ಓದುಗರ ಕೊರತೆಯೇ ಸವಾಲು

Team Udayavani, Nov 4, 2019, 12:21 PM IST

ಹುಬ್ಬಳ್ಳಿ: ಸುತ್ತಲು ಶಾಂತ ವಾತಾವರಣ. ಸುಸಜ್ಜಿತ ಕಟ್ಟಡ. ಒಳ ಪ್ರವೇಶಿಸುತ್ತಿದ್ದಂತೆ “ಜ್ಞಾನ ದೇಗುಲವಿದು, ಕೈಮುಗಿದು ಒಳಗೆ ಬನ್ನಿ’ ಕೈ ಬರಹ ಎಲ್ಲರನ್ನು ಸ್ವಾಗತಿಸುತ್ತದೆ. ಇನ್ನು ಕಪಾಟು (ರ್ಯಾಕ್‌)ಗಳಲ್ಲಿ ಸಾವಿರಾರು ಪುಸ್ತಕಗಳು ಓದುಗರನ್ನು ಕೈಬಿಸಿ ಕರೆಯುತ್ತವೆ. ಆದರೆ ಬರುವ ಜನರು ಮಾತ್ರ ಬೆರಳೆಣಿಕೆಯಷ್ಟು!

ಇದು ನೂತನ ತಾಲೂಕು ಕೇಂದ್ರ ಅಣ್ಣಿಗೇರಿ ಪಟ್ಟಣದಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯದ ವಾಸ್ತವ ಚಿತ್ರಣ. ಗ್ರಂಥಾಲಯದ ಒಳಗಿನ ಗೋಡೆ ಮೇಲೆ ನಾಡಿನ ಪ್ರೇಕ್ಷಣೀಯ ಸ್ಥಳ, ನದಿಗಳು, ಪ್ರಮುಖ ಅಣೆಕಟ್ಟುಗಳು ಹಾಗೂ ಹಿತನುಡಿಗಳ ಫಲಕಗಳು ಕಾಣಿಸುತ್ತವೆ. ಸಾವಿರಾರು ರೂ. ಮೌಲ್ಯದ ಪುಸ್ತಕಗಳಿವೆ. ಓದುಗರಿಗೆ ಬೇಕಾದ ಎಲ್ಲ ಮೂಲ ಸೌಲಭ್ಯಗಳಿವೆ. ಆದರೆ, ಹೆಚ್ಚು ಓದುಗರು ಬಾರದಿರುವುದೇವಿಪರ್ಯಾಸ.

ನಾಲ್ಕು ದಶಕದ ಗ್ರಂಥಾಲಯ : ಅಣ್ಣಿಗೇರಿ ಪಟ್ಟಣದ ಪ್ಯಾಟಿಯಲ್ಲಿ (ಮಾರುಕಟ್ಟೆ) ಬಾಡಿಗೆ ಕಟ್ಟಡದಲ್ಲಿ 1978ರಲ್ಲಿ ಗ್ರಂಥಾಲಯ ಆರಂಭಗೊಂಡಿತು. 1987ರಲ್ಲಿ ಪೊಲೀಸ್‌ ಠಾಣೆ ಎದುರು ನಿರ್ಮಿಸಿದ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಈ ಕಟ್ಟಡದಲ್ಲಿ ಓದುಗರಿಗೆ ಒಂದು ದೊಡ್ಡ ಹಾಲ್‌, ಪುಸ್ತಕ ಸಂಗ್ರಹಣೆಗೆ ಎರಡು ಕೋಣೆಗಳಿವೆ. ಸುತ್ತಲು ಕಾಂಪೌಂಡ್‌ ಇರುವುದರಿಂದ ಸುರಕ್ಷತೆ ಜತೆಗೆ ಶಾಂತ ವಾತಾವರಣವಿದೆ. ಗಾಳಿ-ಬೆಳಕು ಉತ್ತಮವಾಗಿದ್ದು, ಓದಲು ಟೇಬಲ್‌, ಕುರ್ಚಿ, ವಿದ್ಯುತ್‌ ದೀಪ (ಅಗತ್ಯವಿದ್ದರೆ ಮಾತ್ರ ಬಳಕೆ), ಫ್ಯಾನ್‌ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇದೆ. ಪ್ರತಿ ಗೋಡೆಗಳ ಮೇಲೆ ಉತ್ತಮ ತಲೆಬರಹ, ನಾಡಗೀತೆ, ನಾಡಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ, ಪ್ರೇಕ್ಷಣೀಯ ಸ್ಥಳಗಳು ಮತ್ತು ಪ್ರಮುಖ ನದಿಗಳು, ಅಣೆಕಟ್ಟುಗಳ ಮಾಹಿತಿ ಫಲಕಗಳು ಕಾಣಿಸುತ್ತವೆ. ಪ್ರತಿ ಸೋಮವಾರ ರಜೆ ಇರಲಿದ್ದು, ಉಳಿದ ದಿನ ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಗ್ರಂಥಾಲಯ ತೆರೆದಿರುತ್ತದೆ. ಓರ್ವ ಗ್ರಂಥಪಾಲಕ ಮತ್ತು ಸೂಚಕ ಕಾರ್ಯ ನಿರ್ವಹಿಸುತ್ತಿದ್ದಾರೆ.

25 ಸಾವಿರ ಪುಸ್ತಕಗಳು : ನಿತ್ಯ 100-150 ಜನರು ಈ ಗ್ರಂಥಾಲಯಕ್ಕೆ ಬರುತ್ತಾರೆ. ಆರು ದಿನಪತ್ರಿಕೆಗಳು, ಆರು ವಾರಪತ್ರಿಕೆಗಳು, ಮೂರು ಮಾಸ ಪತ್ರಿಕೆಗಳು, 11 ವಿವಿಧ ತರಹದ ಪತ್ರಿಕೆಗಳು (ಕಾಯಂ ಚಂದಾದಾರರು ಮತ್ತು ಅಂಚೆ ಇಲಾಖೆಯಿಂದ ಬರುತ್ತವೆ) ಸೇರಿದಂತೆ ಸರ್ಕಾರ ಪ್ರಕಟಿಸುವ ಎಲ್ಲ ಪತ್ರಿಕೆಗಳನ್ನು ತರಿಸಲಾಗುತ್ತದೆ. ಓದುಗರಿಗಾಗಿ 25 ಸಾವಿರ ಪುಸ್ತಕಗಳಿದ್ದು, 756 ಜನರು ಗ್ರಂಥಾಲಯದ ಸದಸ್ಯತ್ವ ಪಡೆದಿದ್ದಾರೆ. ಇವರು ಮಾತ್ರ ಪುಸ್ತಕಗಳನ್ನು ಮನೆಗೆ ತೆಗೆದುಕೊಂಡು ಹೋಗಬಹುದು. 15 ದಿನಕ್ಕೊಮ್ಮೆ ಪುಸ್ತಕ ಬದಲಿಸುವ ಅವಕಾಶವಿದ್ದು, ತಪ್ಪಿದಲ್ಲಿ ದಂಡ ಪಾವತಿಸಬೇಕು.

ಓದುಗರ ಕೊರತೆ :  34 ಸಾವಿರ ಜನಸಂಖ್ಯೆ ಹೊಂದಿರುವ ಅಣ್ಣಿಗೇರಿ ಪಟ್ಟಣದಲ್ಲಿ ಎಲ್ಲ ಸೌಲಭ್ಯಯುಳ್ಳ ಸುಸಜ್ಜಿತ ಗ್ರಂಥಾಲಯ ಇದ್ದರೂ ಓದುಗರ ಸಂಖ್ಯೆ ವರ್ಷದಿಂದ-ವರ್ಷಕ್ಕೆ ಕ್ಷೀಣಿಸುತ್ತಿದೆ. ಇದು ಯುವ ಪೀಳಿಗೆಯಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿರುವುದಕ್ಕೆ ನಿದರ್ಶನ. ಇದಕ್ಕೆ ಹಲವಾರು ಕಾರಣಗಳಿದ್ದರೂ ಉತ್ತಮ ಗ್ರಂಥಾಲಯದ ಸದ್ಬಳಕೆ ಆಗದಿರುವುದಕ್ಕೆ ಇಲ್ಲಿನ ಹಿರಿಯ ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.

 ಡಿಜಿಟಲ್‌ ಗ್ರಂಥಾಲಯಕ್ಕೆ ಆಯ್ಕೆ : ಅಣ್ಣಿಗೇರಿ ಪಟ್ಟಣದಲ್ಲಿರುವ ಕೇಂದ್ರ ಗ್ರಂಥಾಲಯವನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆ ಡಿಜಿಟಲ್‌ ಗ್ರಂಥಾಲಯವನ್ನಾಗಿಸಲು ಆಯ್ಕೆ ಮಾಡಿದೆ. ಈಗಾಗಲೇ ಗ್ರಂಥಪಾಲಕರಿಗೆ ಮೌಖೀಕವಾಗಿ ಮಾಹಿತಿ ನೀಡಲಾಗಿದೆ. ಈ ಕುರಿತು ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಒಂದು ತಿಂಗಳಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ.

ಓದುಗರ ಅನುಕೂಲಕ್ಕೆ ತಕ್ಕಂತೆ ಗ್ರಂಥಾಲಯದಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ. ವಿದ್ಯಾರ್ಥಿಗಳಿಗಾಗಿ ಸಾವಿರಾರು ರೂ. ಮೌಲ್ಯದ ಪುಸ್ತಕಗಳನ್ನು ತರಿಸಲಾಗಿದೆ. ಈ ಸೌಲಭ್ಯವನ್ನು ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಕರು, ನಿರುದ್ಯೋಗಿ ಪದವೀಧರರು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಹೆಚ್ಚು ಜನರು ಗ್ರಂಥಾಲಯಕ್ಕೆ ಬಂದು ಓದುವಂತೆ ತಿಳಿಹೇಳಲಾಗುತ್ತಿದೆ. -ಕೆ.ಜಿ. ಮೂಲಿಮನಿ, ಗ್ರಂಥಪಾಲಕ

 

-ಶರಣು ಹುಬ್ಬಳ್ಳಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ