ಪಿಒಪಿ ಮುಕ್ತ ಗಣೇಶೋತ್ಸವಕ್ಕೆ ಕಟ್ಟೆಚ್ಚರ

Team Udayavani, Aug 25, 2019, 9:25 AM IST

ಧಾರವಾಡ: ಕಳೆದ ಮೂರು ವರ್ಷಗಳಿಂದ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ ಮಾಡಿದ ಗಣೇಶ ವಿಗ್ರಹಗಳ ಪ್ರತಿಷ್ಠಾಪನೆ ನಿಗ್ರಹಿಸಲು ಯತ್ನಿಸುತ್ತಿರುವ ಜಿಲ್ಲಾಡಳಿತ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಈ ವರ್ಷವೂ ತನ್ನ ಕಸರತ್ತು ಮುಂದುವರಿಸಿದೆ. ಅಷ್ಟೇಯಲ್ಲ, ಈ ಬಾರಿ ನೂರಕ್ಕೆ ನೂರರಷ್ಟು ಮಣ್ಣಿನ ಗಣೇಶ ವಿಗ್ರಹ ಪ್ರತಿಷ್ಠಾಪಿಸುವ ಗುರಿ ಇಟ್ಟುಕೊಂಡಿವೆ.

ಗುರಿ ಸಾಧನೆಗೆ 12 ವಿಶೇಷ ತಂಡಗಳನ್ನು ಈಗಾಗಲೇ ರಚಿಸಿ, ಮೂರ್ತಿ ನಿರ್ಮಿಸುವವರ ಪರೀಕ್ಷೆಗೆ ಬಿಡಲಾಗಿದೆ. ಹು-ಧಾ ಅವಳಿ ನಗರ, ನವಲಗುಂದ, ಕಲಘಟಗಿ, ಕುಂದಗೋಳ, ಅಳ್ನಾವರ, ಅಣ್ಣಿಗೇರಿ ಪಟ್ಟಣಗಳಲ್ಲಿಯೂ ಯಾವುದೇ ಕಾರಣಕ್ಕೂ ಈ ವರ್ಷ ಒಂದೇ ಒಂದು ಪಿಒಪಿ ಗಣೇಶಮೂರ್ತಿ ಪ್ರತಿಷ್ಠಾಪನೆಯಾಗದಂತೆ ನೋಡಿಕೊಳ್ಳುವುದೇ ಈ ತಂಡಗಳ ಜವಾಬ್ದಾರಿಯಾಗಿದೆ.

ಮುಂಬೈ ಬಿಟ್ಟರೆ ಛೋಟಾ ಮುಂಬೈ ಎಂದೇ ಖ್ಯಾತಿ ಪಡೆದಿರುವ ಹುಬ್ಬಳ್ಳಿಯಲ್ಲಿ ಅತೀ ಹೆಚ್ಚು ವಿಜೃಂಭಣೆಯಿಂದ ಗಣೇಶೋತ್ಸವ ನಡೆಯುತ್ತದೆ. ಬೆಳಗಾವಿ, ಬಾಗಲಕೋಟೆಗೂ ನಂತರದ ಸ್ಥಾನವಿದೆ. ಹುಬ್ಬಳ್ಳಿ-ಧಾರವಾಡದಲ್ಲಿ 1100ಕ್ಕೂ ಅಧಿಕ ಸಾರ್ವಜನಿಕ ಗಣೇಶಮೂರ್ತಿಗಳ ಪ್ರತಿಷ್ಠಾಪನೆ ನಡೆಯುತ್ತಿದ್ದು, ಈ ವರ್ಷ ಇದರ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಕಳೆದ ಹತ್ತು ವರ್ಷಗಳಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ 900 ಗಡಿ ದಾಟಿದ್ದು, ಇವುಗಳ ವಿಸರ್ಜನೆ ಇದೀಗ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ. ಇನ್ನು 50 ಸಾವಿರಕ್ಕೂ ಅಧಿಕ ಮನೆ ಮನೆ ಗಣೇಶಮೂರ್ತಿಗಳ ವಿಸರ್ಜನೆಯೂ ಪರಿಸರದ ಮೇಲೆ ಮಾರಕವಾಗದಂತೆ ತಡೆಯಲು ಪ್ರಯತ್ನಗಳು ಮುಂದುವರಿದಿವೆ.

ಕೆರೆಯಲ್ಲಿ ಮೂರ್ತಿ ವಿಸರ್ಜಿಸುವಂತಿಲ್ಲ: ಈ ವರ್ಷ ಉತ್ತಮ ಮಳೆ ಸುರಿದಿದ್ದರಿಂದಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಎಲ್ಲಾ ಕೆರೆಗಳು ಕೋಡಿ ಬಿದ್ದು ಉತ್ತಮ ನೀರಿನ ಸಂಗ್ರವಾಗಿದೆ. ಪ್ರತಿ ಬಾರಿ ನೀರಿನ ಕೊರತೆ ಇದ್ದಾಗ ಕೆರೆಯಂಗಳದಲ್ಲಿ ಕೃತಕ ಗುಂಡಿಗಳನ್ನು ತೋಡಿ ಗಣೇಶ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಕೆರೆಯ ಅಂಗಳದಲ್ಲಿ ನೀರು ಇದ್ದರೂ ಅಲ್ಲಿ ಗಣೇಶ ವಿಸರ್ಜನೆ ಮಾಡಲು ಅವಕಾಶವಿಲ್ಲ. ಹೀಗಾಗಿ ನಗರ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಟ್ರ್ಯಾಕ್ಟರ್‌ ನೀರಿನ ಗುಂಡಿಗಳ ವ್ಯವಸ್ಥೆ ಮಾಡಲಾಗುತ್ತಿದೆ. ಹಳ್ಳಿಗಳಲ್ಲಿಯೂ ಪಿಡಿಓಗಳ ಮೂಲಕ ಅಗತ್ಯ ವವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಈಗಾಗಲೇ ಸೂಚನೆ ನೀಡಿವೆ.

ಗಡಿಯಲ್ಲಿ ಕಟ್ಟೆಚ್ಚರಕ್ಕೆ ಚಿಂತನೆ: ಮಹಾರಾಷ್ಟ್ರ-ಗೋವಾ ರಾಜ್ಯಗಳಿಂದ ರಾಜ್ಯದ ಗಡಿ ಪ್ರವೇಶ ಮಾಡುವ ಪಿಓಪಿ ಗಣೇಶ ಮೂರ್ತಿಗಳನ್ನು ಕಳೆದ ವರ್ಷದಂತೆ ಈ ವರ್ಷವೂ ಗಡಿ ಪ್ರದೇಶದಲ್ಲಿಯೇ ತಪಾಸನೆ ಮಾಡಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿಕೊಂಡಿದೆ. ಈ ವರ್ಷ ಯಾವುದೇ ಕಾರಣಕ್ಕೂ ಒಂದೇ ಒಂದು ಪಿಓಪಿ ಗಣೇಶ ವಿಗ್ರಹ ಜಿಲ್ಲೆಯಲ್ಲಿ ಪ್ರತಿಷ್ಠಾಪನೆಯಾಗದಂತೆ ನೋಡಿಕೊಳ್ಳುವುದಕ್ಕೆ ಈಗಾಗಲೇ 12 ತಂಡಗಳು ರಚನೆಯಾಗಿವೆ. ಕಳೆದ ವರ್ಷ ಮತ್ತು 2017 ರಲ್ಲಿ ಮಹಾರಾಷ್ಟ್ರದಿಂದ ಬೆಳಗಾವಿ, ಬಾಗಲಕೋಟೆ ಮೂಲಕ ಸಾವಿರಕ್ಕೂ ಅಧಿಕ ಪಿಓಪಿ ದೈತ್ಯ ಸಾರ್ವಜನಿಕ ಗಣೇಶ ಮೂರ್ತಿಗಳು ಹುಬ್ಬಳ್ಳಿ-ಧಾರವಾಡಕ್ಕೆ ಪ್ರವೇಶಿಸಿದ್ದವು. ಈ ವರ್ಷ ಒಂದೇ ಒಂದು ಪಿಓಪಿ ಗಣೇಶ ಒಳಕ್ಕೆ ಬರದಂತೆ ತಡೆಯಲು ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ.

ಜಾಗೃತಿ ಪಾಠ: ಒಂದೆಡೆ ಪಿಓಪಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಕಠಿಣ ಕ್ರಮ ಜರುಗಿಸುವುದರ ಜೊತೆ ಜೊತೆಗೆ ಜಿಲ್ಲಾಡಳಿತವು ಜನರಲ್ಲಿ ಮಣ್ಣಿನ ಮೂರ್ತಿಗಳನ್ನೇ ಪ್ರತಿಷ್ಠಾಪಿಸುವ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಪಿಓಪಿ, ಪಾಟಕಿ, ಝರ್‌ಜರೀ, ಪ್ಲಾಸ್ಟಿಕ್‌ ಅಲಂಕಾರಿಕ ವಸ್ತುಗಳು ಪರಿಸರಕ್ಕೆ ಹಾನಿಯಾಗುವುದನ್ನು ತಡೆಗಟ್ಟುವ ಪ್ರಯತ್ನವನ್ನು ಸ್ವಯಂಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಮಾಡಲಾಗುತ್ತಿದೆ. ಇದಕ್ಕೆ ಅನೇಕ ಸಂಘ ಸಂಸ್ಥೆಗಳು ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆ ಕೈ ಜೋಡಿಸಿವೆ.

ಉತ್ತಮ ಮಳೆಯಾಗಿ ಕೆರೆ, ಬಾವಿ, ಹಳ್ಳಕೊಳ್ಳಗಳು ತುಂಬಿಕೊಂಡಿವೆ. ಹಾಗಂತ ಸಾರ್ವಜನಿಕರು ಎಲ್ಲೆಂದರಲ್ಲಿ ಗಣೇಶಮೂರ್ತಿ ವಿಸರ್ಜನೆ ಮಾಡುವಂತಿಲ್ಲ. ನಿಗದಿಪಡಿಸಿದ ಸ್ಥಳದಲ್ಲಿಯೇ ಗಣೇಶ ವಿಸರ್ಜನೆ ಮಾಡಬೇಕು. ತಪ್ಪಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ.•ವಿಜಯಕುಮಾರ್‌ ಕಡಕ್‌ಬಾವಿ, ನಿರ್ದೇಶಕ, ಮಾಲಿನ್ಯ ನಿಯಂತ್ರಣ ಮಂಡಳಿ

ನೂರಕ್ಕೆ ನೂರರಷ್ಟು ಪಿಒಪಿ ಗಣೇಶ ಮೂರ್ತಿ ಮುಕ್ತ ಗಣೇಶೋತ್ಸವ ಆಚರಿಸುವುದಕ್ಕೆ ಅಗತ್ಯವಾದ ಎಲ್ಲ ಕ್ರಮ ಕೈಗೊಂಡಿದ್ದೇವೆ. ಇದನ್ನು ಮೀರಿಯೂ ಯಾರಾದರು ಪಿಒಪಿ ಮೂರ್ತಿ ಮಾರಾಟ ಮಾಡಿದಲ್ಲಿ, ಪ್ರತಿಷ್ಠಾಪನೆ ಮಾಡಿದಲ್ಲಿ ಇಬ್ಬರ ಮೇಲೂ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ.•ದೀಪಾ ಚೋಳನ್‌, ಜಿಲ್ಲಾಧಿಕಾರಿ

ಕೆರೆಗಳಲ್ಲಿ ಎಲ್ಲೆಂದರಲ್ಲಿ ಗಣೇಶ ವಿಸರ್ಜನೆ ತಪ್ಪು. ಜನರೆಲ್ಲ ತಮ್ಮ ಮನೆಯ ಮುಂದೆಯೇ ಬಕೇಟ್‌ಗಳನ್ನು, ದೊಡ್ಡ ನೀರಿನ ಗುಂಡಿಗಳನ್ನು ನಿರ್ಮಿಸಿಕೊಂಡು ಗಣೇಶ ವಿಸರ್ಜನೆ ಮಾಡಬೇಕು. ಅಂದಾಗ ಮಾತ್ರ ಜಲಮೂಲಗಳ ಸಂರಕ್ಷಣೆ ಸಾಧ್ಯ.•ಶಂಕರ್‌ ಕುಂಬಿ, ಪರಿಸರವಾದಿ

 

•ಬಸವರಾಜ ಹೊಂಗಲ್

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ