ಪಿಯು ಫಲಿತಾಂಶ: 22ರಿಂದ 23ನೇ ಸ್ಥಾನಕ್ಕೆ ಕುಸಿತ

Team Udayavani, Apr 16, 2019, 12:17 PM IST

ಧಾರವಾಡ: ವಿದ್ಯಾಕಾಶಿ ಎಂದೇ ಹೆಸರು ಪಡೆದಿರುವ ಜಿಲ್ಲೆ ವರ್ಷದಿಂದ ವರ್ಷಕ್ಕೆ ಶೈಕ್ಷಣಿಕ ಸಾಧನೆ ಪಟ್ಟಿಯಲ್ಲಿ ಕುಸಿತ ಕಾಣುತ್ತಲೇ ಇದ್ದು, ಕಳೆದ ಐದು ವರ್ಷಗಳಿಂದ ದ್ವಿತೀಯ ಪಿಯು ಫಲಿತಾಂಶ ಇಳಿಮುಖವಾಗಿಯೇ ಸಾಗಿದೆ.
2017-18ನೇ ಸಾಲಿನಲ್ಲಿ ಪಿಯು ಫಲಿತಾಂಶದಲ್ಲಿ 22ನೇ ಸ್ಥಾನಕ್ಕೆ ಕುಸಿದಿದ್ದ ಜಿಲ್ಲೆ 2018-19ನೇ ಸಾಲಿನಲ್ಲಿ ಮತ್ತೆ ಒಂದಂಕಿ ಕುಸಿದು 23ನೇ ಸ್ಥಾನಕ್ಕೆ ಬಂದು ನಿಂತಿದೆ. 2014-15ರಲ್ಲಿ 14ನೇ ಸ್ಥಾನದಲ್ಲಿದ್ದ ಜಿಲ್ಲೆ 2015-16ರಲ್ಲಿ 15ನೇ ಸ್ಥಾನಕ್ಕೆ ಕುಸಿತ ಕಂಡಿತ್ತು.
2016-17ರಲ್ಲಿ ಬರೋಬ್ಬರಿ 3 ಸ್ಥಾನ ಒಮ್ಮೆಲೆ ಕುಸಿತ ಕಂಡು 18ನೇ ಸ್ಥಾನಕ್ಕಿಳಿದ ಜಿಲ್ಲೆ, 2017-18ರಲ್ಲಿ 22ನೇ ಸ್ಥಾನಕ್ಕೆ ಕುಸಿದಿತ್ತು. ಇದೀಗ ಮತ್ತೆ ಕುಸಿದು 23ನೇ ಸ್ಥಾನಕ್ಕೆ ಇಳಿದಿರುವುದು ಶಿಕ್ಷಣ ತಜ್ಞರ ಆತಂಕಕ್ಕೆ ಕಾರಣವಾಗಿದೆ.
ಫಲಿತಾಂಶದ ಪ್ರಮಾಣ ಹೆಚ್ಚಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕೆಲವು ಸ್ವಯಂ ಸೇವಾ ಸಂಸ್ಥೆಗಳು ಪರೀಕ್ಷೆಗೆ ಪೂರ್ವಭಾವಿಯಾಗಿಯೇ ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದರೂ ಫಲಿತಾಂಶ ಇಳಿಮುಖವಾಗಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳ ಕಳವಳಕ್ಕೆ ಕಾರಣವಾಗಿದೆ.
2015-16ರಲ್ಲಿ ಶೇ.62.86 ಸಾಧನೆ ಮಾಡಿ ರಾಜ್ಯದಲ್ಲಿ 15ನೇ ಸ್ಥಾನದಲ್ಲಿದ್ದ ಜಿಲ್ಲೆ, 2016-17ರಲ್ಲಿ ಶೇ. 55.73 ಸಾಧನೆ ಮಾಡಿ 18ನೇ ಸ್ಥಾನ ಹಾಗೂ 2017-18ರಲ್ಲಿ ಶೇ. 63.67 ಸಾಧನೆ ಮಾಡಿ 22ನೇ ಸ್ಥಾನಕ್ಕೆ ಕುಸಿದಿತ್ತು. ಈಗ 2018-19ನೇ ಸಾಲಿನಲ್ಲಿ ಶೇ. 62.49 ಫಲಿತಾಂಶ ದಾಖಲಿಸಿ 23ನೇ ಸ್ಥಾನಕ್ಕೆ ಕುಸಿತ ಕಂಡಿದೆ
ಪಾಸು-ನಪಾಸು ವಿವರ ಜಿಲ್ಲೆಯಲ್ಲಿ 25956 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರು. ಈ ಪೈಕಿ 14734 ವಿದ್ಯಾರ್ಥಿಗಳು
ತೇರ್ಗಡೆ ಹೊಂದಿದ್ದಾರೆ. ಪರೀಕ್ಷೆ ಬರೆದ 12611 ವಿದ್ಯಾರ್ಥಿನಿಯರ ಪೈಕಿ 8042 ಹಾಗೂ 13345 ವಿದ್ಯಾರ್ಥಿಗಳ ಪೈಕಿ 6692 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕಲಾ ವಿಭಾಗದಲ್ಲಿ 6836 ವಿದ್ಯಾರ್ಥಿಗಳು ಪರೀಕ್ಷೆ ಬರೆದು 3101 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 8528 ವಿದ್ಯಾರ್ಥಿಗಳು ಪರೀಕ್ಷೆ ಬರೆದು 4777 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 10592 ವಿದ್ಯಾರ್ಥಿಗಳು ಪರೀಕ್ಷೆ ಬರೆದು 6856 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಪರೀಕ್ಷೆ ಕುಳಿತ 3470 ಗ್ರಾಮೀಣ ವಿದ್ಯಾರ್ಥಿಗಳ ಪೈಕಿ 1707 ವಿದ್ಯಾರ್ಥಿಗಳು ಹಾಗೂ ನಗರ ಪ್ರದೇಶದ 22486 ವಿದ್ಯಾರ್ಥಿಗಳ ಪೈಕಿ 13027 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಮರು ಪರೀಕ್ಷೆ ಬರೆದ ಒಟ್ಟು 3512 ವಿದ್ಯಾರ್ಥಿಗಳ ಪೈಕಿ 1006 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಅಪರ್ಣಾ ಮುಳಗುಂದ 4-ಶಿಲ್ಪಾ ದೇವರಮನಿ 9ನೇ ರ್‍ಯಾಂಕ್‌
ಹುಬ್ಬಳ್ಳಿ: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಇಲ್ಲಿನ ಚೇತನಾ ಕಾಲೇಜು ವಿದ್ಯಾರ್ಥಿಗಳಾದ ಅಪರ್ಣಾ ಮುಳಗುಂದ ರಾಜ್ಯಕ್ಕೆ 4ನೇ ರ್‍ಯಾಂಕ್‌ ಬಂದರೆ, ಶಿಲ್ಪಾ ದೇವರಮನಿ 9ನೇ ರ್‍ಯಾಂಕ್‌ ಸಾಧನೆ ತೋರಿದ್ದಾರೆ.
ಅಪರ್ಣಾ ಮುಳಗುಂದ ಭೌತಶಾಸ್ತ್ರ, ರಸಾಯನ ಶಾಸ್ತ್ರ ಹಾಗೂ ಗಣಿತದಲ್ಲಿ 100ಕ್ಕೆ 100 ಅಂಕ ಪಡೆದಿದ್ದರೆ, ಜೀವಶಾಸ್ತ್ರ 99, ಇಂಗ್ಲಿಷ್‌ 94, ಕನ್ನಡ 98 ಅಂಕ ಗಳಿಸುವ ಮೂಲಕ 591 ಅಂಕ ಗಳಿಸಿ ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದಾಳೆ. ಅಪರ್ಣಾ ಇಲ್ಲಿನ ವೆಂಕಟೇಶ್ವರ ಕಾಲೊನಿಯ ಸಿವಿಲ್‌ ಇಂಜನಿಯರ್‌ ಆಗಿರುವ ಅಚ್ಯುತ್‌ ಮುಳಗುಂದ ಹಾಗೂ ಅನಿತಾ ಮುಳಗುಂದ ಅವರ ಪುತ್ರಿಯಾಗಿದ್ದಾಳೆ.
9ನೇ ರ್‍ಯಾಂಕ್‌ ಪಡೆದಿರುವ ಬಡ ಕುಟುಂಬದಲ್ಲಿ ಜನಿಸಿದ ಶಿಲ್ಪಾ ದೇವರಮನಿ ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ ವಿಷಯಗಳಲ್ಲಿ 99 ಅಂಕಗಳು, ಭೌತಶಾಸ್ತ್ರ 98, ಇಂಗ್ಲಿಷ್‌ 96, ಕನ್ನಡ 95 ಅಂಕ ಸೇರಿದಂತೆ ಒಟ್ಟು 586 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 9ನೇ ರ್‍ಯಾಂಕ್‌ ಪಡೆದಿದ್ದಾಳೆ.
ಶಿಲ್ಪಾ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಚಿಕ್ಕನಂದಿಹಾಳದವಳಾಗಿದ್ದು, ತಂದೆ ಪ್ರಾಥಮಿಕ ಶಾಲಾ
ಶಿಕ್ಷಕರಾಗಿದ್ದಾರೆ. ಶಿಲ್ಪಾ ಎಸ್‌ ಎಸ್‌ಎಲ್‌ಸಿನಲ್ಲಿ ಶೇ.97ಅಂಕ ಪಡೆದಿದ್ದಳು.
ಪ್ರತಿಭಾನ್ವಿತ ಮಕ್ಕಳಿಗೆ ಉಚಿತ ಶಿಕ್ಷಣ ಕಳೆದ ಹಲವಾರು ವರ್ಷಗಳಿಂದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರ್‍ಯಾಂಕ್‌
ಪಡೆಯುತ್ತಿದ್ದು, ಕಳೆದ ವರ್ಷ 5ಮತ್ತು 6ನೇ ರ್‍ಯಾಂಕ್‌ ಪಡೆದಿದ್ದರೆ, ಈ ಬಾರಿ 4 ಮತ್ತು 9ನೇ ರ್‍ಯಾಂಕ್‌ ಪಡೆದಿದ್ದಾರೆ ಎಂದು ದ್ಯಾವಪ್ಪನವರ-ವಳಸಂಗ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಹೇಶ ದ್ಯಾವಪ್ಪನವರ ಹೇಳಿದರು. ನಮ್ಮ ಸಂಸ್ಥೆಯಲ್ಲಿ ಪ್ರತಿಭಾನ್ವಿತ ಅದರಲ್ಲೂ ರೈತರು ಹಾಗೂ ಸೈನಿಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು. ಮಹಾವಿದ್ಯಾಲಯದಿಂದ ನಡೆಯುವ 50 ಅಂಕಗಳ ಸ್ಕಾಲರ್‌ಶಿಪ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು. ಈ ಬಾರಿ ನಡೆದ ಪರೀಕ್ಷೆಯಲ್ಲಿ 390 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಅದರಲ್ಲಿ 6 ವಿದ್ಯಾರ್ಥಿಗಳು 47 ಅಂಕ ಪಡೆದು ತೇರ್ಗಡೆ ಹೊಂದಿದ್ದಾರೆ ಎಂದರು. ಪ್ರಾಂಶುಪಾಲ ಸುಜಾತಾ ದಢೂತಿ, ಬಿ.ವೈ.ಮಾಯಣ್ಣವರ, ವೈ.ವಿ.ಪಾಟೀಲ, ಪ್ರೊ| ಜಿ.ವಿ.ವಳಸಂಗ ಇನ್ನಿತರರು ಇದ್ದರು.
ಕಾಲೇಜಿನಲ್ಲಿ ಉತ್ತಮ ಬೋಧನೆ ಹಾಗೂ ಪ್ರೋತ್ಸಾಹ, ತಂದೆ-ತಾಯಿಯವರ ಸೂಕ್ತ ಮಾರ್ಗದರ್ಶನ, ಸತತ ಓದಿನಿಂದ ಈ ಸಾಧನೆ ಸಾಧ್ಯವಾಗಿದೆ. ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್‌ ಬಂದಿರುವುದು ಸಂತಸ ತಂದಿದೆ.
 ಅಪರ್ಣಾ ಮುಳಗುಂದ, 4ನೇ ರ್‍ಯಾಂಕ್‌ ಪಡೆದ ವಿದ್ಯಾರ್ಥಿನಿ.
ಮಗಳು ಓದಿನಲ್ಲಿ ಮೊದಲಿನಿಂದಲೂ ಸದಾ ಮುಂದೆ ಇದ್ದಳು. ದ್ವಿತೀಯ ಪಿಯುನಲ್ಲಿ ಉತ್ತಮ ಅಂಕಗಳಿಸ ಬೇಕೆಂದು ಅಪರ್ಣಾ ಕಠಿಣ ಪರಿಶ್ರಮ ಪಟ್ಟಿದ್ದಳು. ಇದೀಗ ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್‌ ಪಡೆದಿರುವುದು ಹೆಮ್ಮೆ ಎನಿಸಿದೆ.
 ಅಚ್ಯುತ್‌ ಮುಳಗುಂದ, ಅಪರ್ಣಾಳ ತಂದೆ 

ಈ ವಿಭಾಗದಿಂದ ಇನ್ನಷ್ಟು

  • ಹುಬ್ಬಳ್ಳಿ: ಲಿಂಗಾಯತ ಧರ್ಮ ಒಡೆಯಲು ಮುಂದಾಗಿರುವ ಗೃಹ ಸಚಿವ ಎಂ.ಬಿ.ಪಾಟೀಲ ಅಪಾಯಕಾರಿಯಾಗಿದ್ದು, ಲಿಂಗಾಯತ ಪ್ರತ್ಯೇಕ ಧರ್ಮ ಕುರಿತಾಗಿ ಸೋನಿಯಾ ಗಾಂಧಿ ಅವರಿಗೆ...

  • ಚಿಂಚೋಳಿ: ಮೀಸಲು (ಪರಿಶಿಷ್ಟ ಜಾತಿ)ವಿಧಾನಸಭೆ ಮತಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷದ ಮಾಜಿ ಶಾಸಕ ಡಾ| ಉಮೇಶ ಜಾಧವ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ...

  • ನವಲಗುಂದ: ಲೋಕಸಭೆ ಚುನಾವಣೆ ಪ್ರಚಾರದ ಕಾವು ಸ್ಥಳೀಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುವುದರೊಂದಿಗೆ ಕಾರ್ಯಕರ್ತರಲ್ಲಿನ ಉತ್ಸಾಹ...

  • ಶಿಗ್ಗಾವಿ: ಸಂತ ಶಿಶುನಾಳ ಶರೀಫರ ನೆಲವಾದ ಶಿಗ್ಗಾವಿ-ಸವಣೂರ ಕ್ಷೇತ್ರದಲ್ಲಿ ಧಾರವಾಡ ಲೋಕಸಭಾ ಚುನಾವಣೆ ಕಣ ರಂಗೇರಿದ್ದು, ಪ್ರಚಾರ ಭರಾಟೆ ಭರಪೂರಾಗಿ ನಡೆದಿದೆ. ಹಾವೇರಿ...

  • ಧಾರವಾಡ: ಏ.23ರಂದು ಮತದಾನ ಮಾಡಿ ಬರುವ ಗ್ರಾಹಕರಿಗೆ ಕೆ.ಸಿ.ಪಾರ್ಕ್‌ ಎದುರಿನ ಪಂಜುರ್ಲಿ, ಲಿಂಗಾಯತ ಭವನ ಬಳಿಯ ಶಿವಸಾಗರ ಹೋಟೆಲ್‌, ಆರ್‌ಎಲ್‌ಎಸ್‌ ಕಾಲೇಜು ಬಳಿಯ...

ಹೊಸ ಸೇರ್ಪಡೆ