ಕ್ರಿಕೆಟ್‌ ಆಡಿ ವಿನಯ ಪ್ರಚಾರ

Team Udayavani, Apr 9, 2019, 10:06 AM IST

ಧಾರವಾಡ: ಸ್ಥಳೀಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಬೆಳಗಿನ
ಜಾವ ನಗರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಬೆಳಗ್ಗೆ 5 ಗಂಟೆಗೇ ಮನೆಯಿಂದ ಹೊರಟ ಅವರು, ನಗರದ ಪ್ರಮುಖ ಉದ್ಯಾನವನಗಳಾದ ಸಾಧನಕೇರಿ, ಕಿತ್ತೂರು ಚನ್ನಮ್ಮ ಪಾರ್ಕ್‌, ಕೆಲಗೇರಿ ಉದ್ಯಾನವನ ಹಾಗೂ ಕೆಸಿಡಿ ಮೈದಾನಕ್ಕೆ ತೆರಳಿ ವಾಯು ವಿಹಾರಿಗಳಿಗೆ ಮತ್ತು ನಿವಾಸಿಗಳಿಗೆ ಕರಪತ್ರ ನೀಡಿ ಮತ ಯಾಚಿಸಿದರು.
ಕೆಸಿಡಿ ಮೈದಾನದಲ್ಲಿ ಕೆಲಹೊತ್ತು ವ್ಯಾಯಾಮ ಮಾಡಿದರಲ್ಲದೇ ಯುವಕರ ಜೊತೆ ಕ್ರಿಕೆಟ್‌ ಆಡಿ ಗಮನ ಸೆಳೆದರು. ಪಕ್ಷದ ಮುಖಂಡರು, ಯುವಕರು, ಅಭಿಮಾನಿಗಳು, ಕಾರ್ಯಕರ್ತರು ಸಾಥ್‌ ನೀಡಿದರು.
ಮತ ಯಾಚನೆ: ನಗರದ ವಾರ್ಡ್‌ 14 ಮತ್ತು 15ರಲ್ಲಿ ಉರಿ ಬಿಸಿಲಿನಲ್ಲೂ ವಿನಯ್‌ ಬಿರುಸಿನ ಪ್ರಚಾರ ನಡೆಸಿ ಮತ ಯಾಚಿಸಿದರು. ಈ ವೇಳೆ ಮಾತನಾಡಿದ ಕುಲಕರ್ಣಿ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬಡವರ ಕಲ್ಯಾಣ ಆಗುವುದರಲ್ಲಿ ಸಂದೇಹವಿಲ್ಲ. ಪ್ರತಿ ತಿಂಗಳು ಬಿಪಿಎಲ್‌ ಕಾರ್ಡ್‌ದಾರರಿಗೆ ಮಾಸಿಕ 6,000 ನೀಡಲಾಗುತ್ತದೆ ಎಂದರು. ಪಾಲಿಕೆ ಸದಸ್ಯ ರಘುನಾಥ, ಲಕ್ಕಣ್ಣವರ, ಇಸ್ಮಾಯಿಲ್‌ ತಮಟಗಾರ ಇನ್ನಿತರರಿದ್ದರು.
ಕಾಂಗ್ರೆಸ್‌ ಮಹಿಳಾ ಘಟಕದ ಸಭೆ ನಾಳೆ
ಹುಬ್ಬಳ್ಳಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಸಮಾವೇಶ ಏ. 10ರಂದು
ಮಧ್ಯಾಹ್ನ 12 ಗಂಟೆಗೆ ಗೋಕುಲ ರಸ್ತೆಯ ಚವ್ಹಾಣ ಗ್ರೀನ್‌ ಗಾರ್ಡನ್‌ನಲ್ಲಿ ನಡೆಯಲಿದೆ. ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ
ಪುಷ್ಪಾ ಅಮರನಾಥ, ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್‌ ಆಳ್ವಾ, ಕಾಂಗ್ರೆಸ್‌-ಜೆಡಿಎಸ್‌ ಅಭ್ಯರ್ಥಿ ವಿನಯ ಕುಲಕರ್ಣಿ, ಸ್ಥಳೀಯ ಶಾಸಕರು, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ತಾರಾದೇವಿ ವಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ