ಕಳಪೆ ಫಲಿತಾಂಶ; 36 ಶಾಲೆಗಳಿಗೆ ನೋಟಿಸ್‌

Team Udayavani, May 4, 2019, 11:59 AM IST

ಧಾರವಾಡ: ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಜಿಲ್ಲೆಯ 33 ಶಾಲೆಗಳಲ್ಲಿ ಶೇ.40ಕ್ಕಿಂತ ಕಡಿಮೆ ಮತ್ತು 3 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಈ ಶಾಲೆಗಳಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡುವಂತೆ ಜಿಲ್ಲಾಧಿಕಾರಿ ದೀಪಾ ಚೋಳನ್‌ ಶಿಕ್ಷಣಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು(ಆಡಳಿತ) ಅವರನ್ನೊಳಗೊಂಡ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶೇ. 40ಕ್ಕಿಂತ ಕಡಿಮೆ ಫಲಿತಾಂಶ ಸಾಧಿಸಿದ ಪ್ರತಿಯೊಂದು ಶಾಲೆಗಳಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿ ವರದಿ ಪಡೆಯಲು ಡಿಡಿಪಿಐ ಅವರಿಗೆ ಸೂಚಿಸಿದರು.

ಮುಖ್ಯ ಶಿಕ್ಷಕರು ತಮ್ಮ ಶಾಲೆಗಳಲ್ಲಿ ಅನುತ್ತೀರ್ಣಗೊಂಡ ಎಲ್ಲ ಮಕ್ಕಳಿಗೆ ಶನಿವಾರದಿಂದಲೇ ಪರಿಹಾರ ಬೋಧನೆ ಕೈಗೊಂಡು, ಅವರಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಒಟ್ಟು 6135 ಮಕ್ಕಳು ಅನುತ್ತೀರ್ಣರಾಗಿದ್ದು, ಆಯಾ ವಲಯದಲ್ಲಿ ವಿಶೇಷ ಕಲಿಕಾ ಕೇಂದ್ರಗಳನ್ನು ಪ್ರಾರಂಭಿಸಿ ವಿಷಯ ಪರಿಣಿತಿಯುಳ್ಳ ಶಿಕ್ಷಕರನ್ನು ತರಗತಿಗಳಿಗೆ ನೇಮಕಾತಿ ಮಾಡಿ ಆದೇಶ ಹೊರಡಿಸಲು ಡಿಸಿ ಸೂಚಿಸಿದರು.

ಜೂ. 21ರಿಂದ ಪ್ರಾರಂಭಗೊಳ್ಳುವ ಪೂರಕ ಪರೀಕ್ಷೆಗಳಿಗೆ ಅನುತ್ತೀರ್ಣಗೊಂಡ ಮಕ್ಕಳು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮನವೊಲಿಸಬೇಕು. ಅನುತ್ತೀರ್ಣರಾದ ಮಕ್ಕಳು ಹಾಗೂ ಪಾಲಕರಿಗೆ ಶಿಬಿರ ನಡೆಸಿ ನಿರಂತರವಾಗಿ ಮಾರ್ಗದರ್ಶನ ಮತ್ತು ತರಬೇತಿ ನೀಡಿ ಪೂರಕ ಪರೀಕ್ಷೆಗಳನ್ನು ಎದುರಿಸುವ ಸಾಮರ್ಥ್ಯ ತುಂಬಬೇಕು ಎಂದರು.

ಡಿಡಿಪಿಐ ಗಜಾನನ ಮನ್ನಿಕೇರಿ ಮಾತನಾಡಿ, ಜಿಲ್ಲೆಯ ಒಟ್ಟು ಫಲಿತಾಂಶ ಶೇ.75.45 ಆಗಿದ್ದು, ರಾಜ್ಯದಲ್ಲಿ 28ನೇ ಸ್ಥಾನದಲ್ಲಿದೆ. ಸರ್ಕಾರಿ ಪ್ರೌಢಶಾಲೆಗಳಲ್ಲಿ ಶೇ.77.43 ಫಲಿತಾಂಶ ಬಂದಿದ್ದು, ಅನುದಾನ ರಹಿತ ಶಾಲೆಗಳಲ್ಲಿ ಶೇ.76.94, ಅನುದಾನಿತ ಶಾಲೆಗಳಲ್ಲಿ ಶೇ.76.96 ಫಲಿತಾಂಶ ಬಂದಿದೆ ಎಂದು ಸಭೆಗೆ ಮಾಹಿತಿ ನೀಡಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ