ಸವಾಯಿ ಗಂಧರ್ವ ಭವನ ನವನವೀನ

Team Udayavani, Mar 5, 2019, 7:13 AM IST

ಹುಬ್ಬಳ್ಳಿ: ಕಳೆದ 7 ವರ್ಷಗಳಿಂದ ನವೀಕರಣದ ಹಣೆಪಟ್ಟಿ ಕಟ್ಟಿಕೊಂಡ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಭವನ ಕೊನೆಗೂ ಉದ್ಘಾಟನೆಗೆ ಸಿದ್ಧಗೊಂಡಿದೆ. ಮಾ.5 ರಂದು ಲೋಕಾರ್ಪಣೆಗೊಳ್ಳಲಿದೆ.

ನವೀಕರಣಕ್ಕಾಗಿ 2013ರಿಂದಲೇ ಭವನದ ಸಾರ್ವಜನಿಕ ಬಳಕೆ ಸ್ಥಗಿತಗೊಳಿಸಲಾಗಿತ್ತು. ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಕೇಂದ್ರೀಕೃತ ಹವಾನಿಯಂತ್ರಿತ ಕಲಾಭವನ ಇದೀಗ ಉದ್ಘಾಟನೆಗೊಳ್ಳುತ್ತಿದೆ. ಬೆಂಗಳೂರಿನ ಕಲರ್‌ ವೈಬ್ರೇಷನ್‌ ಸಂಸ್ಥೆ ಆಸನ, ಹವಾನಿಯಂತ್ರಿತ ವ್ಯವಸ್ಥೆ, ಪ್ಲೋರಿಂಗ್‌, ಪ್ಲಾಸ್ಟರಿಂಗ್‌ ಹಾಗೂ ವಿದ್ಯುತ್‌ ಸೌಲಭ್ಯ ಅಳವಡಿಕೆ ಕಾರ್ಯ ಮಾಡಿದೆ. ಉತ್ತಮ ಸೌಂಡ್‌ಸಿಸ್ಟ್‌ಮ್‌ ವ್ಯವಸ್ಥೆ ಸಹ ಮಾಡಲಾಗಿದೆ.

480 ಆಸನ ವ್ಯವಸ್ಥೆ ಮಾಡಲಾಗಿದ್ದು , 6 ವಿವಿಐಪಿ-10 ವಿಐಪಿ ಆಸನ ತರಿಸಲಾಗಿದೆ. ಕೇಂದ್ರೀಕೃತ ಹವಾನಿಯಂತ್ರಿತ ವ್ಯವಸ್ಥೆ ಕೈಗೊಳ್ಳಲಾಗಿದೆ. 200 ಕೆವಿ ಸಾಮರ್ಥ್ಯದ ಜನರೇಟರ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಕೆಳಭಾಗದಲ್ಲಿ 5 ಕೊಠಡಿಗಳು, ಮೇಲ್ಭಾಗದಲ್ಲಿ 1 ದೊಡ್ಡ ಹಾಲ್‌ ಹಾಗೂ 1 ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಕೆಳಭಾಗದ ಎರಡು ಕೊಠಡಿಗಳು ಡ್ರೆಸ್ಸಿಂಗ್‌ ಕೊಠಡಿಗಳಾಗಿದ್ದು, ಒಂದು ವಿವಿಐಪಿ ಕೊಠಡಿ ಇದೆ. ಕಲಾಭವನ ನವೀಕರಣಕ್ಕಾಗಿ ರಾಜ್ಯ ಸರ್ಕಾರ 3.25 ಕೋಟಿ ಹಾಗೂ ಪಾಲಿಕೆ 1.5 ಕೋಟಿ ರೂ. ಅನುದಾನ ನೀಡಿದೆ.

ಭವನದ ಇತಿಹಾಸ: 1971ರಲ್ಲಿ ಆರಂಭಗೊಂಡ ಕಲಾಭವನದಲ್ಲಿ ಹಲವಾರು ದಿಗ್ಗಜರು ತಮ್ಮ ಸಂಗೀತ ರಸದೌತಣ ಉಣಬಡಿಸಿದ್ದಾರೆ. 1971ರಲ್ಲೇ ಹಿರಿಯರು ಸೇರಿ ಭವನ ನಿರ್ವಹಣೆಗೆಂದು ಯುಥ್‌ ವೆಲ್‌ಫೇರ್‌ ಟ್ರಸ್ಟ್‌ ರಚಿಸಿದ್ದು, ಮುನ್ನಡೆಸಿಕೊಂಡು ಬರಲಾಗಿದೆ. ಶಿಥಿಲಾವಸ್ಥೆ ತಲುಪಿದ್ದ ಭವನ
ನೆಲಸಮ ಮಾಡಿ ನೂತನ ಭವನ ನಿರ್ಮಾಣಕ್ಕೆ ಚಿಂತಿಸಲಾಗಿತ್ತು. ಆದರೆ ಹಿರಿಯರು ಪರಿಶ್ರಮಪಟ್ಟು ನಿರ್ಮಿಸಿದ ಭವನ ನೆಲಸಮ ಮಾಡುವುದು ಬೇಡ ಎಂಬ ಹಲವರ ಅಭಿಪ್ರಾಯದ ಹಿನ್ನೆಲೆಯಲ್ಲಿ ಇದೀಗ ನವೀಕರಣ ಕಾಮಗಾರಿ ಕೈಗೊಳ್ಳಲಾಗಿದೆ.

ಯುಥ್‌ ವೆಲ್‌ಫೇರ್‌ ಟ್ರಸ್ಟ್‌ ಕಲಾಭವನದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಯುಥ್‌ ವೆಲ್‌ಫೇರ್‌ ಟ್ರಸ್ಟ್‌ನಲ್ಲಿ ಜಿಲ್ಲಾಧಿಕಾರಿ ಚೇರನ್‌, ಕಾರ್ಯದರ್ಶಿಯಾಗಿ ಮಹಾನಗರ ಪಾಲಿಕೆ ಹಾಗೂ ಪೊಲೀಸ್‌ ಆಯುಕ್ತರು, ವ್ಯವಸ್ಥಾಪಕ ಧರ್ಮದರ್ಶಿ ವೀರಣ್ಣ ಸವಡಿ, ಧರ್ಮದರ್ಶಿಗಳಾಗಿ
ಸುನೀಲ ಕೊಠಾರಿ, ಅಜಿತ ಜವಳಿ, ವಿಕ್ರಮ ಶಿರೂರ, ರಿಯಾಜ ಬಸರಿ, ತಿಲಕ ವಿಕಂಸಿ, ವೆಂಕಟೇಶ ಜೋಶಿ ಹಾಗೂ ಕಾನೂನು ಸಲಹೆಗಾರರಾಗಿ ಆರ್‌.ಬಿ. ನೀಲಿ ಇದ್ದಾರೆ. ಭವನಕ್ಕೆ ಸಿಸಿ ಕ್ಯಾಮರಾ ಹಾಗೂ ಎಲ್‌ಇಡಿ ಸ್ಕ್ರೀನ್‌ ಅಳವಡಿಸುವ ಕುರಿತು ಟ್ರಸ್ಟ್‌ ನಿಂದ ಚಿಂತನೆ ನಡೆದಿದೆ.

ಇಂದು ಉದ್ಘಾಟನೆ ಮಾ. 5ರಂದು ಬೆಳಗ್ಗೆ 11:30 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ ಭವನವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಜಗದೀಶ ಶೆಟ್ಟರ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವ ಸಿ.ಎಸ್‌. ಶಿವಳ್ಳಿ ಉಪಸ್ಥಿತರಿರಲಿದ್ದಾರೆ. ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ
ಪ್ರಸಾದ ಅಬ್ಬಯ್ಯ, ಶಿವರಾಮ ಹೆಬ್ಟಾರ, ಅರವಿಂದ ಬೆಲ್ಲದ, ಅಮೃತ ದೇಸಾಯಿ, ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ಎಸ್‌.ವಿ. ಸಂಕನೂರ, ಮಹಾಪೌರ ಸುಧೀರ ಸರಾಫ‌, ಉಪಮಹಾಪೌರ ಮೇನಕಾ ಹುರಳಿ ಆಗಮಿಸಲಿದ್ದಾರೆ.

ಮಲ್ಟಿಜಿಮ್‌
ಈ ಹಿಂದೆ ಇದ್ದಂತೆ ಜಿಮ್‌ ಮುಂದುವರಿಸಲಾಗಿದ್ದು, ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಅತ್ಯಾಧುನಿಕ ಜಿಮ್‌ ಸಾಮಗ್ರಿ ಖರೀದಿಸಲಾಗಿದ್ದು, ಪ್ರತ್ಯೇಕ ಸಮಿತಿ ನಿರ್ಮಿಸಿ ನಡೆಸಲಾಗುವುದು. ಅಲ್ಲದೇ ಜಿಮ್‌ಗೆ ಹೋಗಿ ಬರಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.

ಕಲಾಭವನ ಮುಕ್ತಾಯಗೊಂಡು ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಸುಮಾರು 5 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾಗಿ  ನವೀಕರಣಗೊಂಡಿರುವ ಭವನ ಕಲಾಭಿಮಾನಿಗಳಿಗೆ ಲೋಕಾರ್ಪಣೆಗೊಳ್ಳಲಿದೆ. ಉತ್ತರ ಕರ್ನಾಟಕದಲ್ಲಿಯೇ ಮಾದರಿ ಕಲಾಭವನವಾಗಿ
ನಡೆಸಿಕೊಂಡು ಹೋಗಲಾಗುವುದು. ಶುಲ್ಕದ ಕುರಿತು ಟ್ರಸ್ಟ್‌ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ತೀರ್ಮಾನಿಸಲಾಗುವುದು.
 ವೀರಣ್ಣ ಸವಡಿ, ವ್ಯವಸ್ಥಾಪಕ ಧರ್ಮದರ್ಶಿ

„ಬಸವರಾಜ ಹೂಗಾರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ