ಅಕ್ಷರ ಗುಡಿ ರಥ ಎಳೆಯೋಣ ಬನ್ನಿ.

Team Udayavani, May 27, 2019, 8:33 AM IST

ಗದಗ: ಬಸವೇಶ್ವರ ಶಾಲೆಯಲ್ಲಿ ಶಾಲಾ ಆರಂಭೋತ್ಸವಕ್ಕೆ ಸಿದ್ಧಗೊಳ್ಳುತ್ತಿರುವ 'ಅಕ್ಷರ ಗುಡಿ'.

ಗದಗ: ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯುವುದು, ಮೊದಲ ದಿನದಿಂದಲೇ ಮಕ್ಕಳು ಶಾಲೆಗೆ ಹಾಜರಾಗುವಂತೆ ಪ್ರೇರೇಪಿಸುವ ಉದ್ದೇಶದಿಂದ ಕೆಲ ವರ್ಷಗಳಿಂದ ಶಾಲಾ ಆರಂಭೋತ್ಸವ ದಿನವನ್ನು ಹಬ್ಬದಂತೆ ಆಚರಿಸಲಾಗುತ್ತದೆ. ಶಾಲೆಗಳಿಗೆ ತಳಿರು-ತೋರಣ ಕಟ್ಟಿ, ಚಕ್ಕಡಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಪುಟಾಣಿಗಳನ್ನು ಆಕರ್ಷಿಸಲಾಗುತ್ತಿದೆ. ಮಧ್ಯಾಹ್ನ ಬಿಸಿಯೂಟದಲ್ಲಿ ಒಬ್ಬಟ್ಟು, ಪಾಯಸ, ಪೇಡೆ ಸೇರಿ ಹಬ್ಬದೂಟ ಉಣ ಬಡಿಸಲಾಗುತ್ತದೆ. ಅದರೊಂದಿಗೆ ಈ ಬಾರಿ ಸಾರ್ವಜನಿಕ ಶಿಕ್ಷಣ ಇಲಾಖೆ ಮೊದಲ ಬಾರಿ ‘ಅಕ್ಷರ ಗುಡಿ’ ರಥೋತ್ಸವ ನಡೆಸಲು ಸಿದ್ಧತೆ ನಡೆಸಿದೆ.

ಜಿಲ್ಲೆಯ ಪ್ರಮುಖ ಗುಡಿಗಳು, ಮಹಾನ್‌ ವ್ಯಕ್ತಿಗಳು ಮತ್ತು ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಇಲಾಖೆಯ ಪ್ರೋತ್ಸಾಹದಾಯಕ ಕಾರ್ಯಕ್ರಮಗಳು ಹಾಗೂ ಶಿಕ್ಷಣದ ಮಹತ್ವ ಸಾರುವುದು ‘ಅಕ್ಷರ ಗುಡಿ’ಯ ಆಶಯ. ಇದು 12 ಅಡಿ ಎತ್ತರವಿದ್ದು, ಷಟ್ಕೋನಾಕೃತಿಯಲ್ಲಿ ಐದು ಸ್ಥರದಲ್ಲಿ ಅಕ್ಷರ ಗುಡಿಯನ್ನು ನಿರ್ಮಿಸಲಾಗುತ್ತಿದೆ.

ಮೊದಲ ಸ್ಥರದಲ್ಲಿ ಜಿಲ್ಲೆಯ ವೀರನಾರಾಯಣ ದೇವಸ್ಥಾನ, ವೀರೇಶ್ವರ ಪುಣ್ಯಾಶ್ರಮ, ಜ| ತೋಂಟದಾರ್ಯ ಮಠ, ಲಕ್ಕುಂಡಿ ಸೇರಿದಂತೆ ಪ್ರಮುಖ 12 ದೇವಾಲಯಗಳ ಚಿತ್ರಪಟಗಳನ್ನು ಪ್ರದರ್ಶಿಸಲಾಗುತ್ತದೆ. ಎರಡನೇ ಸ್ಥರದಲ್ಲಿ ಕುಮಾರವ್ಯಾಸ, ಚಾಮರಸ, ಭೀಮಸೇನ ಜೋಶಿ, ಪಂ| ಪುಟ್ಟರಾಜಕವಿ ಗವಾಯಿಗಳು, ದೇಶದ ಸಹಕಾರಿ ರಂಗದ ಜನಕ ರಾಮನಗೌಡ ಸಿದ್ಧನಗೌಡ ಪಾಟೀಲ ಅವರ ಭಾವಚಿತ್ರಗಳಿಂದ ಅಲಂಕರಿಸಲಾಗುತ್ತದೆ.

ಮೂರನೇ ಸ್ಥರದಲ್ಲಿ ನಲಿಕಲಿ ಲೋಗೋ, ಕನ್ನಡ ಅಂಕಿ, ಅಕ್ಷರಗಳಿಂದ ಕಂಗೊಳಿಸುವಂತೆ ಮಾಡಲಾಗುತ್ತದೆ. ನಾಲ್ಕನೇ ಸ್ಥರದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಎಂಟು ಮಂದಿ ಕನ್ನಡಿಗರ ಭಾವಚಿತ್ರಗಳು, ಐದನೇ ಸ್ಥರದಲ್ಲಿ ಕರ್ನಾಟಕ ಸರಕಾರದ ಲಾಂಛನ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸರ್ವ ಶಿಕ್ಷಣ ಅಭಿಯಾನದ ಲಾಂಛನಗಳು ಹಾಗೂ ಕೊನೆಯದಾಗಿ ಗುಮ್ಮಟ ಹಾಗೂ ಕಳಶ, ‘ಅ’ ಅಕ್ಷರ ಧ್ವಜವನ್ನು ಹಾರಿಸಲಾಗುತ್ತದೆ.ಸ್ವಂತ ಖರ್ಚಿನಲ್ಲೇ ಗುಡಿ ಸಿದ್ಧ! ಶಾಲಾ ಆರಂಭೋತ್ಸವ ನಿಮಿತ್ತ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ರೂಪಿಸಿರುವ ‘ಅಕ್ಷರ ಗುಡಿ’ ಸ್ತಬ್ಧ ಚಿತ್ರದ ಮೆರವಣಿಗೆಗೆ ಸರಕಾರದಿಂದ ಯಾವುದೇ ಅನುದಾನ ಲಭ್ಯವಿಲ್ಲ. ಆದರೂ, ಮಕ್ಕಳು-ಪಾಲಕರು ಮತ್ತು ಸಾರ್ವಜನಿಕರ ಆಕರ್ಷಣೆಗಾಗಿ ಸುಮಾರು 20 ಸಾವಿರ ರೂ.ಗಳನ್ನು ಅಧಿಕಾರಿಗಳೇ ವಂತಿಗೆ ಸೇರಿಸಿ, ರೂಪಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ: ಮೇ 30 ರಂದು ನಗರದ ಭೂಮರೆಡ್ಡಿ ವೃತ್ತದಲ್ಲಿರುವ ಬಸವೇಶ್ವರ ಶಾಲೆಯಿಂದ ಸರಕಾರಿ ಶಾಲೆ ನಂ.8ರವರೆಗೆ ನಡೆಯಲಿರುವ ಶಾಲಾ ಆರಂಭೋತ್ಸವ‌ ಮೆರವಣಿಗೆ ಹಾಗೂ ಕಲಾತಂಡಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ನೀಡಲಿದೆ. ಅದರೊಂದಿಗೆ ಡಿಡಿಪಿಐ ರಚಿಸಿರುವ ಸಾಕ್ಷರತೆಯ ಹಿನ್ನೆಲೆಯ ಹಾಡು ಹಾಗೂ ಘೋಷವಾಕ್ಯಗಳೊಂದಿಗೆ ‘ಅಕ್ಷರ ಗುಡಿ’ ಮೆರವಣಿಗೆ ಸಾಗಲಿದೆ ಎಂದು ತಿಳಿದು ಬಂದಿದೆ.

ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳು ನಡೆಸಿರುವ ಈ ರೀತಿಯ ಶಾಲಾ ಪ್ರಾರಂಭೋತ್ಸವಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಶಾಲಾ ಪ್ರಾರಂಭೋತ್ಸವ ಎಂಬುದು ಮಕ್ಕಳಲ್ಲಿ ಹಬ್ಬದ ವಾತಾವರಣ ನಿರ್ಮಿಸಬೇಕು. ಮಕ್ಕಳಲ್ಲಿ ಶೈಕ್ಷಣಿಕ ವರ್ಷದ ಕೊನೆಯವರೆಗೂ ನೆನಪಿನಲ್ಲಿ ಉಳಿಯಬೇಕು ಎಂಬುದು ಇದರ ಪ್ರಯತ್ನ. ಜಿಲ್ಲೆ ಮತ್ತು ಪ್ರತಿ ತಾಲೂಕಿನಲ್ಲೂ ಅಕ್ಷರ ಗುಡಿ ನಿರ್ವಹಿಸಲು ಆದೇಶಿಸಿದ್ದೇನೆ. ಶಾಲಾ ಪ್ರಾರಂಭೋತ್ಸವಕ್ಕೆ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುತ್ತದೆ. -ಎನ್‌.ಎಚ್.ನಾಗೂರ, ಡಿಡಿಪಿಐ.

•ವೀರೇಂದ್ರ ನಾಗಲದಿನ್ನಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರೋಣ: ಬಯಲು ಶೌಚದ ದುರ್ವಾಸನೆ, ಮುರಿದ ಕುರ್ಚಿಗಳು, ಕಿಟಕಿಗೆ ದನ-ಕರುಗಳನ್ನು ಕಟ್ಟುವ ಪರಿಸ್ಥಿತಿ, ಕೊಳೆಯುತ್ತ ಬಿದ್ದಿರುವ ಪುಸ್ತಕಗಳು, ಪಕ್ಕದಲ್ಲಿ ಬಿದ್ದ ಸಾರಾಯಿ...

  • ಗದಗ: ಮಳೆ ನೀರಿನಿಂದ ತುಂಬಿಕೊಂಡಿದ್ದ ರೈಲ್ವೇ ಅಂಡರ್ ಪಾಸ್‌ನಲ್ಲಿ ಸಿಲುಕಿದ್ದ 36 ಜನ ಪ್ರಯಾಣಿಕರನ್ನು ರಕ್ಷಿಸುವಲ್ಲಿ ಲಕ್ಷ್ಮೇಶ್ವರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ರವಿವಾರ...

  • ಗದಗ: ಸ್ಥಳೀಯರಲ್ಲಿ ಸ್ವಾತಂತ್ರ್ಯಸಂಗ್ರಾಮದ ಕಿಚ್ಚು ಹೊತ್ತಿಸಿದ್ದ, ಸರಕಾರ, ಸಂಘ-ಸಂಸ್ಥೆಗಳ ನೆರವಿನ ಹಂಗಿಲ್ಲದೇ ಸ್ಥಳೀಯರೇ ಟೊಂಕ ಕಟ್ಟಿ ಮುನ್ನಡೆಸಿದ್ದ ಇಲ್ಲಿನ...

  • ಗಜೇಂದ್ರಗಡ: ಎಲ್ಲೆಂದರಲ್ಲಿ ಒಡೆದ ಹೆಂಚು, ಇಕ್ಕಟ್ಟಾದ ಕೊಠಡಿ, ಗಬ್ಬೆದ್ದು ನಾರುವ ಶೌಚಾಲಯ, ಮಳೆ ಬಂದರೆ ಇಡೀ ಕೊಠಡಿ ತುಂಬೆಲ್ಲ ಆವರಿಸುವ ಮಳೆ ನೀರು. ಇದು ಓಬೇರಾಯನ...

  • ಗದಗ: ಗ್ರಂಥಾಲಯ ಕಟ್ಟಡದಲ್ಲೇ ಇನ್ನರೆಡು ಕಚೇರಿ. ಓದುಗರಿಗೆ ಸದಾ ಸಾರ್ವಜನಿಕರ ಗದ್ದಲ-ಕಿರಿಕಿರಿ. ಇದು ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದ ಸಾರ್ವಜನಿಕ ಗ್ರಂಥಾಲಯ...

ಹೊಸ ಸೇರ್ಪಡೆ

  • ಹೊಸದಿಲ್ಲಿ: ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಅರ್ಜಿದಾರರಿಗೆ ಲಿಖೀತ ದಾಖಲೆ ಸಲ್ಲಿಕೆಗೆ ಸುಪ್ರೀಂಕೋರ್ಟ್‌ ಅವಕಾಶ ನೀಡಿದೆ. ಮುಖ್ಯ ನ್ಯಾಯಮೂರ್ತಿ...

  • ಹೊಸದಿಲ್ಲಿ: ಪ್ರಸಕ್ತ ವರ್ಷ ಶೇ.3 ರಷ್ಟು ಕುಸಿತ ಕಂಡಿರುವ ವಿಶ್ವದ ಒಟ್ಟಾರೆ ಉತ್ಪನ್ನವು (ವಿಶ್ವ ಜಿಡಿಪಿ), 2024ರ ಹೊತ್ತಿಗೆ ಮತ್ತಷ್ಟು ಕುಸಿತ ಕಾಣಲಿದೆ. ಆ ಸಂದರ್ಭದಲ್ಲಿ...

  • ಹೊಸದಿಲ್ಲಿ: ಸಂಸತ್‌ನ ಚಳಿಗಾಲದ ಅಧಿವೇಶನವು ನವೆಂಬರ್‌ 18ರಿಂದ ಡಿಸೆಂಬರ್‌ 13ರವರೆಗೆ ನಡೆಯಲಿದೆ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ. ಸಂಸದೀಯ ವ್ಯವಹಾರಗಳ...

  • ಬೀಜಿಂಗ್‌: ವಾಣಿಜ್ಯ ಉದ್ದೇಶಗಳಿಗಾಗಿ ಹಾರಿಬಿಡುವ ಉಪಗ್ರಹಗಳ ಉಡಾವಣೆಯು ಹೊಸ ಮಾರುಕಟ್ಟೆಯನ್ನು ಸೃಷ್ಟಿಸಿರುವ ಹಿನ್ನೆಲೆಯಲ್ಲಿ, ಚೀನ, ಹೊಸ ತಲೆಮಾರಿನ ರಾಕೆಟ್‌ಗಳ...

  • ಗಡಿಯಾಚೆಗಿನಿಂದ ಸತತವಾಗಿ ಕದನ ವಿರಾಮ ಉಲ್ಲಂ ಸುತ್ತಾ ನಾಗರಿಕರನ್ನು ಮತ್ತು ಯೋಧರನ್ನು ಗುರಿ ಮಾಡಿಕೊಂಡು ಶೆಲ್‌ ಮತ್ತು ಗುಂಡಿನ ದಾಳಿ ನಡೆಸುತ್ತಿದ್ದ ಪಾಕಿಸ್ಥಾನಕ್ಕೆ...