ಸೋತಾಗ ಚಿಕ್ಕನಗೌಡ್ರ ನೀರಿನ ಸಂಪರ್ಕ ಸ್ಥಗಿತಗೊಳಿಸಿದ್ದು ನೆನಪಿದೆಯಾ?: ಡಿಕೆಶಿ

Team Udayavani, May 13, 2019, 11:16 AM IST

ಹುಬ್ಬಳ್ಳಿ: ಈ ಹಿಂದೆ ಚುನಾವಣೆಯಲ್ಲಿ ಸೋತ ಸಂದರ್ಭದಲ್ಲಿ ಎಸ್‌.ಐ. ಚಿಕ್ಕನಗೌಡ್ರ ಕಡಿಮೆ ಮತಗಳು ಬಂದ ಕೆಲ ಗ್ರಾಮಗಳಿಗೆ ಕುಡಿಯುವ ನೀರಿನ ಸಂಪರ್ಕ ಸ್ಥಗಿತಗೊಳಸಿದ್ದು, ಬೂತ್‌ ಅಧ್ಯಕ್ಷರಿಂದ ಹಣ ವಾಪಸ್‌ ಪಡೆದಿರುವುದು ನಿಮಗೆಲ್ಲರಿಗೆ ನೆನಪಿದೆಯಾ ಎಂದು ಸಚಿವ ಡಿ.ಕೆ. ಶಿವಕುಮಾರ ಹೇಳಿದರು.

ನೂಲ್ವಿ ಗ್ರಾಮದಲ್ಲಿ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ಜನರ ನೀರಿಗಾಗಿ ಸಾಕಷ್ಟು ಹೋರಾಟ ಮಾಡಿದ ನಮ್ಮ ಸಿ.ಎಸ್‌. ಶಿವಳ್ಳಿ ಒಂದೆಡೆಯಾದರೆ, ತಮ್ಮ ಸೋಲಿಗೆ ಕಾರಣವಾದ ಗ್ರಾಮಗಳ ನೀರಿನ ಸಂಪರ್ಕ ಸ್ಥಗಿತೊಳಿಸುವ ಚಿಕ್ಕನಗೌಡರ ಹಾಗೂ ಬಿಜೆಪಿ ನಾಯಕರ ಮನಸ್ಥಿತಿಯನ್ನು ಈ ಕ್ಷೇತ್ರದ ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.

ಸಾಲಗಾರರಂತೆ ನಿಮ್ಮ ಸೇವೆ: ಕುಂದಗೋಳ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಇಡೀ ಮೈತ್ರಿ ಸರಕಾರವೇ ಶ್ರಮಿಸುತ್ತದೆ. ಮತಗಳನ್ನು ಸಾಲದ ಮೂಲಕ ನಮ್ಮ ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರಿಗೆ ನೀಡಿ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಆದಿಯಾಗಿ ಈ ಕ್ಷೇತ್ರದ ಸಾಲಗಾರರಾಗಿ ನಿಮ್ಮ ಸೇವೆ ಮಾಡುತ್ತೇವೆ ಎಂದರು. ನಮ್ಮ ಸರಕಾರ ಐದು ವರ್ಷಗಳ ಕಾಲ ಆಡಳಿತ ಮಾಡುತ್ತದೆ. ಹಿಂದೆ ಆಪರೇಶನ್‌ ಕಮಲ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹದಗೆಡಿಸಿದರು. ಇಂದು ನಮಗೂ ಆ ಶಕ್ತಿಯಿದೆ. ಆದರೆ ಅಧಿಕಾರ ದುರುಪಯೋಗ ಮಾಡಿಕೊಳ್ಳುವುದಿಲ್ಲ ಎಂದರು.

ಇಂದು ಕುಂದಗೋಳದಲ್ಲಿ ಸಿಎಂ ಕುಮಾರಸ್ವಾಮಿ ಪ್ರಚಾರ

ಬೆಂಗಳೂರು: ಕುಂದಗೋಳ ಕ್ಷೇತ್ರದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪಕ್ಷಗಳ ಅಭ್ಯರ್ಥಿ ಕುಸುಮಾವತಿ ಪರ ಸೋಮವಾರ ಸಿಎಂ ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಸೋಮವಾರ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ಆಗಮಿಸುವ ಸಿಎಂ ಸಂಜೆ 5 ಗಂಟೆಗೆ ಕುಂದಗೋಳದಲ್ಲಿ ಹಾಗೂ 7 ಗಂಟೆಗೆ ಹುಬ್ಬಳ್ಳಿ ತಾಲೂಕಿನ ವರೂರಿನಲ್ಲಿ ಸಮಾವೇಶದಲ್ಲಿ ಭಾಗವಹಿಸುವರು ಎಂದು ತಿಳಿಸಿದ್ದಾರೆ. ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಡಿಕೆಶಿ, ತಮ್ಮನ್ನು ಪೇಪರ್‌ ಟೈಗರ್‌ ಎಂದು ಆರೋಪಿಸಿದ್ದ ಮಾಜಿ ಸಿಎಂ ಜಗದೀಶ್‌ ಶೆಟ್ಟರಗೆ ತಿರುಗೇಟು ನೀಡಿದ್ದು, ನಾನು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತ ನನಗೆ ಯಾವಾಗ ಏನು ಮಾಡಬೇಕೆಂದು ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೇ ಮಂಡ್ಯದಲ್ಲಿ ಮೈತ್ರಿ ಧರ್ಮ ಪಾಲನೆ ಮಾಡದವರ ವಿರುದ್ಧ ಕ್ರಮ ಕೈಗೊಳ್ಳುವುದು ಕೆಪಿಸಿಸಿ ಅಧ್ಯಕ್ಷರಿಗೆ ಬಿಟ್ಟ ವಿಚಾರ ಎಂದು ಹೇಳಿದರು.

ಚಿಕ್ಕನಗೌಡರ ಬಗ್ಗೆ ನನಗೆ ಯಾವುದೇ ಕೆಟ್ಟ ಅಭಿಪ್ರಾಯವಿಲ್ಲ. ನನ್ನೊಂದಿಗೆ 3 ಬಾರಿ ಶಾಸಕರಾಗಿದ್ದವರು. ಅವರಾಯ್ತು ಅವರ ಖರ್ಚಿಯಾಯ್ತು ಎಂಬಂತೆ ಇರುತ್ತಿದ್ದರು. ಕ್ಷೇತ್ರದ ಯಾವುದೇ ಸಮಸ್ಯೆಗಳ ಕುರಿತು ಒಂದು ಚೀಟಿ ತಂದಿದ್ದು ನಾನು ನೋಡಿಲ್ಲ.
• ಡಿ.ಕೆ. ಶಿವಕುಮಾರ, ಸಚಿವ
ರೋಡ್‌ ಶೋಗೆ ಬಾರದ ನಾಯಕರು; ಸ್ಥಳೀಯ ಕೈ ಮುಖಂಡರ ಅಸಮಾಧಾನ

ಹುಬ್ಬಳ್ಳಿ: ಕುಂದಗೋಳದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಚುನಾವಣಾ ಪ್ರಚಾರಾರ್ಥ ಆಯೋಜಿಸಿದ್ದ ಮೆರವಣಿಗೆಯಲ್ಲಿ ಯಾವುದೇ ನಾಯಕರು ಪಾಲ್ಗೊಳ್ಳದಿರುವುದು ಸ್ಥಳೀಯ ಮುಖಂಡರ ಅಸಮಾಧಾನಕ್ಕೆ ಕಾರಣವಾಯಿತು. ರವಿವಾರ ಸಂಜೆ ಮಾಜಿ ಸಚಿವ ಸಂತೋಷ ಲಾಡ್‌ ಸೇರಿದಂತೆ ಇತರೆ ನಾಯಕರ ಪ್ರಚಾರ ಮೆರವಣಿಗೆಯನ್ನು ಕುಂದಗೋಳ ಪಟ್ಟಣದ ಗಾಳಿ ಮರಿಯಮ್ಮ ದೇವಿ ದೇವಸ್ಥಾನದಿಂದ ರೈಲ್ವೆ ನಿಲ್ದಾಣದವರೆಗೆ ಆಯೋಜಿಸಲಾಗಿತ್ತು. ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಸಚಿವರು ಹಾಗೂ ವಿವಿಧ ನಾಯಕರು ಆಗಮಿಸಿದ್ದ ಹಿನ್ನೆಲೆಯಲ್ಲಿ ಎಲ್ಲರೂ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನಿರೀಕ್ಷಿಸಿದ್ದರು. ಆದರೆ ಸಚಿವರಾದ ಜಮೀರ್‌ ಅಹ್ಮದ್‌ ಹಾಗೂ ಯು.ಟಿ. ಖಾದರ್‌ ಮಾತ್ರ ರೋಡ್‌ ಶೋನಲ್ಲಿ ಒಂದಿಷ್ಟು ಹೊತ್ತು ಪಾಲ್ಗೊಂಡು ತಾವು ಹಾಜರಾಗಿದ್ದೇವೆ ಎಂದು ತೋರಿಸಿದರು. ನಾಯಕರ ವಾಗ್ವಾದ: ವೇಣುಗೋಪಾಲ ಆದಿಯಾಗಿ ಸಚಿವರು ಪಟ್ಟಣಕ್ಕೆ ಆಗಮಿಸಿದ್ದರು. ಅವರನ್ನೆಲ್ಲ ರೋಡ್‌ ಶೋಗೆ ಕರೆದುಕೊಂಡು ಬರಬೇಕಿತ್ತು. ಆಗ ರೋಡ್‌ ಶೋಗೆ ಹೆಚ್ಚಿನ ಕಳೆ ಬರುತ್ತಿತ್ತು ಎಂದು ಸ್ಥಳೀಯ ನಾಯಕರು ಹುಬ್ಬಳ್ಳಿ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನೀವು ಒಂದಿಷ್ಟು ನೆನಪು ಮಾಡಬಹುದಿತ್ತು. ಇದು ನಿಮ್ಮ ತಪ್ಪಲ್ಲವೇ ಎಂದು ಪರಸ್ಪರ ವಾಗ್ವಾದ ನಡೆಯಿತು. ಮುಖಂಡರಾದ ಸಂತೋಷ ಲಾಡ್‌, ಬಿ.ಆರ್‌. ಯಾವಗಲ್, ಹನುಮಂತಪ್ಪ ಆಲ್ಕೋಡ ಸೇರಿದಂತೆ ಇನ್ನಿತರರಿದ್ದರು.
ಬಿಜೆಪಿಯವರು ಮಹದಾಯಿ ಹೋರಾಟ ಮಾಡಿದ್ದರಾ?

ಸಿ.ಎಸ್‌. ಶಿವಳ್ಳಿ ಅವರು ಈ ಭಾಗದ ರೈತರನ್ನು ಮಹದಾಯಿಗಾಗಿ ದೆಹಲಿಗೆ ನಿಯೋಗ ಕರೆದುಕೊಂಡು ಹೋಗಿ ಹೋರಾಟ ಮಾಡಿದ್ದರು. ಆದರೆ ಈ ಎಸ್‌.ಐ. ಚಿಕ್ಕನಗೌಡರ, ಬಿ.ಎಸ್‌. ಯಡಿಯೂರಪ್ಪ, ಜಗದೀಶ ಶೆಟ್ಟರ, ಪ್ರಹ್ಲಾದ ಜೋಶಿ ಸೇರಿದಂತೆ ಯಾರಾದರೂ ಹೋರಾಟ ಮಾಡಿದ್ದರಾ? ನ್ಯಾಯಾಧೀಕರಣದ ತೀರ್ಪನ್ನು ಅನುಷ್ಠಾನಗೊಳಿಸಲು ರಾಜ್ಯ ಸರಕಾರ ಸಿದ್ಧವಿದೆ. ಆದರೆ ಕೇಂದ್ರ ಸರಕಾರದಿಂದ ಈ ಕುರಿತು ಅಧಿಸೂಚನೆ ಹೊರಡಿಸುತ್ತಿಲ್ಲ. ಇದರಲ್ಲೂ ರಾಜಕಾರಣ ಮಾಡುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ