ಮೇಲ್ಛಾವಣಿ ಕುಸಿದು ಮಹಿಳೆ-ಮಕ್ಕಳಿಬ್ಬರ ಸಾವು

•ಕುಂದಗೋಳ ತಾಲೂಕಿನ ಯರಗುಪ್ಪಿಯಲ್ಲಿ ದುರ್ಘ‌ಟನೆ•ಸವಿ ನಿದ್ದೆಯಲ್ಲಿದ್ದ ಕಂದಮ್ಮಗಳು ಚಿರನಿದ್ರೆಗೆ

Team Udayavani, May 15, 2019, 10:39 AM IST

ಕುಂದಗೋಳ: ಬೆಳಗಿನ ಜಾವ ಸವಿನಿದ್ರೆಯಲ್ಲಿದ್ದ ಇಬ್ಬರು ಕಂದಮ್ಮಗಳು ಹಾಗೂ ಮಹಿಳೆ ಮನೆ ಮೇಲ್ಛಾವಣಿ ಕುಸಿದು ಮೃತಪಟ್ಟ ಘಟನೆ ಯರಗುಪ್ಪಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ.

ಯಲ್ಲವ್ವ ಯಲ್ಲಪ್ಪ ಗಾಡದ(48) ಹಾಗೂ ಮೊಮ್ಮಕ್ಕಳಾದ ಶಿಗ್ಗಾಂವ ತಾಲೂಕಿನ ಚಾಕಾಪುರ ಗ್ರಾಮದ ಶ್ರಾವಣಿ ಆನಂದ ರಾಧಾಯಿ(3) ಮತ್ತು ನವಲಗುಂದ ತಾಲೂಕಿನ ಬಳ್ಳೂರ ಗ್ರಾಮದ ಜ್ಯೋತಿ ಸಿದ್ದಪ್ಪ ಮೇಟಿ(8) ಮೃತರು. ಘಟನೆಯಲ್ಲಿ ಗಾಯಾಳುಗಳಾದ ದ್ಯಾಮವ್ವ ಗರಟ್ಟಿ, ರೂಪಾ ಗಾಡದ, ಫಕ್ಕೀರವ್ವ ಗಾಡದ ಅವರನ್ನು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ.

ಗ್ರಾಮದಲ್ಲಿ ಪ್ರತಿವರ್ಷ ಆಚರಿಸುವಂತೆ ಗ್ರಾಮದೇವಿ ವಾರದ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಅಜ್ಜ-ಅಜ್ಜಿ ಮನೆಗೆ ಜ್ಯೋತಿ ಹಾಗೂ ಶ್ರಾವಣಿ ಸೋಮವಾರ ಬಂದಿದ್ದರು. ರಾತ್ರಿ ಎಲ್ಲರೊಂದಿಗೆ ಊಟ ಮಾಡಿ ಅಜ್ಜಿಯ ಬಳಿ ಮಲಗಿದ್ದರು. ಹಳೆಯದಾದ ಮನೆಯ ಮೇಲ್ಛಾವಣಿ ಮಂಗಳವಾರ ಬೆಳಗಿನ ಜಾವ ಕುಸಿದ ಪರಿಣಾಮ ಮಲಗಿದ್ದ 6 ಜನರ ಮೇಲೆ ಮಣ್ಣು ಬಿದ್ದಿದೆ. ಭಾರೀ ಸಪ್ಪಳಕ್ಕೆ ಪಕ್ಕದ ಮನೆಯವರು ಗಾಬರಿಯಾಗಿ ಎಚ್ಚೆತ್ತು ಗ್ರಾಮಸ್ಥರನ್ನು ಸೇರಿಸಿ ಮಲಗಿದವರ ಮೇಲಿನ ಮಣ್ಣನ್ನು ತೆಗೆದು ಹಾಕಿ 3 ಜನರನ್ನು ಪಾರು ಮಾಡಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಿದವರು ಹಾಗೂ ಗ್ರಾಮದ ಮಹಿಳೆಯರು ಮೃತ ಕಂದಮ್ಮಗಳನ್ನು ಕಂಡು ದುಃಖೀಸುತ್ತಿರುವುದು ನೋಡುಗರ ಮನ ಕಲಕುವಂತಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ