ಹುಡೇವುಗಳ ರಕ್ಷಣೆಗೆ ಮೀನಮೇಷ!

•ಕಾಲಗರ್ಭ ಸೇರದಂತೆ ಸ್ಮಾರಕಗಳ ರಕ್ಷಿಸಿ•ಮುಂದಿನ ಪೀಳಿಗೆಗೆ ಇತಿಹಾಸ ತಿಳಿಸಿ

Team Udayavani, Jul 13, 2019, 10:34 AM IST

ಗಜೇಂದ್ರಗಡ: ಇತಿಹಾಸ ಗತ ವೈಭವ ಸಾರುವ, ಮರಾಠ ಸಾಮಂತ ಅರಸರ ಆಳ್ವಿಕೆಯಲ್ಲಿ ನಿರ್ಮಿತವಾದ ಗಜೇಂದ್ರಗಡದ ಕೋಟೆ ಕೊತ್ತಲುಗಳಲ್ಲಿ ಪ್ರಮುಖ ಪಾತ್ರ ವಹಿಸುವ ಮೂರು ಹುಡೇವುಗಳು ಸೂಕ್ತ ನಿರ್ವಹಣೆ ಇಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿ ಕಾಲಗರ್ಭ ಸೇರುವ ಹಂತ ತಲುಪಿವೆ.

ಗಜೇಂದ್ರಗಡ ಭಾಗವನ್ನಾಳಿದ ರಾಜ ಮಹಾರಾಜರ ಆಳ್ವಿಕೆಯಲ್ಲಿ ನಿರ್ಮಿಸಲಾದ ಕೋಟೆ ಕೊತ್ತಲು, ಸ್ಮಾರಕಗಳು ವಿಶೇಷತೆಗಳಿಂದ ಕೂಡಿರುವುದರೊಂದಿಗೆ ವಿಸ್ಮಯಗಳ ತಾಣವಾಗಿವೆ. ಸುಂದರ ಕೋಟೆಯ ಕಲ್ಲುಗಳ ಮೇಲೆ ಮರಾಠ ಸಾಮಂತರ ಇತಿಹಾಸ ಸಾರಿ, ಸಾರಿ ಹೇಳುತ್ತಿವೆ. ಆದರೆ ಕೋಟೆ ಉಳಿವಿಗೆ ಕಾರಣವಾಗುವುದರ ಜತೆಗೆ ಇತಿಹಾಸವನ್ನು ತನ್ನ ಒಡಲಿನಲ್ಲಿರಿಸಿಕೊಂಡು ಇಂದಿಗೂ ಸ್ಪೂರ್ತಿಯ ಚಿಲುಮೆಯಂತೆ ಘನ ಗಾಂಭೀರ್ಯದಿಂದ ಕೂಡಿದ ಮೂರು ಹುಡೇವುಗಳು ಅವಸಾನದ ಅಂಚಿಗೆ ತಲುಪಿರುವುದು ಇತಿಹಾಸಕಾರರ ಆಕ್ರೋಶಕ್ಕೆ ಕಾರಣವಾಗಿದೆ.

ಮರಾಠ ಅರಸರ ಇತಿಹಾಸ ಸಾರುವ ಊರುಗಳ ಹೆಸರು ‘ಗಡ’ ಎಂದು ಪ್ರಸಿದ್ಧಿ ಪಡೆದಿವೆ. ಅಂತಹುಗಳಲ್ಲಿ ಗಜೇಂದ್ರಗಡವು ಒಂದಾಗಿದೆ. ಕ್ರಿ.ಶ 1700 ರಲ್ಲಿ ಬಹಿರಣಜಿ ಘೋರ್ಪಡೆಯವರು ಗಜೇಂದ್ರಗಡದಲ್ಲಿ ಆಡಳಿತ ಪ್ರಾರಂಭಿಸಿದರು. ಆ ವೇಳೆ ಏಕಶಿಲೆಯ ಪ್ರಕೃತಿ ನಿರ್ಮಿತ ಬೆಟ್ಟ ಕಂಡು ಇಲ್ಲಿಯೇ ಒಂದು ಭದ್ರವಾದ ಕೋಟೆ ನಿರ್ಮಿಸಬೇಕೆಂಬ ಸಂಕಲ್ಪದೊಂದಿಗೆ ಆರಂಭಿಸಿದ ಅವರು ಸತತ 15 ವರ್ಷಗಳ ಕಾಲ ಅವರ ಮೊಮ್ಮಗ ಸಿದ್ದೂಜಿರಾವ್‌ ಘೋರ್ಪಡೆ ಕಾಲದಲ್ಲಿ ಪೂರ್ಣಗೊಂಡಿತು ಎನ್ನುವುದು ಇತಿಹಾಸ. ಬೃಹದಾಕಾರದ ಕಲ್ಲು ಹಾಗೂ ಗಾರೆಯಿಂದ ಅಂದು ಕಟ್ಟಿದ ಕೋಟೆಗಳು ಈಗ ಸಂಬಂಧಪಟ್ಟ ಆಡಳಿತ ಶಾಹಿಗಳ ನಿರ್ಲಕ್ಷ್ಯದಿಂದ ಚರಿತ್ರೆ ಪುಟ ಸೇರುತ್ತಿರುವುದು ವಿಪರ್ಯಾಸ.

ಹರಕೆಯ ಮೂರು ಹುಡೇವು: ಅತ್ಯಂತ ನಯನ ಮನೋಹರ ಜತೆ ವೈರಿ ಪಡೆಗಳನ್ನು ಸೆದೆ ಬಡೆಯಲು ನಿರ್ಮಿಸಿದ ಗಜೇಂದ್ರಗಡದ ಕೋಟೆಯು ಉಣಚಗೇರಿಯ ಸೋಮನಗೌಡ ಪಾಟೀಲ ಎಂಬವರ ಉಸ್ತುವಾರಿಯಲ್ಲಿತ್ತು. ಅದು ಬ್ರಿಟಿಷ್‌ ಸಾಮ್ರಾಜ್ಯದ ಆಳ್ವಿಕೆಯ ಕಾಲ. ಹೇಗಾದರೂ ಮಾಡಿ ಕೋಟೆಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಬೇಕೆಂದು ಬ್ರಿಟಿಷರು ಹವಣಿಸುತ್ತಿದ್ದ ವಿಷಯ ಅರಿತ ಸೋಮನಗೌಡ ಮುಂದೇನು ಎನ್ನುವ ಚಿಂತೆಗೆ ಜಾರಿದ ಸಂದರ್ಭದಲ್ಲಿ ಏಕ ಶಿಲೆಯ ಬೆಟ್ಟದಲ್ಲಿನ ಸೋಮೇಶ್ವರ ದೇವರ ಮೊರೆ ಹೋಗಿ ಯುದ್ಧದಲ್ಲಿ ಬ್ರಿಟಿಷರು ಸೋತರೆ ಹೆಜ್ಜೆ ಹೆಜ್ಜೆಗೊಂದು ಹುಡೇವುಗಳನ್ನು ನಿರ್ಮಿಸುತ್ತೇನೆ ಎಂದು ಹರಕೆ ಹೊತ್ತಿದ್ದರು.

ಇನ್ನೇನು ಕೋಟೆಯ ಮೇಲೆ ವೈರಿ ಪಡೆ ದಾಳಿ ಆರಂಭಿಸುತ್ತಿದ್ದಂತೆ, ಆ ವೇಳೆ ಕೋಟೆಯಲ್ಲಿದ್ದ ಸೋಮನಗೌಡ ಸೋಮೇಶ್ವರ ದೇವಾಲಯದ ಕಿಂಡಿಯಿಂದ ಹಾರಿಸಿದ ಗುಂಡು ಸುಮಾರು 15 ಕಿಮೀ ದೂರದಲ್ಲಿ ಬಿದ್ದಿತು. ಅದನ್ನು ಕಂಡು ಭಯ ಭೀತರಾದ ಆಂಗ್ಲರ ಪಡೆ, ಅಲ್ಲಿಂದ ಕಾಲ್ಕಿತ್ತರು. ಈ ಹಿನ್ನೆಲೆಯಿಂದ ಸೋಮನಗೌಡರು ಮೂರು ಹುಡೇವುಗಳನ್ನು ನಿರ್ಮಿಸಿದರು ಎನ್ನುವುದು ಇತಿಹಾಸ ಪ್ರತೀತ. ಹೀಗಾಗಿ ಅಂದಿನಿಂದ ಹರಕೆಯ ಮೂರು ಹುಡೇವುಗಳೆಂದು ಕರೆಯಲಾಗುತ್ತದೆ.

ಘೋರ್ಪಡೆ ಅರಸರು ತಮ್ಮ ಆಡಳಿತಾವಧಿಯಲ್ಲಿ ಭಾವೈಕ್ಯತೆಗೆ ಆದ್ಯತೆ ನೀಡುತ್ತಿದ್ದರು ಎನ್ನುವುದಕ್ಕೆ ಪಟ್ಟಣದಲ್ಲಿನ 18 ಮಠ, 18 ಮಸೀದಿ ಹಾಗೂ 18 ಬಾವಿಗಳು ಇಂದಿಗೂ ಸರ್ವ ಧರ್ಮ ಸಮನ್ವಯಕ್ಕೆ ಸಾಕ್ಷೀಕರಿಸುವುದರ ಜತೆಗೆ ಕಲೆ, ಸಾಹಿತ್ಯ, ಇತಿಹಾಸ ಪರಂಪರೆಗೆ ತಮ್ಮದೇ ಆದ ಛಾಪು ಮೂಡಿಸುತ್ತಿರುವ ಕೋಟೆ ನಾಡೆಂದೆ ಕರೆಯುವ ಗಜೇಂದ್ರಗಡ ಪಟ್ಟಣ ಇಂದಿನ ಯುವ ಬರಹಕಾರರಿಗೆ ಪುಷ್ಟಿ ನೀಡುವುದರೊಂದಿಗೆ ಸಂಶೋಧಕರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಇಂತಹ ಅದ್ಭುತ ಕಲಾ ನೈಪುಣ್ಯತೆ ಹೊಂದಿದ ಹುಡೇವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ತರ ಜವಾಬ್ದಾರಿಕೆ ಆಡಳಿತ ವ್ಯವಸ್ಥೆಯ ಕರ್ತವ್ಯವಾಗಿದೆ ಎನ್ನುವುದು ಇತಿಹಾಸ ತಜ್ಞರ ಅಭಿಮತ.

 

•ಡಿ.ಜಿ. ಮೋಮಿನ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಲಕ್ಷ್ಮೇಶ್ವರ: ಕನ್ನಡ ಸಾರಸ್ವತ ಲೋಕಕ್ಕೆ ತಿರುಳ್ಗನ್ನಡ ಭಾಷೆ ನೀಡಿದ ಆದಿಕವಿ ಪಂಪನ ಸಾಹಿತ್ಯ ಕ್ಷೇತ್ರವಾದ ಪುಲಿಗೆರೆ(ಲಕ್ಷೇಶ್ವರ)ಯಲ್ಲಿ ಆದಿಕವಿ ಪಂಪನ ಹೆಸರಿನಲ್ಲಿ...

  • ಗದಗ: ಜಿಲ್ಲೆಯಲ್ಲಿ ಡಿಬಿಒಟಿ ಯೋಜನೆಯಡಿ ಎಲ್ಲ ಗ್ರಾಮಗಳಿಗೆ ನದಿ ನೀರು ಪೂರೈಕೆ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎನ್ನುತ್ತಿದ್ದಿರಿ. ಆದರೆ, ಇನ್ನೂ 20 ಗ್ರಾಮಗಳಲ್ಲಿ...

  • ಗದಗ: ಬಯಲು ಸೀಮೆ ಗದಗ-ಬೆಟಗೇರಿ ಅವಳಿ ನಗರದಲ್ಲಿ ಕೆಲ ವರ್ಷಗಳಿಂದ ಕುಡಿಯುವ ನೀರಿಗೂ ತತ್ವಾರ ಉಂಟಾಗುತ್ತಿತ್ತು. ಅವಳಿ ನಗರದಲ್ಲಿನ ಐತಿಹಾಸಿಕ ಬಾವಿ, ಹೊಂಡಗಳು...

  • ಗಜೇಂದ್ರಗಡ: ಸೂಡಿ ಗ್ರಾಮದ ಜನತೆಯ ಜ್ಞಾನದೇಗುಲವಾದ ಗ್ರಂಥಾಲಯ ಕಟ್ಟಡ ಕಾಮಗಾರಿ ದಶಕ ಕಳೆದರೂ ಗ್ರಾಪಂ ಆಡಳಿತ ನಿರ್ಲಕ್ಷದಿಂದ ಅರ್ಧಕ್ಕೆ ನಿಂತಿರುವುದು ಸಾರ್ವಜನಿಕರ...

  • ಮುಂಡರಗಿ: ತಾಲೂಕಿನ ಮೇವುಂಡಿ ಗ್ರಾಮದ ಗ್ರಂಥಾಲಯದ ಕಾಂಕ್ರೀಟ್‌ ಮೇಲ್ಛಾವಣಿ ಉದುರುತ್ತಿದ್ದು, ಓದುಗರು ಭಯದಲ್ಲೇ ಕುಳಿತು ಓದುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಂಥಾಲಯ...

ಹೊಸ ಸೇರ್ಪಡೆ