ಮತ್ತೆ ಮರುಕಳಿಸಿತೇ 2002ರ ಐತಿಹಾಸಿಕ ಹೋರಾಟ?

Team Udayavani, Oct 21, 2019, 10:16 AM IST

ಹುಬ್ಬಳ್ಳಿ: ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಆಡಳಿತ ಮಂಡಳಿ ವಿವಿಧ ಬೇಡಿಕೆ ಈಡೇರಿಕೆ ನಿಟ್ಟಿನಲ್ಲಿ 2002ರಲ್ಲಿ ಮಠಾಧೀಶರು, ಆಡಳಿತ ಮಂಡಳಿಯವರು, ಶಿಕ್ಷಕರು ಐತಿಹಾಸಿಕ ಹೋರಾಟ ಕೈಗೊಂಡು ಸರಕಾರವನ್ನು ಮಣಿಸುವ ಸಾಹಸ ತೋರಿದ್ದರು.

ಇದೀಗ ಮತ್ತದೇ ಸನ್ನಿವೇಶ ಸೃಷ್ಟಿಯಾಗಿದ್ದು, ಮತ್ತೂಂದು ಸುತ್ತಿನ ಐತಿಹಾಸಿಕ ಹೋರಾಟಕ್ಕೆ ವೇದಿಕೆ ಸಜ್ಜುಗೊಂಡಿದೆ. ಅನೇಕ ಮಠಾಧೀಶರು ಇದಕ್ಕೆ ಬೆಂಬಲ ತೋರಿದ್ದಾರೆ. 1995ರ ನಂತರ ಆರಂಭ ವಾದ ಅನುದಾನ ರಹಿತ ಶಾಲಾ-ಕಾಲೇಜುಗಳನ್ನು ಅನುದಾನಕ್ಕೊಳ ಪಡಿಸುವುದು, ಕಾಲ್ಪನಿಕ ವೇತನ ಜಾರಿ, ಹೊಸ ಪಿಂಚಣಿ ವ್ಯವಸ್ಥೆ ರದ್ದು, ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಅನುಪಾತ ಸರಿಪಡಿಸುವಿಕೆ, ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ನೌಕರರಿಗೂ ಜ್ಯೋತಿ ಸಂಜೀವಿನಿ ಆರೋಗ್ಯ ವಿಮೆ ವಿಸ್ತರಣೆ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಸೇರಿದಂತೆ ವಿವಿಧ ವಿಷಯಗಳ ಕುರಿತಾಗಿ ಮತ್ತೂಂದು ಸುತ್ತಿನ ಬೃಹತ್‌ ಹೋರಾಟ ಕೈಗೊಳ್ಳಲು ತೀರ್ಮಾನಿಸಲಾಗಿದೆ.

2002ಹೋರಾಟದ ನೆನಪು: ಮೊದಲ ಬಾರಿಗೆ 2002ರಲ್ಲಿ ಆಡಳಿತ ಮಂಡಳಿ ಹಾಗೂ ನೌಕರರು ಸಂಘಟಿತವಾಗಿ ಹೋರಾಟ ನಡೆಸಿದ್ದು, ಇದಕ್ಕೆ ನಾಂದಿ ಹಾಡಿ ವೇದಿಕೆಯಾಗಿದ್ದು ಹುಬ್ಬಳ್ಳಿ. 2002ರ ಜ. 20ರಂದು ಹುಬ್ಬಳ್ಳಿಯ ನ್ಯೂ ಗರ್ಲ್ಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘ, ರಾಜ್ಯ ಪಿಯು ಕಾಲೇಜುಗಳ ನೌಕರರ ಸಂಘ, ಕವಿವಿ ಕಾಲೇಜು ಶಿಕ್ಷಕರ ಸಂಘ, ಶಾಶ್ವತ ಅನುದಾನ ರಹಿತ ನೌಕರರ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ವಿಧಾನ ಪರಿಷತ್ತು ಸದಸ್ಯ ಬಸವರಾಜ ಹೊರಟ್ಟಿ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಐತಿಹಾಸಿಕ ಹೋರಾಟಕ್ಕೆ ನಾಂದಿ ಹಾಡಿದ್ದರು.

ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಮತ್ತು ನೌಕರರ ಸಂಘಟನೆಗಳ ಹೋರಾಟ ಸಮನ್ವಯ ಸಮಿತಿ ಅಸ್ತಿತ್ವಕ್ಕೆ ಬಂದಿತ್ತು. ಹೋರಾಟದ ಭಾಗವಾಗಿ ನಡೆದ ಮೆರವಣಿಗೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಮಠಾಧೀಶರು, ಸುಮಾರು 40 ಸಾವಿರಕ್ಕೂ ಅಧಿಕ ಶಿಕ್ಷಕರು, ನೌಕರರು, ಆಡಳಿತ ಮಂಡಳಿಯವರು ಪಾಲ್ಗೊಂಡು ಸರಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದರು.

2002ರ ಏ.30ರಂದು ಬೆಂಗಳೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ದುಂಡುಮೇಜಿನ ಸಭೆಯಲ್ಲಿ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರು ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಮೈಸೂರು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರುಗಳು ಹಾಗೂ ವಿಧಾನ ಪರಿಷತ್ತು ಸದಸ್ಯ ಬಸವರಾಜ ಹೊರಟ್ಟಿ, ಆಡಳಿತ ಮಂಡಳಿಯವರು ಪಾಲ್ಗೊಂಡಿದ್ದರು. ಸರಕಾರದ ಮೇಲೆ ತೀವ್ರ ಒತ್ತಡ ತರುವಲ್ಲಿ ಈ ಸಭೆ ಯಶಸ್ವಿಯಾಗಿತ್ತು. ಸರಕಾರ ಬೇಡಿಕೆಗಳ ಈಡೇರಿಕೆ ಕ್ರಮಕ್ಕೆ ಮುಂದಾಗಿತ್ತಾದರೂ, ನಿರೀಕ್ಷಿತ ವೇಗ ಪಡೆದಿರಲಿಲ್ಲ. ಇದಾದ ಕೆಲ ವರ್ಷಗಳ ನಂತರ 1994ರವರೆಗೆ ಆರಂಭವಾದ ಶಾಲೆಗಳನ್ನು ಅನುದಾನಕ್ಕೊಳಪಡಿಸಲು ಕ್ರಮ ಕೈಗೊಳ್ಳಲಾಗಿತ್ತು. ಅನಂತರ ಅದನ್ನು 1995ರವರೆಗಿನ ಶಾಲೆಗಳಿಗೂ ವಿಸ್ತರಿಸಲಾಗಿತ್ತು.

ಮತ್ತೂಂದು ಸುತ್ತಿನ ಹೋರಾಟಕ್ಕೆ ಸಜ್ಜು: 1995ರಿಂದ ಇಲ್ಲಿವರೆಗೆ ಆರಂಭವಾದ ಕನ್ನಡ ಹಾಗೂ ವಿವಿಧ ಮಾತೃಭಾಷೆ ಮಾಧ್ಯಮಗಳ ಶಾಲಾ-ಕಾಲೇಜುಗಳನ್ನು ಅನುದಾನ ಕ್ಕೊಳಪಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮತ್ತೂಂದು ಹಂತದ ಐತಿಹಾಸಿಕ ಹೋರಾಟಕ್ಕೆ ತೀರ್ಮಾನಿಸಲಾಗಿದೆ. ಈ ಕುರಿತಾಗಿ ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಗೆ ವಿವಿಧೆಡೆಯ ಸುಮಾರು 26ಕ್ಕೂ ಹೆಚ್ಚು ಮಠಾಧೀಶರು ಭಾಗಿಯಾಗಿದ್ದರು. 2006ರ ಏಪ್ರಿಲ್‌ ನಂತರ ನೇಮಕಗೊಂಡ ಸರಕಾರಿ ನೌಕರರಿಗೆ ಹೊಸ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಇದರ ರದ್ಧತಿ ಒತ್ತಡ ತೀವ್ರವಾಗಿದೆ. ಎನ್‌ಪಿಎಸ್‌ ನೌಕರರು ಹೋರಾಟದಲ್ಲಿ ಭಾಗಿಯಾದಲ್ಲಿ ಹೋರಾಟ ಇನ್ನಷ್ಟು ತೀವ್ರತೆ ಪಡೆಯಲಿದೆ.

ವರದಿ ನೀಡಿದ್ದರೂ ಅನುಷ್ಠಾನಗೊಂಡಿಲ್ಲ:ಕಾಲ್ಪನಿಕ ವೇತನ ಬಡ್ತಿ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಮತ್ತೂಂದು ಪ್ರಮುಖ ಸಮಸ್ಯೆಯಾಗಿದೆ. ಅನುದಾನ ರಹಿತ ಅವಧಿಯಲ್ಲಿ ಸಲ್ಲಿಸಲಾದ ಸೇವೆಯನ್ನು ವೇತನ, ರಜೆ, ಪಿಂಚಣಿ ಇತ್ಯಾದಿ ಸೌಲಭ್ಯಗಳಿಗೆ ಪರಿಗಣಿಸಬೇಕು ಎಂಬುದಾಗಿದ್ದು, 1990ರಿಂದ ಈ ಸಮಸ್ಯೆ ಬಗ್ಗೆ ಒತ್ತಾಯ, ಹೋರಾಟ ನಡೆಯುತ್ತಿದೆ. ಸರಕಾರ ವಿಧಾನ ಪರಿಷತ್ತು ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಕಾಲ್ಪನಿಕ ವೇತನ ಕುರಿತ ಅಧ್ಯಯನಕ್ಕೆ ಸಮಿತಿ ರಚಿಸಿತ್ತು. ಹೊರಟ್ಟಿ ಸಮಿತಿ ವರದಿ ನೀಡಿದ್ದರೂ ಇಂದಿಗೂ ಅದು ಅನುಷ್ಠಾನಗೊಂಡಿಲ್ಲ.

ತಪ್ಪು ಮಾಹಿತಿ ನೀಡಿದರೆ ಅಧಿಕಾರಿಗಳು?: 1994-95ರ ನಂತರದಲ್ಲಿ ಆರಂಭಗೊಂಡ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಅನುದಾನಕ್ಕೊಪಡಿಸುವ ಕುರಿತಾಗಿ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆಯೇ? ಸದನದಲ್ಲಿ ವಿಧಾನ ಪರಿಷತ್ತು ಸದಸ್ಯರಾದ ಮರಿತಿಬ್ಬೇಗೌಡ ಹಾಗೂ ಬಸವರಾಜ ಹೊರಟ್ಟಿ ಅವರು ಕೇಳಿದ ಪ್ರಶ್ನೆಗಳಿಗೆ ನೀಡಿದ ಉತ್ತರ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. 2018ರಲ್ಲಿ ಮರಿತಿಬ್ಬೇಗೌಡರು ಕೇಳಿದ ಪ್ರಶ್ನೆಗೆ ರಾಜ್ಯದಲ್ಲಿ 1088 ಪ್ರಾಥಮಿಕ ಶಾಲೆ, 883 ಪ್ರೌಢಶಾಲೆ ಹಾಗೂ 241 ಪಿಯು ಕಾಲೇಜುಗಳನ್ನು ಅನುದಾನಕ್ಕೊಳಪಡಿಸ ಬೇಕಿದೆ

ಎಂದಿದ್ದರೆ, 2019ರ ಫೆಬ್ರವರಿಯಲ್ಲಿ ಹೊರಟ್ಟಿಯವರು ಕೇಳಿದ ಪ್ರಶ್ನೆಗೆ 7,054 ಪ್ರಾಥಮಿಕ ಶಾಲೆ ಇದ್ದು ಅವುಗಳನ್ನು ಅನುದಾನಕ್ಕೊಳಪಡಿಸಲು ಅಂದಾಜು 2,394 ಕೋಟಿ ರೂ. ಬೇಕಾಗುತ್ತದೆ. 4050 ಪ್ರೌಢಶಾಲೆಗಳಿದ್ದು, 3,498 ಕೋಟಿ ರೂ. ಬೇಕಿದ್ದು, 3064 ಪಿಯು ಕಾಲೇಜುಗಳಿದ್ದು, ಅಂದಾಜು 588 ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಹೇಳಿದ್ದು, ಒಂದೇ ವರ್ಷದಲ್ಲಿ ಶಾಲಾ-ಕಾಲೇಜುಗಳ ಸಂಖ್ಯೆಯಲ್ಲಿ ಇಷ್ಟೊಂದು ಹೆಚ್ಚಳ ಆಗಿದೆಯೇ ಅಥವಾ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆಯೇ ಎಂಬ ಪ್ರಶ್ನೆ ಕಾಡ ತೊಡಗಿದೆ.

 

-ಅಮರೇಗೌಡ ಗೋನವಾರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ