ ಜನರು ನನಗೇ ಅವಕಾಶ
ನೀಡುವ ವಿಶ್ವಾಸವಿದೆ ಎಂದು ಧಾರವಾಡ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ವಿನಯ್‌ ಕುಲಕರ್ಣಿ ಹೇಳಿದರು.

ಅವರು ಬುಧವಾರ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೊನೆಯ ಹಂತದಲ್ಲಿ ಟಿಕೇಟ್‌ ನೀಡಿದ್ದರಿಂದ ಪ್ರಚಾರಕ್ಕೆ ಸಮಸ್ಯೆಯಾಯಿತು. ಆದರೆ ಈ ಬಾರಿ ಒಂದು ತಿಂಗಳಿಂದ ಸಿದ್ಧತೆ ಮಾಡಿಕೊಂಡಿದ್ದು, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ಬೆಂಬಲದೊಂದಿಗೆ ಚುನಾವಣೆ ಎದುರಿಸಲಿದ್ದು, ಗೆಲ್ಲುವ ವಿಶ್ವಾಸವಿದೆ ಎಂದರು.

ಕ್ಷೇತ್ರದಲ್ಲಿ ಬಿಜೆಪಿ ಕಳೆದ ಮೂರು ಚುನಾವಣೆಗಳಿಂದ ಸುಳ್ಳು ಭರವಸೆ ನೀಡುತ್ತಲೇ ಗೆಲುವು ಸಾಧಿಸುತ್ತಿದ್ದು, ಈ ಬಾರಿ ಅಭಿವೃದ್ಧಿ ಕಾರ್ಯಗಳಿಗೆ ಒಂದು ಬಾರಿ ಅವಕಾಶ ನೀಡಿ, ಕಳೆದ ಚುನಾವಣೆಯಲ್ಲಿ 1.13 ಲಕ್ಷ ಮತಗಳಿಂದ ಸೋಲು ಕಂಡಿದ್ದು, ಈ ಬಾರಿ ಸುಮಾರು 1ಲಕ್ಷ ಜೆಡಿಎಸ್‌ ಮತಗಳು ಸೇರ್ಪಡೆಗೊಂಡು ಗೆಲುವು ಪಡೆಯಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದೇವೆ ಎಂದರು.

ಈ ಭಾಗದ ಅಭಿವೃದ್ಧಿ ನನ್ನ ಮೊದಲ ಆದ್ಯತೆಯಾಗಿದ್ದು, ಬೈಪಾಸ್‌ ರಸ್ತೆ ಆರು ಲೈನ್‌, ನಗರ ಸೇರಿದಂತೆ ಹಲವು ಕಡೆ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಾಗಿಯೂ, ನೀರಾವರಿ ಯೋಜನೆ, ಕಳಸಾ-ಬಂಡೂರಿ ಯೋಜನೆ, ಗ್ರಾಮೀಣ ಭಾಗದ ರೈತರ ಪರ ಕೆಲಸ ಮಾಡುವುದಾಗಿ ತಿಳಿಸಿದರು.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸಂಸದ ಪ್ರಹ್ಲಾದ ಜೋಶಿ ಅವರು ಒಂದೇ ಒಂದು ಅಭಿವೃದ್ಧಿ ಕಾರ್ಯ ಮಾಡಿಲ್ಲ. ಗ್ರಾಮೀಣ ಭಾಗಕ್ಕೆ ಒಂದು ಸಣ್ಣ ಕೊಡುಗೆ ಸಹ ಜೋಶಿಯವರು ನೀಡಿಲ್ಲ. ರೈತರ ಹೆಸರಿನಲ್ಲಿ ಚುನಾವಣೆ ಎದುರಿಸುವ ಇವರು ರೈತರಿಗೆ ಕ್ಯಾರೆ ಎನ್ನುವುದಿಲ್ಲ ಎಂದರು.

ಈ ಹಿಂದೆ ಮನಮೋಹನ ಸಿಂಗ್‌ ಅವರು ಪ್ರಧಾನ ಮಂತ್ರಿಯಾಗಿದ್ದಾಗ 72 ಸಾವಿರ ಕೋಟಿ ರೂ. ಗಳ ರೈತರ ಸಾಲ ಮನ್ನಾ ಮಾಡಿದ್ದರು. ರಾಜ್ಯದಲ್ಲಿ ಸಿದ್ದರಾಮಯ್ಯನವರು, ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡಿದರು. ಆದರೆ ಕೇಂದ್ರ ಬಿಜೆಪಿ ಸರಕಾರ ಇಂತಹ ಯಾವ ಕಾರ್ಯ ಮಾಡದೇ ರೈತ ವಿರೋಧಿ ಕೆಲಸ ಮಾಡಿದೆ ಎಂದರು.

ಇನ್ನು ಕ್ಷೇತ್ರದಲ್ಲಿ ಎಷ್ಟು ಇಂಡಸ್ಟ್ರಿ ತಂದಿದ್ದಾರೆ, ಧಾರವಾಡಕ್ಕೆ ಐಐಐಟಿ, ತಂದಿರುವುದು ನಾವು, ವಿಮಾನ ನಿಲ್ದಾಣದ ಸಿಸಿ ರಸ್ತೆ, ಶಿರೂರ ಪಾರ್ಕ್‌ ಸಿಸಿ ರಸ್ತೆ ರಾಜ್ಯ ಸರಕಾರದ ಕೊಡುಗೆ. ಆದರೆ ಬಿಜೆಪಿ ಇದು ನಮ್ಮ ಕೊಡುಗೆ ಎಂದು ಹೇಳುತ್ತಾ ಓಡಾಡುತ್ತಾರೆ. ಆದರೆ ಶಿರೂರ ಪಾರ್ಕ್‌ ರಸ್ತೆ ಕಾಮಗಾರಿ ಕುರಿತು ಶಾಸಕ ಅರವಿಂದ ಬೆಲ್ಲದ ಅವರು ನೀಲನಕ್ಷೆ ನೀಡಿದ್ದರು ಎಂದರು.

ಈಗಾಗಲೇ ಕ್ಷೇತ್ರದಲ್ಲಿ ಜನ ಬೆಂಬಲ ವ್ಯಕ್ತಪಡಿಸಿದ್ದು, ತಾವು ಆಗಮಿಸದಿದ್ದರೂ ನಮ್ಮ ಮತ ನಿಮಗೆ ಎಂದು ಹೇಳುತ್ತಿದ್ದಾರೆ. ಇನ್ನುಳಿದ 17 ದಿನಗಳಲ್ಲಿನ ಕ್ಷೇತ್ರದ ಎಲ್ಲರನ್ನು ಭೇಟಿ ಮಾಡಿ ಮತಯಾಚಿಸುವುದಾಗಿ ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ರಾಜ್ಯದಲ್ಲಿ ಸಮ್ಮಿಶ್ರವಾಗಿ ಚುನಾವಣೆ ನಡೆಸುತ್ತಿದ್ದು, 21 ಕಾಂಗ್ರೆಸ್‌, 7 ಜನ ಜೆಡಿಎಸ್‌ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಅದೇ ರೀತಿ ಧಾರವಾಡದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ವಿನಯ ಕುಲಕರ್ಣಿ ಕಣಕ್ಕಿಳಿದಿದ್ದಾರೆ. ಎರಡು ಪಕ್ಷದ ಕಾರ್ಯಕರ್ತರು ಭರ್ಜರಿಯಾಗಿ ಚುನಾವಣೆ ಎದುರಿಸಲಿದ್ದಾರೆ ಎಂದರು.

ಸಿಎಂ ರಾಜಕೀಯ ಕಾರ್ಯದರ್ಶಿ ಎನ್‌.ಎಚ್‌. ಕೋನರೆಡ್ಡಿ ಮಾತನಾಡಿ, ಈಗಾಗಲೇ ಎರಡು ಪಕ್ಷಗಳು ಒಂದುಗೂಡಿ ಲೋಕಸಭಾ ಅಭ್ಯರ್ಥಿಯನ್ನಾಗಿ ವಿನಯ ಕುಲಕರ್ಣಿ ಅವರನ್ನು ಆಯ್ಕೆ ಮಾಡಿದ್ದು, ಗೆಲ್ಲಿಸುವ ಹೊಣೆ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.

ಶಾಸಕ ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಮುಖಂಡ ವಾಹಬ್‌ ಮುಲ್ಲಾ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಲ್ತಾಫ್‌ ಹಳ್ಳೂರ, ಅನಿಲಕುಮಾರ ಪಾಟೀಲ, ಜೆಡಿಎಸ್‌ನ ರಾಜಣ್ಣಾ ಕೊರವಿ, ಎಂ.ಎಸ್‌.ಅಕ್ಕಿ, ಗುರುರಾಜ ಹುಣಸಿಮರದ, ದೇವಕಿ ಯೋಗಾನಂದ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಇಂದು ನಾಮಪತ್ರ ಸಲ್ಲಿಕೆ
ಟಿಕೆಟ್‌ ಗೊಂದಲ ಹಾಗೂ ವಿಳಂಬದಿಂದಾಗಿ ಪಕ್ಷದ ಬಿ ಪಾರಂ ಇಲ್ಲದೇ ಏ.3ರಂದು ಬೆಳಗ್ಗೆ 10:45 ಗಂಟೆಗೆ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲು ವಿನಯ ಕುಲಕರ್ಣಿ ಮುಂದಾಗಿದ್ದರು. ಆದರೆ ಟಿಕೆಟ್‌ ಫೈನಲ್‌ ಆಗಿರುವ ಕಾರಣ ಏ.3ರಂದು ನಾಮಪತ್ರ ಸಲ್ಲಿಕೆ ಕೈಬಿಟ್ಟು ಏ.4ರಂದು ಪಕ್ಷದ ಬಿ ಪಾರಂನೊಂದಿಗೆ ಬೃಹತ್‌ ಮೆರವಣಿಗೆಯೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ಲಿಂಗಾಯತ ಪ್ರತ್ಯೇಕ ಧರ್ಮ ಈಗ ಮುಗಿದ ಅಧ್ಯಾಯ:ಹೊರಟ್ಟಿ
ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಮುಗಿದ ಅಧ್ಯಾಯವಾಗಿದ್ದು, ಅದನ್ನು ಇಲ್ಲಿ ತರುವುದು ಬೇಡ. ಈಗಾಗಲೇ ಆ ಹೋರಾಟವನ್ನು ನಾವು ಕೈಬಿಟ್ಟಿದ್ದು, ಪ್ರತ್ಯೇಕ ಧರ್ಮ ಮಾನ್ಯತೆಗೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕಿದೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ಪ್ರಚಾರಕ್ಕೆ ಕುಮಾರಸ್ವಾಮಿ, ದೇವೇಗೌಡ, ಸಿದ್ದರಾಮಯ್ಯ ಆಗಮನ
ಧಾರವಾಡ ಲೋಕಸಭಾ ಕ್ಷೇತ್ರ ಚುನಾವಣಾ ಕಣ ರಂಗೇರುತ್ತಿದ್ದು, ಈ ಬಾರಿ ನಡೆಯುವ ಚುನಾವಣೆಯಲ್ಲಿ ಸ್ಟಾರ್‌ ಪ್ರಚಾರಕರಾಗಿ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ, ದಿನೇಶ ಗುಂಡೂರಾವ್‌ ಸೇರಿದಂತೆ ಎಲ್ಲ ಸ್ಟಾರ್‌ ಪ್ರಚಾರಕರು ಕ್ಷೇತ್ರದಲ್ಲಿ ಆಗಮಿಸಿ ಪ್ರಚಾರ ಮಾಡಲಿದ್ದಾರೆ. ಕ್ಷೇತ್ರದಲ್ಲಿ ರಾಷ್ಟ್ರಾಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಕರೆಸಲು ವ್ಯವಸ್ಥೆ ಮಾಡಲಾಗುವುದು ಎಂದು ವಿನಯ ಕುಲಕರ್ಣಿ ಹೇಳಿದರು.

ಸಾಮಾಜಿಕ ಜಾಲತಾಣದದಲ್ಲಿ ಬಿಜೆಪಿ ಸುಳ್ಳು ಸುದ್ದಿ
ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಅಲ್ಪಸಂಖ್ಯಾತರ ಮತಗಳು ಹಾಕುವುದಿಲ್ಲ ಎಂದು ಬಿಜೆಪಿ ಅವರೇ ಸುದ್ದಿ ಹರಿಬಿಡುತ್ತಿದ್ದಾರೆ. ಇದರ ಹಿಂದೆ ಬಿಜೆಪಿಯ ದೊಡ್ಡ ತಂಡವೇ ಕೆಲಸ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಹಾಕುವವರೂ ಅವರೇ, ಅದಕ್ಕೆ ಉತ್ತರಿಸುವವರೂ ಅವರೇ ಅಗಿದ್ದಾರೆ. ಆದರೆ ಅಲ್ಪಸಂಖ್ಯಾತರರು ಸೇರಿದಂತೆ ಎಲ್ಲರೂ ನನಗೆ ಬೆಂಬಲ ನೀಡಲಿದ್ದಾರೆಂದು ವಿನಯ ಕುಲಕರ್ಣಿ ಹೇಳಿದರು. ಇನ್ನು ಲಿಂಗಾಯತ ಹೋರಾಟ ನಮ್ಮ ಮೇಲೆ ಅಲ್ಪ ಪ್ರಮಾಣದಲ್ಲಿ ಪ್ರಭಾವ ಬೀರಲಿದ್ದು, ಅದನ್ನು ತಡೆಯುವ ಕೆಲಸ ಮಾಡಲಾಗುತ್ತದೆ ಎಂದರು.

ಜಂಟಿ ಸಮಿತಿ ನೇಮಕ
ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳನ್ನು ಒಗ್ಗೂಡಿಸಿ ಒಂದು ಸಮಿತಿ ನೇಮಕ ಮಾಡಿ, ಅದರ ಮೂಲಕ ಬೂತ್‌ಮಟ್ಟದಿಂದ ಹಿಡಿದು ಜಿಲ್ಲಾಮಟ್ಟದವರಿಗೆ ಎಲ್ಲರನ್ನು ಸಂಪರ್ಕಿಸುವ ಕೆಲಸ ಮಾಡಲಾಗುವುದು. ಇದರ ಮೂಲಕ ಕ್ಷೇತ್ರದ ಎಲ್ಲ ಜನರನ್ನು ಭೇಟಿ ಮಾಡಿ ಈ ಬಾರಿ ವಿನಯ ಕುಲಕರ್ಣಿ ಅವರಿಗೆ ಮತ ನೀಡುವಂತೆ ಮನವಿ ಮಾಡಲಾಗುವುದು. ನಾಮಪತ್ರ ಸಲ್ಲಿಕೆ ನಂತರವೇ ಸಮಿತಿ ರಚಿಸಿ ಚುನಾವಣೆಗೆ
ಸನ್ನದ್ಧರಾಗಲಿದ್ದೇವೆಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ