15ರಂದು ಉಕ ಚಲನಚಿತ್ರ ಕಲಾವಿದರ ಸಂಘಕ್ಕೆ ಚಾಲನೆ

ಉತ್ತರದ ಕಲಾವಿದರ ಉತ್ತರೋತ್ತರ ಅಭಿವೃದ್ಧಿಗೆ ಪ್ರೋತ್ಸಾಹ ಉದ್ದೇಶ

Team Udayavani, Aug 5, 2019, 8:45 AM IST

ಹುಬ್ಬಳ್ಳಿ: ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ ನಿಮಿತ್ತ ನಡೆಯುವ ಡೊಳ್ಳಿನ ಜಾತ್ರೆಯ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.

ಹುಬ್ಬಳ್ಳಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 225ನೇ ಜಯಂತ್ಯುತ್ಸವ ದಿನದಂದು ಉತ್ತರ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘಕ್ಕೆ ಚಾಲನೆ ನೀಡಲಾಗುವುದು ಎಂದು ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಹೇಳಿದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯಿಂದ ನಗರದ ಖಾಸಗಿ ಹೋಟೆಲ್ನಲ್ಲಿ ರವಿವಾರ ಹಮ್ಮಿಕೊಂಡಿದ್ದ ಸಂಗೊಳ್ಳಿ ರಾಯಣ್ಣ 225ನೇ ಜಯಂತ್ಯುತ್ಸವ ಆಚರಣೆ ಕುರಿತ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉಕ ಭಾಗದ ಕಲಾವಿದರಿಗೆ ಬೆಂಗಳೂರು ಭಾಗದಲ್ಲಿ ಅಷ್ಟಾಗಿ ಪ್ರೋತ್ಸಾಹ, ಅವಕಾಶಗಳು ಸಿಗುತ್ತಿಲ್ಲ. ಇದನ್ನು ಮನಗಂಡು ಈ ಭಾಗದ ಪ್ರತಿಭಾನ್ವಿತ ಕಲಾವಿದರಿಗೆ ಪ್ರೋತ್ಸಾಹ, ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಉಕ ಚಲನಚಿತ್ರ ಕಲಾವಿದರ ಸಂಘ ಸ್ಥಾಪಿಸಲಾಗುತ್ತಿದೆ. ಈ ಕುರಿತು ಶಿವರಾಜಕುಮಾರ, ಪುನಿತರಾಜಕುಮಾರ ಗಮನಕ್ಕೂ ತರಲಾಗಿದೆ. ಸಂಘವನ್ನು ಚಿತ್ರನಟ ದುನಿಯಾ ವಿಜಯ್‌ ಆ. 15ರಂದು ಉದ್ಘಾಟಿಸಲಿದ್ದಾರೆ ಎಂದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ವೀರರಾಣಿ ಕಿತ್ತೂರ ಚನ್ನಮ್ಮ ಜೀವನ ಚರಿತ್ರೆ ಬಗ್ಗೆ ಮಕ್ಕಳು, ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತಿಳಿಸುವ ಕಾರ್ಯ ಪ್ರತಿಯೊಬ್ಬರಿಂದ ಆಗಬೇಕು. ರಾಯಣ್ಣ ಜಯಂತಿ ಆಚರಣೆ ಕುರಿತು ಜಿಲ್ಲೆಯ ಪ್ರತಿ ಹೋಬಳಿ, ಗ್ರಾಮ, ತಾಲೂಕುಗಳಿಗೆ ಭೇಟಿಕೊಟ್ಟು ಪ್ರಚಾರ ಮಾಡಬೇಕು ಎಂದು ಹೇಳಿದರು.

ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ, ರೈಲ್ವೆ ನಿಲ್ದಾಣಕ್ಕೆ ಸದ್ಗುರು ಶ್ರೀ ಸಿದ್ಧಾರೂಢ ಹಾಗೂ ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ ಹೆಸರು ನಾಮಕರಣ ಮಾಡಬೇಕು. ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರಿಗೆ ಆ. 15ರಂದು ಮನವಿ ಸಲ್ಲಿಸಲಾಗುವುದು. ಚಿತ್ರನಟ ದುನಿಯಾ ವಿಜಯ್‌, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಐವರಿಗೆ ರಾಯಣ್ಣ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದರು.

ಸಭೆ ಉದ್ಘಾಟಿಸಿದ ಬಿಜೆಪಿ ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ನಾಗೇಶ ಕಲಬುರ್ಗಿ ಮಾತನಾಡಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರು ದೇಶಕ್ಕಾಗಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಟ ನಡೆಸಿದ ಮಹಾಧೀರ. ಅವರ ಹೋರಾಟದ ಕಿಚ್ಚು ಇಂದಿನ ಯುವಜನಾಂಗಕ್ಕೆ ಮಾದರಿ. ಆ. 15 ಮತ್ತು ಜ. 26ರಂದು ಅವರನ್ನು ನೆನೆಯುವ ದಿನಗಳಾಗಿವೆ ಎಂದರು. ರಾಯಣ್ಣ ಜಯಂತ್ಯುತ್ಸವ ಅಂಗವಾಗಿ ಆ. 15ರಂದು ನಡೆಯುವ ಡೊಳ್ಳಿನ ಜಾತ್ರೆಯ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.

ಸಮಿತಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ತಾಲೂರ, ದ್ಯಾಮಣ್ಣ ಕೊಗ್ಗಿ, ಫಕ್ಕಿರೇಶ ನಾಯ್ಕರ, ಹನಮಂತಪ್ಪ ದೊಡ್ಡಮನಿ, ಯಲ್ಲಪ್ಪ ಕುಂದಗೋಳ, ನಾಗಪ್ಪ ದಳವಾಯಿ, ನಾಗಪ್ಪ ರಾನೋಜಿ, ಹನಮಂತ ಗಡಾದ, ಈಶ್ವರ ಕಾಳಪ್ಪನವರ, ಅಮೃತ ಮೀಸಿ, ಮುತ್ತು ಬಡಪಕ್ಕಿರಪ್ಪನವರ, ವಿನಾಯಕ ನಲವಡಿ, ಪರಸಪ್ಪ ಇಸರಣ್ಣವರ, ಮಾರುತಿ ಕರಿಗಾರ, ಕಿರಣ ಬೆಟಗೇರಿ, ಹನಮಂತಪ್ಪ ದಾಲಪೇಟ, ಪ್ರೇಮಾ ನಾಯ್ಕರ, ಬಾಳಮ್ಮ ಜಂಗಿನವರ, ವೀಣಾ ಶಿಶ್ವಿ‌ನಹಳ್ಳಿ ಮೊದಲಾದವರಿದ್ದರು. ರ್ಯಾಮಪ್ಪ ಐರ್ಯಾಣಿ ಸ್ವಾಗತಿಸಿದರು. ಮಹಾದೇವಿ ಮಾಸ್ತಿ ವಂದಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ