ಕಾಂಕ್ರೀಟ್ ರಸ್ತೆ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ
•ತ್ವರಿತವಾಗಿ ರಸ್ತೆ ಕಾಮಗಾರಿ ಮುಗಿಸಲು ಆಗ್ರಹ•ಹೆದ್ದಾರಿ ಪ್ರಾಧಿಕಾರದ ಅಭಿಯಂತಗೆ ಘೇರಾವ್
Team Udayavani, Aug 28, 2019, 9:32 AM IST
ಧಾರವಾಡ: ನಗರದ ಗಾಂಧೀಚೌಕ ಬಳಿ ರಸ್ತೆ ತಡೆದು ನಿವಾಸಿಗಳು ಪ್ರತಿಭಟನೆ ನಡೆಸಿದರು.
ಧಾರವಾಡ: ಕಾಂಕ್ರೀಟ್ ರಸ್ತೆಗಳಿಗೆ ಪುಟ್ಪಾತ್ ನಿರ್ಮಾಣ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗಾಂಧೀಚೌಕ ನಿವಾಸಿಗಳು ಮಂಗಳವಾರ ರಸ್ತೆ ತಡೆ ಕೈಗೊಂಡು ಪ್ರತಿಭಟನೆ ನಡೆಸಿದರು.
ಗಾಂಧಿಚೌಕ್, ಕೆಸಿಸಿ ಬ್ಯಾಂಕ್ ವೃತ್ತ, ಬಾಗಲಕೋಟ ಪೆಟ್ರೋಲ್ ಪಂಪ್ ಮಾರ್ಗಗಳು ಇಂದಿಗೂ ಸುಧಾರಣೆಯಾಗಿಲ್ಲ. ಕಾಂಕ್ರೀಟ್ ರಸ್ತೆಗಳನ್ನು ನಿರ್ಮಾಣ ಮಾಡುತ್ತಿದ್ದರೂ ಈವರೆಗೆ ಅದು ಪೂರ್ಣಗೊಂಡಿಲ್ಲ. ಹಲವಾರು ಬಾರಿ ಸಂಬಂಧಪಟ್ಟ ಇಲಾಖೆಯವರಿಗೆ ರಸ್ತೆ ಪೂರ್ಣಗೊಳಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಶೀಘ್ರದಲ್ಲಿಯೇ ರಸ್ತೆಯನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಸರಿಪಡಿಸುವವರೆಗೆ ಪ್ರತಿಭಟನೆ ನಿಲ್ಲದು ಎಂದು ಪಟ್ಟು ಹಿಡಿದು ರಸ್ತೆಯಲ್ಲಿ ಕುಳಿತರು.
ರಸ್ತೆ ಒಂದು ಅಡಿಗಿಂತ ಎತ್ತರದಲ್ಲಿದ್ದು, ರಸ್ತೆಯ ಅಕ್ಕಪಕ್ಕದಲ್ಲಿ ಫುಟ್ಪಾತ್ ನಿರ್ಮಾಣ ಮಾಡಿಲ್ಲ. ವಾಹನ ಸವಾರರಿಗೆ ಮಾತ್ರವಲ್ಲದೇ ಪಾದಚಾರಿಗಳಿಗೂ ಇದರಿಂದ ಸಾಕಷ್ಟು ತೊಂದರೆಯಾಗಿದೆ. ಮೊದಲು ಫುಟ್ಪಾತ್ ನಿರ್ಮಾಣ ಮಾಡಬೇಕು. ನಂತರ ತ್ವರಿತವಾಗಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಬಂದ ಸಂಚಾರಿ ಠಾಣೆ ಪೊಲೀಸರ ಮಾತಿಗೂ ಪ್ರತಿಭಟನಾಕಾರರು ಮಣಿಯದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಭಿಯಂತರೇ ಆಗಮಿಸಿದರು. ಈ ವೇಳೆ ಅವರಿಗೆ ಘೇರಾವ್ ಹಾಕಿದ ಪ್ರತಿಭಟನಾಕಾರರಿಗೆ ಒಂದು ವಾರದಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಬಸವರಾಜ ಜಾಧವ ಸೇರಿದಂತೆ ನೂರಾರು ಸ್ಥಳೀಯರು ಇದ್ದರು.