ಜೋಳದಿಂದಲೂ ಸಿದ್ಧವಾಯ್ತು ಅವಲಕ್ಕಿ
Team Udayavani, Sep 25, 2018, 6:00 AM IST
ಧಾರವಾಡ: ಸಾಮಾನ್ಯವಾಗಿ ಈ ಅವಲಕ್ಕಿ ಸಿದ್ಧಗೊಳ್ಳುವುದು ಅಕ್ಕಿಯಿಂದ (ಭತ್ತ)ಆದರೆ ಇದೀಗ ಜೋಳದಿಂದಲೂ ಅವಲಕ್ಕಿ ಸಿದ್ಧಗೊಳ್ಳುತ್ತಿವೆ. ಇವುಗಳನ್ನು ಬೇಕಾದರೆ ಜೋಳದ ಅವಲಕ್ಕಿ ಎನ್ನಬಹುದು.
ಇಲ್ಲಿಯವರೆಗೂ ಅಳ್ಳಿನ ಜೋಳ ಎಂದೇ ಕರೆಯಿಸಿಕೊಳ್ಳುತ್ತಿದ್ದ ದೇಶಿ ತಳಿಯ ಜೋಳದಿಂದ ಅಳ್ಳು (ಪಾಪ್)ಹುರಿದು ಮಾರಾಟ ಮಾಡುವುದಕ್ಕೆ ಮತ್ತು ನಾಗರಪಂಚಮಿ ಉಂಡಿಯೊಂದಿಗೆ ಸೇವಿಸಲು ಜೋಳ ಬಳಕೆಯಾಗುತ್ತಿತ್ತು. ಆದರೆ ಇದೀಗ ಕೃಷಿ ವಿವಿಯ ವಿಜಯಪುರದ ಜೋಳ ಸಮನ್ವಯ ಅಭಿವೃದ್ಧಿ ಕೇಂದ್ರದಲ್ಲಿ ಜೋಳದಿಂದ ಅವಲಕ್ಕಿ ಸಿದ್ಧಪಡಿಸುವ ಕೆಂಪು ಜೋಳವನ್ನು (ಎಕೆಜೆ-1 ತಳಿ) ಅಭಿವೃದ್ಧಿ ಪಡಿಸಲಾಗಿದೆ. ಕೆಂಪು ಜೋಳದ ತಳಿ ದೇಶಿ ತಳಿಯಾದರೂ ಅದರಲ್ಲಿಯೇ ಸುಧಾರಿತ ತಳಿಯಿಂದ ಮೌಲ್ಯವರ್ಧನೆ ಮಾಡುವ ಪ್ರಯೋಗ ನಿರಂತರವಾಗಿ ನಡೆದಿತ್ತು. ಕಳೆದ ವರ್ಷದಿಂದ ಕೆಂಪು ಜೋಳದ ಅವಲಕ್ಕಿಗೆ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಈ ತಳಿಗೆ ರೈತರಿಂದ ಉತ್ತಮ ಬೇಡಿಕೆ ಬಂದಿದೆ.