ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ-ಪರದಾಟ

Team Udayavani, Sep 10, 2019, 11:51 AM IST

ಗದಗ: ನಗರದ ಗ್ಯಾಸ್‌ ಏಜೆನ್ಸಿ ಎದುರು ಗ್ರಾಹಕರು ಖಾಲಿ ಸಿಲಿಂಡರ್‌ಗಳೊಂದಿಗೆ ಸರದಿಯಲ್ಲಿ ಕಾದರು.

ಗದಗ: ಉತ್ತರ ಕಾರ್ನಾಟಕದಲ್ಲಿ ಉಂಟಾಗಿರುವ ಪ್ರವಾಹದ ಬಿಸಿ ನಗರ ಪ್ರದೇಶದ ಜನರಿಗೂ ತಟ್ಟಿದೆ. ಈ ಭಾಗದ ಅಲ್ಲಲ್ಲಿ ರಸ್ತೆಗಳು ಕೊಚ್ಚಿ ಹೋಗಿದ್ದರಿಂದ ಸರಕು ಸಾಗಾಟ ವಾಹನಗಳ ಸಂಚಾರ ಸ್ಥಗಿತಗೊಂಡು ಗದಗ ಸೇರಿದಂತೆ ಹಲವೆಡೆ ಸಮಪರ್ಕವಾಗಿ ಅಡುಗೆ ಅನಿಲ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಗೃಹಿಣಿಯರು ಅಡುಗೆ ಅನಿಲಕ್ಕಾಗಿ ಪರದಾಡುವಂತಾಗಿದೆ.

ಕಳೆದ ತಿಂಗಳು ಉಂಟಾದ ಪ್ರವಾಹ ಹಾಗೂ ಸದ್ಯ ಸುರಿಯುತ್ತಿರುವ ಬಿರುಸಿನ ಮಳೆಯಿಂದಾಗಿ ಬೆಳಗಾವಿ ಮತ್ತು ಧಾರವಾಡ ಪೆಟ್ರೋಲಿಯಂ ಪ್ಲ್ಯಾಂಟ್‌ಗಳಿಂದ ಸಿಲಿಂಡರ್‌ ಪೂರೈಕೆಯಾಗುತ್ತಿಲ್ಲ. ಈ ಪ್ಲಾಂಟ್‌ಗಳನ್ನೇ ಅವಲಂಬಿಸಿರುವ ಹುಬ್ಬಳ್ಳಿ-ಧಾರವಾಡ, ಗದಗ, ಕೊಪ್ಪಳ, ಹಾವೇರಿ ಜಿಲ್ಲೆಗಳಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಇದರಿಂದಾಗಿ ಅಡುಗೆ ಮನೆಗಳಿಗೂ ಪ್ರವಾಹದ ಬಿಸಿ ತಟ್ಟಿದೆ. ಒಂದೇ ಸಿಲಿಂಡರ್‌ ಸಂಪರ್ಕ ಹೊಂದಿರುವ ಗ್ರಾಹಕರು ಕಟ್ಟಿಗೆ ಹಾಗೂ ವಿದ್ಯುತ್‌ ಒಲೆಗಳ ಮೊರೆ ಹೋಗುವಂತಾಗಿದೆ.

15 ದಿನ ಕಾದಿದ್ದರೂ ಸಿಗುತ್ತಿಲ್ಲ: ಎಚ್ಪಿ ಗ್ಯಾಸ್‌, ಭಾರತ ಪೆಟ್ರೋಲಿಯಂ ಗ್ಯಾಸ್‌ ಸೇರಿದಂತೆ ವಿವಿಧ ಬಗೆಯ ಅಡುಗೆ ಅನಿಲ ಸಿಲಿಂಡರ್‌ಗಳಿಗಾಗಿ ಗ್ರಾಹಕರು ಮೊಬೈಲ್ ಮೂಲಕ ನೋಂದಾಯಿಸಿಕೊಂಡಿದ್ದು, 15 ದಿನಗಳಿಂದ ಕಾದಿದ್ದರೂ ಅಡುಗೆ ಸಿಲಿಂಡರ್‌ ಸಿಗೂತ್ತಿಲ್ಲ. 20ರಿಂದ 25 ದಿನಗಳ ಹಿಂದೆ ಗ್ಯಾಸ್‌ ಸಿಲಿಂಡರ್‌ಗಾಗಿ ಬೇಡಿಕೆ ಸಲ್ಲಿಸಿದವರಿಗೆ ಈಗೀಗ ಪೂರೈಕೆಯಾಗುತ್ತಿದೆ. ಈ ಪರಿಸ್ಥಿತಿಯಿಂದ ಗದಗ ಜಲ್ಲೆಯೂ ಹೊರತಾಗಿಲ್ಲ. ಗದಗ ಹಾಗೂ ಸುತ್ತಮುತ್ತಲಿನ ಜನರು ಬೆಳಗ್ಗೆಯೇ ಖಾಲಿ ಸಿಲಿಂಡರ್‌ಗಳೊಂದಿ ಗೆ ತಮ್ಮ ಗ್ಯಾಸ್‌ ಕಂಪನಿಗಳ ಏಜೆನ್ಸಿ ಕಚೇರಿಗಳಿಗೆ ದಾವಿಸುತ್ತಿದ್ದಾರೆ. ನಗರದ ಲಖಾನಿ ಗ್ಯಾಸ್‌ ಏಜೆನ್ಸಿ ಎದುರು ಬೆಳಗ್ಗೆ 6 ರಿಂದಲೇ ಜನರು ಸಾಲುಗಟ್ಟುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ತಡವಾಗಿ ಬಂದರೆ ಸಿಲಿಂಡರ್‌ ಸಿಗದು ಎನ್ನುತ್ತಾರೆ ಗ್ರಾಹಕರು.

ಕಳೆದ ತಿಂಗಳು ಪ್ರವಾಹ ಉಂಟಾಗಿದ್ದರಿಂದ ನಾಲ್ಕೈದು ದಿನಗಳ ಕಾಲ ಗ್ಯಾಸ್‌ ಪ್ಲಾಂಟ್‌ಗಳು ಬಾಗಿಲು ಮುಚ್ಚಿದ್ದವು. ಅದರೊಂದಿಗೆ ಆರೇಳು ದಿನ ಸಿಲಿಂಡರ್‌ ಸಾಗಿಸುವ ವಾಹನಗಳು ಸಂಚರಿಸಲಿಲ್ಲ. ಪ್ರವಾಹ ನಿಂತ ಬಳಿಕ ಈ ಭಾಗದ ಬಹುತೇಕ ಎಲ್ಲ ಗ್ಯಾಸ್‌ ಏಜೆನ್ಸಿಗಳಿಗೆ ವಾಣಿಜ್ಯ ಉದ್ದೇಶಿತ ಸೇರಿದಂತೆ ದಿನಕ್ಕೆ ತಲಾ 100ರಿಂದ 150 ಸಿಲಿಂಡರ್‌ಗಳು ಮಾತ್ರ ಪೂರೈಕೆಯಾಗುತ್ತಿವೆ. ಇದು ಈ ಹಿಂದೆ ಪೂರೈಕೆಯಾಗುತ್ತಿದ್ದ ಸಿಲಿಂಡರ್‌ಗಳ ಸಂಖ್ಯೆಗಿಂತ ಭಾಗಶಃ ಕಡಿಮೆ. ಹೀಗಾಗಿ ಅಡುಗೆ ಅನಿಲ ಸಮಸ್ಯೆ ತೀವ್ರಗೊಂಡಿದೆ ಎಂದು ಹೇಳಲಾಗಿದೆ.

ಪ್ರವಾಹ ನಿಂತು ತಿಂಗಳು ಕಳೆದರೂ ಗ್ರಾಹಕರಿಗೆ ಮಾತ್ರ ಮನೆ ಬಳಕೆಗೆ ಅಡುಗೆ ಅನಿಲ ಸಿಗುತ್ತಿಲ್ಲ. ಆದರೆ, ಸಿಲಿಂಡರ್‌ ಕೊರತೆಯಿಂದ ಯಾವುದೇ ಹೋಟೆಲ್ನ ಬಾಗಿಲು ಮುಚ್ಚಿಲ್ಲ. ಗ್ಯಾಸ್‌ ಏಜೆನ್ಸಿಯವರು ತಮ್ಮ ಲಾಭಕ್ಕಾಗಿ ವಾಣಿಜ್ಯ ಉದ್ದೇಶಿತ ಸಿಲಿಂಡರ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತರಿಸುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರಿಗೆ ಅಡುಗೆ ಅನಿಲ ಸಮಸ್ಯೆ ಎದುರಾಗಿದೆ ಎಂಬುದು ಸಾರ್ವಜನಿಕರ ಆರೋಪ.

ಈ ಹಿಂದೆ ಬುಕ್‌ ಮಾಡಿದ ಬಳಿಕ ಒಂದು ವಾರದಲ್ಲಿ ಸಿಲಿಂಡರ್‌ ಸಿಗುತ್ತಿತ್ತು. ಆದರೆ, ಈಗ 15 ದಿನಗಳಿಂದ ಕಾದಿದ್ದರೂ ಸಿಲಿಂಡರ್‌ ಸಿಗುತ್ತಿಲ್ಲ. ನಿನ್ನೆಯೂ ಬಂದಿದ್ದೆ, ಸರದಿ ಅರ್ಧ ಪೂರ್ಣಗೊಳ್ಳುವುದರ ಒಳಗೆ ಸಿಲಿಂಡರ್‌ ಖಾಲಿಯಾಯ್ತು ಎಂದು ವಾಪಸ್‌ ಕಳಿಸಿದರು. ಹೀಗಾಗಿ ಇವತ್ತು ಬೆಳಗ್ಗೆ 6 ಗಂಟೆಗೆಲ್ಲಾ ಅಂತೂರು-ಬೆಂತೂರು ಗ್ರಾಮದಿಂದ ಬಂದು ಸರದಿಯಲ್ಲಿ ನಿಂತಿದ್ದೇನೆ. ಗ್ರಾಹಕರ ಹಿತ ದೃಷ್ಟಿಯಿಂದ ಹೆಚ್ಚಿನ ಸಿಲಿಂಡರ್‌ ಪೂರೈಕೆ ಮಾಡಬೇಕು. •ಶಿವಾನಂದ ಹರ್ತಿ, ಅಂತೂರು-ಬೆಂತೂರು ಗ್ರಾಮಸ್ಥ
ಮಳೆ, ಪ್ರವಾಹ ಕಾರಣಕ್ಕೆ ನಾಲ್ಕೈದು ದಿನಗಳ ಕಾಲ ಸಿಲಿಂಡರ್‌ ಪೂರೈಕೆ ನಿಂತಿತ್ತು. ಅಲ್ಲಲ್ಲಿ ರಸ್ತೆಗಳು ಕೊಚ್ಚಿ ಹೋಗಿದ್ದರಿಂದ ಲಾರಿಗಳು ಅಲ್ಲಲ್ಲೇ ನಿಂತಿದ್ದವು. ಅದರೊಂದಿಗೆ ಪ್ಲಾಂಟ್ ಕೂಡಾ ನಾಲ್ಕೈದು ದಿನ ಬಂದ್‌ ಆಗಿತ್ತು. ಹೀಗಾಗಿ ಈ ಹಿಂದೆ ನೋಂ ದಾಯಿಸಿಕೊಂಡವರಿಗೇ ಸಿಲಿಂಡರ್‌ ಸಿಗುತ್ತಿಲ್ಲ. ಸದ್ಯ ನಮ್ಮ ಏಜೆನ್ಸಿಯೊಂದರಲ್ಲೇ 4000 ಸಾವಿರ ಗ್ರಾಹಕರು ಸಿಲಿಂಡರ್‌ ಬೇಡಿಕೆ ಸಲ್ಲಿಸಿ ಕಾದಿದ್ದಾರೆ. ಎಲ್ಲ ಸಮಸ್ಯೆ ಬಗೆಹರಿಯಲು ಕನಿಷ್ಠ 20 ದಿನಗಳು ಬೇಕಾಗುತ್ತದೆ. •ಎ.ಕೆ. ಲಖಾನಿ, ಲಖಾನಿ ಎಚ್.ಪಿ. ಗ್ಯಾಸ್‌ ಏಜೆನ್ಸಿ ಮಾಲೀಕ
•ವೀರೇಂದ್ರ ನಾಗಲದಿನ್ನಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ