ಮೋದಿ ಅಲೆ ಮುಂದೆ ಮೈತ್ರಿ ಲೆಕ್ಕಕ್ಕಿಲ್ಲ

Team Udayavani, Apr 20, 2019, 12:50 PM IST

ಲೋಕಸಭೆ ಚುನಾವಣೆಗೆ ಇನ್ನೂ ಮೂರು ದಿನ ಬಾಕಿಯಿದೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಸಂಸದ ಪ್ರಕಾಶ ಹುಕ್ಕೇರಿ ಮೈತ್ರಿ ಪಕ್ಷಗಳ ಬೆಂಬಲವನ್ನು ನೆಚ್ಚಿಕೊಂಡು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೋದಿ ಅಲೆ ನಂಬಿಕೊಂಡಿರುವ ಬಿಜೆಪಿ ಅಭ್ಯರ್ಥಿ ಅಣ್ಣಾ ಸಾಹೇಬ ಜೊಲ್ಲೆ ಗೆಲುವಿಗಾಗಿ ಕಸರತ್ತು ನಡೆಸಿದ್ದಾರೆ. ಇಬ್ಬರ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಚುನಾವಣಾ ಪ್ರಚಾರ ಮಧ್ಯೆ ಉದಯವಾಣಿಗೆ ಕಿರು ಸಂದರ್ಶನ ನೀಡಿದ್ದಾರೆ.

ಪ್ರಶ್ನೆ: ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಮುಂದೆ ಮೋದಿ ಅಲೆ ಕೈ ಹಿಡಿಯುತ್ತಾ..?
ಉತ್ತರ: ರಾಜ್ಯದಲ್ಲಿ ಮೈತ್ರಿ ಇರಬಹುದು. ಆದರೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಅಸ್ತಿತ್ವವೇ ಇಲ್ಲ. ಕ್ಷೇತ್ರದಲ್ಲಿ ಜೆಡಿಎಸ್‌ ಮತಗಳಿಕೆ 20 ಸಾವಿರವೂ ದಾಟುವುದಿಲ್ಲ. ಹೀಗಿರುವಾಗ ಮೈತ್ರಿಯ ಮಾತೆಲ್ಲಿ ಬಂತು. ಒಂದು ವೇಳೆ ಮೈತ್ರಿ ಇದೆ ಎಂದುಕೊಂಡರೂ ಪ್ರಧಾನಿ ಮೋದಿ ಅಲೆಯ ಮುಂದೆ ಇದಾವ ಲೆಕ್ಕ. ಈ ಅಲೆಯ ಮುಂದೆ ಮೈತ್ರಿ ಮಾಡಿಕೊಂಡವರೇ ವಿಚಾರ ಮಾಡಬೇಕು.

ಪ್ರಶ್ನೆ:ರಾಜ್ಯ ಸರಕಾರದ ಆಬ್ಬರದ ಎದುರಿಸಲು ಪ್ರಚಾರದ ವೈಖರಿ ಹಾಗೂ ತಂತ್ರಗಾರಿಕೆ ಹೇಗಿದೆ..?
ಉತ್ತರ:
ಕ್ಷೇತ್ರದ ಯಾವ ಭಾಗದಲ್ಲೂ ರಾಜ್ಯ ಸರಕಾರದ ಅಬ್ಬರ ಇಲ್ಲ. ಮೈತ್ರಿ ಸರಕಾರದ ಭರವಸೆಗಳು ಬರೀ ಸುಳ್ಳು ಎಂಬುದು ಜನರಿಗೆ ಗೊತ್ತಾಗಿದೆ. ನಾವು ಆರಂಭದಿಂದಲೇ ಪ್ರಚಾರಕ್ಕೆ ಧುಮುಕಿದ್ದೇವೆ. ಮನೆ ಮನೆಗೆ ಹಾಗೂ ಜನರ ಮನಸ್ಸನ್ನು ತಲುಪಿದ್ದೇವೆ. ಕೇಂದ್ರ ಸರ್ಕಾರದ ಸಾಧನೆ ಹಾಗೂ ಮುಂದಿನ ಯೋಜನೆಗಳ ಬಗ್ಗೆ ವಿವರವಾಗಿ ಮನವರಿಕೆ ಮಾಡಿಕೊಟ್ಟಿದ್ದೇವೆ.0000 ಜನರ ಜತೆಗಿನ ನಿಕಟ ಸಂಪರ್ಕವೇ ನಮ್ಮ ಬಹು ದೊಡ್ಡ ಅಸ್ತ್ರ. ಈ ಸರಕಾರವನ್ನು ಎದುರಿಸಲು ಹೊಸ ತಂತ್ರಗಾರಿಕೆಯ ಅಗತ್ಯವಿಲ್ಲ. ನಾವು ಎಲ್ಲರೂ ತಂಡವಾಗಿ ಕೆಲಸ ಮಾಡುತ್ತಿದ್ದೇವೆ. ಭಿನ್ನಾಭಿಪ್ರಾಯದ ಮಾತೇ ಇಲ್ಲ.

ಪ್ರಶ್ನೆ: ಪ್ರತ್ಯೇಕ ಲಿಂಗಾಯತ ಧರ್ಮ ಈ ಬಾರಿಯ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆಯೇ..?
ಉತ್ತರ:
ಯಾವುದೇ ಕಾರಣಕ್ಕೂ ಇಲ್ಲ. ಚುನಾವಣೆಯಲ್ಲಿ ಜಾತಿ ವಿಷಯವೇ ಬರುತ್ತಿಲ್ಲ. ಜನರಿಗೂ ಇದರ ಬಗ್ಗೆ ಆಸಕ್ತಿ ಇಲ್ಲ. ಜನರು ಆಭಿವೃದ್ಧಿಯ ಬಗ್ಗೆ ಕೇಳುತ್ತಿದ್ದಾರೆ. ಹೀಗಾಗಿ ಲಿಂಗಾಯತ ಧರ್ಮದ ವಿಚಾರ ಬರುವುದೇ ಇಲ್ಲ.

ಪ್ರಶ್ನೆ; ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಿಮ್ಮ ನೀಲನಕ್ಷೆ ಏನು..?
ಉತ್ತರ:
ಚಿಕ್ಕೋಡಿ ಲೋಕಸಭಾ ಕ್ಷೇತ್ರವನ್ನು ಹಲವಾರು ರೀತಿಯಿಂದ ಮಾದರಿ ಕ್ಷೇತ್ರವನ್ನಾಗಿ ಮಾಡಲು ನನ್ನದೇ ಆದ ಕನಸು ಕಟ್ಟಿಕೊಂಡಿದ್ದೇನೆ. ಮುಖ್ಯವಾಗಿ ಇಲ್ಲಿಯ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಬೇಕಾಗಿದೆ. ಇದಲ್ಲದೆ ಈ ಭಾಗದ ರೈತರು ಎದುರಿಸುತ್ತಿರುವ ಸವಳು ಜವಳು ಗಂಭೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು. ಅದಕ್ಕೆ ಕೇಂದ್ರದಿಂದ ಅನುದಾನ ತರುವುದು ನಮ್ಮ ಮೊದಲ ಆದ್ಯತೆ. ಇದಲ್ಲದೆ ತಾಲೂಕಿಗೊಂದು ಕೇಂದ್ರೀಯ ವಿದ್ಯಾಲಯ ಆರಂಭಿಸುವ ಉದ್ದೇಶ ಇದೆ. ಚಿಕ್ಕೋಡಿ ಜಿಲ್ಲಾ ರಚನೆ ಆಗಬೇಕು ಎಂಬ ಬೇಡಿಕೆ ಈಡೇರಿಸಬೇಕಿದೆ.

ಮೋದಿ ಅಲೆ ಮೀರಿಸುವ ತಂತ್ರ ನಮ್ಮಲ್ಲಿದೆ

ಪ್ರಶ್ನೆ; ಮೈತ್ರಿ ಬಿಕ್ಕಟ್ಟು ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆಯೇ?

ಉತ್ತರ: ನಮ್ಮಲ್ಲಿ ಯಾವುದೇ ಬಿಕ್ಕಟ್ಟು ಅಥವಾ ಭಿನ್ನಮತ ಇಲ್ಲ. ಎಲ್ಲರೂ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಮೈತ್ರಿಕೂಟದ ಪ್ರತಿ ನಾಯಕರು ಸಹಕಾರ ನೀಡುತ್ತಿದ್ದಾರೆ.

ಪ್ರಶ್ನೆ: ಮೋದಿ ಅಲೆ ಎದುರಿಸಲು ನಿಮ್ಮ ತಂತ್ರಗಾರಿಕೆ ಏನು?

ಉತ್ತರ: ನಮಗೆ ಯಾವುದೇ ಅಲೆಯ ಹೆದರಿಕೆ ಇಲ್ಲ. ಕಳೆದ ಬಾರಿಯೂ ಮೋದ ಅಲೆ ಇತ್ತು. ಜನರು ಅವರ ಭಾಷಣ ಕೇಳಲು ಬರುತ್ತಾರೆ. ಅವರ ಭಾಷಣ ಕೇಳಲು ಚೆಂದ. ಮತಗಳಿಗೆ ಅಲ್ಲ. ಮೋದಿ ಅಲೆಯನ್ನು ಮೀರಿಸುವಂತಹ ತಂತ್ರಗಾರಿಕೆ ನಮ್ಮ ಬಳಿ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಶಾಸಕರ ಹಾಗೂ ಮಾಜಿ ಶಾಸಕರ ಶಕ್ತಿ ಬಹಳ ಮುಖ್ಯ. ಈ ಎಲ್ಲ ನಾಯಕರು ನನಗೆ ಬಲ ತುಂಬಿದರೆ ಯಾವುದೇ ಸಮಸ್ಯೆ ಇಲ್ಲ. ಎಲ್ಲರ ಸಹಕಾರ ಸಿಗಲಿದೆ ಎಂಬ ವಿಶ್ವಾಸದ ಮೇಲೆಯೇ ಪ್ರಚಾರ ನಡೆಸುತ್ತಿದ್ದೇನೆ. ಇದುವರೆಗೆ ಎಲ್ಲಿಯೂ ಸಮಸ್ಯೆ ಅಗಿಲ್ಲ.

ಪ್ರಶ್ನೆ: ಪ್ರತ್ಯೇಕ ಲಿಂಗಾಯತ ಧರ್ಮ ಈ ಬಾರಿಯ ಚುನಾ ವಣೆಯ ಮೇಲೆ ಪರಿಣಾಮ ಬೀರಲಿದೆಯೇ?

ಉತ್ತರ: ಖಂಡಿತ ಇಲ್ಲ. ಇದರ ಬಗ್ಗೆ ಯಾರಿಗೂ ಅಸಕ್ತಿ ಇಲ್ಲ. ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಇದರ ಬಗ್ಗೆ ಗೊತ್ತೇ ಇಲ್ಲ.

ಪ್ರಶ್ನೆ: ರಾಹುಲ್, ದೇವೇಗೌಡ ಹಾಗೂ ಸಿದ್ದರಾಮಯ್ಯ ಪ್ರಚಾರ ನಿಮಗೆಷ್ಟು ವರವಾಗಲಿದೆ..?

ಉತ್ತರ: ಬಹಳಷ್ಟು ಅನುಕೂಲವಾಗಲಿದೆ. ಕಳೆದ ಬಾರಿಯೂ ಕಾಂಗ್ರೆಸ್‌ ನಾಯಕರು ಬಂದಿದ್ದರು. ನಮ್ಮ ಗೆಲುವಿಗಾಗಿ ಪ್ರಚಾರ ಮಾಡಿದ್ದರು. ಈಗಲೂ ಅದೇ ರೀತಿ ನಮ್ಮ ಜಯಕ್ಕೆ ಈ ನಾಯಕರು ಕಾರಣರಾಗಲಿದ್ದಾರೆ.

ಪ್ರಶ್ನೆ: ಸ್ಥಳೀಯವಾಗಿ ನಿಮ್ಮ ಸಾಧನೆ ಏನು?

ಉತ್ತರ: ನಾನು ಸಂಸದನಾದ ಬಳಿಕ ಐದು ವರ್ಷದಲ್ಲಿ ಯಾವುದೇ ಕ್ಷೇತ್ರದಲ್ಲಿ ತಾರತಮ್ಯ ಮಾಡದೆ 800 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಅಥಣಿ ತಾಲೂಕಿನ ಬಸವೇಶ್ವರ (ಕೆಂಪವಾಡ) ನೀರಾವರಿ ಯೋಜನೆಗೆ 1316 ಕೋಟಿ ಮಂಜೂರಾಗಿ 22 ಗ್ರಾಮಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ಅಥಣಿ ತಾಲೂಕಿನ 17 ಕೆರೆಗಳಿಗೆ ನೀರು ತುಂಬಿಸಲು 165 ಕೋಟಿ ಕಾಮಗಾರಿ ಪ್ರಗತಿಯಲ್ಲಿದೆ. ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ 19 ಕೆರೆಗಳಿಗೆ ನೀರು ತುಂಬಿಸಲು 34 ಕೋಟಿ ರೂ ಬಿಡುಗಡೆ ಮಾಡಿದೆ. ಶೈಕ್ಷಣಿಕ ಕ್ಷೇತ್ರದ ಸುಧಾರಣೆಗೆ ಒತ್ತು ನೀಡಿ ಕ್ಷೇತ್ರದಲ್ಲಿ ಮೂರು ಕೇಂದ್ರೀಯ ವಿದ್ಯಾಲಯ ಸ್ಥಾಪಿಸಲಾಗಿದೆ.

ಪ್ರಶ್ನೆ; ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಿಮ್ಮ ನೀಲನಕ್ಷೆ ಏನು?

ಉತ್ತರ: ಕ್ಷೇತ್ರದ ಪ್ರತಿಯೊಂದು ಪ್ರದೇಶ ನೀರಾವರಿಯಾಗಬೇಕು. ಸವಳು ಜವಳು ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು. ಕೇಂದ್ರ ಸರಕಾರದ ಎಲ್ಲ ಯೋಜನೆಗಳನ್ನು ಚಿಕ್ಕೋಡಿಗೆ ತಂದು ಇದನ್ನು ಮಾದರಿ ಮಾಡುವುದೇ ನಮ್ಮ ಮುಖ್ಯ ಗುರಿ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ