ಗದಗ ಡಿಎಸ್ಪಿ ಶಿವಾನಂದ ಪವಾಡ ಶೆಟ್ಟರ ಮಾನವೀಯ ಸೇವೆ
ಬಡವರಿಗೆ ಆಹಾರ ಕಿಟ್ ವಿತರಣೆ
Team Udayavani, May 18, 2021, 2:43 PM IST
ಶಿರಹಟ್ಟಿ: ಶಿರಹಟ್ಟಿ ಪಟ್ಟಣ ಸೇರಿದಂತೆ ತಾಲೂಕಿನ ಬೆಳ್ಳಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರ ಗ್ರಾಮಗಳಲ್ಲಿ ಬಡವರಿಗೆ ಗದಗ ಡಿಎಸ್ಪಿ ಶಿವಾನಂದ ಪವಾಡಶೆಟ್ಟರ ಆಹಾರ ಕಿಟ್ ಗಳನ್ನು ವಿತರಿಸಿದರು.
ಆಹಾರ ಕಿಟ್ ವಿತರಣೆ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಗದಗ ಡಿಎಸ್ಪಿ ಶಿವಾನಂದ ಪವಾಡಶೆಟ್ಟರ, ಕೋವಿಡ್-19ನ 2ನೇ ಅಲೆಯಿಂದ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನಿರ್ಗತಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಇಂತಹವರ ನೆರವಿಗೆ ಬರುವ ಉದ್ದೇಶದಿಂದ ಉಚಿತವಾಗಿ ಬಡವರಿಗೆ ಅವಶ್ಯಕ ದಿನಸಿ ವಸ್ತುಗಳನ್ನು ನೀಡಲಾಗಿದೆ.
ಕೋವಿಡ್ ನಿಯಂತ್ರಣಕ್ಕಾಗಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು. ಅನವಶ್ಯಕವಾಗಿ ಸಂಚರಿಸಬಾರದು, ಅಗತ್ಯ ವಸ್ತು ಗಳನ್ನು ಕೊಳ್ಳುವಾಗ ಸಾಮಾಜಿಕ ಅಂತರ ವನ್ನು ಕಾಪಾಡಿಕೊಂಡು ನಿಮ್ಮ ಆರೋಗ್ಯ ಕಾಪಾಡಿಕೊಂಡು ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕೆಂದು ಹೇಳಿದರು. ಸಿಪಿಐ ವಿಕಾಸ ಲಮಾಣಿ ಮಾತನಾಡಿ, ಶಿರಹಟ್ಟಿ-ಲಕ್ಷ್ಮೇಶ್ವರ ಪಟ್ಟಣಗಳಲ್ಲಿ ಬಡವರನ್ನು ಗುರುತಿಸಿ ಅಂತಹವರಿಗೆ ದಿನಸಿ ವಸ್ತುಗಳನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಸಿಬ್ಬಂದಿಗಳಿಗೂ ಸಹ ಆಹಾರ ಕಿಟ್‌ಗಳನ್ನು ನೀಡಲಾಗಿದೆ ಎಂದರು. ಪಿಎಸ್‌ಐ ನವೀನಕುಮಾರ ಜಕ್ಕಲಿ, ಬೆಳ್ಳಟ್ಟಿ ಗ್ರಾಪಂ ಸದಸ್ಯ ತಿಮ್ಮರಡ್ಡಿ ಮರಡ್ಡಿ, ಮೋಹನ ಗುತ್ತೆಮ್ಮನವರ, ಪ್ರವೀಣಗೌಡ ಪಾಟೀಲ ಉಪಸ್ಥಿತರಿದ್ದರು.