ಭಕ್ತರ ಅಭಿಷ್ಟ ಈಡೇರಿಸುವ ಕಕ್ಕೇರಿ ಬಿಷ್ಟಾ ದೇವಿ

Team Udayavani, Oct 7, 2019, 10:54 AM IST

ಅಳ್ನಾವರ: ಪಟ್ಟಣಕ್ಕೆ ಸಮೀಪದಲ್ಲಿರುವ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಅ. 7ರಿಂದ ಜಾತ್ರಾ ಮಹೋತ್ಸವ ಜರುಗಲಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ.

ಉತ್ತರ ಕರ್ನಾಟಕದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಕಕ್ಕೇರಿ ಗ್ರಾಮದ ಬಿಷ್ಟಮ್ಮ ದೇವಿಯ ಜಾತ್ರೆ ವರ್ಷಕ್ಕೊಮ್ಮೆ ಜರುಗುತ್ತದೆ. 12ನೇ ಶತಮಾನದ ಶ್ರೇಷ್ಠ ವಚನಕಾರ ಹಾಗೂ ವಿಶ್ವಗುರು ಬಸವಣ್ಣನ ಸಮಕಾಲೀನರಾದ ಡೋಹರ ಕಕ್ಕಯ್ಯನ ಧರ್ಮಪತ್ನಿ ಹಾಗೂ ಸಾಧ್ವಿ ಬಿಷ್ಟಮ್ಮ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ನೆಲೆನಿಂತು ತನ್ನನ್ನು ನಂಬಿದ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಿದ್ದಾಳೆ.

ಬಿಷ್ಟಾದೇವಿ ಇತಿಹಾಸ: 12ನೇ ಶತಮಾನದಲ್ಲಿ ಬಿಜ್ಜಳ ರಾಜ್ಯದವರು ಸಂತರು ಹಾಗೂ ಶರಣರ ಮೇಲೆ ನಡೆಸಿದ ದಾಳಿ ಹಾಗೂ ಈಗಿನ ಕಿತ್ತೂರು ತಾಲೂಕಿನ ಕಾದರವಳ್ಳಿ (ಕಾದೊಳ್ಳಿ) ಬಳಿ ನಡೆದ ಘೋರ ಯುದ್ಧದ ನಂತರ ವಚನಕಾರ ಡೋಹರ ಕಕ್ಕಯ್ಯ ಕಾದರವಳ್ಳಿಯಿಂದ ಪಶ್ಚಿಮಕ್ಕೆ 15 ಕಿಮೀ ದೂರದಲ್ಲಿ ಬಂದು ನೆಲೆನಿಂತ ಸ್ಥಳ. ಇದು ಕಾಲಾಂತರದಲ್ಲಿ ಕಕ್ಕೇರಿಯಾಗಿ ಪ್ರಸಿದ್ಧಿ ಪಡೆಯಿತು. ಕಕ್ಕಯ್ಯನ ಪತ್ನಿ ಬಿಷ್ಟಾದೇವಿ ತನ್ನ ದೈವಭಕ್ತಿ ಹಾಗೂ ವಿಶಿಷ್ಟ ಪವಾಡಗಳ ಮೂಲಕ ಜನರ ಸಮಸ್ಯೆಗಳನ್ನು ಬಗೆಹರಿಸಿ ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸಿ ಈ ಭಾಗದ ಜನಮಾನಸದಲ್ಲಿ ನೆಲೆ ನಿಂತಿದ್ದಾಳೆ. ಡೋಹರ ಕಕ್ಕಯ್ಯ ಉಳವಿಗೆ ಹೋಗುವ ಮಾರ್ಗದಲ್ಲಿ ಇದೇ ಸ್ಥಳದಲ್ಲಿ ಕಳಚೂರಿ ಸೈನ್ಯದೊಂದಿಗೆ ಹೋರಾಡಿ ವೀರಮರಣವನ್ನಪ್ಪಿದ್ದು, ಈ ಗ್ರಾಮದ ಅನತಿ ದೂರದಲ್ಲಿ ಅವರ ಸಮಾಧಿ  ಸ್ಥಳವಿದೆ. ಪ್ರತಿ ವರ್ಷ ಶಿವರಾತ್ರಿ ವೇಳೆ ಇಲ್ಲಿ ಕೂಡ ಜಾತ್ರೆ ಜರುಗುತ್ತದೆ.

ಬಿಷ್ಟಾದೇವಿಗೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದಲ್ಲಿ ಸಾವಿರಾರು ಭಕ್ತವೃಂದವಿದೆ. 150 ವರ್ಷಗಳ ಹಿಂದೆ ಕಕ್ಕೇರಿ ಕಿತ್ತೂರು ಸಂಸ್ಥಾನದ ಆಳ್ವಿಕೆಗೆ ಒಳಪಟ್ಟ ಕಾರಣ ಶೂರ ಸಂಗೊಳ್ಳಿ ರಾಯಣ್ಣ ಸೇರಿದಂತೆ ಕಿತ್ತೂರು ಚನ್ನಮ್ಮನ ಆಸ್ಥಾನದ ಸೈನಿಕರು ಯುದ್ಧದಲ್ಲಿ ಜಯ ಗಳಿಸಲು ಕಕ್ಕೇರಿಯ ಬಿಷ್ಟಾದೇವಿಯನ್ನು ಶ್ರದ್ಧೆಯಿಂದ ಪ್ರಾರ್ಥಿಸುತ್ತಿದ್ದರೆಂಬ ಪ್ರತೀತಿಯಿದೆ.

ಪ್ರತಿವರ್ಷ ಆಶ್ವಿ‌ಜ ಮಾಸದ ಶುಕ್ಲಪಕ್ಷದಲ್ಲಿ ಬರುವ ದಸರಾ ಹಬ್ಬದ ಸಂದರ್ಭದಲ್ಲಿ ಈ ದೇವಿಯ ಜಾತ್ರೆ ಮೂರುದಿನಗಳ ಕಾಲ ಜರುಗುತ್ತದೆ. ಪ್ರತಿ ಅಮವಾಸ್ಯೆಯಂದು ದೇವಿ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ.

ಸಂಪರ್ಕ ಸಾಧಿಸೋದು ಹೇಗೆ? : ಕಕ್ಕೇರಿಯು ಬೆಳಗಾವಿ-ತಾಳಗುಪ್ಪ ರಾಜ್ಯ ಹೆದ್ದಾರಿಯಲ್ಲಿ ಖಾನಾಪುರ ಹಾಗೂ ಧಾರವಾಡ ತಾಲೂಕು ಅಳ್ನಾವರ ಪಟ್ಟಣಗಳ ನಡುವೆ ಇದೆ. ಬೆಳಗಾವಿಯಿಂದ 60 ಕಿಮೀ, ಧಾರವಾಡದಿಂದ 50 ಕಿಮೀ, ಅಳ್ನಾವರದಿಂದ 7 ಕಿಮೀ ಹಾಗೂ ಕಿತ್ತೂರಿನಿಂದ 15 ಕಿಮೀ ಅಂತರದಲ್ಲಿದೆ. ಕಕ್ಕೇರಿ ಗ್ರಾಮದ ಹೆದ್ದಾರಿ ಪಕ್ಕದಲ್ಲೇ ಇರುವ ಬಿಷ್ಟಾದೇವಿಯ ಆಲಯಕ್ಕೆ ಭೇಟಿ ನೀಡಲು ಬೆಳಗಾವಿ, ಕಿತ್ತೂರು, ಅಳ್ನಾವರ ಹಾಗೂ ಹಳಿಯಾಳಗಳಿಂದ ಸಮರ್ಪಕ ಸಾರಿಗೆ ಸಂಪರ್ಕವಿದೆ. ಕಕ್ಕೇರಿಯಿಂದ ಕೇವಲ 5 ಕಿಮೀ ದೂರದಲ್ಲಿರುವ ಅಳ್ನಾವರ ರೈಲು ನಿಲ್ದಾಣ ದೇವಾಲಯದ ಅತ್ಯಂತ ಸಮೀಪದ ರೈಲು ನಿಲ್ದಾಣವಾಗಿದೆ.

 

-ಎಸ್‌. ಗೀತಾ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ