ಗದುಗಿನಲ್ಲಿ ಅಯೋಗ್ಯ ಪ್ರಚಾರ 

Team Udayavani, Sep 1, 2018, 4:21 PM IST

ಗದಗ: ನಗರದ ಮಹಾಲಕ್ಷ್ಮೀ ಚಿತ್ರ ಮಂದಿರಕ್ಕೆ ‘ಅಯೋಗ್ಯ’ ಚಿತ್ರದ ನಾಯಕ ನಟ ನೀನಾಸಂ ಸತೀಶ ಶುಕ್ರವಾರ ಭೇಟಿ ನೀಡಿ ಚಿತ್ರದ ಪ್ರಚಾರ ನಡೆಸಿದರು. ಚಿತ್ರಮಂದಿರದ ಆವರಣದಲ್ಲಿ ನೆರೆದಿದ್ದ ಅಭಿಮಾನಿಗಳು ಹಾಗೂ ಪ್ರೇಕ್ಷಕರತ್ತ ಕೈಬೀಸಿ ಮಾತನಾಡಿದ ಸತೀಶ್‌, ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ತಾವು ಅಭಿನಯಿಸಿದ ‘ಅಯೋಗ್ಯ’ ಚಿತ್ರಕ್ಕೆ ಪ್ರೇಕ್ಷರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಚಿತ್ರವನ್ನು ವೀಕ್ಷಿಸಿ, ಆಶೀರ್ವದಿಸಿದ ಪ್ರೇಕ್ಷಕರು, ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಅಲ್ಲದೇ ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ಭಾಷೆಯಲ್ಲಿ ಚಿತ್ರ ಮಾಡಲಿದ್ದು, ಅದರಲ್ಲಿ ತಮ್ಮ ನಟನೆಯ ಮೂಲಕ ಈ ಭಾಗದ ನೈಜ ಸಮಸ್ಯೆ ಬಿಂಬಿಸುವುದಾಗಿ ತಿಳಿಸಿದರು.

ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಬಯಲು ಶೌಚಾಲಯ ಇನ್ನೂ ಜೀವಂತವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಸರಕಾರದ ಯೋಜನೆಗಳನ್ನು ಜನರು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದ ಅವರು, ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಪ್ರತಿವರ್ಷ ಒಂದು ಕುಗ್ರಾಮವನ್ನು ದತ್ತು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ಅಭಿಮಾನಿಗಳ ಸಂಭ್ರಮ: ಇದಕ್ಕೂ ಮುನ್ನ ನೆಚ್ಚಿನ ನಟ ನೀನಾಸಂ ಸತೀಶ ಆಗಮಿಸುತ್ತಿದ್ದಂತೆ ಚಿತ್ರಮಂದಿರದ ಬಳಿ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಪಟಾಕಿ ಸಿಡಿಸಿ, ಜೈಕಾರ ಹಾಕಿ ಸ್ವಾಗತಿಸಿದರು. ನೆಚ್ಚಿನ ನಾಯಕನನ್ನು ನೋಡಲು ಕಿಕ್ಕಿರಿದು ಸೇರಿದ ಅಭಿಮಾನಿಗಳು ತಮ್ಮ ನಾಯಕನ ಜೊತೆ ಸೆಲ್ಫಿ ತೆಗೆಸಿಕೊಳ್ಳಲು, ಕೈಕುಲುಕಲು ಮುಗಿಬಿದ್ದರು. ಬಳಿಕ ಅಭಿಮಾನಿಗಳ ಒತ್ತಾಯದ ಮೇರೆಗೆ ನಟ ನೀನಾಸಂ ಸತೀಶ್‌  ‘ಅಯೋಗ್ಯ’ ಚಿತ್ರದ ಒಂದೆರಡು ಡೈಲಾಗ್‌ ಹೊಡೆದು, ‘ಆಗಬೇಕು ನೀ ಅಯೋಗ್ಯ’ ಹಾಡು ಆಡಿ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದರು. ಬಳಿಕ ಮಹಾಲಕ್ಷ್ಮೀ ಚಿತ್ರಮಂದಿರದಿಂದ ನಟ ನೀನಾಸಂ ಸತೀಶ್‌ ಅವರಿಗೆ ಪಂ| ಪುಟ್ಟರಾಜಕವಿ ಗವಾಯಿಗಳ ಭಾವಚಿತ್ರ ನೀಡಿ ಗೌರವಿಸಲಾಯಿತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ