ಗದುಗಿನಲ್ಲಿ ಸೊರಗುತ್ತಿದೆ ‘ಸಹಕಾರಿ’

ಜಿಲ್ಲೆಯಲ್ಲಿ ನೋಂದಣಿಯಾಗಿವೆ 968 ಸಂಘಗಳು ಸದ್ಯ ಕಾರ್ಯ ನಿರ್ವಹಿಸುತ್ತಿವೆ 853 ಸಹಕಾರಿ ಸಂಘಗಳು

Team Udayavani, Nov 14, 2019, 7:25 PM IST

„ವೀರೇಂದ್ರ ನಾಗಲದಿನ್ನಿ
ಗದಗ:
ಸಹಕಾರಿ ರಂಗದ ತೊಟ್ಟಿಲು ತೂಗಿದ ಗದಗ ಜಿಲ್ಲೆಯಲ್ಲೇ ನಾನಾ ಕಾರಣಗಳಿಂದ ಸಹಕಾರ ಕ್ಷೇತ್ರ ಸೊರಗುತ್ತಿದೆ. ಜಿಲ್ಲೆಯಲ್ಲಿ 968 ವಿವಿಧ ಸಹಕಾರ ಸಂಘಗಳು ನೋಂದಣಿಯಾಗಿವೆ. ಈ ಪೈಕಿ ಸದ್ಯ 853 ಕಾರ್ಯ ನಿರ್ವಹಿಸುತ್ತಿದ್ದು, 41 ಸ್ಥಗಿತಗೊಂಡಿವೆ. 74 ಸಹಕಾರಿ ಸಂಘಗಳು ಆರ್ಥಿಕವಾಗಿ ಚೇತರಿಸಿಕೊಳ್ಳಲಾಗದೇ ಸಮಾಪನೆಗೊಂಡಿವೆ.ಆ ಪೈಕಿ ಹಲವು ಸಂಘಗಳು ಆರ್ಥಿಕ ಏಳು-ಬೀಳುಗಳನ್ನು ಎದುರಿಸಿ ಸಬಲಗೊಂಡಿದ್ದರೆ ಹಲವು ಸಂಸ್ಥೆಗಳು ನೇಪತ್ಯಕ್ಕೆ ಸರಿದಿವೆ.

ಸಹಕಾರಿ ರಂಗದಲ್ಲಿ ಗದಗ ಜಿಲ್ಲೆಗೆ ವಿಶೇಷ ಸ್ಥಾನವಿದೆ. ಭಾರತ ಸ್ವಾತಂತ್ರ್ಯಗೊಳ್ಳುವ ಮುನ್ನವೇ ಜಿಲ್ಲೆಯಲ್ಲಿ ಸಹಕಾರಿ ರಂಗದ ತೊಟ್ಟಿಲು ತೂಗಿದ್ದಲ್ಲದೇ ಈ ಭಾಗದಲ್ಲಿ ಉಚ್ಛಾಯ ಸ್ಥಿತಿ ಕಂಡಿತ್ತೆಂಬುದೀಗ ಇತಿಹಾಸ.

ನಷ್ಟದಲ್ಲೇ ದಿನ ದೂಡುತ್ತಿವೆ: ಸದ್ಯ ಕಾರ್ಯ ನಿರ್ವಹಿಸುತ್ತಿರುವ 853 ಸಹಕಾರಿ ಸಂಘಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸಂಘಗಳು ನಷ್ಟದಲ್ಲಿವೆ. 396 ಲಾಭದಲ್ಲಿದ್ದರೆ, 66 ಸಹಕಾರಿ ಸಂಘಗಳು ಲಾಭ-ನಷ್ಟವಿಲ್ಲದೇ ಯಥಾಸ್ಥಿತಿಯಲ್ಲಿ ಸಾಗುತ್ತಿವೆ. ಇನ್ನುಳಿದಂತೆ 506 ಸಹಕಾರಿ ಸಂಘಗಳು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದು, ನಷ್ಟದಲ್ಲೇ ದಿನ ದೂಡುತ್ತಿರುವುದು ಆತಂಕಕಾರಿ ಸಂಗತಿ. ಜಿಲ್ಲೆಯಲ್ಲಿ 50 ಸೌಹಾರ್ದ ಸಹಕಾರಿ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಆ ಪೈಕಿ “ಎ’, “ಬಿ’ ವರ್ಗದಲ್ಲಿ ಗುರುತಿಸಿರುವ 8 ಬ್ಯಾಂಕ್‌ಗಳು ಲಾಭದಾಯಕವಾಗಿವೆ. 13 “ಸಿ’ ವರ್ಗದಲ್ಲಿ ಗುರುತಿಸಿಕೊಂಡಿದ್ದರೂ ಲಾಭದ ಹಾದಿಯಲ್ಲಿ ಮುನ್ನಡೆಯುತ್ತಿವೆ. ಇನ್ನುಳಿದಂತೆ ಎರಡು ಬ್ಯಾಂಕ್‌ಗಳು “ಡಿ’ ಕ್ಯಾಟಗರಿಯಲ್ಲಿ ಗುರುತಿಸಿಕೊಂಡಿವೆ.

ಆರ್ಥಿಕವಾಗಿ ನಷ್ಟದಲ್ಲಿದ್ದು, ಸಮಾಪನೆಗೆ(ಸ್ಥಗಿತ) ಹತ್ತಿರವಾಗಿವೆ ಎಂದು ಸಹಕಾರ ಇಲಾಖೆ ಮೂಲಗಳು ತಿಳಿಸಿವೆ. ಕೆಸಿಸಿ ಬ್ಯಾಂಕ್‌ ಧಾರವಾಡ ಅಧಿಧೀನದಲ್ಲಿರುವ ಜಿಲ್ಲೆಯ 164 ಕೃಷಿ ಪತ್ತಿನ ಸಹಕಾರಿ ಸಂಘಗಳದ್ದೂ ಇದೇ ಪರಿಸ್ಥಿತಿ ಇದೆ. ಕೆಲವು ಲಾಭದಲ್ಲಿ ಸಾಗಿದರೆ, ಹಲವು ಸಂಕಷ್ಟದಲ್ಲೇ ಸಾಗುತ್ತಿವೆ ಎನ್ನಲಾಗಿದೆ. ಬರ-ನೆರೆ ಬರೆ: ಕಳೆದ ನಾಲ್ಕೈದು ವರ್ಷಗಳಿಂದ ಮಳೆ ಕೊರತೆಯಿಂದ ಬರ ಆವರಿಸಿ ರೈತರು ಅಕ್ಷರಶಃ ಕಂಗಾಲಾಗಿದ್ದರು. ಈ ನಡುವೆ ಇತ್ತೀಚೆಗೆ ಬೆಣ್ಣೆಹಳ್ಳ, ಮಲಪ್ರಭೆ, ತುಂಗಭದ್ರಾ ನದಿಗಳು ಉಕ್ಕಿ ಹರಿದಿದ್ದರಿಂದ 23 ಗ್ರಾಮಗಳಲ್ಲಿ ಸಾಕಷ್ಟು ಹಾನಿಯಾಗಿದ್ದು, ಪರೋಕ್ಷವಾಗಿ ಸಹಕಾರ ಸಂಘಗಳ ಮೇಲೂ ಇದು ಪರಿಣಾಮ ಬೀರಿದೆ.

ಅದರೊಂದಿಗೆ ಕೆಲ ನೌಕರರು, ಆರ್ಥಿಕ ಸ್ಥಿತಿವಂತರು ಕೃಷಿ ಯಂತ್ರೋಪಕರಣಗಳ ಖರೀದಿ, ಟ್ರ್ಯಾಕ್ಟರ್‌ ಖರೀದಿಗೆ ಪಡೆದ ಸಾಲವನ್ನು ಬ್ಯಾಂಕ್‌ಗಳಿಗೆ ವರ್ಷಗಳಿಂದ ಮರು ಪಾವತಿಸದಿರುವುದು ಸಹಕಾರಿ ಬ್ಯಾಂಕ್‌ಗಳನ್ನು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಸಿವೆ. ಇನ್ನು ಕೃಷಿ ಸಾಲ ಪಡೆದು, ಮದುವೆ, ಮನೆ ನಿರ್ಮಾಣ, ಅನ್ಯ ಕಾರ್ಯಗಳಿಗೆ ಬಳಸಿಕೊಂಡವರಿಂದ ಸಾಲ ವಸೂಲಾತಿ ಸಂಘಗಳಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಅದರೊಂದಿಗೆ ಸಂಘ- ಸಂಸ್ಥೆಗಳಲ್ಲಿನ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಸರಕಾರಗಳು ಮಾಡುವ ರೈತರ ಸಾಲ ಮನ್ನಾವೂ ಸಹಕಾರ ಸಂಘಗಳ ಆರ್ಥಿಕ ಅಧೋಗತಿಗೆ ಕಾರಣವಾಗುತ್ತಿದೆ. ಇದೇ ಕಾರಣಕ್ಕೆ ಹಲವು ಸಂಘ-ಸಂಸ್ಥೆಗಳು ಬಾಗಿಲು ಮುಚ್ಚುವ ಸ್ಥಿತಿಗೆ ಬಂದು ನಿಂತಿವೆ ಎನ್ನುತ್ತಾರೆ ಸಹಕಾರಿ ರಂಗದ ಪ್ರಮುಖರು.

ಅದನ್ನೊರತಾಗಿ ಕೆಲ ಸಹಕಾರಿ ಸಂಘ-ಸಂಸ್ಥೆಗಳು ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು, ಡಿಜಿಟಲ್‌ ಪೇಮೆಂಟ್ಸ್‌ಗೆ ಅವಕಾಶ ನೀಡಿದೆ. ರಾಷ್ಟ್ರೀಯ ಬ್ಯಾಂಕ್‌ಗಳನ್ನೂ ಮೀರಿಸುವಂತೆ ಅತ್ಯಾಧುನಿಕ ಗಣಕ ಯಂತ್ರಗಳು, ಕಚೇರಿಯ ಒಳವಿನ್ಯಾಸದೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ. ಜತೆಗೆ ಉತ್ತಮ ಸೇವೆ ನೀಡುವ ಮೂಲಕ ಸಹಕಾರಿ ಸಂಘಗಳು ಮುನ್ನಡೆಯುತ್ತಿರುವುದು ಆಶಾಭಾವ ಮೂಡಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕರಿಬೇವಿನ ಎಲೆಯಲ್ಲಿರುವ ಗಂಧಕಯುಕ್ತ ಎಣ್ಣೆಯ ಅಂಶವೇ "ಘಮ…' ಎನ್ನುವ ಸುವಾಸನೆಗೆ ಕಾರಣ. ಇದನ್ನು ಅಡುಗೆ ಮನೆಯಲ್ಲಿ ಮಾತ್ರವೇ ಅಲ್ಲದೆ, ಆಯುರ್ವೇದ ಔಷಧಗಳ ತಯಾರಿಕೆಗೂ...

  • "ಬಲೆ ಬೆಳೆ' ಎಂದರೆ ಮುಖ್ಯಬೆಳೆಯನ್ನು ಕೀಟಬಾಧೆಯಿಂದ ರಕ್ಷಿಸುವುದು. ಬಲೆ ಬೆಳೆಯಾಗಿ ಕೆಲವಾರು ಬೆಳೆಗಳನ್ನು ಬೆಳೆಯುತ್ತಾರೆ. ಈ ಎಲ್ಲ ಬೆಳೆಯನ್ನೂ ಒಟ್ಟಿಗೆ ಬೆಳೆಯುವ...

  • ಆ್ಯಂಡ್ರೋಕ್ಲಿಫ್ ಎಂಬ ರೈತನಿದ್ದ. ಅವನು ಶ್ರಮಪಟ್ಟು ದುಡಿದು ಬಂಜರು ಭೂಮಿಯಲ್ಲಿ ಕೃಷಿ ಮಾಡಿದ್ದ. ಹಲವಾರು ಹಣ್ಣುಗಳ ಮರಗಳನ್ನು ಬೆಳೆಸಿ ಕೈತುಂಬ ಫ‌ಸಲು ಕೊಯ್ಯುತ್ತಿದ್ದ....

  • ಆಕಾಶ ವೀಕ್ಷಕರಿಗೆ, ಪ್ರಕೃತಿಪ್ರಿಯರಿಗೆ ಸಂತಸದ ಸುದ್ದಿ. ಇದೇ ಡಿಸೆಂಬರ್‌ 26 ರಂದು ಬಲು ಅಪರೂಪದ ಸೂರ್ಯ ಗ್ರಹಣ! ಇದು ಕಂಕಣ ಸೂರ್ಯಗ್ರಹಣ. ದಕ್ಷಿಣಭಾರತದವರಿಗೆ...

  • ನಗರದ ಕೇಂದ್ರ ಭಾಗವಾದ ಖಾಸಗಿ ಸರ್ವಿಸ್‌ ಬಸ್‌ ನಿಲ್ದಾಣ ಅವ್ಯವಸ್ಥೆಯಿಂದ ಕೂಡಿದೆ. ಬಸ್‌ ನಿಲುಗಡೆಗೆ ಜಾಗವಿಲ್ಲದೆ ಎಲ್ಲೆಂದರಲ್ಲಿ ಬಸ್‌ಗಳನ್ನು ನಿಲುಗಡೆ ಮಾಡಲಾಗುತ್ತದೆ....