ಭೂಕುಸಿತ ಅಧ್ಯಯನಕ್ಕೆ ವಿಜ್ಞಾನಿಗಳ ತಂಡ

Team Udayavani, Oct 30, 2019, 1:07 PM IST

ನರಗುಂದ: ಪಟ್ಟಣದ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ ಭೂ ಕುಸಿತ ಬಗ್ಗೆ ಸುದೀರ್ಘ‌ ಅಧ್ಯಯನ ನಡೆಸಲು ವಿಜ್ಞಾನಿಗಳ ತಂಡ ಬುಧವಾರ ನರಗುಂದಕ್ಕೆ ಆಗಮಿಸಲಿದೆ.

ಕಳೆದ ಒಂದು ವಾರದಿಂದ ಪಟ್ಟಣದ ಕಸಬಾ, ಅರ್ಭಾಣ ಓಣಿಯಲ್ಲಿ ದಿನಕ್ಕೆ 2-3 ಕಡೆಗೆ ಭೂಕುಸಿತ ಉಂಟಾಗಿ ಸಾರ್ವಜನಿಕರ ಜೀವಕ್ಕೂ ಕಂಟಕವಾಗಿ ಪರಿಣಮಿಸಿದೆ. ಸೋಮವಾರ ವೃದ್ಧರೊಬ್ಬರು ಕುಸಿದ ಹಗೇವಿನಲ್ಲಿ ಬಿದ್ದು ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದ್ದು, ಭೂಕುಸಿತ ಸ್ಥಿತಿ ತೀವ್ರ ಆತಂಕ ಸೃಷ್ಠಿಸಿದೆ.

ಪರಿಶೀಲನೆಗೆ ಆದೇಶ: ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಸಿ.ಸಿ.ಪಾಟೀಲ ಅವರ ಆದೇಶ ಮೇರೆಗೆ ಇಲಾಖೆ ಆಡಳಿತ ವಿಭಾಗ ಜಂಟಿ ನಿರ್ದೇಶಕರು ವಿಜ್ಞಾನಿಗಳ ತಂಡ ರಚಿಸಿ ಅ. 28ರಂದು ಆದೇಶ ಹೊರಡಿಸಿದ್ದಾರೆ. ಅ.30, 31ರಂದು ನರಗುಂದ ಪಟ್ಟಣ ಮತ್ತು ಸುತ್ತಲಿನ ಪ್ರದೇಶ ಪರಿಶೀಲಿಸಿ ಭೂಕುಸಿತಕ್ಕೆ ಕಾರಣ ಕಂಡು ಹಿಡಿದು ನ.4ರೊಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಜನರಿಗೆ ನಿಟ್ಟುಸಿರು: ಅಂತರ್ಜಲ ಹೆಚ್ಚಳದಿಂದ ಪಟ್ಟಣದ ನಾಲ್ಕು ಬಡಾವಣೆಗಳಲ್ಲಿ ದಶಕದಿಂದ ಎಲ್ಲೆಂದರಲ್ಲಿ ಸಾರ್ವಜನಿಕ ಪ್ರದೇಶವಲ್ಲದೇ ಜನವಸತಿ ಮನೆಗಳಲ್ಲೇ ಭೂ ಕುಸಿತ ಉಂಟಾಗಿ ಸಾರ್ವಜನಿಕರು ಭಯದ ವಾತಾವರಣದಲ್ಲಿ ಆತಂಕ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭೂವಿಜ್ಞಾನಿಗಳ ತಂಡ ಪರಿಶೀಲನೆಗೆ ಆಗಮಿಸುತ್ತಿದೆ. ಪ್ರತಿನಿತ್ಯ ಆತಂಕ ಎದುರಿಸುವ ಸಮಸ್ಯೆಗೆ ಪರಿಹಾರ ಸಿಗುವಂತಾಗಲಿ ಎಂಬುದು ಸಾರ್ವಜನಿಕರ ಆಶಯ.

ಭೂ ವಿಜ್ಞಾನಿಗಳ ತಂಡ: ಹಿರಿಯ ಭೂ ವಿಜ್ಞಾನಿ(ಪ್ರಭಾರ) ಬಿ.ಜಿ. ದಿಲೀಪಕುಮಾರ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಹಾವೇರಿ ಕಚೇರಿ ಹಿರಿಯ ಭೂ ವಿಜ್ಞಾನಿ ಸುಭಾಷಚಂದ್ರ ಎಸ್‌., ಬೆಳಗಾವಿ ಉಪನಿರ್ದೇಶಕರ ಕಚೇರಿ ಭೂ ವಿಜ್ಞಾನಿಗಳಾದ ರಿಜ್ವಾನ್‌ ಎಂ.ಎಸ್‌., ವೆಂಕನಗೌಡ ಬಿ. ಪಾಟೀಲ ಹಾಗೂ ಗದಗ ಕಚೇರಿ ಹಿರಿಯ ಭೂವಿಜ್ಞಾನಿಗಳಾದ ಉಮೇಶ ಜಡಿಯಪ್ಪ ಮಾಡೊಳ್ಳಿ, ಸಂತೋಷ ಬೆನಕಟ್ಟಿ ಅವರನ್ನು ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.

ಸಚಿವ ಪಾಟೀಲ ಮುತುವರ್ಜಿ: ರವಿವಾರ ಭೂಕುಸಿತ ಉಂಟಾದ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿ ವೀಕ್ಷಿಸಿದ ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಸಿ.ಸಿ.ಪಾಟೀಲ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಕೂಡಲೇ ವಿಜ್ಞಾನಿಗಳ ತಂಡ ಕಳುಹಿಸಿ ವೈಜ್ಞಾನಿಕವಾಗಿ ಅಧ್ಯಯನ ಮಾಡುವಂತೆ ಸೂಚಿಸಿದ್ದರು.

 

-ಸಿದ್ಧಲಿಂಗಯ್ಯ ಮಣ್ಣೂರಮಠ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ