ಹಡಗಲಿ ಹಳ್ಳದ ಸೇತುವೆ ಸಂಚಾರ ಅಪಾಯಕಾರಿ!
Team Udayavani, Oct 29, 2018, 5:20 PM IST
ನರಗುಂದ: ತಾಲೂಕಿನ ಕೊಣ್ಣೂರ ಸಮೀಪದ ಬೆಳ್ಳೇರಿ ಬಳಿಯಿರುವ ಹಡಗಲಿ ಹಳ್ಳದ ಸೇತುವೆ ಸಂಚಾರಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ. ನಿರ್ಮಾಣಗೊಂಡ ಮೂರ್‍ನಾಲ್ಕು ವರ್ಷಗಳ ಅವಧಿಯಲ್ಲೇ ಸೇತುವೆ ಮೇಲಿನ ರಸ್ತೆ ಕುಸಿಯಲು ಪ್ರಾರಂಭಿಸಿದೆ. ಪರಿಣಾಮ ನಿತ್ಯ ಸಂಚರಿಸುವ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ರೋಣ ತಾಲೂಕು ಹೊಳೆಆಲೂರಿನಿಂದ ನರಗುಂದ ಮಾರ್ಗವಾಗಿ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿಗೆ ಸಂಪರ್ಕ ರಸ್ತೆಯಾಗಿರುವ ಕೊಣ್ಣೂರ-ಬೆಳ್ಳೇರಿ ಗ್ರಾಮಗಳ ನಡುವಿನ ರಸ್ತೆಯಲ್ಲಿ ಈ ಸೇತುವೆ ಬರುತ್ತದೆ. ಬೆಳ್ಳೇರಿ ಸಮೀಪದಲ್ಲಿ ಇರುವ ಹಡಗಲಿ ಹಳ್ಳದ ಸೇತುವೆ ಎರಡೂ ಬದಿಗೆ ರಸ್ತೆ ಕುಸಿದಿದೆ. ಮೇಲಾಗಿ ಸೇತುವೆ ಮೇಲ್ಭಾಗದಲ್ಲೂ ರಸ್ತೆ ಸಮತಟ್ಟು ಇಲ್ಲದ ಕಾರಣ ಸೇತುವೆಯಿಂದ ಕೆಳ ರಸ್ತೆಗೆ ಇಳಿಯುವ ಸಣ್ಣ ವಾಹನಗಳ ಕೆಳಭಾಗಕ್ಕೆ ಇದು ಧಕ್ಕೆಯಾಗುತ್ತಿದೆ. ಈಗಾಗಲೇ ಈ ಕುಸಿದ ರಸ್ತೆಯಲ್ಲಿ ಸಂಚರಿಸುವಾಗ ಮೂರು ಕಾರುಗಳ ಡೀಸೆಲ್ ಟ್ಯಾಂಕ್ ನೆಲಕ್ಕೆ ತಾಗಿ ಒಡೆದಿರುವ ಮತ್ತು ಮೂರ್‍ನಾಲ್ಕು ಬೈಕ್ ಸವಾರರು ಆಯತಪ್ಪಿ ಬಿದ್ದು ಗಾಯಗೊಂಡ ಘಟನೆಗಳು ನಡೆದಿವೆ. ಸೇತುವೆ ಒಂದು ಬದಿಯ ಅಂಚಿನಲ್ಲಿ ರಸ್ತೆ ಕುಸಿಯುತ್ತಿದ್ದು, ಇದು ಕೂಡ ಸೇತುವೆ ರಸ್ತೆ ಸಂಚಾರಕ್ಕೆ ಕಂಟಕವಾಗಿ ಪರಿಣಮಿಸಿದೆ. ಆದ್ದರಿಂದ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸೇತುವೆ ಮೇಲಿನ ರಸ್ತೆ ಸಮತಟ್ಟುಗೊಳಿಸಬೇಕು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಜನರ ಮನವಿಯಾಗಿದೆ.
ಹೊಂಡಕ್ಕೆ ಮಣ್ಣಿನ ತೇಪೆ
ಸಾರ್ವಜನಿಕರ ಆಕ್ಷೇಪದ ಹಿನ್ನೆಲೆಯಲ್ಲಿ ಬೆಳ್ಳೇರಿ ಸಮೀಪದ ಹಡಗಲಿ ಹಳ್ಳದ ಸೇತುವೆಯಲ್ಲಿ ಕುಸಿದ ರಸ್ತೆಗೆ ಅಧಿಕಾರಿಗಳು ಮುರಂ ಮಣ್ಣಿನ ತೇಪೆ ಬಳಿದಿದ್ದಾರೆ. ಡಾಂಬರಿನ ರಸ್ತೆಯಲ್ಲಿ ಮುರಂ ಬಳಸಿದ್ದು ಸಂಚಾರಕ್ಕೆ ಮತ್ತಷ್ಟು ಅಡಚಣೆ ಉಂಟುಮಾಡಿದೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.