ಮಳೆಗೆ ಕೊಚ್ಚಿ ಹೋಯ್ತು ಬಯಲು ಸೀಮೆ ಬೆಳೆ

Team Udayavani, Oct 26, 2019, 12:56 PM IST

ಗದಗ: ಸತತ ಬರಗಾಲದಿಂದ ಕಂಗೆಟ್ಟಿರುವ ರೈತರು ಈ ಬಾರಿ ಅಲ್ಪಸ್ವಲ್ಪ ಸುರಿದ ಮಳೆಯಲ್ಲೇ ಬೆಳೆದಿದ್ದ ಗೋವಿನ ಜೋಳ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳು ಕಟಾವಿಗೆ ಬಂದಿದ್ದವು. ಇನ್ನೇನು ಹತ್ತು-ಹದಿನೈದು ದಿನಗಳಲ್ಲಿ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಬೇಕು, ಹಿಂದೆ ಮಾಡಿದ್ದ ಸಾಲ ತೀರಿಸಬೇಕು ಎಂಬ ಲೆಕ್ಕಾಚಾರದಲ್ಲಿದ್ದ ರೈತರಿಗೆ ಪ್ರಕೃತಿ ಮಾತೆ ಗಾಯದ ಮೇಲೆ ಬರೆ ಎಳೆದಿದ್ದಾಳೆ.

ಕಳೆದ ನಾಲೈದು ವರ್ಷಗಳಿಂದ ಮುಂಗಾರು-ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಜಿಲ್ಲೆಯ ರೈತರು ಸತತ ಬರಗಾಲದ ಕಹಿ ಉಂಡಿದ್ದಾರೆ. ಈ ಬಾರಿ ಮುಂಗಾರು ವಿಳಂಬವಾಗಿಯಾದರೂ ಚುರುಕುಗೊಂಡಿದ್ದರಿಂದ ತಕ್ಕಮಟ್ಟಿಗೆ ಇಳುವರಿ ಬರಲಿದೆ. ಅಲ್ಪಸ್ವಲ್ಪ ಹಿಂದಿನ ಸಾಲ ತೀರಲಿದೆ ಎಂದು ನಿರೀಕ್ಷಿಸಿದ್ದರು.

ಆದರೆ, ರೈತರ ಲೆಕ್ಕಾಚಾರ ಸಂಪೂರ್ಣ ತಲೆ ಕೆಳಗಾಗಿದೆ. ಕಳೆದ ಎರಡು ತಿಂಗಳಿಂದೆ ನರಗುಂದ, ರೋಣ ಭಾಗದಲ್ಲಿ ಮಲಪ್ರಭಾ ನದಿ, ಬೆಣ್ಣೆಹಳ್ಳ ಉಕ್ಕಿ ಹರಿದಿದ್ದರಿಂದ ನದಿ ಪಾತ್ರದ ಬಹುತೇಕ ಬೆಳೆಗಳು ಕೊಚ್ಚಿ ಹೋಗಿದ್ದವು. ಅದರಂತೆ ತುಂಗಭದ್ರೆಯೂ ಮೈದುಂಬಿ ಹರಿದಿದ್ದರಿಂದ ಶಿರಹಟ್ಟಿ ತಾಲೂಕಿನಲ್ಲಿ ನೆರೆ ಆವರಿಸಿ, ಅಪಾರ ಪ್ರಮಾಣದ ಬೆಳೆ ಹಾನಿಗೀಡಾಗಿದ್ದವು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.

ರೈತರಿಗೆ ಅತಿವೃಷ್ಟಿ ಬಿಸಿ: ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಮಳೆ ಅಬ್ಬರಿಸುತ್ತಿದ್ದರಿಂದ ಬಯಲು ಸೀಮೆಯ ಬೆಳೆಗಳೂ ನೆಲಕಚ್ಚಿವೆ. ನಿರೀಕ್ಷೆಗೂ ಮೀರಿ ಮಳೆಯಾಗಿದ್ದರಿಂದ ಹಲವು ಜಮೀನುಗಳಲ್ಲಿ ನೀರು ನಿಂತು ಕೆರೆಗಳಂತೆ ಗೋಚರಿಸುತ್ತಿದ್ದು, ಅಲ್ಲಲ್ಲಿ ಜಮೀನುಗಳ ಒಡ್ಡು ಹೊಡೆದಿವೆ. ಎಲ್ಲೆಡೆ ಕೃಷಿ ಹೊಂಡಗಳು ತುಂಬಿ ತುಳುಕುತ್ತಿವೆ. ಪರಿಣಾಮ ರೈತರು ಜಮೀನುಗಳಲ್ಲಿ ಸಾವಿರಾರು ರೂ. ಖರ್ಚು ಮಾಡಿ ಬೆಳೆದಿದ್ದ ಬೆಳೆಗಳೂ ನೀರಿನಲ್ಲಿ ತೇಲಾಡುತ್ತಿವೆ.

ಈ ಬಾರಿ ಮುಂಗಾರು ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಬಿತ್ತನೆಯಾಗಿತ್ತು. ಆ ಪೈಕಿ ಪ್ರಮುಖ ಬೆಳೆಗಳಾದ ಶೇಂಗಾ, ಹತ್ತಿ, ಗೋವಿನಜೋಳ ತಲಾ 20 ಸಾವಿರ ಹೆಕ್ಟೇರ್‌, 3- 5 ಸಾವಿರ ಹೆಕ್ಟೇರ್‌ನಷ್ಟು ಸಜ್ಜೆ, ಸೂರ್ಯಕಾಂತಿ ಮತ್ತಿತರೆ ಬೆಳೆಗಳನ್ನು ಬಿತ್ತನೆ ಆಗಿತ್ತು. ಅದರಲ್ಲಿ ಕೆಲವರು ವಿಳಂಬವಾಗಿ ಬಿತ್ತನೆ ಮಾಡಿದ್ದರಿಂದ ಕಟಾವಿಗೆ ಇನ್ನೂ 10-15 ದಿನಗಳು ಕಾಯಬೇಕಿತ್ತು ಎನ್ನುತ್ತಾರೆ ರೈತರು.

ಈ ನಡುವೆ ಕಳೆದ ಸೆಪ್ಟೆಂಬರ್‌ 1ರಿಂದ ಮಳೆ ಚುರುಕುಗೊಂಡಿತ್ತು. ಅಕ್ಟೋಬರ್‌ 19ರ ನಂತರ ಜೋರಾಗಿತ್ತು. ದಿನದಿಂದ ದಿನಕ್ಕೆ ಧಾರಾಕಾರ ವರ್ಷಧಾರೆಯಾಗುತ್ತಿದ್ದು, ಬೆಳೆದು ನಿಂತಿದ್ದ ಎಲ್ಲ ಬೆಳೆಗಳು ಹಾನಿಗೀಡಾಗಿವೆ. ಜಿಲ್ಲೆಯಲ್ಲಿ ಸುರಿದ ಬಿರುಸಿನ ಮಳೆಯಿಂದಾಗಿ ಜಿಲ್ಲೆಯ ಐದೂ ತಾಲೂಕಿನಲ್ಲಿ ಬೆಳೆಯುವ ಮೆಕ್ಕೆಜೋಳ ನೆಲಕ್ಕಚ್ಚಿದೆ. ಅಲ್ಲದೇ, ಮಳೆ ತಡವಾಗಿದ್ದರಿಂದ ಬಿತ್ತನೆಯೂ ವಿಳಂಬ ಮಾಡಿದವರ ಬೆಳೆಗಳು ಹೂ ಬಿಟ್ಟು, ಕಾಯಿ ಕಟ್ಟುವ ಮೊದಲೇ ಕಣ್ಣೆದುರೇ ಕೊಳೆಯ ತೊಡಗಿದ್ದು, ರೈತರು ಕಣ್ಣೀರುಡುವಂತಾಗಿದೆ.

 

-ವೀರೇಂದ್ರ ನಾಗಲದಿನ್ನಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ