ಜಲಸಂಪರ್ಕ ಜಾಲ ಮೂಡಿಸಿದ ಮಳೆ

•ಕೃಷಿ ಹೊಂಡಗಳಿಗೆ ಜೀವಕಳೆ•ಸೋಯಾ-ಗೋವಿನಜೋಳದಿಂದಾಗಿ ಅಧಿಕ ನೀರು?•ಜಲಧಾರೆ ಹೊಮ್ಮಿಸಿದ ಚೆಕ್‌ಡ್ಯಾಂಗಳು

Team Udayavani, Aug 4, 2019, 9:35 AM IST

ಧಾರವಾಡ: ಕೃಷಿ ಹೊಂಡಗಳಲ್ಲಿ ನೀರು ತುಂಬಿಕೊಂಡಿರುವುದು.

ಧಾರವಾಡ: ಮೂರು ವರ್ಷಗಳ ಹಿಂದೆ ಕೃಷಿ ಹೊಂಡಗಳನ್ನು ತೋಡುತ್ತಿರುವಾಗ ಇದರಲ್ಲಿ ಮಳೆ ನೀರು ನಿಲ್ಲಬಹುದೇ? ಎನ್ನುವ ರೈತರ ಅನುಮಾನ ಕಡೆಗೂ ಸುಳ್ಳಾಗಿದ್ದು, ಜಿಲ್ಲೆಯ ಎಲ್ಲ ಕೃಷಿ ಹೊಂಡಗಳು ಮತ್ತು ಚೆಕ್‌ಡ್ಯಾಂಗಳು ಭರ್ತಿಯಾಗಿ 23 ಹಳ್ಳಗಳು ಮೈತುಂಬಿಕೊಂಡು ರಭಸದಿಂದ ಹರಿಯುತ್ತಿವೆ.

ಕೆರೆಯ ಕೋಡಿಗಳಿಂದ ಉಗಮವಾಗುವ ಹಳ್ಳಗಳು ಕೆರೆ ತುಂಬಿಕೊಳ್ಳದಿದ್ದರೂ ಭೂಮಿಯಲ್ಲಿನ ಅಡ್ಡ ನೀರಿನಿಂದಾಗಿ ಮೈತಡವಿಕೊಂಡು ಹರಿಯುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿವೆ. ಜಿಲ್ಲೆಯ ಪ್ರಮುಖ ಹಳ್ಳಗಳಾದ ಬೇಡ್ತಿ, ತುಪರಿ, ಸಣ್ಣಹಳ್ಳ, ಜಾತಕ್ಯಾನ ಹಳ್ಳ, ಯಾದವಾಡ ಹಳ್ಳ, ನರೇಂದ್ರ ಹಳ್ಳ, ಅಂಬ್ಲಿಕೊಪ್ಪದ ಹಳ್ಳ, ಡೋರಿ-ಬೆಣಚಿ ಹಳ್ಳಿ, ಹೊನ್ನಾಪುರ ಹಳ್ಳ, ವೀರಾಪುರ ಹಳ್ಳ ಮತ್ತು ಅಳ್ನಾವರ ಪಕ್ಕದ ದೊಡ್ಡ ಹಳ್ಳದಲ್ಲಿ ಕಳೆದ ಎರಡು ದಿನಗಳಿಂದ ನೀರು ಚೆನ್ನಾಗಿ ತುಂಬಿಕೊಂಡು ಹರಿಯುತ್ತಿದ್ದು, ನೀರಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ.

ಧಾರವಾಡ ನಗರದ ಛೋಟಾ ಮಹಾಬಲೇಶ್ವರ ಬೆಟ್ಟವೆಂದೇ ಖ್ಯಾತವಾಗಿರುವ ಕರ್ನಾಟಕ ವಿಶ್ವವಿದ್ಯಾಲಯದ ಪಶ್ಚಿಮಕ್ಕೆ ಬೀಳುವ ನೀರು ಶಾಲ್ಮಲೆಯ ಒಡಲಿಗುಂಟ ಹರಿದು ನುಗ್ಗಿಕೇರಿ, ಸೋಮೇಶ್ವರ, ನಾಯಕನ ಹುಲಿಕಟ್ಟಿ ಮೂಲಕ ಹರಿಯುತ್ತಿದ್ದರೆ, ಬೇಡ್ತಿ ನದಿಗೆ ಮೂಲ ಸೆಲೆಯಾಗಿರುವ ಬೇಡ್ತಿ ಹಳ್ಳವೂ ಮೈ ದುಂಬಿ ಹರಿಯುತ್ತಿದೆ. ಲಾಳಗಟ್ಟಿ, ಮುರಕಟ್ಟಿ, ಹಳ್ಳಿಗೇರಿ ತೋಬುಗಳು ತುಂಬಿ ಹರಿಯುತ್ತಿವೆ. ಕಳೆದ ಹತ್ತು ವರ್ಷಗಳಿಂದ ಇಷ್ಟು ರಭಸವಾದ ನೀರು ಈ ಹಳ್ಳದಲ್ಲಿ ಹರಿದಿರಲಿಲ್ಲ. ಇನ್ನು ಮುಗದ, ಕ್ಯಾರಕೊಪ್ಪ, ದಡ್ಡಿ ಕಮಲಾಪುರ ಬಳಿಯ ಸಪೂರ ಹಳ್ಳಗಳಲ್ಲಿ ಹೊಸಮಳೆ ನೀರು ಕಂಗೊಳಿಸುತ್ತಿದೆ.

  • ತುಂಬಿ ಹರಿಯುತ್ತಿವೆ ತುಪರಿಹಳ್ಳದ ಚೆಕ್‌ಡ್ಯಾಂಗಳು
  • ಬೇಡ್ತಿ ನಾಲಾದಲ್ಲೂ ಮಳೆಯ ಆಟ ಜೋರು
  • ಉತ್ತಮ ನೀರು ಉಕ್ಕಿಸುತ್ತಿರುವ ಕೊಳವೆಬಾವಿಗಳು
  • ಎರಡೇ ತಾಸಿನ ಮಳೆಗೆ 300 ಕೃಷಿಹೊಂಡ ಭರ್ತಿ
ಕುಲಕರ್ಣಿ ಮಳೆಲಿಂಕ್‌ಗೆ ಜೀವಕಳೆ:

ಜಿಲ್ಲೆಯಲ್ಲಿ ಕಳೆದ 20 ವರ್ಷಗಳಲ್ಲಿ ಮಳೆನೀರನ್ನು ಕೃಷಿಗಾಗಿ ಸಂಗ್ರಹಿಸುವ ಕಾರ್ಯದಲ್ಲಿ ಹೆಚ್ಚು ಆಸಕ್ತಿಯಿಂದ ಕೆಲಸ ಮಾಡಿದ್ದು ವಿನಯ್‌ ಕುಲಕರ್ಣಿ. ರಾಜಕೀಯವಾಗಿ ಯಾವುದೇ ಪಕ್ಷಕ್ಕೆ ಸೇರಿದ್ದರೂ ಮಳೆನೀರು ಸಂಗ್ರಹ, ಚೆಕ್‌ಡ್ಯಾಂ ನಿರ್ಮಾಣಕ್ಕೆ ಜಿಲ್ಲೆಯಲ್ಲಿ ಒತ್ತು ಕೊಟ್ಟಿದ್ದಾರೆ. 1999ರಲ್ಲಿ ಜಿಪಂ ಉಪಾಧ್ಯಕ್ಷರಾಗಿದ್ದಾಗ ಡಾ| ರಾಜೇಂದ್ರಸಿಂಗ್‌ ಅವರನ್ನು ನಿಗದಿ ಜಿಪಂ ಕ್ಷೇತ್ರಕ್ಕೆ ಕರೆಯಿಸಿಕೊಂಡು ಇಲ್ಲಿನ ಹಳ್ಳಕೊಳ್ಳಗಳಲ್ಲಿ ನೂರಾರು ಚೆಕ್‌ಡ್ಯಾಂಗಳನ್ನು ನಿರ್ಮಿಸಿ ಮಳೆನೀರು ಸಂಗ್ರಹಕ್ಕೆ ಶ್ರಮಿಸಿದ್ದರು. ಸಚಿವರಾಗಿದ್ದಾಗ ತುಪರಿ ಹಳ್ಳಕ್ಕೆ ಅಡ್ಡಲಾಗಿ ಲೋಕೂರು, ಜೀರಿಗವಾಡ, ಬೆಟಗೇರಿ, ಯಾದವಾಡ, ಕಲ್ಲೆ, ಕಬ್ಬೂರು ಸೇರಿದಂತೆ ಅನೇಕ ಕಡೆಗಳಲ್ಲಿ ನಿರ್ಮಿಸಿದ್ದ ಹೊಸ ಮಾದರಿ ದೈತ್ಯ ಚೆಕ್‌ಡ್ಯಾಂಗಳು ತುಂಬಿ ಹರಿಯುತ್ತಿವೆ. ತುಪರಿಹಳ್ಳದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕೂಡ ಚಾಲ್ತಿಯಲ್ಲಿದ್ದು, ಮುಂದಿನ ವರ್ಷ ಎಲ್ಲ ಕೆರೆಗಳಲ್ಲೂ ನೀರು ಸಂಗ್ರಹಣೆಯಾಗಲಿದೆ. ಬೇಡ್ತಿ ಹಳ್ಳಕ್ಕೆ ನಿರ್ಮಿಸಿದ್ದ 100ಕ್ಕೂ ಹೆಚ್ಚು ತೋಬುಗಳು ಮತ್ತು ಚೆಕ್‌ಡ್ಯಾಂಗಳು ಕೂಡ ಮತ್ತೆ ತುಂಬಿಕೊಂಡಿವೆ.
ಹಳೆಯ ಮಾರ್ಗ ಪುನರ್‌ ಸೃಷ್ಟಿ:

ಹಳೆಯ ಕಾಲದಿಂದಲೂ ಕೆರೆಯಿಂದ ಕೆರೆ ಮತ್ತು ಹಳ್ಳದಿಂದ ಹಳ್ಳಗಳ ಮಧ್ಯೆ ಇರುವ ಜಲಸಂಪರ್ಕ ವ್ಯವಸ್ಥೆ ಜಿಲ್ಲೆಯಲ್ಲಿನ ಉತ್ತಮ ಮಳೆಯಿಂದ ಮತ್ತೆ ಗೋಚರಿಸಿದೆ. ಅತಿಕ್ರಮಣಕಾರರು ಎಲ್ಲೆಲ್ಲಿ ಹಳ್ಳಕೊಳ್ಳ ಮತ್ತು ಕೆರೆ ಕೋಡಿಗಳನ್ನು ಅತಿಕ್ರಮಿಸಿದ್ದಾರೆ ಎಂಬ ಸಚಿತ್ರವನ್ನು ಸ್ಪಷ್ಟವಾಗಿ ನೀಡುತ್ತಿವೆ. ಹೊಯ್ಸಳರ ಕಾಲದಿಂದಲೂ ಜಿಲ್ಲೆಯಲ್ಲಿನ ಜಲನಿರ್ವಹಣೆಗೆ ಕೆರೆ, ತೋಬುಗಳು ರಚನೆಯಾಗಿದ್ದಕ್ಕೆ ದಾಖಲೆಗಳಿದ್ದು, ಇದೀಗ ಮಳೆ ಸುರಿಯುತ್ತಿರುವುದರಿಂದ ಆ ಜಲಸಂಪರ್ಕ ಜಾಲಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಕೆರೆಯ ಕೋಡಿಗಳು ಬಿದ್ದ ನಂತರ ರಭಸವಾಗಿ ಹರಿಯುತ್ತಿರುವ ನೀರಿನ ಸೆಲೆಗಳು ಎಲ್ಲೆಂದರಲ್ಲಿ ನುಗ್ಗಿಕೊಂಡು ತನ್ನ ಹಳೆಯ ಮಾರ್ಗವನ್ನು ಪುನರ್‌ ಸೃಷ್ಟಿಸಿಕೊಂಡಿವೆ.
ಚೆಕ್‌ಡ್ಯಾಂಗಳಿಗೆ ಜೀವ ಕಳೆ: ಜಿಲ್ಲೆಯಲ್ಲಿರುವ 500ಕ್ಕೂ ಅಧಿಕ ಚೆಕ್‌ಡ್ಯಾಂಗಳ ಪೈಕಿ 300 ಚೆಕ್‌ಡ್ಯಾಂಗಳು ಪರಿಪೂರ್ಣವಾಗಿದ್ದು, ಜೀವಕಳೆ ಬಂದಂತಾಗಿದೆ. ಕಳೆದ ವರ್ಷವೂ ಅಲ್ಲಲ್ಲಿ ಅಲ್ಪ ಮಳೆಗೆ ನೀರು ತುಂಬಿಕೊಂಡಿತ್ತು. ಆದರೆ ಈ ವರ್ಷ ಹೆಚ್ಚಿನ ಚೆಕ್‌ಡ್ಯಾಂಗಳು ಈಗಾಗಲೇ ಭರ್ತಿಯಾಗಿ ತುಂಬಿ ಹರಿಯುತ್ತಿವೆ. ಬೇಡ್ತಿ, ಸಣ್ಣ ಹಳ್ಳ, ಜಾತಗ್ಯಾನ ಹಳ್ಳ, ಮಡಿ ಹಳ್ಳ,ಬೆಣ್ಣೆ ಹಳ್ಳ ಸೇರಿದಂತೆ ಒಟ್ಟು 23 ಸಣ್ಣ ಹಳ್ಳಗಳಲ್ಲಿ ನಿರ್ಮಿಸಿರುವ ಚೆಕ್‌ಡ್ಯಾಂಗಳು ಭರ್ತಿಯಾಗಿವೆ. ಅಳ್ನಾವರ ಸಮೀಪದ ಡೌಗಿ ನಾಲಾ ಸಂಪೂರ್ಣ ತುಂಬಿಕೊಂಡಿದ್ದು, ಕಾಶಾನಟ್ಟಿ ಕೆರೆ ಮತ್ತು ಹುಲಿಕೆರೆ ನೀರಿನ ಮಟ್ಟಳ ಹೆಚ್ಚಳವಾಗಿದೆ. ಪ್ರಭುನಗರ ಹೊನ್ನಾಪುರ, ಚಂದ್ರಾಪುರದೊಡ್ಡಿ ಬಳಿಯ ಕಿರುಹಳ್ಳ ರಂಗೇರಿದೆ. ಅಳ್ನಾವರ ಮೂಲಕ ಹಳಿಯಾಳ ಪಟ್ಟಣದತ್ತ ಹರಿಯುವ ಹಳ್ಳದಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದರೆ, ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರು ಸೆರೆ ಹಿಡಿದ ಡೋರಿ-ಬೆಣಚಿ ಹಳ್ಳದಲ್ಲೂ ಮುಂಗಾರು ಮಳೆ ತನ್ನ ಹನಿಗಳ ಲೀಲೆ ತೋರಿಸಿದೆ.
ಹೊಲದಿಂದ ಹೊರ ಬಂದ ನೀರು?: ಜಿಲ್ಲೆಯ ಅರೆಮಲೆನಾಡಿನಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಆದರೆ ಇಷ್ಟು ಬೇಗ ಕೆರೆಗಳಲ್ಲಿ ನೀರು ಸಂಗ್ರಹವಾಗಲು ಪ್ರಮುಖ ಕಾರಣವಾಗಿದ್ದು ಸೋಯಾ ಅವರೆ ಮತ್ತು ಗೋವಿನಜೋಳದ ಬೆಳೆ. ಈ ಎರಡೂ ಮಲೆನಾಡಿನ ಬೆಳೆಗಳಲ್ಲ. ಬಯಲು ಸೀಮೆಯ ಕಡಿಮೆ ನೀರಿನಲ್ಲಿ ಬೆಳೆಯುವ ಬೆಳೆಗಳು. ಆದರೆ ಸತತ ಮಳೆ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಧಾರವಾಡ, ಕಲಘಟಗಿ, ಹುಬ್ಬಳ್ಳಿ ತಾಲೂಕಿನಲ್ಲಿಯೂ ಈ ವರ್ಷ ಇವೆರಡೇ ಬೆಳೆಗಳು ಅಧಿಕವಾಗಿವೆ. ಈ ಮೊದಲು ದೇಶಿ ಭತ್ತದ ಗದ್ದೆಗಳಿಗೆ ಒಂದು ಅಡಿಯಷ್ಟು ನೀರು ಕಟ್ಟುತ್ತಿದ್ದ ರೈತರು, ಇದೀಗ ಎರಡು ಇಂಚು ನೀರನ್ನೂ ಹೊಲದಲ್ಲಿ ಇಟ್ಟುಕೊಳ್ಳದೇ ಹಳ್ಳ-ಕೆರೆಯತ್ತ ಮುನ್ನೂಕುತ್ತಿದ್ದಾರೆ. ಹೀಗಾಗಿ ಒಂದೇ ವಾರದಲ್ಲಿ ಕೆರೆ, ಹಳ್ಳಕೊಳ್ಳದಲ್ಲಿ ನೀರು ಅಧಿಕವಾಗಿ ಕಾಣಿಸಿಕೊಳ್ಳುತ್ತಿದೆ.
ಕೃಷಿ ಹೊಂಡಗಳು ಭರ್ತಿ: ಜಿಲ್ಲೆಯಲ್ಲಿ ಸತತ ನಾಲ್ಕು ವರ್ಷಗಳಲ್ಲಿ ನಿರ್ಮಿಸಿರುವ 7 ಸಾವಿರಕ್ಕೂ ಅಧಿಕ ಕೃಷಿ ಹೊಂಡಗಳು ಸೇರಿದಂತೆ ಒಟ್ಟು 8500ಕ್ಕೂ ಅಧಿಕ ಕೃಷಿಹೊಂಡಗಳಲ್ಲಿ ಮಳೆಯಿಂದಾಗಿ ನೀರು ತುಂಬಿಕೊಂಡಿದೆ. ಹೊಂಡಗಳು ತುಂಬಿದ ನಂತರದ ನೀರು ಮುಂದಿನ ಹೊಲ, ಹಳ್ಳಗಳತ್ತ ಹರಿಯುತ್ತಿದೆ. ಕಲಘಟಗಿ, ಧಾರವಾಡ ತಾಲೂಕಿನ ಕೃಷಿ ಹೊಂಡಗಳು ಸಂಪೂರ್ಣ ಭರ್ತಿಯಾಗಿದ್ದರೆ, ನವಲಗುಂದ ಮತ್ತು ಹುಬ್ಬಳ್ಳಿ ತಾಲೂಕಿನ ಕೃಷಿ ಹೊಂಡಗಳಲ್ಲಿ ನೀರು ಅಷ್ಟಾಗಿ ಶೇಖರಣೆಯಾಗಿಲ್ಲ.

ಜಿಲ್ಲೆಯಲ್ಲಿ ಸತತ ಬರಗಾಲದ ನಂತರ ಸುರಿದ ಮಳೆ ನಿಜಕ್ಕೂ ಹರ್ಷ ತಂದಿದೆ. ಕಳೆದ ಐದು ವರ್ಷಗಳಲ್ಲಿ ಅಂತರ್ಜಲ ಮಟ್ಟ ಸುಧಾರಣೆ ಮತ್ತು ಮಳೆನೀರು ಕೊಯ್ಲಿಲಿಗೆ ಒತ್ತು ನೀಡಿದ್ದರ ಫಲವಾಗಿ ಇಂದು 8 ಸಾವಿರಕ್ಕೂ ಅಧಿಕ ಕೃಷಿ ಹೊಂಡಗಳು ಮತ್ತು 250 ಚೆಕ್‌ಡ್ಯಾಂಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ಇನ್ನಷ್ಟು ಚೆಕ್‌ಡ್ಯಾಂಗಳನ್ನು ಆಗಲೇ ನಿರ್ಮಿಸಿದ್ದರೆ ಚೆನ್ನಾಗಿತ್ತು. ಆದರೆ ಈ ವರ್ಷ ಮತ್ತೆ 500 ಚೆಕ್‌ಡ್ಯಾಂಗಳ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದೇವೆ.•ಡಾ| ಬಿ.ಸಿ. ಸತೀಶ, ಜಿಪಂ ಸಿಇಒ

ಜಿಲ್ಲೆಯಲ್ಲಿನ 10 ಸಾವಿರಕ್ಕೂ ಅಧಿಕ ಕೃಷಿಹೊಂಡಗಳ ಪೈಕಿ 9 ಸಾವಿರಕ್ಕೂ ಅಧಿಕ ಕೃಷಿ ಹೊಂಡಗಳಲ್ಲಿ ಚೆನ್ನಾಗಿ ನೀರು ತುಂಬಿಕೊಂಡಿದೆ. ರೈತರಿಗೆ ಈ ವರ್ಷ ಕೃಷಿಹೊಂಡ ಆಧರಿಸಿದ ಕೃಷಿ ಮಾಡಲು ಅನುಕೂಲಗಳು ಹೆಚ್ಚಿವೆ.•ಅಬೀದ್‌ ಎಸ್‌.ಎಸ್‌., ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಧಾರವಾಡ

 

•ಬಸವರಾಜ ಹೊಂಗಲ್

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ