ಕಾಂಗ್ರೆಸ್‌ ಮತಬೇಟೆಗೆ ಮುನ್ನುಡಿ

Team Udayavani, May 4, 2019, 11:07 AM IST

ಹುಬ್ಬಳ್ಳಿ: ಬಿಜೆಪಿ ನಾಯಕರಿಗೆ ಬಡವರ ಹಾಗೂ ರೈತರ ಬಗ್ಗೆ ಕಿಂಚಿತ್ತು ಕಾಳಜಿಯಿಲ್ಲ. ಅವರ ಹೃದಯದಲ್ಲಿ ಇರುವುದು ಕೇವಲ ಢೋಂಗಿತನ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ಧಾಳಿ ನಡೆಸಿದರು.

ಕುಂದಗೋಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರ ಪರ ಸಂಶಿಯಲ್ಲಿ ಶುಕ್ರವಾರ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಸಿ.ಎಸ್‌. ಶಿವಳ್ಳಿ ಅವರಿಗೆ ಬಡವರ, ಅಲ್ಪಸಂಖ್ಯಾತರ, ದಲಿತರ, ಕೂಲಿ ಕಾರ್ಮಿಕರ ಬಗ್ಗೆ ಅಪಾರ ಕಾಳಜಿಯಿತ್ತು. ಕ್ಷೇತ್ರಕ್ಕೆ ಯಾವುದೇ ಯೋಜನೆ ತೆಗೆದುಕೊಂಡರು ಅಲ್ಲಿ ಬಡವರ ಹಾಗೂ ಜನಸಾಮಾನ್ಯರ ಹಿತ ಚಿಂತನೆ ಕಾಪಾಡುವ ಚಿಂತನೆ ಇರುತ್ತಿತ್ತು. ಇಂತಹ ಜನಪ್ರತಿನಿಧಿಗಳು ಇಂದಿನ ದಿನಗಳಲ್ಲಿ ವಿರಳ. ಇಂತಹ ಹೃದಯವಂತಿಕೆಯು ಸಮಾಜ ಒಡೆದು, ಸಾಮರಸ್ಯ ಹಾಳು ಮಾಡುವ ಬಿಜೆಪಿಯವರಲ್ಲಿ ಇರಲು ಸಾಧ್ಯವಿಲ್ಲ ಎಂದರು.

ಧಮ್‌ ಇದ್ದರೆ ಪಟ್ಟಿಕೊಡಿ: ಪ್ರಧಾನಿ ನರೇಂದ್ರ ಮೋದಿ 56 ಇಂಚಿನ ಎದೆಯುಳ್ಳ ವ್ಯಕ್ತಿ ಎಂದು ಹೇಳುತ್ತಾರೆ. ಆ ಎದೆಯಲ್ಲಿ ಬಡವರ, ದಲಿತರ, ರೈತರ ಬಗ್ಗೆ ಕಾಳಜಿ ಕಾಣಲಿಲ್ಲ. ರೈತರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲವನ್ನು ಕೇಂದ್ರ ಸರಕಾರ ಮನ್ನಾ ಮಾಡಲಿ ಎಂದು ಸರ್ವಪಕ್ಷಗಳ ನಿಯೋಗ ಕರೆದುಕೊಂಡು ಗೋಗರೆದರೂ ಅವರ ಹೃದಯ ಕರಗಲಿಲ್ಲ. ಕಾರ್ಪೊರೆಟ್ ದಣಿಗಳ ಸಾಲ ಮನ್ನಾ ಮಾಡಲು ಇವರಿಗೆ ಹಣವಿತ್ತು. ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿಯನ್ನು ನಾನು ನೋಡಿಯೇ ಇಲ್ಲ. ಕಳೆದ ಐದು ವರ್ಷದಲ್ಲಿ ನಾನು ಅಭಿವೃದ್ಧಿಪರ ಯೋಜನೆಗಳನ್ನು ನೀಡಿದ್ದೇನೆ ಎಂದು ಜನರಿಗೆ ಪಟ್ಟಿ ಕೊಡುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಧಮ್‌ ಇದ್ದರೆ ಪಟ್ಟಿ ಕೊಡಲಿ ಎಂದು ಸವಾಲು ಹಾಕಿದರು.

ಸ್ವಾಭಿಮಾನದ ಚುನಾವಣೆ: ಕುಸುಮಾವತಿ ಶಿವಳ್ಳಿ ನನಗೆ ಟಿಕೆಟ್ ಕೊಡಿ, ನನ್ನ ಯಜಮಾನರ ಜಾಗದಲ್ಲಿ ನಾನು ಆಡಳಿತ ಮಾಡುತ್ತೇನೆ ಎಂದು ಹೇಳಲಿಲ್ಲ. ಶಿವಳ್ಳಿಯವರ ಜಾಗ ಭರ್ತಿ ಮಾಡಬೇಕು ಎನ್ನುವ ಪಕ್ಷದ ನಾಯಕರ ನಿರ್ಧಾರ, ಕ್ಷೇತ್ರದ ಜನರ ಅಭಿಪ್ರಾಯ ಪಡೆದು ಕುಸುಮಾವತಿಗೆ ಟಿಕೆಟ್ ನೀಡಿದ್ದೇವೆ. ಕ್ಷೇತ್ರ ಹಾಗೂ ಕ್ಷೇತ್ರದ ಜನರ ಅಭಿವೃದ್ಧಿಗೆ ಶ್ರಮಿಸಿದ ಶಿವಳ್ಳಿ ಅವರ ಆತ್ಮಕ್ಕೆ ನಿಜವಾಗಿಯೂ ಶಾಂತಿ ಕೋರಬೇಕಾದರೆ ಕುಸುಮಾವತಿಯರನ್ನು ಗೆಲ್ಲಿಸಬೇಕು. ಇದು ಕೇವಲ ಚುನಾವಣೆಯಲ್ಲ, ಕ್ಷೇತ್ರಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟ ಬಡವರಿಗೆ ಸ್ಪಂದಿಸುವ ವ್ಯಕ್ತಿಯ ಸ್ವಾಭಿಮಾನದ ಚುನಾವಣೆಯಾಗಿದೆ. ನಾನು ನಾಲ್ಕು ದಿನ ಕ್ಷೇತ್ರದಲ್ಲಿದ್ದು, ಶಿವಳ್ಳಿ ಪರವಾಗಿ ಪ್ರಚಾರ ಮಾಡುತ್ತೇನೆ ಎಂದರು.

ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಕುಸುಮಾವತಿ ಶಿವಳ್ಳಿ ಜೆಡಿಎಸ್‌ ಅಭ್ಯರ್ಥಿಯೆಂದು ಅವರ ಗೆಲುವಿಗೆ ಕ್ಷೇತ್ರದಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತೇವೆ. ಸಿದ್ದರಾಮಯ್ಯ ಅವರು ನುಡಿದಂತೆ ಶಿವಳ್ಳಿ ಅವರ ಕುಟುಂಬಕ್ಕೆ ಟಿಕೆಟ್ ನೀಡಿದ್ದಾರೆ. ಮೈತ್ರಿ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮ ಆಗಮಿಸುವುದಾಗಿ ಭರವಸೆ ನೀಡಿದ್ದಾರೆ. ಉಳಿದಂತೆ ಪಕ್ಷದ ನಾಯಕರು ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ. ಪ್ರತಿಯೊಬ್ಬರು ಮೈತ್ರಿ ಧರ್ಮ ಪಾಲನೆ ಮಾಡಬೇಕಾಗಿದ್ದು, ಕೆಲ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಡಿಕೆಶಿ ನೇತೃತ್ವ: ಸತೀಶ

ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣೆಗೆ ಸಚಿವ ಡಿ.ಕೆ. ಶಿವಕುಮಾರ ಆಗಮಿಸಬಾರದು ಎಂದು ನಾನು ಎಲ್ಲಿಯೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಇದು ಸುಮ್ಮನೆ ಹಬ್ಬಿಸುತ್ತಿರುವ ಗಾಳಿ ಸುದ್ದಿ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು. ಸಂಶಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ ಇಲ್ಲಿಗೆ ಬರಬಾರದು ಎಂದು ನಾವು ಚಾಲೆಂಜ್‌ ಮಾಡಿಲ್ಲ. ಅದು ಸುಮ್ಮನೆ ಹಬ್ಬಿರುವ ಸುಳ್ಳು ಸುದ್ದಿ. ಅವರು ಸಾಕಷ್ಟು ಕಡೆ ನೇತೃತ್ವ ವಹಿಸಿದ್ದಾರೆ. ಕುಂದಗೋಳದಲ್ಲಿಯೂ ಅವರು ನೇತೃತ್ವ ವಹಿಸಲಿದ್ದು, ಅವರೊಂದಿಗೆ ನಾವು ಕಾರ್ಯ ಮಾಡಲಿದ್ದೇವೆ ಎಂದು ಸ್ಪಷ್ಟಪಡಿಸಿದರು. ದಕ್ಷಿಣ ಕರ್ನಾಟಕ ಭಾಗದವರಿಗೆ ಉಸ್ತುವಾರಿ ಕೊಟ್ಟಿದ್ದಾರೆ ಅನ್ನೋದೆಲ್ಲ ಸರಿಯಲ್ಲ. ಯಾರಿಗೆ ಅನುಭವ, ಸಾಮರ್ಥಯ ಇದೆ ಅವರಿಗೆ ನೇತೃತ್ವ ಕೊಟ್ಟಿದ್ದಾರೆ. ಅವರ ಕೈ ಕೆಳಗೆ ನಾವು ಕೆಲಸ ಮಾಡಲಿದ್ದೇವೆ ಎಂದರು. ವೇದಿಕೆಯಲ್ಲಿ ಒಬ್ಬರಿಗೊಬ್ಬರು ಮಾತನಾಡಿಸದ ವಿಚಾರ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಾತನಾಡಿದ್ದೇವೆ, ಹಾಗೇ ಮಾತಾಡೋದು ಅಂದ್ರೇನು ಮೈ ಮೇಲೆ ಬೀಳಬೇಕಾ ಎಂದು ಹಾಸ್ಯ ಚಟಾಕಿ ಹಾರಿಸಿದರು. ಒಂದೇ ಪಕ್ಷದಲ್ಲಿ ಇದ್ದೇವಿ ಪ್ರೀತಿ ವಿಶ್ವಾಸ ಇದೆ ಒಂದಾಗಿ ಇದ್ದೇವೆ. ನಾನು ಶಿವಕುಮಾರ ಅವರಿಗೆ ವಿರೋಧ ಮಾಡಿಲ್ಲ. ನಾನು ಡಿ.ಕೆ. ಶಿವಕುಮಾರ ಜಂಟಿಯಾಗಿ ಕುಂದಗೋಳದಲ್ಲಿ ಪ್ರಚಾರ ಮಾಡಲಿದ್ದೇವೆ ಎಂದರು.

ಬಿಎಸ್‌ವೈ ಹಸಿರು ಶಾಲು ಸಿಎಂ

ಕೇಂದ್ರದಲ್ಲಿ ಒಂದು ರೀತಿಯಾದರೆ ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರದು ಇನ್ನೊಂದು ರೀತಿ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಮಾತ್ರ ಹಸಿರು ಶಾಲು ಹಾಕುವುದು, ಅವರ ಸಾಲ ಮನ್ನಾ ಮಾಡಿ ಎಂದು ಕೇಳಿದರೆ ನಮ್ಮ ಸರಕಾರದಲ್ಲಿ ನೋಟು ಪ್ರಿಂಟ್ ಮಾಡುವ ಯಂತ್ರವಿಲ್ಲ ಎಂದು ವಿಧಾನಪರಿಷತ್‌ನಲ್ಲಿ ಬಹಿರಂಗವಾಗಿ ಹೇಳಿದ್ದರು. ರೈತರ ಬಗ್ಗೆ ಕಾಳಜಿಯಿಲ್ಲದೆ ಇವರು ಹಸಿರು ಶಾಲು ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು. ನಮ್ಮ ಮುಖ ನೋಡಬೇಡಿ, ಪ್ರಧಾನಿ ನರೇಂದ್ರ ಮೋದಿ ಮುಖ ನೋಡಿ ಎಂದು ಹೇಳುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಎಂದರು.

ಕಣ್ಣೀರಿಟ್ಟ ಕುಸುಮಾವತಿ

ನಾಯಕರು ಸಿ.ಎಸ್‌. ಶಿವಳ್ಳಿ ಅವರ ಗುಣಗಾನ ಮಾಡುತ್ತಿದ್ದರೆ ಇತ್ತ ಪತಿಯನ್ನು ನೆನೆದು ಪತ್ನಿ ಕುಸುಮಾವತಿ ಕಣ್ಣೀರಿಡುತ್ತಿದ್ದರು. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಅವರು ಶಿವಳ್ಳಿ ಕುರಿತು ಹೇಳುವಾಗಲಂತೂ ಬಿಕ್ಕಳಿಸಿ ಅತ್ತರು. ಇದಕ್ಕೂ ಮೊದಲು ವೇದಿಕೆಗೆ ಆಗಮಿಸಿದ ಸಿದ್ದರಾಮಯ್ಯ ಅವರ ಪಾದ ಮುಟ್ಟಿ ನಮಸ್ಕರಿಸಿದರು. ಡಿ.ಕೆ. ಶಿವಕುಮಾರ ಅವರ ಕಾಲಿಗೆ ಕುಸುಮಾವತಿ ಎರಗುತ್ತಿದ್ದಂತೆ ಅವರನ್ನು ಮೇಲೇಳಿಸಿ ಅವರ ಕೈ ಮೇಲೆತ್ತಿ ಶಿವಳ್ಳಿ ಅವರ ಜಾಗ ತುಂಬಲು ಹಾಗೂ ಅವರ ಆತ್ಮಕ್ಕೆ ಶಾಂತಿ ಕೋರುವ ನಿಟ್ಟಿನಲ್ಲಿ ಇವರನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು.
ಶಿವಳ್ಳಿ ಜಾಗ ಭರ್ತಿಗೆ ಕುಸುಮಾವತಿಗೆ ಟಿಕೆಟ್: ಡಿಕೆಶಿ

ಹುಬ್ಬಳ್ಳಿ: ಕುಂದಗೋಳ ಕ್ಷೇತ್ರದ ಜನರ ಹಾಗೂ ನಾಯಕರ ಒತ್ತಡಕ್ಕೆ ಮಣಿದು ಕುಸುಮಾವತಿ ಶಿವಳ್ಳಿ ಅವರಿಗೆ ಟಿಕೆಟ್ ನೀಡಲಾಗಿದೆ. ಇದು ಕುಸುಮಾವತಿ ಚುನಾವಣೆಯಲ್ಲ, ಡಿ.ಕೆ. ಶಿವಕುಮಾರ ಚುನಾವಣೆಯಾಗಿದೆ. ನನ್ನ ಗೆಳೆಯನಿ ಗಾಗಿ ಸಾಮೂಹಿಕ ನಾಯಕತ್ವದ ಮೂಲಕ ಈ ಚುನಾವಣೆಯಲ್ಲಿ ಯಶಸ್ವಿ ಯಾಗುತ್ತೇವೆ ಸಚಿವ ಡಿ.ಕೆ. ಶಿವಕುಮಾರ ವಿಶ್ವಾಸ ವ್ಯಕ್ತಪಡಿಸಿದರು.

ಸಂಶಿಯಲ್ಲಿ ಶುಕ್ರವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಕುಸುಮಾವತಿ ಅವರು ಟಿಕೆಟ್ ಬೇಕೆಂದು ಕೇಳಲಿಲ್ಲ. ಪಕ್ಷದ ನಾಯಕರು ಒಮ್ಮತದ ನಿರ್ಧಾರ ಕೈಗೊಂಡು ಶಿವಳ್ಳಿ ಅವರ ಜಾಗ ಭರ್ತಿ ಮಾಡಬೇಕು ಎನ್ನುವ ಕಾರಣಕ್ಕೆ ಅವರಿಗೆ ಟಿಕೆಟ್ ನೀಡಲಾಗಿದೆ. ಸ್ವಾರ್ಥವಿಲ್ಲದ ಶಿವಳ್ಳಿ ತಮ್ಮ ಕುಟುಂಬವನ್ನು ಅದೇ ರೀತಿ ರೂಪಿಸಿದ್ದಾರೆ. ನನ್ನ ಗೆಳೆಯನಿಗಾಗಿ ಕ್ಷೇತ್ರದಲ್ಲಿದ್ದು ಪ್ರತಿ ಗ್ರಾಮಗಳಿಗೆ ತೆರಳಿ ಪ್ರಚಾರ ಮಾಡುವುದಾಗಿ ಹೇಳಿದರು.

ಬಿಜೆಪಿ ನಾಯಕರಿಗೆ ಕೃತಜ್ಞತೆ: ಶಿವಳ್ಳಿ ಅವರು ಜೀವಿತಾವಧಿಯಲ್ಲಿ ಎಂದಿಗೂ ಹಣ ಹಾಗೂ ಅಧಿಕಾರಕ್ಕಾಗಿ ಹಪಹಪಿಸಿದವರಲ್ಲ. ಬಿಜೆಪಿಯರು ಹತ್ತಾರು ಕೋಟಿ ರೂ. ನೀಡುವುದರೊಂದಿಗೆ ಅಧಿಕಾರ ಆಸೆ ತೋರಿಸಿದರೂ ಪಕ್ಷ ಹಾಗೂ ಕ್ಷೇತ್ರದ ಜನರಿಗೆ ಮೋಸ ಮಾಡಲಿಲ್ಲ. ಮುಂದಿನ ನಾಲ್ಕು ವರ್ಷ ಮಂತ್ರಿಯಾಗಿದ್ದರೆ ಈ ಕ್ಷೇತ್ರದ ಚಿತ್ರಣವೇ ಬೇರೆಯಾಗಿರುತ್ತಿತ್ತು. ಇವರ ವ್ಯಕ್ತಿತ್ವ ಹಾಗೂ ಕ್ಷೇತ್ರದ ಜನರ ಕಾಳಜಿ ಕುರಿತು ಬಿಜೆಪಿ ಹಿರಿಯ ನಾಯಕರೇ ಮೆಚ್ಚುಗೆ ವ್ಯಕ್ತಪಡಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಬಿಜೆಪಿ ನಾಯಕರು ಇದನ್ನು ಚುನಾವಣೆ ಎಂದು ಭಾವಿಸದೆ ಕ್ಷೇತ್ರದ ಜನರ ಒಮ್ಮತದಂತೆ ಶಿವಳ್ಳಿಯವರನ್ನು ಗೆಲ್ಲಿಸಲು ಮುಂದಾಗಬೇಕು ಎಂದರು.

ಶಿವಳ್ಳಿ ಅವರು ನಮ್ಮನ್ನು ಅಗಲಿದಾಗ ಅವರ ಬಗ್ಗೆ ಮಾತನಾಡಲು ಆಗಲಿಲ್ಲ. ಆದರೆ ಇದೀಗ ಮಾತನಾಡುವ ಸಮಯ ಬಂದಿದೆ. ನ್ಯಾಯಾಲಯಕ್ಕೆ ಕಡ್ಡಾಯವಾಗಿ ಹಾಜರಾಗಬೇಕು ಎನ್ನುವ ಕಾರಣಕ್ಕೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಬರಲು ಆಗದಿರುವುದು ನನಗೆ ನೋವಿದೆ. ಆದಾಯ ತೆರಿಗೆ ಇಲಾಖೆಯಿಂದ ನನಗೆ ಏನೆಲ್ಲಾ ಆಗುತ್ತಿದೆ ಎಂಬುವುದು ನಿಮಗೆ ಗೊತ್ತಿರುವ ವಿಚಾರ. ಒಂದೆರಡು ದಿನ ಅನುಮತಿ ತೆಗೆದುಕೊಂಡು ಗೆಳೆಯನಿಗಾಗಿ ಮೇಲಾಗಿ ಸಜ್ಜನ ರಾಜಕಾರಣಿಗಾಗಿ ಪ್ರಚಾರಕ್ಕೆ ಬರುತ್ತೇನೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಒಗ್ಗೂಡಿಕೊಂಡು ಶಿವಳ್ಳಿ ಅವರ ಜಾಗ ತುಂಬುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಪೋಸ್ಟರ್‌ ಕೆಳಗಿಳಿಸಿ ಅಂದ್ರು

ಅಭಿಮಾನಿಗಳು ಡಿ.ಕೆ. ಶಿವಕುಮಾರ ಹಾಗೂ ರಾಹುಲ್ ಗಾಂಧಿ ಅವರ ಭಾವಚಿತ್ರವಿದ್ದ ಪೋಸ್ಟರ್‌ಗಳನ್ನು ಹಿಡಿದು ಘೋಷಣೆ ಕೂಗುತ್ತಿದ್ದರು. ಇದನ್ನು ಗಮನಿಸಿದ ಡಿ.ಕೆ. ಶಿವಕುಮಾರ ದಯವಿಟ್ಟು ನನ್ನ ಎಲ್ಲ ಪೋಸ್ಟರ್‌ಗಳನ್ನು ಕೆಳಗಿಳಿಸಬೇಕು ಎಂದು ಮನವಿ ಮಾಡಿದ ಪ್ರಸಂಗ ನಡೆಯಿತು. ಸಾಮೂಹಿಕ ನಾಯಕತ್ವದ ಮೇಲೆ ಈ ಚುನಾವಣೆ ಎನ್ನುವ ಸಂದೇಶ ಸಾರಿದಂತೆ ಇತ್ತು. ಮೇ 23ರ ನಂತರ ಖುರ್ಚಿ ಬಂದೇ ಬಿಡುತ್ತೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಕನಸಿನಲ್ಲೂ ಕೂಡ ಸರಕಾರ ನಡೆಸಲು ಸಾಧ್ಯವಿಲ್ಲ. ಮುಂದಿನ ನಾಲ್ಕು ವರ್ಷವೂ ಮೈತ್ರಿ ಸರಕಾರ ಸುಭದ್ರವಾಗಿ ಮುಂದುವರಿಯುತ್ತದೆ.
•ಡಿ.ಕೆ. ಶಿವಕುಮಾರ, ಸಚಿವ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ