ಕ್ಷೇತ್ರಾಭಿವೃದ್ಧಿಗೆ ವಿನಯ್‌ ಗೆಲ್ಲಿಸಿ

Team Udayavani, Apr 16, 2019, 11:41 AM IST

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಪರವಾಗಿ ಲಿಡ್ಕರ್‌ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ 55ನೇ ವಾರ್ಡ್‌ನಲ್ಲಿ ಮತಯಾಚನೆ ನಡೆಸಿದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ವಿನಯ ಕುಲಕರ್ಣಿ ಅವರು ಉತ್ತಮ ಕೆಲಸಗಾರರಾಗಿದ್ದು, ಜಿಲ್ಲಾ ಸಚಿವರಾಗಿದ್ದ ಸಂದರ್ಭದಲ್ಲಿ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಕ್ಷೇತ್ರದ ಹಾಗೂ ಜಿಲ್ಲೆಯ ಮತ್ತಷ್ಟು ಅಭಿವೃದ್ಧಿಗೆ ಈ ಬಾರಿ ವಿನಯ ಕುಲಕರ್ಣಿ ಅವರಿಗೆ ತಮ್ಮ ಅತ್ಯಮೂಲ್ಯವಾದ ಮತ ನೀಡಿ ಜಿಲ್ಲೆಯ ಚಿತ್ರಣ ಬದಲಿಸಲು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಅಕ್ಕಿಹೊಂಡ, ಬೂಸ್‌ ಪೇಟೆ, ತಂಬದ ಓಣಿ, ಹೂಗಾರ ಓಣಿ, ಎಲಿಪೇಟೆ, ಗಬ್ಬೂರು ಗಲ್ಲಿ, ಇದ್ಲಿ ಓಣಿ, ಬಡಿಗೇರ ಓಣಿ, ಚೋಳನವರ ಓಣಿ ಸುತ್ತಲಿನ ಪ್ರದೇಶಗಳ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಮುಖಂಡರಾದ ತಾರಾದೇವಿ ವಾಲಿ, ಮೆಹಮೂದ ಕೋಳೂರು, ವಿಜಯಕುಮಾರ ಕುಂದನಹಳ್ಳಿ, ಮೋಹನ ಅಸುಂಡಿ, ವಿಜುನಗೌಡ ಪಾಟೀಲ, ಎಸ್‌.ಕೆ. ಪಾಟೀಲ, ಶೇಖಣ್ಣ ಹೂಗಾರ, ವಿರೂಪಾಕ್ಷಿಗೌಡ ಪಾಟೀಲ, ಗುರುಸಿದ್ಧಗೌಡ ಪಾಟೀಲ, ಕೊಟ್ರೇಶಗೌಡ ಪಾಟೀಲ, ಬಸವರಾಜ ಅಂಗಡಿ, ರಿಯಾಜ್‌ ಗೌಂಡಿ, ಶಫಿ ಶಿರಗುಪ್ಪಿ, ಶಬ್ಬೀರ್‌ ಚುಹೇ, ಚಂದ್ರಶೇಖರ ಅಲಗುಂಡಗಿ, ಶ್ರೀನಿವಾಸ ಮುರಗೋಡ, ರಾಜೇಶ್ವರಿ ಬಿಲಾನಾ, ಶಾಬೀರಾ ಬೆಣ್ಣಿ, ಹೇಮಲತಾ ಶಿವಮಠ, ಪುಷ್ಪಾ ಅರಳೀಕಟ್ಟಿ ಇನ್ನಿತರರಿದ್ದರು.
ನರೇಗಾ ಕೂಲಿ ಕಾರ್ಮಿಕರಿಗೆ ರಾಜ್ಯ ಬೊಕ್ಕಸದಿಂದಲೇ 500 ಕೋಟಿ
 ಹುಬ್ಬಳ್ಳಿ: ನರೇಗಾ ಯೋಜನೆಯಡಿ ರಾಜ್ಯಕ್ಕೆ ಬರಬೇಕಾದ ಅಂದಾಜು 2,100 ಕೋಟಿ ರೂ.ಗಳನ್ನು ಕೇಂದ್ರ ಸರಕಾರ ನೀಡಿಲ್ಲ. ರಾಜ್ಯ ಸರಕಾರದ ಬೊಕ್ಕಸದಿಂದಲೇ 500 ಕೋಟಿ ರೂ. ಭರಿಸಿ ನರೇಗಾ ಕೂಲಿ ಕಾರ್ಮಿಕರಿಗೆ ವೇತನ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಅವರು, ನರೇಗಾ ಯೋಜನೆಯಡಿ ಕೇಂದ್ರ ಸರಕಾರ 2016-17, 2017-18 ಹಾಗೂ 2018-19ನೇ ಸಾಲಿನಲ್ಲಿ ಒಟ್ಟು 2100 ಕೋಟಿ ರೂ. ಬಾಕಿ ಹಣ ನೀಡಬೇಕಾಗಿದೆ.
ನರೇಗಾ ಯೋಜನೆಯಡಿ ಹಣ ಬಿಡುಗಡೆ ಮಾಡಲು ತನ್ನ ಬಳಿ ಹಣವಿಲ್ಲ. ನೀವೇ ಪಾವತಿಸಿ ಎಂದು ಕೇಂದ್ರ ಹೇಳಿದ್ದರಿಂದ ಕೂಲಿ ಕಾರ್ಮಿಕರ ಹಿತದೃಷ್ಟಿಯಿಂದ ರಾಜ್ಯ ಸರಕಾರವೇ 500 ಕೋಟಿ ರೂ. ಭರಿಸಿದೆ ಎಂದರು.
ಆರೋಪದಲ್ಲಿ ಹುರುಳಿಲ್ಲ; ಧಾರವಾಡ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ ವಿನಯ ಕುಲಕರ್ಣಿ ಲಿಂಗಾಯತರ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆಂಬ ಆರೋಪದಲ್ಲಿ ಹುರುಳಿಲ್ಲ. ಧರ್ಮದ ವಿಚಾರ ರಾಜಕೀಯಕ್ಕೆ ಬಳಸುವುದು ಸರಿಯಲ್ಲ. ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಚುನಾವಣೆ ವಿಷಯವೇ ಅಲ್ಲ ಎಂದು ಹೇಳಿದರು.
ಸಂವಿಧಾನ ಬದಲಿಸುವ ಬಿಜೆಪಿಗೆ ಮತ ಬೇಡ: ಹೆಣ್ಣೂರ ಶ್ರೀನಿವಾಸ 
ಹುಬ್ಬಳ್ಳಿ: ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುವ ಪಕ್ಷಕ್ಕೆ ಮತ ನೀಡದೆ ದಲಿತರ ಉದ್ಧಾರಕ್ಕೆ ಇರುವ ಪಕ್ಷಕ್ಕೆ ಮತ ನೀಡಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಹೆಣ್ಣೂರ ಶ್ರೀನಿವಾಸ ಸುದ್ದಿಗೋಷ್ಠಿಯಲ್ಲಿ ಹೇಳಿದರು. ನಾನೊಬ್ಬ ಕಾವಲುಗಾರ ಎನ್ನುವ ಮೂಲಕ ಪ್ರಧಾನಮಂತ್ರಿ ಸ್ಥಾನಕ್ಕೆ ಅಗೌರವ ಸೂಚಿಸಿದವರಿಗೆ ಮತ ನೀಡಬೇಡಿ. ನಾನೊಬ್ಬ ಕಾವಲುಗಾರ ಎನ್ನುವ ಇವರು ದೇಶದಲ್ಲಿ ನೂರಾರು ಕೆಜಿ ಆರ್‌ ಡಿಎಕ್ಸ್‌ ಬರುತ್ತದೆ ಎಂದರೆ ಹೇಗೆ ಸಾಧ್ಯ. ತಮ್ಮವರೇ ಗೋ ಮಾಂಸ ರಫ್ತು ಮಾಡುತ್ತಾರೆ, ಇನ್ನೊಂದೆಡೆ ಗೋ ಹತ್ಯೆ ನಿಷೇಧಿಸಬೇಕೆಂದು ಒತ್ತಾಯಿಸುತ್ತಾರೆ. ಮಗುವನ್ನು ಚಿವುಟುವವರು ಇವರೇ, ಸಮಾಧಾನ ಮಾಡುವವರೂ ಇವರೇ. ಆದ್ದರಿಂದ ದಲಿತರ ಉದ್ಧಾರಕ್ಕೆ ಇರುವ ಪಕ್ಷಕ್ಕೆ ಮತ ನೀಡುವ ಮೂಲಕ ಎಲ್ಲರೂ ಬಿಜೆಪಿಗೆ ಬುದ್ಧಿ ಕಲಿಸಬೇಕೆಂದರು.
ಬಿಜೆಪಿಯಿಂದ ಮಾತಿನಲ್ಲೇ ದಾರಿ ತಪ್ಪಿಸುವ ಕೆಲಸ
ಕುಂದಗೋಳ: ಸುಳ್ಳಿಗೆ ಪ್ರಸಿದ್ಧರಾದ ಬಿಜೆಪಿಯವರು ಜನತೆಗೆ ನೀಡಿದ ಭರವಸೆಗಳಲ್ಲಿ ಒಂದನ್ನೂ ಈಡೇರಿಸದೆ ಕೇವಲ ಮಾತಿನಲ್ಲೇ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಹೇಳಿದರು. ಕೂಬಿಹಾಳ, ಕಮಡೊಳ್ಳಿ ಗ್ರಾಮಗಳಲ್ಲಿ ರೋಡ್‌ ಶೋ ನಡೆಸಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ಕಪ್ಪು ಹಣ ತಂದು ಜನರ ಖಾತೆಗೆ ಹಾಕುವುದಾಗಿ ಹೇಳಿದ್ದ ಮೋದಿಯವರು ಇದುವರೆಗೆ 10 ಪೈಸೆಯನ್ನೂ ಖಾತೆಗೆ ಜಮೆ ಮಾಡಿಲ್ಲ. ಜನತೆ ದುಡ್ಡಿನಲ್ಲೇ ವಿದೇಶ ಸುತ್ತಿದ ಅವರು ಕಿಂಚಿತ್ತೂ ಅಭಿವೃದ್ಧಿ ಮಾಡಿಲ್ಲ ಎಂದು ಹರಿಹಾಯ್ದರು.
ದೇಶದಲ್ಲಿ ವಿದ್ಯಾವಂತರು ಉದ್ಯೋಗವಿಲ್ಲದೆ ಅಲೆಯುತ್ತಿದ್ದು, ಯುವಕರ ಉತ್ಸಾಹ ಕುಗ್ಗಿಸಲಾಗುತ್ತಿದೆ. ನಿರುಪಯುಕ್ತವಾದ ಫಸಲು ವಿಮೆ ಯೋಜನೆಯಿಂದ ಜನತೆ ಬೇಸತ್ತಿದ್ದಾರೆ. ಬಿಜೆಪಿಗೆ ತಕ್ಕಪಾಠ ಕಲಿಸಲು ಕಾಂಗ್ರೆಸ್‌ ಬೆಂಬಲಿಸಿ ಎಂದು ಮನವಿ ಮಾಡಿದರು.
ವಿಪ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿದ್ದು, ಮಿತ್ರ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಬೇಕೆಂದರು. ಎಂ.ಎಸ್‌. ಅಕ್ಕಿ, ಕುಸುಮಾ ಶಿವಳ್ಳಿ, ಉಮೇಶ ಹೆಬಸೂರ, ಸುರೇಶಗೌಡ ಪಾಟೀಲ, ಷಣ್ಮುಖ ಶಿವಳ್ಳಿ, ಅರವಿಂದ ಕಟಗಿ ಇದ್ದರು.
ಸಂವಿಧಾನ ಉಳಿಸಲು ಕಾಂಗ್ರೆಸ್‌ ಗೆಲ್ಲಿಸಿ: ಅಲ್ಕೋಡ
ಧಾರವಾಡ: ದೇಶದಲ್ಲಿ ಏಕರೂಪ ಕಾನೂನು ಜಾರಿಗೆ ತರುವುದಾಗಿ ಹೇಳಿರುವ ಬಿಜೆಪಿ, ಸಂವಿಧಾನ ಬದಲು ಮಾಡುವ ಉದ್ದೇಶದಿಂದಲೇ ಈ ರೀತಿ ಹೇಳಿದೆ. ಆದ್ದರಿಂದ ಸಂವಿಧಾನ ಉಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಬೇಕು ಎಂದು ಮಾಜಿ ಸಚಿವ ಅಲ್ಕೋಡ ಹನುಮಂತಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೇಂದ್ರ ಸರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗೆ ಯಾವುದೇ ಯೋಜನೆಗಳನ್ನು ನೀಡಿಲ್ಲ. ಹಿಂದುಳಿದ ಜನರಿಗೆ ಯಾವುದೇ ಯೋಜನೆಗಳನ್ನು ನೀಡದೆ ಅನ್ಯಾಯ ಮಾಡಿದ್ದಾರೆ. ಹೀಗಾಗಿ ಈ ಚುನಾವಣೆಯಲ್ಲಿ ಈ ಪಂಗಡದ ಜನರು ಬಿಜೆಪಿಗೆ ಬೆಂಬಲ ನೀಡದೇ ಕಾಂಗ್ರೆಸ್‌ಗೆ ಬೆಂಬಲ ನೀಡಬೇಕು ಎಂದರು. ಇಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ಉಳಿಸುವ ಚುನಾವಣೆಗಳು ನಡೆಯುತ್ತಿಲ್ಲ. ಹಣ ಇದ್ದವರಿಗೆ ಮಾತ್ರ ಚುನಾವಣೆ ನಡೆಸುವಂತಾಗಿದೆ. ಹೀಗಾಗಿ ಈ ವಿಷಯವನ್ನು ಚುನಾವಣೆ ಆಯೋಗ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಪ್ರಜಾಪ್ರಭುತ್ವ ಉಳಿವಿಗಾಗಿ ಕೈಗೆ ಮತ ನೀಡಿ: ಮತ್ತಿಕಟಿ
ಧಾರವಾಡ: ದೇಶದಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್‌ ಪಕ್ಷಕ್ಕೆ ಮತದಾರರು ತಮ್ಮ ಅಮೂಲ್ಯವಾದ ಮತ ನೀಡಬೇಕು ಎಂದು ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಗೌರವ ನೀಡುವ ಕಾಂಗ್ರೆಸ್‌ ಮತ್ತೆ ಅಧಿಕಾರ ಹಿಡಿಯಲು ಮತದಾರರು ಆಶೀರ್ವಾದ ಮಾಡಬೇಕು.
ದೇಶದಲ್ಲಿ ಮೋದಿ, ಅಮಿತ್‌ ಶಾ ಅವರ ನೇತೃತ್ವದಲ್ಲಿ ನಡೆಯುವ ಚುನಾವಣೆಗಳು ಜಾತಿ-ಜನಾಂಗ, ಸ್ಲೋಗನ್‌ಗಳು ಸೇರಿದಂತೆ ಹಿಂದುತ್ವದ ಆಧಾರದಲ್ಲಿ ನಡೆಯುತ್ತಿವೆ. ಇದರಿಂದ ದೇಶಕ್ಕೆ ಅಪಾಯವಿದ್ದು, ದೇಶದ ಏಕತೆ ಹಾಳಾಗುತ್ತಲಿದೆ ಎಂದರು.
ಬಿಜೆಪಿಯವರು ಮಾತೆತ್ತಿದರೆ ಕಾಂಗ್ರೆಸ್‌ ಪಕ್ಷ 60 ವರ್ಷದಲ್ಲಿ ಏನೂ ಮಾಡಿಲ್ಲ ಏನುತ್ತಾರೆ. ಮೋದಿ ಒಬ್ಬ ಸುಳ್ಳಿನ ಸರದಾರ. ಜನರಲ್ಲಿ ಭಾವನಾತ್ಮಕ ವಿಷಯಗಳನ್ನು ಕೆದಕಿ ಚುನಾವಣೆಗಳನ್ನು ನಡೆಸುವ ಮೂಲಕ ಜನತೆಯ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ದೂರಿದರು. ವಿನಯ ಕುಲಕರ್ಣಿ ವಿದ್ಯಾರ್ಥಿ ದಿಶೆಯಿಂದ ಹೋರಾಟ ಮಾಡುತ್ತಾ ಜನಪರ ಕಾಳಜಿ ಹೊಂದಿದ್ದು, ಹಿಂದಿನ ಸರಕಾರದಲ್ಲಿಯೂ ಸಚಿವರಾಗಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹೀಗಾಗಿ ಈ ಬಾರಿ ನಡೆಯುವ ಚುನಾವಣೆಯಲ್ಲಿ ವಿನಯ ಕುಲಕರ್ಣಿ ಗೆಲುವಾಗಲಿದೆ ಎಂದರು.
ಮನೆ ಮಗನನ್ನು ಗೆಲ್ಲಿಸಿ: ಎಂ.ಬಿ. ಪಾಟೀಲ ಮನವಿ
ಅಣ್ಣಿಗೇರಿ:
ನನ್ನ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಬೇಕೆಂದು ಸ್ವತಃ ಮೋದಿ, ಅಮಿತ್‌ ಶಾ ಮತ್ತಿತರರು ಬಂದು ತಿಪ್ಪರಲಾಗ ಹಾಕಿದರೂ ಸೋಲಿಸಲಾಗಲಿಲ್ಲ. ಮೊದಲಿಗಿಂತ ಹೆಚ್ಚಿನ ಬಹುಮತದಲ್ಲಿ ನಾನು ಆರಿಸಿ ಬಂದೆ. ಅದೇ ರೀತಿ ಅತ್ಯ ಧಿಕ ಬಹುಮತ ನೀಡುವ ಮೂಲಕ ಮನೆ ಮಗ ವಿನಯ ಕುಲಕರ್ಣಿಯನ್ನು ಈ ಕ್ಷೇತ್ರದಲ್ಲಿ ಗೆಲ್ಲಿಸಬೇಕೆಂದು ಗೃಹ ಸಚಿವ ಎಂ.ಬಿ. ಪಾಟೀಲ ಮನವಿ ಮಾಡಿದರು. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪಕ್ಷದ ಅಭ್ಯರ್ಥಿ ವಿನಯ ಕುಲಕರ್ಣಿ ಪರವಾಗಿ ಪಟ್ಟಣದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು  ತನಾಡಿದರು.
ಮಾಜಿ ಸಂಸದ ಐ.ಜಿ. ಸನದಿ, ವೀರಣ್ಣ ಮತ್ತಿಕಟ್ಟಿ , ಎನ್‌.ಎಚ್‌. ಕೋನರಡ್ಡಿ, ಸಚಿವ ಆರ್‌.ವಿ. ದೇಶಪಾಂಡೆ, ಕೆ.ಎನ್‌.ಗಡ್ಡಿ, ಆರ್‌.ಬಿ. ಶಿರಿಯಣ್ಣವರ, ಬಿ.ಬಿ. ಗಾಧರಮಠ, ಬಾಪುಗೌಡ ಪಾಟೀಲ, ವಿನೋದ ಅಸೂಟಿ, ರಾಜಶೇಖರ ಮೆಣಸಿನಕಾಯಿ, ಮಂಜುನಾಥ ಮಾಯಣ್ಣವರ, ಶಂಕ್ರಪ್ಪ ಕುರಿ ಇನ್ನಿತರರಿದ್ದರು. ದೇಸಾಯಿಗೌಡ ಪಾಟೀಲ, ಬಸನಗೌಡ ಪಾಟೀಲ, ಶಂಕರರಾವ್‌ ಸಿಕ್ಕೇದೇಸಾಯಿ, ಮುತ್ತಣ್ಣ ಹಾಳದೋಟರ, ಶರಣಪ್ಪ ವಡ್ಡಟ್ಟಿ ಮತ್ತಿತರ ಪ್ರಮುಖರು ಬಿಜೆಪಿಯಿಂದ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಧಾರವಾಡ: ಅತಿಯಾದ ಮಳೆಯಿಂದಾಗಿ ಜಿಲ್ಲೆಯಲ್ಲಿ ಆಗಿರುವ ಹಾನಿ ಕುರಿತ ವರದಿಯನ್ನು ಎಲ್ಲ ಜನಪ್ರತಿನಿಧಿಗಳಿಗೆ ನೀಡಬೇಕು ಎಂದು ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ...

  • ಹುಬ್ಬಳ್ಳಿ: ನಗರದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಗೆ ನಗರದಲ್ಲಿರುವ ಬಹುತೇಕ ಸರಕಾರಿ ಶಾಲೆಗಳು ಸೋರಿವೆ, ಕೆಲವೊಂದು ಶಾಲೆಗಳು ಬಿರುಕು ಬಿಟ್ಟಿವೆ, ಒಂದೆರಡು...

  • ಹುಬ್ಬಳ್ಳಿ: ಎಟಿಎಂ ಕೇಂದ್ರಗಳಲ್ಲಿನ ವ್ಯವಹಾರಗಳಿಗೆ ಮತ್ತಷ್ಟು ಸುರಕ್ಷತೆ ಒದಗಿಸಲು ಕೆನರಾ ಬ್ಯಾಂಕ್‌ ಮುಂದಾಗಿದ್ದು, ಇನ್ಮುಂದೆ ಎಟಿಎಂನಿಂದ ಹಣ ಪಡೆಯಲು ಒಟಿಪಿ...

  • ಹುಬ್ಬಳ್ಳಿ: ಮಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ ಎಂಬಂತೆ ಸತತ ಮಳೆಯಿಂದಾಗಿ ಬೆಳೆ ನಾಶವಾಗಿ, ಮನೆಗಳಿಗೆ ನೀರು ನುಗ್ಗಿ ಹಾನಿಯಾಯಿತು. ನೆರೆಯಿಂದಾಗಿ ನವಲಗುಂದ ತಾಲೂಕಿನಲ್ಲಿ...

  • ಹುಬ್ಬಳ್ಳಿ: ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ನಿರ್ದೇಶನದಂತೆ ನ.1ರಿಂದ ಬೆಳಗಾವಿ-ಬೆಂಗಳೂರು (06526/06525) ಸೂಪರ್‌ಫಾಸ್ಟ್‌ ತತ್ಕಾಲ್ ಸ್ಪೇಷಲ್ ರೈಲನ್ನು ಪ್ರತಿದಿನ...

ಹೊಸ ಸೇರ್ಪಡೆ