ಕೋವಿಡ್ ಭಯ ದೂರ ಮಾಡಲು ಯೋಗಕ್ಕೆ ಮೊರೆ
Team Udayavani, May 31, 2021, 6:30 PM IST
ಅಳ್ನಾವರ: ಇಲ್ಲಿನ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯದಲ್ಲಿ ಪ್ರಾರಂಭಿಸಲಾಗಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ದಾಖಲಿರುವ ಕೋವಿಡ್ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ತಾಲೂಕಾಡಳಿತ ಮಾಡುತ್ತಿದ್ದು, ಅವರಿಗೆ ಮನರಂಜನೆ ಜೊತೆಗೆ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಅವಶ್ಯವಿರುವ ಯೋಗಾಭ್ಯಾಸದಲ್ಲಿಯೂ ತೊಡಗಿಕೊಳ್ಳುವಂತೆ ಮಾಡಲಾಗುತ್ತಿದೆ.
ನಿಯಮಿತವಾಗಿ ಊಟ, ನಿದ್ದೆಯ ಜೊತೆಗೆ ಯೋಗ, ಧ್ಯಾನದಲ್ಲಿಯೂ ಆಸಕ್ತಿ ಮೂಡಿಸಿ ಅವರ ಮನಸ್ಸಿನಲ್ಲಿರುವ ಕೋವಿಡ್ ಭಯವನ್ನು ದೂರ ಮಾಡಲು ಪ್ರಯತ್ನಿಸಲಾಗುತ್ತಿದೆ. ತಹಶೀಲ್ದಾರ್ ಅಮರೇಶ ಪಮ್ಮಾರ ಅವರು ಕೋವಿಡ್ ಕೇಂದ್ರದ ಮೇಲ್ವಿಚಾರಣೆ ಮಾಡುತ್ತಿದ್ದು, ಅವರು ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸುತ್ತಿದ್ದಾರೆ.
ವೇಳೆಗೆ ಸರಿಯಾಗಿ ಊಟ, ಉಪಹಾರ ಹಾಗೂ ಔಷಧಿಗಳು ದೊರೆಯುವಂತೆ ನೋಡಿಕೊಳ್ಳುತ್ತಿದ್ದಾರೆ. ಸೋಂಕಿತರೊಂದಿಗೆ ಚರ್ಚಿಸಿ ಅವರ ಆರೋಗ್ಯದ ಬಗ್ಗೆಯೂ ಕಾಳಜಿ ಮಾಡುತ್ತಿರುವ ತಹಶೀಲ್ದಾರರು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಚಟುವಟಿಕೆಯಲ್ಲಿ ತೊಡಗುವಂತೆ ಪ್ರೇರೇಪಿಸುತ್ತಿದ್ದಾರೆ.
ಪಟ್ಟಣ ಪಂಚಾಯತ: ಕೋವಿಡ್ ಕೇಂದ್ರದಲ್ಲಿ ಅವಶ್ಯವಿರುವ ನೀರು ಬೆಳಕು ಸುಗಮವಾಗಿ ದೊರೆಯುವಂತೆ ಪಟ್ಟಣ ಪಂಚಾಯತ ವತಿಯಿಂದ ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ ತಿಳಿಸಿದ್ದಾರೆ. ಸ್ವತ್ಛತೆಗೆ ಅಗತ್ಯ ಸಿಬ್ಬಂದಿ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಪಟ್ಟಣ ಪಂಚಾಯತಿ ಸದಸ್ಯರು ಸಹ ಕೇಂದ್ರಕ್ಕೆ ಭೇಟಿ ನೀಡಿ ಸೋಂಕಿತರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.