ಸ್ಫೋಟಕದ ಎದುರಲ್ಲಿ ಹತ್ತಾರು ಪ್ರಶ್ನೆ ಸ್ಫೋಟ

Team Udayavani, Oct 22, 2019, 11:09 AM IST

ಹುಬ್ಬಳ್ಳಿ: ರೈಲ್ವೆ ನಿಲ್ದಾಣದಲ್ಲಿ ಪ್ರತಿಯೊಬ್ಬ ಪ್ರಯಾಣಿಕ ಹಾಗೂ ಪಾರ್ಸಲ್‌ನ್ನು ತಪಾಸಣೆ ಮಾಡಿಯೇ ಒಳಗೆ ಬಿಡಲಾಗುತ್ತದೆ.

ಅಷ್ಟಾದರೂ ರೈಲಿನಲ್ಲಿ ಸ್ಫೋಟಕ ವಸ್ತುಗಳನ್ನು ಸಾಗಿಸಲಾಗುತ್ತಿದ್ದಾರೂ ಹೇಗೆ?, ಒಂದು ವೇಳೆ ಸ್ಫೋಟಕ ವಸ್ತುವನ್ನು ಕೊಲ್ಲಾಪುರ ಜಿಲ್ಲೆಯ ವಿಳಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದರೆ ಅದನ್ನು ವಿಜಯವಾಡ-ಹುಬ್ಬಳ್ಳಿ ರೈಲಿನಲ್ಲೇ ಇಟ್ಟಿದ್ದಾದರೂ ಯಾಕೆ? ಒಂದು ವೇಳೆ ಪ್ರಯಾಣಿಕನೇ ಸ್ಫೋಟಕ ವಸ್ತು ತೆಗೆದುಕೊಂಡು ಹೋಗುತ್ತಿದ್ದರೆ ವಿಜಯವಾಡದಿಂದ ಹುಬ್ಬಳ್ಳಿವರೆಗೆ ಸಾಮಾನ್ಯ ಕಂಪಾರ್ಟ್‌ಮೆಂಟ್‌ ಬೋಗಿಯಲ್ಲಿ ತೆಗೆದುಕೊಂಡು ಬಂದಿದ್ದಾದರೂ ಹೇಗೆ?, ಆಂಧ್ರಪ್ರದೇಶದ ವಿಜಯವಾಡದಿಂದ ಹುಬ್ಬಳ್ಳಿಗೆ ಸ್ಫೋಟಕ ವಸ್ತು ತಂದಿದ್ದರೆ ಅದರ ಮೇಲೆ ತಮಿಳುಭಾಷೆಯಲ್ಲಿ ವಿಳಾಸ ಬರೆದರಾದರೂ ಏಕೆ? ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂತಹ ಹತ್ತು ಹಲವು ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ.

ಮಹಾರಾಷ್ಟ್ರದಲ್ಲಿ ಚುನಾವಣೆ ವೇಳೆಯೇ ಮಹಾರಾಷ್ಟ್ರ ರಾಜಕೀಯ ವಿಷಯ ಹಾಗೂ ಅಲ್ಲಿನ ಶಾಸಕರೊಬ್ಬರ ಹೆಸರು ನಮೂದಿಸಿರುವುದಾದರೂ ಯಾಕೆ?, ಕೊಲ್ಲಾಪುರಕ್ಕೆ ಅದನ್ನು ಒಯ್ಯುತ್ತಿದ್ದರೆ ರೈಲಿನಲ್ಲಿ ಬಿಟ್ಟು ಹೋಗಿದ್ದಾದರೂ ಹೇಗೆ? ಮತ್ತಿತರ ಪ್ರಶ್ನೆಗಳು ಈಗ ಹುಟ್ಟಿಕೊಳ್ಳುತ್ತಿವೆ. ರೈಲ್ವೆ ನಿಲ್ದಾಣದಲ್ಲಿ ಸ್ಫೋಟ ನಡೆದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಪೊಲೀಸರು ಹಾಗೂ ಆರ್‌ಪಿಎಫ್‌ ದವರು ಇದನ್ನು ವಿಶೇಷ ಘಟನೆಯೆಂದು ಪರಿಗಣಿಸಿ ತೀವ್ರ ತನಿಖೆ ಕೈಗೊಂಡಿದ್ದಾರೆ. ಸ್ಫೋಟಕ ವಸ್ತುಗಳನ್ನು ಹೊಂದಿದ್ದ ಬಕೆಟ್‌ ಮೇಲೆ ಬರೆದಿದ್ದ ವಿಳಾಸವನ್ನು ಪತ್ತೆ ಮಾಡುವ ಸಲುವಾಗಿ ಈಗಾಗಲೇ ತನಿಖಾ ತಂಡವೊಂದನ್ನು ಕೊಲ್ಲಾಪುರಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಸ್ಫೋಟಕ ವಸ್ತು ಎಲ್ಲಿಂದ ತರಲಾಗುತ್ತಿತ್ತು. ನಿಜವಾಗಲೂ ಎಲ್ಲಿಗೆ ಕಳುಹಿಸಲಾಗುತ್ತಿತ್ತು. ಈ ಕೃತ್ಯದ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಕುಲಂಕುಷವಾಗಿ ಪರಿಶೀಲನೆ ಮಾಡಬೇಕಿದೆ.

ಸುರಕ್ಷತಾ ಕ್ರಮ ಕೈಗೊಳ್ಳದೆ ತಪಾಸಣೆಗೆ ಮುಂದಡಿ ಸರಿಯೇ? : ಹುಬ್ಬಳ್ಳಿ ನಿಲ್ದಾಣದ ಆರ್‌ಪಿಎಫ್‌ ಸಿಬ್ಬಂದಿ ದೊಡ್ಡ ಅನಾಹುತ ಸಂಭವಿಸುವ ಮೊದಲೇ ರೈಲಿನಲ್ಲಿಟ್ಟಿದ್ದ ಸ್ಫೋಟಕ ವಸ್ತು ಪತ್ತೆ ಮಾಡಿದ್ದು ಒಳ್ಳೆಯ ಕೆಲಸ. ಆದರೆ ಅದು ಶಂಕಾಸ್ಪದ ವಸ್ತು ಎಂಬುದು ಗೊತ್ತಿದ್ದರೂ ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೆ ಹಾಗೂ ಬಾಂಬ್‌ ತಪಾಸಣೆ ತಂಡ ಮೂಲಕ ತಪಾಸಿಸದೆ ತಾವೇ ಅದನ್ನು ತಪಾಸಣೆ ಮಾಡಿದ್ದು ತಪ್ಪು. ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ತಪಾಸಿಸುವ ಸಂದರ್ಭದಲ್ಲಿ ದೊಡ್ಡ ಅನಾಹುತ ಆಗಿದ್ದರೆ ಯಾರು ಹೊಣೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಮರಾವತಿ ಎಕ್ಸಪ್ರಸ್‌ ರೈಲು ತಪಾಸಣೆ ಮಾಡುತ್ತಿದ್ದಾಗ ಜನರಲ್‌ ಕಂಪಾರ್ಟ್‌ಮೆಂಟ್‌ನ ಕೊನೆಯ ಬೋಗಿಯಲ್ಲಿ ಸಂಶಯಾಸ್ಪದವಾದ ಬಕೆಟ್‌ ಸಿಕ್ಕಿತ್ತು. ಅದರಲ್ಲಿ ಊಟದ ಬಾಕ್ಸ್‌ಗಳಿದ್ದವು. ಅವುಗಳಲ್ಲಿ ಲಿಂಬೆಹಣ್ಣು ತರಹದ ವಸ್ತುಗಳಿದ್ದವು. ಡಬ್ಬಿಯನ್ನು ಕೈಯಲ್ಲಿ ಹಿಡಿದು ಅಲುಗಾಡಿಸಿ ನೋಡಿದೆವು. ಏನೂ ಗೊತ್ತಾಗಲಿಲ್ಲ. ವೆಂಡರ್‌ ಹುಸೇನಸಾಬನು ಡಬ್ಬಿಗೆ ಬಲವಾಗಿ ಗುದ್ದಿದಾಗ ಅದು ಸ್ಫೋಟಗೊಂಡಿತು.ರವಿ ರಾಠೊಡ, ಆರ್‌ಪಿಎಫ್‌ ಪೇದೆ.

 

-ಶಿವಶಂಕರ ಕಂಠಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ