ಹೊಸವರ್ಷದಿಂದ ಅವಳಿನಗರದಲ್ಲಿ 3 ದಿನಕ್ಕೊಮ್ಮೆ ನೀರು

Team Udayavani, Sep 10, 2019, 9:45 AM IST

ಹುಬ್ಬಳ್ಳಿ: ಕಲಘಟಗಿ ತಾಲೂಕಿನ ನೀರಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಲಾಯಿತು.

ಹುಬ್ಬಳ್ಳಿ: ಡಿಸೆಂಬರ್‌ ನಂತರ ಮಹಾನಗರದಲ್ಲಿ 3 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ತಿಳಿಸಿದರು.

ಕಲಘಟಗಿ ತಾಲೂಕಿನ ನೀರಸಾಗರ ಜಲಾಶಯಕ್ಕೆ ಸೋಮವಾರ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಉತ್ತಮ ಮಳೆಯಾಗಿ ನೀರಸಾಗರ ಹಾಗೂ ಮಲಪ್ರಭಾ ಜಲಾಶಯ ತುಂಬಿದ್ದರಿಂದ ಮಹಾನಗರದ ನೀರಿನ ಸಮಸ್ಯೆ ನೀಗಿದಂತಾಗಿದೆ. ಸದ್ಯ 8-10 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಇನ್ನೊಂದು 10 ದಿನದಲ್ಲಿ 5 ದಿನಕ್ಕೊಮ್ಮೆ ಸರಬರಾಜು ಆಗಲಿದೆ. ಈ ನಿಟ್ಟಿನಲ್ಲಿ ಜಲಮಂಡಳಿ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಯಾವುದೇ ಕಾರಣಕ್ಕೂ 5 ದಿನಕ್ಕಿಂತ ಹೆಚ್ಚಿಗೆ ಮೀರಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನೀರಸಾಗರ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರು ಮುಂದಿನ ಒಂದೂವರೆ ವರ್ಷ ಸಾಲುತ್ತದೆ ಎಂದರು.

ಮಲಪ್ರಭಾ ಜಲಾಶಯದಿಂದ ಹೆಚ್ಚುವರಿಯಾಗಿ 40 ಎಂಎಲ್ಡಿ ನೀರು ಪೂರೈಕೆ ಮಾಡುವ ಕಾಮಗಾರಿ ನಡೆಯುತ್ತಿದ್ದು, ಡಿಸೆಂಬರ್‌ ಅಂತ್ಯದೊಳಗೆ ಸಂಪೂರ್ಣ ಕಾಮಗಾರಿ ಮುಗಿಯಲಿದೆ. ಹೀಗಾಗಿ ಡಿಸೆಂಬರ್‌ ಅಂತ್ಯ ಅಥವಾ ಜನೆವರಿ ತಿಂಗಳ ಆರಂಭದಿಂದ 40 ಎಂಎಲ್ಡಿ ಹಾಗೂ ನೀರಸಾಗರ ಜಲಾಶಯದಿಂದ 40 ಎಂಎಲ್ಡಿ ನೀರು ದೊರೆಯವುದರಿಂದ ನೀರು ಪೂರಕೆ ಅವಧಿ 3 ದಿನಕ್ಕೆ ಬರಲಿದೆ. ಈ ವ್ಯವಸ್ಥೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಯೋಜನೆ ಸಿದ್ಧಪಡಿಸಿದ್ದಾರೆ. ಇನ್ನೂ ಕೆಲ ವಾರ್ಡ್‌ಗಳಲ್ಲಿನ 24/7 ಯೋಜನೆಯಿದ್ದರೂ ನಿತ್ಯ ಎರಡು ಗಂಟೆ ನೀರು ಬರುತ್ತಿದ್ದ ಕಡೆಗಳಲ್ಲಿ ನಿರಂತರ ನೀರು ದೊರೆಯಲಿದೆ ಎಂದು ತಿಳಿಸಿದರು.

ಸಗಟು ನೀರು ಯೋಜನೆ: ಸದ್ಯ ಮಲಪ್ರಭಾ ಜಲಾಶಯದಿಂದ 142, ನೀರಸಾಗರದಿಂದ 40 ಎಂಎಲ್ಡಿ ನೀರು ಮಹಾನಗರಕ್ಕೆ ಪೂರೈಕೆಯಾಗುತ್ತಿದ್ದು, 40 ಎಂಎಲ್ಡಿ ನೀರು ಪೂರೈಸುವ ಕಾಮಗಾರಿ ಮುಗಿದ ನಂತರ ನಗರದ ನೀರಿನ ಸಮಸ್ಯೆ ನೀಗಲಿದೆ. 2055 ಕ್ಕೆ ಅವಳಿನಗರದ ಜನಸಂಖ್ಯೆ 19.35 ಲಕ್ಷ ಆಗಲಿದೆ ಎಂಬ ಅಂದಾಜಿನೊಂದಿಗೆ 334 ಕೋಟಿ ರೂ. ವೆಚ್ಚದ ಸಗಟು ನೀರು ಯೋಜನೆ ಸಿದ್ಧಪಡಿಸಲಾಗಿದೆ. ಇದರಿಂದ 2055 ವೇಳೆಗೆ ನಿತ್ಯ 382 ಎಂಎಲ್ಡಿ ನೀರು ಬೇಡಿಕೆ ಈಡೇರಲಿದೆ.

ಈ ಬೇಡಿಕೆಯನ್ನು ಈಡೇರಿಸಲು 334 ಕೋಟಿ ರೂ. ವೆಚ್ಚದಲ್ಲಿ ಮಲಪ್ರಭಾ ಜಲಾಶಯದಲ್ಲಿ ಹೆಡ್‌ವರ್ಕ್ಸ್, ಜಲಾಶಯದಿಂದ ಅಮ್ಮಿನಬಾವಿವರೆಗೆ ಕೊಳವೆ ಮಾರ್ಗ, ಅಮ್ಮಿನಬಾವಿಯಲ್ಲಿ 100 ಎಂಎಲ್ಡಿ ಜಲ ಶುದ್ಧೀಕರಣ ಘಟಕ ಸೇರಿದಂತೆ ವಿವಿಧ ಕಾರ್ಯಗಳು ಪ್ರಸ್ತಾವನೆಯಲ್ಲಿವೆ. ಹು-ಧಾ ಮಹಾನಗರ, 31 ಗ್ರಾಮಗಳು ಹಾಗೂ ಕುಂದಗೋಳ ಪಟ್ಟಣಕ್ಕೆ ನೀರಿನ ಬೇಡಿಕೆ ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಒಳ ಚರಂಡಿ ಯೋಜನೆ: ಈಗಾಗಲೇ ಮಹಾನಗರದಲ್ಲಿ ಸ್ಥಳೀಯ ಸಂಸ್ಥೆ ಹಾಗೂ ಎಬಿಡಿ ಸಾಲದಿಂದ 818 ಕಿಮೀ ಒಳ ಚರಂಡಿ ಕೊಳವೆ ಮಾರ್ಗ ಅಳವಡಿಸಲಾಗಿದೆ. ಈ ಯೋಜನೆಗಳಲ್ಲಿ ಹೊಸ ಬಡಾವಣೆ ಸೇರಿದಂತೆ ಕೆಲ ಪ್ರದೇಶಗಳು ಕೈಬಿಟ್ಟು ಹೋಗಿವೆ. ಈ ಎಲ್ಲಾ ಪ್ರದೇಶಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎನ್ನುವ ನಿಟ್ಟಿನಲ್ಲಿ 430 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ. ಇದರಿಂದ 280 ಕಿಮೀ ಒಳಚರಂಡಿ ಕೊಳವೆ ಮಾರ್ಗ, ಮನೆಗಳಿಂದ ಒಳಚರಂಡಿ ಮಾರ್ಗಕ್ಕೆ ಸಂಪರ್ಕ ಕಲ್ಪಿಸಲಾಗುತ್ತದೆ. ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳನ್ನು ಯೋಜನೆಗೆ ಸೇರಿಸಲಾಗಿದೆ ಎಂದು ವಿವರಿಸಿದರು.

ಶಾಸಕರಾದ ಸಿ.ಎಂ. ನಿಂಬಣ್ಣವರ, ಅಮೃತ ದೇಸಾಯಿ, ಜಿಲ್ಲಾಧಿಕಾರಿ ದೀಪಾ ಚೋಳನ್‌, ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಉಪವಿಭಾಗಾಧಿಕಾರಿ ಮಹ್ಮದ್‌ ಜುಬೇರ, ಜಲಮಂಡಳಿ ಸಿಇ ಡಿ. ರಾಜು, ಎಸ್‌.ಎಸ್‌. ರಾಜಗೋಪಾಲ, ಮಾಜಿ ಶಾಸಕರಾದ ಅಶೋಕ ಕಾಟವೆ, ಸೀಮಾ ಮಸೂತಿ, ಪಾಲಿಕೆ ಮಾಜಿ ಸದಸ್ಯರು ಇದ್ದರು.

ನಿರಂತರ ನೀರು ಯೋಜನೆ 3 ವರ್ಷದಲ್ಲಿ ಪೂರ್ಣ

ಮಹಾನಗರದಲ್ಲಿ 24/7 ನೀರು ಪೂರೈಕೆ ಯೋಜನೆ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸಲಾಗಿದೆ. ಈಗಾಗಲೇ 65 ಸಾವಿರ ಮನೆಗಳಿಗೆ ನಿರಂತರ ನೀರು ಕೊಡುತ್ತಿದ್ದು, ಉಳಿದ 66 ಸಾವಿರ ಮನೆಗಳಿಗೆ ಯೋಜನೆ ವಿಸ್ತರಿಸಲು 295 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಶೀಘ್ರದಲ್ಲಿ ಸರಕಾರಕ್ಕೆ ಸಲ್ಲಿಸಿ ಮಂಜೂರಾತಿ ಪಡೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವೆ. ಸರಕಾರ ಆದಷ್ಟು ಬೇಗ ಮಂಜೂರಾತಿ ನೀಡುವ ಭರವಸೆಯಿದ್ದು, ಅನುಮೋದನೆ ನೀಡಿದ ಮೂರು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಿ ನೀರು ಕೊಡುವ ಕಾರ್ಯ ಆರಂಭವಾಗಲಿದೆ ಎಂದು ಜಗದೀಶ ಶೆಟ್ಟರ ತಿಳಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ