ರಾಷ್ಟ್ರೀಯ ಪಕ್ಷಗಳಿಗೆ ತಲೆ ಬಿಸಿಯಾದ ಪಕ್ಷೇತರರು

ಪುರಸಭೆ ಗದ್ದುಗೆಗೆ ಬಿಜೆಪಿ- ಕಾಂಗ್ರೆಸ್‌-ಜೆಡಿಎಸ್‌ ತೀವ್ರ ಪೈಪೋಟಿ

Team Udayavani, May 22, 2019, 1:35 PM IST

ಇಂಡಿ: 23 ಸದಸ್ಯ ಬಲ ಹೊಂದಿದ ಪುರಸಭೆಗೆ ಮೇ 29ರಂದು ಚುನಾವಣೆ ನಿಗದಿಯಾಗಿದ್ದು ಈಗಾಗಲೇ ರಾಷ್ಟ್ರೀಯ ಪಕ್ಷ, ಪ್ರಾದೇಶಿಕ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳು ಸೇರಿ 93 ಅಭ್ಯರ್ಥಿಗಳು ಕಣದಲ್ಲಿದ್ದು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಪಕ್ಷದ ಟಿಕೆಟ್ ನೀಡಿಲ್ಲ ಎಂದು ಮೂರು ಪಕ್ಷದ ಕೆಲ ಅಭ್ಯರ್ಥಿಗಳು ಬಂಡಾಯವಾಗಿ ಪಕ್ಷೇತರವಾಗಿ ನಿಂತು ಪ್ರಚಾರ ಕೈಗೊಂಡಿದ್ದು ಪಕ್ಷದ ಮುಖಂಡರಿಗೆ ತಲೆ ನೋವಾಗಿ ಪರಿಣಮಿಸಿದೆ.

ಪಟ್ಟಣ ಸೇರಿದಂತೆ ಇಡಿ ತಾಲೂಕು ಭೀಕರ ಬರಗಾಲಕ್ಕೆ ತುತ್ತಾಗಿದೆ. ಈಗ ಸರಾಸರಿ 41 ಡಿಗ್ರಿ ಸೆಲ್ಸಿಯಸ್‌ ಬಿಸಿಲಿನ ಪ್ರಖರತೆ ಇದೆ. ಬಿಸಿಲಿನಿಂದ ಜನ ಹೊರಗಡೆ ಬರದ ಸ್ಥಿತಿಯಲ್ಲಿ ಪುರಸಭೆ ಚುನಾವಣೆ ನಿಗದಿಯಾಗಿದ್ದು ಅಂತಹ ಪ್ರಖರ ಬಿಸಿಲನ್ನೂ ಲೆಕ್ಕಿಸದೆ ಅಭ್ಯರ್ಥಿಗಳು ಮನೆ-ಮನೆಗೆ ಹೋಗಿ ಮತಯಾಚನೆ ಮಾಡುತ್ತಿದ್ದಾರೆ.

ಬಿಜೆಪಿ: ಈ ಹಿಂದಿನ ಅವಧಿಯಲ್ಲಿ ಬಿಜೆಪಿ ಪುರಸಭೆಯಲ್ಲಿ 8 ಸ್ಥಾನ ಗಿಟ್ಟಿಸಿಕೊಂಡಿದ್ದು ಹಿಂದೆ ಬಿಜೆಪಿ ಇಭ್ಭಾಗವಾದಾಗ 3 ಕೆಜೆಪಿ ಸೇರಿ ಒಟ್ಟು 11 ಸ್ಥಾನ ಬಿಜೆಪಿ ಹೊಂದಿತ್ತು. ಈ ಬಾರಿಯೂ ಎಲ್ಲ 23 ವಾರ್ಡ್‌ಗಳಲ್ಲೂ ಬಿಜೆಪಿಯಿಂದ ನಾಮಪತ್ರ ಸಲ್ಲಿಸಲಾಗಿದ್ದು ಪಕ್ಷವನ್ನು ಅಕಾರಕ್ಕೆ ತರಲು ಬಿಜೆಪಿ ಮಂಡಲ ಅಧ್ಯಕ್ಷ ಕಾಸುಗೌಡ ಬಿರಾದಾರ ನೇತೃತ್ವದಲ್ಲಿ ಚುನಾವಣೆ ಪ್ರಚಾರ ಕೈಗೊಳ್ಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಐದು ವರ್ಷದ ಆಡಳಿತದಲ್ಲಿ ಈ ದೇಶಕ್ಕೆ ನೀಡಿದ ಕೊಡುಗೆ ಮತ್ತು ಯೋಜನೆಗಳು, ರಾಜ್ಯದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ ಮಾಡಿದ ಜನಪರ, ರೈತಪರ ಯೋಜನೆಗಳನ್ನು ಜನರಿಗೆ ಮುಟ್ಟಿಸಿ ಮತ ಗಿಟ್ಟಿಸಿಕೊಳ್ಳಲು ಬಿಜೆಪಿ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಪ್ರಯತ್ನಿಸುತ್ತಿದ್ದಾರೆ.

ಕಾಂಗ್ರೆಸ್‌: ಕಾಂಗ್ರೆಸ್‌ ಪಕ್ಷದಿಂದಲೂ ಎಲ್ಲ 23 ವಾರ್ಡ್‌ಗಳಿಗೆ ನಾಮಪತ್ರ ಸಲ್ಲಿಸಲಾಗಿದೆ. ಈ ಹಿಂದಿನ ಅವಧಿಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಒಟ್ಟು ಏಳು ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಏಳು ಜನರನ್ನು ಹೊಂದಿದ್ದರೂ ಪುರಸಭೆಯ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್‌ ಯಶಸ್ವಿಯಾಗಿತ್ತು. ಜೆಡಿಎಸ್‌, ಪಕ್ಷೇತರ ಹಾಗೂ ಕೆಲ ಬಿಜೆಪಿ ಸದಸ್ಯರ ಬೆಂಬಲ ಪಡೆದು ಕಾಂಗ್ರೆಸ್‌ ಪಕ್ಷ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ಶಾಸಕ ಯಶವಂತರಾಯಗೌಡ ಪಾಟೀಲ ಯಶಸ್ವಿಯಾಗಿದ್ದರು.

ಈ ಬಾರಿಯೂ ಸ್ಥಳೀಯವಾಗಿ ಕಾಂಗ್ರೆಸ್‌ ಪಕ್ಷದ ಶಾಸಕರೇ ಇರುವ ಕಾರಣ ಕಾಂಗ್ರೆಸ್‌ ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಸ್ಥಳೀಯ ಶಾಸಕರ ಅಭಿವೃದ್ಧಿ ಕಾರ್ಯಗಳು ಹಾಗೂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜನರಿಗೆ ನೀಡಿದ ಕೊಡುಗೆಗಳ ಕುರಿತು ಹೇಳುತ್ತ ಮತಯಾಚನೆಯಲ್ಲಿ ಕೈ ಕಾರ್ಯಕರ್ತರು ತೊಡಗಿದ್ದಾರೆ.

ಜೆಡಿಎಸ್‌: ಜೆಡಿಎಸ್‌ ಪಕ್ಷದಿಂದ ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಂಡಿ ತಾಲೂಕಿನಲ್ಲಿ ಜೆಡಿಎಸ್‌ ಪಕ್ಷದ ಅಸ್ಥಿತ್ವವೇ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಪ್ರಬಲ ಕುರುಬ ಸಮುದಾಯದ ನಾಯಕ ಬಿ.ಡಿ. ಪಾಟೀಲರ ಹೆಗಲಿಗೆ ಪಕ್ಷದ ಅಧ್ಯಕ್ಷಗಿರಿ ಸಿಕ್ಕ ನಂತರ ಪಕ್ಷದ ಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ 41 ಸಾವಿರ ಮತದೊಂದಿಗೆ ಎರಡನೇ ಸ್ಥಾನ ಪಡೆದಿದ್ದರು. ಈ ಬಾರಿಯ ಪುರಸಭೆ ಚುನಾವಣೆಯಲ್ಲಿ 15 ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲುವಿಗೆ ಜೆಡಿಎಸ್‌ ನಾಯಕರು ಶ್ರಮಿಸುತ್ತಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆಡಳಿತಾವಧಿಯಲ್ಲಿ ಯುವಕರಿಗೆ ನೀಡಿದ ಉದ್ಯೋಗ ಹಾಗೂ ರೈತರಿಗೆ ನೀಡಿದ ಯೋಜನೆಗಳ ಬಗ್ಗೆ ಪ್ರಚಾರ ಕೈಗೊಂಡು ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತಿದ್ದಾರೆ.

ಭಾರತೀಯ ಜನತಾ ಪಾರ್ಟಿಯಿಂದ ಎಲ್ಲ 23 ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಕೇಂದ್ರದ ನಮೋ ಸರ್ಕಾರ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಇದ್ದ ವೇಳೆ ಜಾರಿಗೆ ತಂದ ಅನೇಕ ಜನಪರ ಯೋಜನೆಗಳು ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಲಿವೆ.
•ಕಾಸುಗೌಡ ಬಿರಾದಾರ,
ಬಜೆಪಿ ಮಂಡಲ ಅಧ್ಯಕ್ಷ

ಸ್ಥಳೀಯ ಶಾಸಕರು ನಮ್ಮ ಪಕ್ಷದವರಿದ್ದಾರೆ. ಕ್ಷೇತ್ರದಲ್ಲಿ ನಮ್ಮ ಪಕ್ಷದಿಂದ ಅನೇಕ ಅಭಿವೃದ್ಧಿ ಕಾರ್ಯಗಳಾಗಿವೆ. ಪುರಸಭೆ 23 ವಾರ್ಡ್‌ಗಳಲ್ಲೂ ಉತ್ತಮ ವ್ಯಕ್ತಿಗಳನ್ನು ಗುರುತಿಸಿ ಅಭ್ಯರ್ಥಿಗಳನ್ನಾಗಿ ಮಾಡಿದ್ದೇವೆ. ಹೀಗಾಗಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲಿದ್ದೇವೆ.
ಇಲಿಯಾಸ್‌ ಬೋರಾಮಣಿ
ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ

ಜೆಡಿಎಸ್‌ ಪಕ್ಷದಿಂದ 15 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಕುಮಾರಸ್ವಾಮಿಯವರು ಜನತೆಗೆ ನೀಡಿದ ಕೊಡುಗೆಗಳ ಬಗ್ಗೆ ಹೇಳುತ್ತ ಮತಯಾಚನೆ ಮಾಡುತ್ತಿದ್ದೇವೆ. ಜನ ನಮಗೆ ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದ್ದು ಕನಿಷ್ಠ 10 ಸೀಟುಗಳನ್ನು ಗೆಲ್ಲಲಿದ್ದೇವೆ.
ಬಿ.ಡಿ. ಪಾಟೀಲ
ಜೆಡಿಎಸ್‌ ತಾಲೂಕಾಧ್ಯಕ್ಷ

ಉಮೇಶ ಬಳಬಟ್ಟಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ