ಯರಗುಪ್ಪಿಯಲ್ಲಿ ಶ್ರದ್ಧಾ-ಭಕ್ತಿಯ ಮೊಹರಂ

Team Udayavani, Sep 10, 2019, 9:50 AM IST

ಕುಂದಗೋಳ: ತಾಲೂಕಿನ ಹಲವು ಹಳ್ಳಿಗಳಲ್ಲಿ ನಡೆಯುವ ಧಾರ್ಮಿಕ ಆಚರಣೆಗಳು, ಸಂಪ್ರದಾಯಗಳು ಇಡೀ ರಾಜ್ಯದ ಗಮನ ಸೆಳೆದಿವೆ. ತಾಲೂಕಿನ ಯರಗುಪ್ಪಿಯಲ್ಲಿ ನಡೆಯುವ ಮೊಹರಂ ಗಮನ ಸೆಳೆದಿದೆ.

4 ಗ್ರಾಮಗಳ 7 ಡೋಲಿಗಳು ಇಲ್ಲಿ ಸೇರುವುದು ನೋಡುವುದೇ ಒಂದು ಭಾಗ್ಯ. ಸೂರ್ಯಾಸ್ತ ಆಗುವುದರೊಳಗೆ ಯರಗುಪ್ಪಿಯ ಹೈಸ್ಕೂಲ್ ಮೈದಾನದಲ್ಲಿ ಯರಗುಪ್ಪಿಯ 3, ಚಿಕ್ಕನರ್ತಿಯ 2, ಯರಿನಾರಾಯಣಪುರ ಮತ್ತು ಮುಳ್ಳೊಳ್ಳಿಯ ತಲಾ ಒಂದು ಸೇರಿ 7 ಡೋಲಿಗಳು ಕೂಡುತ್ತವೆ. ಅಲ್ಲಿ ಯುವಕರ ಹೆಜ್ಜೆಮೇಳ ಗಮನ ಸೆಳೆಯುತ್ತದೆ. ಅಲ್ಲಿಂದ ದೇವರು ಹೊಳಿಗೆ ಹೋಗುತ್ತವೆ.

ಕುಂದಗೋಳ ಪಟ್ಟಣದ ಸ್ಥಳೀಯ ಗಾಣಿಗ ಮನೆತನದ ರೇವಣಸಿದ್ದಪ್ಪ ಬಸಪ್ಪ ಹೊಳಿಯವರ ಮುಂದಾಳತ್ವದಲ್ಲಿ ಪಂಜಾ ದೇವರ ಸ್ಥಾಪಿಸಿ ಮುಸ್ಲಿಂ ಧರ್ಮಗುರುಗಳ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯ ನಡೆಸುತ್ತಾರೆ. ತಾಲೂಕಿನಾದ್ಯಂತ ಸೆ.10ರಂದೇ ದೇವರು ಹೊಳಿಗೆ ಹೋದರೆ, ಯರಗುಪ್ಪಿ ಗ್ರಾಮದಲ್ಲಿ ಮಾತ್ರ ಒಂದು ದಿನ ತಡವಾಗಿ ಸೆ.11ರಂದು ದೇವರು ಹೋಗುತ್ತವೆ.

ತಾಲೂಕಿನ ಅನೇಕ ಗ್ರಾಮಗಳಲ್ಲಿ ಮೊಹರಂ ಆಚರಣೆಗೊಂಡರೆ, ತಾಲೂಕಿನಲ್ಲಿ ಮುಸ್ಲಿಂ ಬಾಂಧವರಿಲ್ಲದ ಅನೇಕ ಗ್ರಾಮಗಳಿದ್ದು, ಅಲ್ಲಿ ಮೊಹರಂನ್ನು ಹಿಂದೂಗಳೇ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತ ಬಂದಿದ್ದಾರೆ. ಮುಸ್ಲಿಮರೇ ಇಲ್ಲದ ಗೌಡಗೇರಿ, ಕೊಡ್ಲಿವಾಡ, ರಟಗೇರಿ, ಹೊಸಕಟ್ಟಿ, ವಿಠಲಾಪೂರಗಳಲ್ಲಿ ಸಂಭ್ರಮದ ಮೊಹರಂ ಜರುಗುತ್ತದೆ.

ಗೌಡಗೇರಿ ಗ್ರಾಮದ ಮಧ್ಯಭಾಗದಲ್ಲಿ ಮಕಾನ್‌ ನಿರ್ಮಿಸಿದ್ದಾರೆ. ಪ್ರತಿವರ್ಷ ಇದರಲ್ಲೇ ಡೋಲಿಯನ್ನು ಬಿಂಗು, ಕಾಗದಗಳಿಂದ ಶೃಂಗರಿಸಿ, ಲೋಹದ ಪಂಜಾಗಳನ್ನು ವಸ್ತ್ರಗಳಿಂದ ವಿಶಿಷ್ಟ ರೀತಿಯಲ್ಲಿ ಅಲಂಕರಿಸಿ, ಶ್ರೀಗಂಧದಿಂದ ಪೂಜಿಸುತ್ತಾರೆ. ಮಕಾನನ್ನು ದೀಪಾಲಂಕಾರದಿಂದ ಶೃಂಗರಿಸಿ, ರಾತ್ರಿ ಗ್ರಾಮದ ಜನ ಸಕ್ಕರೆ ಬೆಲ್ಲ ನೈವೇದ್ಯಗೈದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಬೇಡಿಕೊಳ್ಳುತ್ತಾರೆ. ಹಲವರು ಹರಕೆ ತೀರಿಸುತ್ತಾರೆ.

ಮುಸ್ಲಿಂರಿಲ್ಲದ ಈ ಗ್ರಾಮಗಳಲ್ಲಿ ಹಿಂದೂಗಳೇ ಮಸೂತಿಗಳನ್ನು ಕಟ್ಟಿಸಿ, ಹಬ್ಬದಂದು ಮುಸ್ಲಿಂ ಗುರುಗಳೊಬ್ಬರನ್ನು ಕರೆದುಕೊಂಡು ಬಂದು ಕೈ ದೇವರುಗಳನ್ನು ಪ್ರತಿಷ್ಠಾಪಿಸಿ, ಡೋಲಿಗಳನ್ನು ಮಿಂಚು ಮಿಂಚಿನ ಬಿಂಗುಗಳಿಂದ ಶೃಂಗರಿಸಿ ಹೊತ್ತುಕೊಂಡು, ಮಸೂತಿ ಮುಂದಿನ ಅಗ್ನಿಕುಂಡದಲ್ಲಿ ಹಾಯ್ದು, ಪ್ರತಿಮನೆಮನೆಗಳಿಗೆ ಭೇಟಿ ಕೊಟ್ಟು ಕೊನೆಗೆ ದೇವರುಗಳೆಲ್ಲ ಹೊಳಿಗೆ ಹೋಗುವುದರೊಂದಿಗೆ ಹಬ್ಬ ಕೊನೆಗೊಳ್ಳುತ್ತದೆ.

ಜಾನಪದ ಕಲೆಗಳ ಸಿರಿವಂತಿಕೆ ಅನಾವರಣ:

ಮೊಹರಂ ಶೋಕಾಚರಣೆ ಅನ್ನೋದನ್ನು ಐತಿಹ್ಯವೇ ಸಾರಿ ಹೇಳುತ್ತೆ. ಆದರೆ, ಕಾಲಾಂತರದಲ್ಲಿ ಶೋಕಾಚರಣೆಯೇ ಸಂಭ್ರಮ ಸ್ವರೂಪ ಪಡೆದುಕೊಂಡಿದೆ. ಯರಗುಪ್ಪಿ ಜಾತ್ರೆಯಲ್ಲಂತೂ ತಲೆತಲಾಂತರದಿಂದಲೂ ಜಾನಪದ ಸೊಗಡು ಹೆಚ್ಚಿಸಿಕೊಳ್ಳುತ್ತ ಬಂದಿರೋದು ಇಲ್ಲಿನ ವಿಶೇಷ. ಜಾತ್ರೆಯ ಕೊನೆಯ ದಿನ 3:00 ಗಂಟೆ ಹೊತ್ತಿಗೆ ಊರ ಕೆರೆಯ ಮೈದಾನದಲ್ಲಿ ಜನಪದ ಆಟೋಟಗಳ ಪ್ರಕಾರಗಳಾದ ಹೆಜ್ಜೆಮೇಳ, ಕೋಲುಮೇಳ, ಸ್ವೇಟರ್‌ ಕುಣಿತ, ಕಡೆಗೋಲು ಕುಣಿತ, ಜತ್ತಿಗೆ ಕುಣಿತ, ಮುಳ್ಳು ಹೆಜ್ಜೆ ಕುಣಿತಗಳ ಸ್ಪರ್ಧೆ ಆಯೋಜಿಸಲಾಗುತ್ತೆ. ವಿವಿಧ ಜಿಲ್ಲೆಗಳಿಂದ 50ಕ್ಕೂ ಹೆಚ್ಚು ಹೆಜ್ಜೆಮೇಳದ ಕಲಾತಂಡಗಳು ಇದರಲ್ಲಿ ಭಾಗವಹಿಸುತ್ತವೆ. ಪ್ರಸ್ತುತ ಸನ್ನಿವೇಶಗಳಿಗೆ ತಕ್ಕಂತೆಯೇ ಹೆಜ್ಜೆಮೇಳಕ್ಕಾಗಿ ಹಾಡು ರಚಿಸಲಾಗಿರುತ್ತೆ. ಯಾವ ತಂಡ ಪ್ರೇಕ್ಷಕರ ಹಾಗೂ ನಿರ್ಣಾಯಕರ ಮನಸ್ಸು ಗೆಲ್ಲುತ್ತೋ ಆ ತಂಡಗಳಿಗೆ ಪ್ರಶಸ್ತಿ ನೀಡಲಾಗುತ್ತದೆ.
•ಶೀತಲ ಮುರಗಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ