ರೋಗಿ ಸಂಬಂಧಿಕರಿಂದ ಆಸ್ಪತ್ರೆ ಎದುರು ಪ್ರತಿಭಟನೆ

Team Udayavani, Sep 1, 2019, 9:40 AM IST

ಹುಬ್ಬಳ್ಳಿ: ಸುಚಿರಾಯು ಆಸ್ಪತ್ರೆ ಎದುರು ರೋಗಿ ಸಂಬಂಧಿಕರು ಪ್ರತಿಭಟನೆ ನಡೆಸಿದರು.

ಹುಬ್ಬಳ್ಳಿ: ಕುಟುಂಬದ ಸದಸ್ಯರ ಗಮನಕ್ಕೆ ತಾರದೆ ವೈದ್ಯರು ರೋಗಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಲ್ಲದೆ, ಲಕ್ಷಾಂತರ ರೂ. ಬಿಲ್ ಪಾವತಿಸಿಯೇ ರೋಗಿ ಕರೆದುಕೊಂಡು ಹೋಗುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿ ರೋಗಿಯ ಕುಟುಂಬದ ಸದಸ್ಯರು ಶನಿವಾರ ಸಂಜೆ ಇಲ್ಲಿನ ಗೋಕುಲ ರಸ್ತೆಯ ಸುಚಿರಾಯು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

ದಾಂಡೇಲಿಯ ಗಾಂಧಿನಗರ ನಿವಾಸಿ, ಅಲ್ಲಿನ ಪೇಪರ್‌ಮಿಲ್ನ ಕಾರ್ಮಿಕ ಜ್ಞಾನೇಶ್ವರ ರಾಮಚಂದ್ರ ಕುಂಬಾರ (26) ನರ ಸಮಸ್ಯೆಯಿಂದ ಬಳಲುತ್ತಿದ್ದು, ಸುಚಿರಾಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರು ಕುಟುಂಬದ ಸದಸ್ಯರಿಗೆ ಸರಿಯಾಗಿ ಮಾಹಿತಿ ನೀಡದೆ ತಲೆಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಹಾಗೂ ಕಾಲಿಗೆ ಗ್ಯಾಂಗ್ರೀನ್‌ ಆಗಿದೆ ತೆಗೆಯಬೇಕೆಂದು ಹೇಳಿದ್ದಾರೆ. ನಾವು ಬೇಡವೆಂದರೂ ತೆಗೆದಿದ್ದಾರೆ. ಮುಂಗಡವಾಗಿ ಒಂದು ಲಕ್ಷ ರೂ. ತುಂಬಿಸಿಕೊಂಡಿದ್ದಾರೆ. ಔಷಧಿಗಾಗಿಯೇ 2.10 ಲಕ್ಷ ರೂ. ಖರ್ಚಾಗಿದೆ. ಈಗ ಇನ್ನು 1.5 ಲಕ್ಷ ರೂ. ಪಾವತಿಸುವಂತೆ ಹೇಳುತ್ತಿದ್ದಾರೆ ಎಂದು ರೋಗಿಯ ಕುಟುಂಬದ ಸದಸ್ಯರು ಆರೋಪಿಸಿ ಆಸ್ಪತ್ರೆ ಎದುರು ಪ್ರತಿಭಟಿಸಿದರು.

ಆಸ್ಪತ್ರೆಯವರ ಪ್ರಕಾರ, ರೋಗಿ ಜ್ಞಾನೇಶ್ವರನನ್ನು ಕುಟುಂಬದ ಸದಸ್ಯರು ಈ ಮೊದಲು ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಿ, 5-6 ದಿನ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಆ.5ರಂದು ನಮ್ಮ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ತಲೆಗೆ ಬಲವಾದ ಹೊಡೆತ ಬಿದ್ದು ರಕ್ತ ಹೆಪ್ಪುಗಟ್ಟಿತ್ತು. ಅದನ್ನು ಕುಟುಂಬದ ಸದಸ್ಯರಿಗೆ ತಿಳಿಸಿಯೇ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅಲ್ಲದೆ ಕಾಲಿಗೆ ಗ್ಯಾಂಗ್ರೀನ್‌ ಆಗಿದ್ದು, ಅದನ್ನು ತೆಗೆಯಬೇಕೆಂದು ಹೇಳಿಯೇ ತೆಗೆಯಲಾಗಿದೆ. ಒಟ್ಟು 2.5ಲಕ್ಷ ರೂ. ಖರ್ಚಾಗುತ್ತದೆ ಎಂದು ಮೊದಲೇ ತಿಳಿಸಿದ್ದೆವು. ಮುಂಗಡವಾಗಿ 1 ಲಕ್ಷ ರೂ. ಪಾವತಿಸಿದ್ದರು. ಶನಿವಾರ ಡಿಸ್‌ಚಾರ್ಜ್‌ ಮಾಡುವಂತೆ ಹೇಳಿದಾಗ, ಬಾಕಿ 1.5 ಲಕ್ಷ ರೂ. ಪಾವತಿಸುವಂತೆ ಹೇಳಿದಾಗ ಆಗಲ್ಲವೆಂದು ಗಲಾಟೆ ಮಾಡಿದ್ದಾರೆ. ಔಷಧಿ ಖರ್ಚು ಮಾಡಿದ್ದು ನಮಗೆ ಸಂಬಂಧಪಡಲ್ಲ. ನಂತರ ಪೊಲೀಸರು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಿದ್ದಾರೆ. ರೋಗಿಯ ಸಂಬಂಧಿಗಳು ತೀರ ಬಡವರಾಗಿದ್ದರಿಂದ ಬಾಕಿ ಹಣ ಮನ್ನಾ ಮಾಡಿ ರೋಗಿಯನ್ನು ಡಿಸ್‌ಚಾರ್ಜ್‌ ಮಾಡಿ ಕಳುಹಿಸಲಾಗಿದೆ ಎಂದು ತಿಳಿಸಿದರು.

ಗೋಕುಲ ರಸ್ತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು. ನಂತರ ರೋಗಿಯ ಸಂಬಂಧಿಗಳು ಹಾಗೂ ಆಸ್ಪತ್ರೆ ಆಡಳಿತ ಮಂಡಳಿ ಸದಸ್ಯರೊಂದಿಗೆ ಚರ್ಚಿಸಿ ಸಂಧಾನ ಮೂಲಕ ಸಮಸ್ಯೆ ಪರಿಹರಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ