ಶಾಖೋತ್ಪನ್ನ ಕೇಂದ್ರಗಳಿಗೂ ಬೇಸಿಗೆ ಬಿಸಿ!

Team Udayavani, May 13, 2019, 12:14 PM IST

ರಾಯಚೂರು: ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಕೇಂದ್ರ ಸೇರಿ ರಾಜ್ಯದ ವಿವಿಧ ವಿದ್ಯುತ್‌ ಉತ್ಪಾದನಾ ಘಟಕಗಳಿಗೆ ಬೇಸಿಗೆ ಬಿಸಿ ಜೋರಾಗಿಯೇ ತಟ್ಟಿದೆ. ವಿದ್ಯುತ್‌ ಬೇಡಿಕೆ ದಿನೇ ದಿನೆ ಹೆಚ್ಚುತ್ತಿದ್ದು, ಶಾಖೋತ್ಪನ್ನ ಕೇಂದ್ರಗಳು ಬಿಡುವಿಲ್ಲದ ಉತ್ಪಾದನೆಯಲ್ಲಿ ತೊಡಗಿವೆ.

ರಾಜ್ಯಕ್ಕೆ ಶೇ.40ರಷ್ಟು ವಿದ್ಯುತ್‌ ಪೂರೈಸುವ ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಕೇಂದ್ರದ ಎಂಟು ಘಟಕಗಳು ಕಳೆದೆರಡು ತಿಂಗಳಿಂದ ನಿರಂತರವಾಗಿ ವಿದ್ಯುತ್‌ ಉತ್ಪಾದಿಸುತ್ತಿವೆ.

1,720 ಮೆಗಾವ್ಯಾಟ್‌ ವಿದ್ಯುತ್‌ ಸಾಮರ್ಥ್ಯದ ಈ ಕೇಂದ್ರದಿಂದ ನಿತ್ಯ 1,500ರಿಂದ 1,600 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. 250 ಮೆಗಾವ್ಯಾಟ್‌ ಸಾಮರ್ಥ್ಯದ ಒಂದು, 210 ಮೆಗಾವ್ಯಾಟ್‌ ಸಾಮರ್ಥ್ಯ ಏಳು ಘಟಕಗಳಿವೆ. ಫೆಬ್ರವರಿಯಲ್ಲಿ ಬೇಸಿಗೆ ಆರಂಭವಾಗುತ್ತಿದ್ದಂತೆ ಎಲ್ಲ ಘಟಕಗಳು ಕಾರ್ಯೋನ್ಮುಖವಾಗಿವೆ. ಆಗ ಕಡಿಮೆ ಪ್ರಮಾಣದ ವಿದ್ಯುತ್‌ ಉತ್ಪಾದಿಸಲಾಗುತ್ತಿತ್ತು.

ಆದರೆ, ಏಪ್ರಿಲ್‌ನಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಸಾಮರ್ಥ್ಯಕ್ಕೆ ತಕ್ಕಷ್ಟು ವಿದ್ಯುತ್‌ ಉತ್ಪಾದಿಸುವ ಮೂಲಕ ಹೊರೆ ಹೆಚ್ಚಿಸಲಾಗಿದೆ. ಮಳೆ ನಿರೀಕ್ಷಿತ ಮಟ್ಟದಲ್ಲಿ ಆಗದ ಕಾರಣ ಈ ಬಾರಿ ಬಿಸಿಲಿನ ಪ್ರಖರತೆ ಹೆಚ್ಚಾಗಿದೆ. ಏಪ್ರಿಲ್‌ನಲ್ಲಿ 40 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದ ಬಿಸಿಲಿನ ಪ್ರಮಾಣ ಮೇನಲ್ಲಿ 43 ಡಿಗ್ರಿ ಸೆಲ್ಸಿಯಸ್‌ ತಲುಪಿದೆ.

28 ಸಾವಿರ ಟನ್‌ ಕಲ್ಲಿದ್ದಲು: ಆರ್‌ಟಿಪಿಎಸ್‌ ಗೆ ಸದ್ಯಕ್ಕೆ 28 ಸಾವಿರ ಮೆಟ್ರಿಕ್‌ ಟನ್‌ ಕಲ್ಲಿದ್ದಲು ಆಗಮಿಸುತ್ತಿದೆ. 7-8 ರ್ಯಾಕ್‌ಗಳಲ್ಲಿ ಕಲ್ಲಿದ್ದಿಲು ಪೂರೈಸಲಾಗುತ್ತಿದೆ. ಎಲ್ಲ ಘಟಕಗಳು ನಿರಂತರವಾಗಿ ಕಾರ್ಯ ನಿರ್ವಹಿಸಿದರೆ 24-25 ಸಾವಿರ ಟನ್‌ ಕಲ್ಲಿದ್ದಲು ಉರಿಸಲಾಗುತ್ತಿದೆ. ಕಳೆದ ಮಳೆಗಾಲದಲ್ಲಿ ಚಂಡಮಾರುತ ಪರಿಣಾಮವಾಗಿ ಗಣಿಗಳಿಂದ ಸಮರ್ಪಕವಾಗಿ ಕಲ್ಲಿದ್ದಲು ಪೂರೈಕೆ ಆಗಿರಲಿಲ್ಲ. ಆದರೆ, ಈಗ ಪೂರೈಕೆಗೆ ಯಾವುದೇ ಅಡಚಣೆಗಳಿಲ್ಲ. ಅಗತ್ಯನುಸಾರ ಕಲ್ಲಿದ್ದಲು ಬರುತ್ತಿದ್ದು, ಹೇಗೆ ಬರುತ್ತದೆಯೋ ಹಾಗೆ ಖಾಲಿಯಾಗುತ್ತಿದೆ.

ಆರ್‌ಟಿಪಿಎಸ್‌ ಮಾತ್ರವಲ್ಲ: ರಾಜ್ಯದಲ್ಲಿ ವಿದ್ಯುತ್‌ ಬೇಡಿಕೆ ಹೆಚ್ಚಾಗಿರುವ ಕಾರಣ ಕೇವಲ ಆರ್‌ ಟಿಪಿಎಸ್‌ ಮಾತ್ರವಲ್ಲದೇ ಬೇರೆ ಬೇರೆ ವಿದ್ಯುತ್‌ ಮೂಲಗಳ ಮೇಲೂ ಒತ್ತಡ ಹೆಚ್ಚಿದೆ. ಶರಾವತಿಯ 10 ಘಟಕಗಳು ಕೂಡ ಸಕ್ರಿಯವಾಗಿದ್ದು, ಶುಕ್ರವಾರ 954 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸಿವೆ. ನಾಗ್ಝರಿಯ 6 ಘಟಕಗಳಲ್ಲಿ 4 ಸಕ್ರಿಯವಾಗಿದ್ದು, 581 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುತ್ತಿವೆ. ಬಿಟಿಪಿಎಸ್‌ನಲ್ಲಿ 1,700 ಮೆಗಾವ್ಯಾಟ್‌ನ 3 ಘಟಕಗಳಿದ್ದು, ಒಂದು ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಬೇಸಿಗೆಯಾಗಿದ್ದರಿಂದ ಸೌರಶಕ್ತಿಯಿಂದ ಹೆಚ್ಚು ವಿದ್ಯುತ್‌ ಲಭಿಸುತ್ತಿದ್ದು, ಪವನ ಶಕ್ತಿಯಿಂದಲೂ ಹೆಚ್ಚು ವಿದ್ಯುತ್‌ ಲಭಿಸುತ್ತಿದೆ. ಆದರೆ, 1,600 ಮೆಗಾವ್ಯಾಟ್‌ ಸಾಮರ್ಥ್ಯದ ವೈಟಿಪಿಎಸ್‌ ಮಾತ್ರ ಇನ್ನೂ ಕಾರ್ಯಾರಂಭಿಸಿಲ್ಲ.

ಆರ್‌ಟಿಪಿಎಸ್‌ಗೆ ದಿನಕ್ಕೆ 1,720 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯವಿದೆ. ಬೇಡಿಕೆಯನುಸಾರ ಘಟಕಗಳನ್ನು ನಡೆಸಲಾಗುವುದು. ಈಗ ಬೇಡಿಕೆ ಇರುವ ಕಾರಣ ಕಳೆದ ಎರಡು ತಿಂಗಳಿಗೂ ಅಧಿಕ ಕಾಲದಿಂದ ಎಲ್ಲ ಘಟಕಗಳು ಸಕ್ರಿಯವಾಗಿವೆ. ನಮ್ಮ ಘಟಕ ಮಾತ್ರವಲ್ಲದೇ ಎಲ್ಲ ಘಟಕಗಳಿಂದ ಅಧಿಕ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ.
ಮಲ್ಲಿಕಾರ್ಜುನ ಸ್ವಾಮಿ, ವ್ಯವಸ್ಥಾಪಕ ನಿರ್ದೇಶಕ, ಆರ್‌ಟಿಪಿಎಸ್‌

ಹಾರುಬೂದಿ ಸಮಸ್ಯೆ?
ಈಚೆಗೆ ಹಾರುಬೂದಿ ನಿರ್ವಹಣೆ ಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಸುತ್ತಲಿನ ಗ್ರಾಮಗಳಲ್ಲೆಲ್ಲ ಬೂದಿ ಹರಡಿತ್ತು. ಅದಕ್ಕೆ ಘಟಕಗಳ ಮೇಲಿರುವ ನಿರಂತರ ಕಾರ್ಯ ಒತ್ತಡ ಕಾರಣವಾಗಿತ್ತೇ ಎಂಬ ಅನುಮಾನ ಮೂಡಿದೆ. ನಿತ್ಯ 24-25 ಸಾವಿರ ಟನ್‌ ಕಲ್ಲಿದ್ದಲು ಉರಿಸುವುದರಿಂದ ಹಾರುಬೂದಿ ಪ್ರಮಾಣವೂ ಹೆಚ್ಚಾಗಿರುತ್ತದೆ.

„ಸಿದ್ಧಯ್ಯಸ್ವಾಮಿ ಕುಕನೂರು


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಶಿರಸಿ: ಕರ್ನಾಟಕದ ತಿರುಪತಿ ಎಂದೇ ಕರೆಯಲಾಗುವ ಮಂಜುಗುಣಿ ವೆಂಕಟರಮಣ ದೇವಾಲಯದ ಪಾರ್ಶ್ವದಲ್ಲೇ ಇರುವ ಕೋನಾರಿ ತೀರ್ಥ ಕೆರೆಗೆ ಕಾಯಕಲ್ಪದ ಭಾಗ್ಯ ಸಿಕ್ಕಿದೆ....

  • ಸೊಲ್ಲಾಪುರ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್‌ ನಾಯಕ ಸುಶೀಲಕುಮಾರ ಶಿಂಧೆ ಸತತ ಎರಡನೇ ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದು...

  • ಸುಳ್ಯ : ಅರ್ಧ ಶತಮಾನಕ್ಕೂ ಅಧಿಕ ಕಾಲದಿಂದ ಪೆರುವಾಜೆ ಗ್ರಾಮದ ಮುಕ್ಕೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಚೆ ಕಚೇರಿಯನ್ನು ಯಾವುದೇ ಸೂಚನೆ ನೀಡದೆ ಏಕಾಏಕಿ...

  • ಹೊನ್ನಾವರ: ಈ ವರ್ಷವೂ ಮೇ ತಿಂಗಳಲ್ಲಿ ಕುಮಟಾ, ಹೊನ್ನಾವರ ನೀರಿಗೆ ಪರದಾಡುತ್ತಿದೆ. ನಗರಸಭೆ, ಪಟ್ಟಣ ಪಂಚಾಯತ ಪೂರೈಸುವ ನೀರನ್ನು ಅವಲಂಬಿಸಿರುವ ಉಭಯ ನಗರಗಳ 50 ಸಾವಿರ...

  • ಸುಳ್ಯ : ನ.ಪಂ. ಚುನಾವಣೆಯ ಮತದಾನಕ್ಕೆ ಇನ್ನೆರಡು ದಿನ (ಮೇ 29) ಬಾಕಿ ಇದ್ದು, 20 ವಾರ್ಡ್‌ಗಳಲ್ಲಿ ಪ್ರಚಾರದ ಭರಾಟೆ ಬಿರುಸು ಪಡೆದಿದೆ. ಪಕ್ಷ ಮತ್ತು ಪಕ್ಷೇತರರಾಗಿ ಸ್ಪರ್ಧಿಸಿರುವ...

  • ಹುಮನಾಬಾದ: ಪಟ್ಟಣದ ಪುರಸಭೆ 27 ವಾರ್ಡ್‌ ಪೈಕಿ ಈಗಾಗಲೇ 5 ವಾರ್ಡ್‌ಗಳ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾದ ಬೆನ್ನಲ್ಲೇ ಇನ್ನುಳಿದ 22 ವಾರ್ಡ್‌ಗಳಲ್ಲಿ ವಿವಿಧ ಪಕ್ಷ...