ಕುರುಡಗಿ ಗ್ರಂಥಾಲಯ ಸುತ್ತ ದುರ್ನಾತ!

Team Udayavani, Nov 17, 2019, 11:56 AM IST

ನರೇಗಲ್ಲ: ಸಮೀಪದ ಕುರುಡಗಿ ಗ್ರಾಮದಲ್ಲಿರುವ ಸಾರ್ವಜನಿಕ ಗ್ರಂಥಾಲಯದಲ್ಲಿ ಸಾವಿರಾರು ಸಂಖ್ಯೆಯ ಪುಸ್ತಕಗಳಿವೆ. ವೃತ್ತ ಪತ್ರಿಕೆ, ನಿಯತಕಾಲಿಕೆ,ಕಥೆ ಕಾದಂಬರಿ ಹೇರಳವಾಗಿ ಲಭ್ಯವಿದೆ.

ಆದರೆ ಸೊಳ್ಳೆಗಳ ಕಿರಿಕಿರಿ, ಚರಂಡಿ ದುರ್ನಾತದಿಂದ ಮೂಗು ಮುಚ್ಚಿಕೊಂಡು ಓದಬೇಕಾದ ಪರಿಸ್ಥಿತಿ ಇಲ್ಲಿದೆ. ಕುರುಡಗಿ ಗ್ರಾಮದಲ್ಲಿ 2007ರಲ್ಲಿ ಎರಡುನೂರು ಪುಸ್ತಕಗಳೊಂದಿಗೆ ಸ್ವಂತ ಕಟ್ಟಡ ಇಲ್ಲದಿರುವುದರಿಂದ ಶ್ರೀ ವರವೀರೇಶ್ವರ ಯುವಕ ಮಂಡಳದ ಕಟ್ಟಡದಲ್ಲಿ ಗ್ರಂಥಾಲಯ ಪ್ರಾರಂಭವಾಗಿದೆ. ಸದ್ಯ 3800 ಪುಸ್ತಕಗಳಿವೆ. 179 ಸದಸ್ಯತ್ವ ಹೊಂದಿದೆ. ನಿತ್ಯ ಮೂರು ರಾಜ್ಯಮಟ್ಟದ ಪತ್ರಿಕೆ ಹಾಗೂ ಒಂದು ಸ್ಥಳೀಯ ಪತ್ರಿಕೆ ಕೂಡ ಲಭ್ಯವಿದೆ. ಆದರೆ, ಓದುಗರರಿಗೆ ಕುಳಿತುಕೊಂಡು ಓದುವುದಕ್ಕೆ ಆಸನಗಳ ಕೊರತೆ ಉಂಟಾಗಿದೆ. ಇದರಿಂದ ಓದುಗರು ನಿತ್ಯ ನೆಲದ ಮೇಲೆ ಕುಳಿತುಕೊಂಡು ಪುಸ್ತಕ ಹಾಗೂ ಪತ್ರಿಕೆ ಓದುವ ಅನಿವಾರ್ಯತೆಯಿದೆ.

ಕಂಡಿಲ್ಲ ಸುಣ್ಣ-ಬಣ್ಣ: ಹತ್ತು ವರ್ಷಗಳಿಂದಲೂ ಗ್ರಂಥಾಲಯ ಸುಣ್ಣ ಬಣ್ಣವನ್ನು ಕಂಡಿಲ್ಲ. ಗ್ರಂಥಾಲಯದಲ್ಲಿ ಓದುಗರಿಗೆ ಕುಡಿಯುವ ನೀರಿನ ಸೌಲಭ್ಯವಿಲ್ಲ, ಶೌಚಾಲಯವಿಲ್ಲ. ಗ್ರಂಥಾಯಲದ ಸುತ್ತಲು ಸಣ್ಣ ಪ್ರಮಾಣದ ಗಿಡಗಂಟಿಗಳು ಬೆಳೆದು ಹಾವಿನ ಕಾಟದ ಆತಂಕದ ಜೊತೆಗೆ ಗ್ರಂಥಾಲಯದ ಮುಂದಿರುವ ತೆರೆದ ಚರಂಡಿಯಲ್ಲಿ ಕಸಕಡ್ಡಿ ತುಂಬಿಕೊಂಡು ಗಬ್ಬು ನಾರುತ್ತಿದೆ. ಹೀಗಾಗಿ ಸೊಳ್ಳೆಗಳ ಕಾಟ ಹೆಚ್ಚಿದ್ದು, ಓದುಗರು ಇವೆಲ್ಲವನ್ನೂ ಸಹಿಸಿಕೊಂಡು ಗ್ರಂಥಾಲಯಕ್ಕೆ ಬರುವಂತಾಗಿದೆ.

ಸ್ಥಳದ ಕೊರತೆ: ಗ್ರಂಥಾಲಯವು 179ಕ್ಕೂ ಅಧಿಕ ಸದಸ್ಯತ್ವವನ್ನು ಹೊಂದಿದೆ. ಪ್ರತಿನಿತ್ಯ 300ರಿಂದ 350 ಸದಸ್ಯರು ಕಥೆ ಇನ್ನಿತರ ಪುಸ್ತಕಗಳನ್ನು ಮನೆಗೆ ಕೊಂಡೊಯ್ಯಲು ಬರುತ್ತಾರೆ. ಗ್ರಂಥಾಲಯದಲ್ಲಿ 5 ಮಂದಿ ಕುಳಿತು ಓದುವ ವ್ಯವಸ್ಥೆ ಇದೆ. ಆದರೆ, ಸೂಕ್ತ ಆಸನ ವ್ಯವಸ್ಥೆಯಿಲ್ಲದೇ ಓದುಗರು ನಿಂತುಕೊಂಡು ಓದುವಂತಾಗಿದೆ. ಕೇವಲ 2 ಟೇಬಲ್‌, 5 ಖುರ್ಚಿಗಳು ಮಾತ್ರ ಇವೆ. ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಇಡುವುದಕ್ಕೆ ಸೂಕ್ತ ಜಾಗೆ ಇಲ್ಲದೆ ಪುಸ್ತಕಗಳನ್ನು ಗಂಟು ಮುಟೆ ಕಟ್ಟಿ ಇಡಲಾಗಿದೆ. ಮಹಿಳೆಯರಿಗೆ ಪ್ರತ್ಯೇಕ ಓದುವ ಕೊಠಡಿಯಿಲ್ಲ.

ಮೂರು ಗ್ರಾಮಕ್ಕೆ ಒಂದೇ ಗ್ರಂಥಾಲಯ : ಈ ಗ್ರಂಥಾಲಯಕ್ಕೆ ನಿತ್ಯ ಯರೇಬೇಲೇರಿ, ನಾಗರಾಳ, ಕುರುಡಗಿ ಗ್ರಾಮಗಳ ವಿದ್ಯಾರ್ಥಿಗಳು ಹಾಗೂ ಹಿರಿಯ ಓದುಗರು ಇಲ್ಲಿಗೆ ಬರುತ್ತಾರೆ. ಕುರುಡಗಿ ಗ್ರಾಮದಲ್ಲಿ 4 ಸಾವಿರಕ್ಕೂ ಅಧಿಕ ಜನಸಂಖ್ಯೆ, ಯರೇಬೇಲೇರಿ ಗ್ರಾಮದಲ್ಲಿ 3800, ನಾಗರಾಳ 3 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ. ಇವರಿಗೆಲ್ಲ ಒಂದೇ ಗ್ರಂಥಾಲಯ ಇರುವುದರಿಂದ ಸಾಕಷ್ಟು ತೊಂದರೆ ಅನುಭಿಸುತ್ತಿದ್ದಾರೆ.

ಗ್ರಂಥಾಲಯಕ್ಕೆ ಮೂರು ಗ್ರಾಮಗಳಿಂದ ಓದುಗರು ಬರುವುದರಿಂದ ಕುಳಿತುಕೊಂಡು ಓದುವುದಕ್ಕೆ ಸೂಕ್ತವಾದ ಆಸನಗಳು ಇಲ್ಲದೆ ತೊಂದರೆ ಅನುಭಿಸುತ್ತಿದ್ದೇವೆ. ಸರ್ಕಾರ ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಕುಳಿತುಕೊಂಡು ಓದುವುದಕ್ಕೆ ಹೆಚ್ಚು ಟೇಬಲ್‌ ಹಾಗು ಖುರ್ಚಿ ಮತ್ತು ಸ್ವಂತ ಕಟ್ಟಡ ನಿರ್ಮಿಸಬೇಕಿದೆ. ಡಾ| ವೀರಪ್ಪ ಬನ್ನಿಗೋಳ, ಹಿರಿಯ ಓದುಗ

ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳು ಹಾಗೂ ಯುವಕರು ಹೆಚ್ಚು ಸ್ಪರ್ಧಾತ್ಮಕ ಪುಸ್ತಕ ಕೇಳುತ್ತಾರೆ. ಆದ್ದರಿಂದ ಇಲಾಖೆ ಅಧಿಕಾರಿಗಳು ಹೆಚ್ಚು ಪುಸ್ತಕಗಳನ್ನು ಒದಗಿಸಬೇಕು. ಪತ್ರಿಕೆಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಓದುಗರಿಗೆ ಅನುಕೂಲ ಮಾಡಬೇಕು.ವೆಂಕರಡ್ಡಿ ಗೋತಗಿ, ಗ್ರಂಥಾಲಯ ಮೇಲ್ವಿಚಾರಕ

 

-ಸಿಕಂದರ ಎಂ. ಆರಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ