ಸಾರಿಗೆ ನೌಕರರಿಗೆ ವೇತನ ಪಡೆಯುವ ಚಿಂತೆ
ಪ್ರಯಾಣಿಕರ ಕೊರತೆ | ನಿರೀಕ್ಷಿತ ಆದಾಯವಿಲ್ಲದೇ ಪರದಾಟ | ಸರಕಾರದತ್ತ ಮುಖ ಮಾಡಿದ ಸಂಸ್ಥೆಗಳು
Team Udayavani, Oct 8, 2021, 9:23 PM IST
ವರದಿ:ಹೇಮರಡ್ಡಿ ಸೈದಾಪುರ
ಹುಬ್ಬಳ್ಳಿ: ಅರ್ಧ ವೇತನದಲ್ಲೇ ಗಣೇಶ ಚೌತಿ ಹಾಗೂ ಜೀವನ ನಡೆಸುತ್ತಿರುವ ಸಾರಿಗೆ ನೌಕರರಿಗೆ ನಾಡಹಬ್ಬ ನವರಾತ್ರಿ ಉತ್ಸವಕ್ಕೆ ವೇತನವಿಲ್ಲ. ಶೇ.85-90ರವರೆಗೆ ಬಸ್ ಕಾರ್ಯಾಚರಣೆಗೊಳ್ಳುತ್ತಿದ್ದರೂ ಪ್ರಯಾಣಿಕರ ಕೊರತೆಯಿಂದ ನಿರೀಕ್ಷಿತ ಆದಾಯವಿಲ್ಲದೆ ಸಿಬ್ಬಂದಿ ವೇತನಕ್ಕಾಗಿ ಸರಕಾರದತ್ತ ನಾಲ್ಕು ಸಂಸ್ಥೆಗಳು ಮುಖ ಮಾಡಿದ್ದು, ಸರಕಾರದಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗದಿರುವುದು ಸಂಬಳವಿಲ್ಲದೆ ನವರಾತ್ರಿ ಆಚರಣೆ ಹೇಗೆನ್ನುವ ಆತಂಕ ಆವರಿಸಿದೆ.
ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ಬಸ್ ಕಾರ್ಯಾಚರಣೆ ಉತ್ತಮವಾಗಿದ್ದರೂ ಪ್ರಯಾಣಿಕರ ಕೊರತೆಯಿಂದ ನಿರೀಕ್ಷಿತ ಆದಾಯವಿಲ್ಲ. ಡಿಸೇಲ್ ದರ, ಬಿಡಿ ಭಾಗ ಖರೀದಿ ಸೇರಿದಂತೆ ಇನ್ನಿತರೆ ವೆಚ್ಚಗಳಿಗೆ ಬರುವ ಆದಾಯದಲ್ಲಿ ಶೇ.65 ಖರ್ಚಾಗುತ್ತಿದೆ. ಇನ್ನು ಸಾಲ ಮರುಪಾವತಿಗೆ ಕಷ್ಟದ ಪರಿಸ್ಥಿತಿ ಬಂದೊದಗಿದೆ. ಹೀಗಾಗಿ ಕೆಲ ಸಂಸ್ಥೆಗಳು ನೌಕರರ ವೇತನದಲ್ಲಿ ಕಡಿತಗೊಳಿಸಿದ ಎಲ್‌ಐಸಿ ವಿಮಾ ಮೊತ್ತ ಭರಿಸಲು ಸಾಧ್ಯವಾಗಿಲ್ಲ. ಇಷ್ಟೆಲ್ಲಾ ಖರ್ಚುಗಳ ನಡುವೆ ಸಿಬ್ಬಂದಿ ವೇತನ ನೀಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುವವರೆಗೂ ಅನುದಾನ ನೀಡುವಂತೆ ನಾಲ್ಕು ಸಂಸ್ಥೆಗಳು ಸರಕಾರದ ಮೊರೆ ಹೋಗಿವೆ.
ಶೇ.50 ವೇತನಕ್ಕೆ ಬೇಡಿಕೆ: ಪ್ರತಿ ತಿಂಗಳು ಸಿಬ್ಬಂದಿ ವೇತನಕ್ಕಾಗಿ ಕೆಎಸ್‌ಆರ್‌ಟಿಸಿ 120 ಕೋಟಿ ರೂ, ವಾಯವ್ಯ ಸಾರಿಗೆ 69 ಕೋಟಿ ರೂ., ಬಿಎಂಟಿಸಿ 108 ಕೋಟಿ ರೂ ಹಾಗೂ ಕಕರಸಾ ಸಂಸ್ಥೆ 62 ಕೋಟಿ ರೂ. ಬೇಕಾಗುತ್ತದೆ. ಆದರೆ ಇದೀಗ ಬಸ್ ಗಳ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಒಂದಿಷ್ಟು ಸಾರಿಗೆ ಆದಾಯವಿದೆ. ಹೀಗಾಗಿ ಆಗಸ್ಟ್ ತಿಂಗಳಿನಿಂದ 2022 ಮಾರ್ಚ್ ತಿಂಗಳವರೆಗೆ ಶೇ.50 ಅಂದರೆ ಸುಮಾರು 1460 ಕೋಟಿ ರೂ. ಅನುದಾನ ನೀಡುವಂತೆ ನಾಲ್ಕು ಸಾರಿಗೆ ನಿಗಮಗಳು ಸರಕಾರಕ್ಕೆ ಬೇಡಿಕೆ ಸಲ್ಲಿಸಿವೆ. ಆದರೆ ಸರಕಾರದಿಂದ ಇಲ್ಲಿಯವರೆಗೆ ಯಾವುದೇ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿಲ್ಲ.
ಅರ್ಧ ವೇತನದಲ್ಲಿ ಬದುಕು: ಗಣೇಶನ ಹಬ್ಬಕ್ಕೂ ವೇತನವಿಲ್ಲ ಎನ್ನುವ ಕೂಗು ಹೆಚ್ಚಾಗುತ್ತಿದ್ದಂತೆ ಹಬ್ಬಕ್ಕೆ ಇನ್ನೆರಡು ದಿನ ಬಾಕಿ ಇರುವಾಗ ಅಗಸ್ಟ್ ತಿಂಗಳ ಅರ್ಧ ವೇತನ ನೀಡಲಾಯಿತು. ತಿಂಗಳಿಗೆ 8-9 ಸಾವಿರ ರೂಪಾಯಿ ಗೌರವಧನ ಪಡೆಯುವ ತರಬೇತಿ ನೌಕರರು ಪಾಡಂತೂ ಹೇಳ ತೀರದು. ಇನ್ನು ಸೆಪ್ಟಂಬರ್ ತಿಂಗಳ ವೇತನವೂ ಆಗಿಲ್ಲ. ಇದೀಗ ನಾಡಹಬ್ಬದ ದಸರಾ ಹಬ್ಬ ಆರಂಭವಾಗಿದ್ದು, ಸೆಪ್ಟಂಬರ್ ತಿಂಗಳ ಹಾಗೂ ಬಾಕಿ ಉಳಿದ ಆಗಸ್ಟ್ ತಿಂಗಳ ವೇತನ ಪಾವತಿ ಬಗ್ಗೆ ಯಾವುದೇ ಸುಳಿವಿಲ್ಲ. ಅದೆಷ್ಟೋ ನೌಕರರು ವಿವಿಧ ಕಾರಣಗಳಿಗೆ ಮಾಡಿದ ಸಾಲ ಮರುಪಾವತಿ ಮಾಡಲು ಹೆಣಗಾಡುವಂತಹ ಪರಿಸ್ಥಿತಿಯಲ್ಲಿದ್ದಾರೆ. ಇನ್ನು ಮನೆ ಬಾಡಿಗೆ ಇತರೆ ಖರ್ಚುಗಳಿಗೆ ಕೈಗಡ ಸಾಲಗಳಿಗೆ ಮೊರೆ ಹೋಗುತ್ತಿದ್ದು, ಹಬ್ಬದ ಆಚರಣೆ ಹೇಗೆ ಎನ್ನುತ್ತಿದ್ದಾರೆ.
ಡಿಸೇಲ್, ಖರ್ಚು ಹೊರೆ: ಶೇ.85-90 ಬಸ್ ಗಳ ಕಾರ್ಯಾಚರಣೆ ಆಗುತ್ತಿದ್ದರೂ ಪ್ರಯಾಣಿಕರ ಕೊರತೆಯಿಂದ ನಿರೀಕ್ಷಿತ ಸಾರಿಗೆ ಆದಾಯವಿಲ್ಲ. ಇನ್ನೊಂದೆಡೆ ಡಿಸೇಲ್ ದರ ದುಬಾರಿಯಾಗಿರುವುದು ಸಾರಿಗೆ ಸಂಸ್ಥೆಗಳ ನಷ್ಟಕ್ಕೆ ಮೂಲ ಕಾರಣವಾಗಿದೆ. ವಾಯವ್ಯ ಸಾರಿಗೆ ಸಂಸ್ಥೆಗೆ 2021 ಸೆಪ್ಟಂಬರ್ ತಿಂಗಳಲ್ಲಿ 101 ಕೋಟಿ ರೂ. ಸಾರಿಗೆ ಆದಾಯ ಬಂದಿದ್ದರೆ. ಇದರಲ್ಲಿ 75 ಕೋಟಿ ರೂ. ಕೇವಲ ಡಿಸೇಲ್‌ಗಾಗಿ ಖರ್ಚು ಮಾಡಲಾಗಿದೆ. ಡಿಸೇಲ್, ವೇತನ ಹಾಗೂ ಇತರೆ ಖರ್ಚು ಸೇರಿ 168 ಕೋಟಿ ರೂ. ಬೇಕಾಗುತ್ತಿದೆ. ಇನ್ನು ಕೆಎಸ್‌ಆರ್‌ಟಿಸಿ-310 ಕೋಟಿ ರೂ. ಬಿಎಂಟಿಸಿ 170 ಕೋಟಿ ರೂ. ಹಾಗೂ ಕಕರಸಾ ಸಂಸ್ಥೆ-153 ಕೋಟಿ ರೂ. ತಿಂಗಳ ಖರ್ಚಿದೆ. 2015ರಲ್ಲಿದ್ದ ಡಿಸೇಲ್ ಹಾಗೂ ಇತರೆ ಖರ್ಚು ವೆಚ್ಚಕ್ಕೆ ಪೂರಕವಾಗಿ ಇಂದಿನ ಬಸ್ ಪ್ರಯಾಣ ದರವಿದೆ. ಪ್ರಯಾಣ ದರ, ಸಿಬ್ಬಂದ ವೇತನ ಪರಿಷ್ಕರಣೆಯಲ್ಲಿ ಹಸ್ತಕ್ಷೇಪ ಹಾಗೂ ಕಡಿವಾಣ ಹಾಕುವ ಸರಕಾರ ಸಂದಿಗ್ಧ ಪರಿಸ್ಥಿತಿಯಲ್ಲಿ ಸಂಸ್ಥಗಳ ನೆರವಿಗೆ ಬರಬೇಕು ಎಂಬುದು ಅಧಿಕಾರಿಗಳ ಹಾಗೂ ಸಿಬ್ಬಂದಿ ಅಭಿಪ್ರಾಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾರ್ವೆ ಮಾಜಿ ಸಚಿವರ ಟ್ವಿಟರ್ನಲ್ಲಿ ಮರವಂತೆ ಚಿತ್ರ
ಕೋರಿಕೆಗೆ ಸ್ಪಂದಿಸಿದ ಅಮ್ಮಂದಿರು: ಎದೆಹಾಲಿಲ್ಲದೆ ಕಂಗೆಟ್ಟಿದ್ದ ತಾಯಿಗೆ ನೆರವು!
ಗ್ರಾಮ ಪಂಚಾಯತ್ ತ್ಯಾಜ್ಯ ಸಂಗ್ರಹ ವಾಹನಗಳ ಜಿಪಿಎಸ್ ಟ್ರ್ಯಾಕಿಂಗ್ !
ದ.ಕ., ಉಡುಪಿಯಲ್ಲಿ 207 ಡೆಂಗ್ಯೂ ಪ್ರಕರಣ; ಕೊಲ್ಲೂರು,ನೆರಿಯ ಪರಿಸರದಲ್ಲಿ ಅತ್ಯಧಿಕ
ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: ಮತ್ತಿಬ್ಬರ ಜಾಮೀನು ಅರ್ಜಿ ತಿರಸ್ಕಾರ
MUST WATCH
ಹೊಸ ಸೇರ್ಪಡೆ
ಶಿವಲಿಂಗದ ಕುರಿತು ಅವಹೇಳನಕಾರಿ ಹೇಳಿಕೆ: ಎಐಎಂಐಎಂ ನಾಯಕನ ಬಂಧನ
ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟ
ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ
ಚಳ್ಳಕೆರೆಯಲ್ಲಿ ಹನ್ಸ-ಎನ್ಜಿ ಯಶಸ್ವಿ ಪ್ರಯೋಗ; ಸಿಎಸ್ಐಆರ್, ಎನ್ಎಎಲ್ನಿಂದ ವಿಮಾನ ಸಿದ್ಧ
ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ