ಕೂಲಿ ಕೆಲಸಕ್ಕೆ ಕರೆದೊಯ್ದು ಸಂಬಳ ನೀಡದೆ ವಂಚನೆ
Team Udayavani, Feb 16, 2021, 3:59 PM IST
ರೋಣ: ತಾಲೂಕಿನ ಕೊತಬಾಳ ಗ್ರಾಮದ 20 ಜನರನ್ನು ಕಾಲುವೆ ಕಾಮಗಾರಿ ಕೆಲಸಕ್ಕೆಂದು ಕರೆದುಕೊಂಡು ಹೋಗಿ ಸಂಬಳ ನೀಡದೆ ಕಾರ್ಮಿಕರನ್ನು ಮಧ್ಯವರ್ತಿಗಳು ಸತಾಯಿಸಿದ್ದಾರೆ.
ಕೊತಬಾಳ ಗ್ರಾಮದಲ್ಲಿನ 20 ಜನರನ್ನು ಕರಿಯಪ್ಪ ರಾಥೋಡ ಎಂಬ ವ್ಯಕ್ತಿ ಜನೆವರಿ ತಿಂಗಳಲ್ಲಿ ಹೈದರಾಬಾದ್ ರಾಜ್ಯದ ಸಿದ್ದಿಪೇಟೆ ಜಿಲ್ಲೆಯ ದುಬಾಕ ಎಂಬ ಊರಿಗೆ ಕಾಲುವೆ ಕಾಮಗಾರಿ ಕೆಲಸಕ್ಕೆಂದು ಕೊತಬಾಳ ಗ್ರಾಮದ 14 ಜನ ಪುರುಷರುಹಾಗೂ 6 ಜನ ಮಹಿಳೆಯರನ್ನು ಕರೆದುಕೊಂಡು ಹೋಗಿದ್ದರು. ದಿನಕ್ಕೆ ಪುರುಷರಿಗೆ 550 ರೂ., ಮಹಿಳೆಯರಿಗೆ 350 ರೂ. ಸಂಬಳ ನೀಡುವುದಾಗಿ ಹೇಳಿ ವಾರ, ತಿಂಗಳು ಕಳೆದರೂ ಸಂಬಳ ನೀಡದೆ ಸತಾಯಿಸಿದ್ದಾರೆ. ಕನಿಷ್ಟ ಊಟ, ವಸತಿ ವ್ಯವಸ್ಥೆ ಮಾಡದೇ ಅಮಾನವೀಯವಾಗಿ ನಡೆದುಕೊಂಡಿದ್ದಾನೆ.
ಅಲ್ಲಿಯ ಜನರ ಸಮಸ್ಯೆಯನ್ನರಿತ ಕೊತಬಾಳ ಗ್ರಾಮದ ಗ್ರಾಮ ಪಂಚಾಯತಿ ಅಧ್ಯಕ್ಷ ವೀರಣ್ಣ ಯಾಳಗಿ, ಹೈದರಾಬಾದ್ ಪೊಲೀಸರನ್ನು ಸಂಪರ್ಕಿಸಿ ಅಲ್ಲಿರುವ ಜನರನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಂತರ ಸಂಬಳ ನೀಡದ ಮಧ್ಯವರ್ತಿಯನ್ನು ಸಂಪರ್ಕಿಸಿದಾಗ, ಫೆ.16 ರಂದು ಸಂಬಳ ನೀಡುವುದಾಗಿ ಹೇಳಿದ್ದಾನೆ. ಶೇಖಪ್ಪ ಐಹೊಳಿ, ಸುರೇಶ ಸಂದಿಮನಿ, ಬಸಪ್ಪ ಯಮನೂರಪ್ಪ ಮಾದರ, ಪ್ರವೀಣ ಐಹೊಳಿ, ರಮೇಶ ಮಾದರ, ಕೆಂಚಪ್ಪ ಪೂಜಾರ, ಯಲ್ಲಪ್ಪ ಪೂಜಾರ, ಮಹಾಬಳೇಶ್ವರ ಐಹೊಳಿ, ಚಂದ್ರು ಸಂದಿಮನಿ, ಯಶೋಧಾಸಂದಿಮನಿ, ರೇಣವ್ವ ಐಹೊಳಿ, ಭೀಮವ್ವ ಹಿರೇಮನಿ, ಯಮನವ್ವ ಹಿರೇಮನಿ, ದುರಗವ್ವ ಐಹೊಳಿ, ಕಾವೇರಿ ಐಹೊಳಿ, ಮತ್ತಿತರರು ಕೆಲಸಕ್ಕೆ ತೆರಳಿದ್ದರು. ಬದಾಮಿ ತಾಲೂಕಿನ ಆನಂದಗಿರಿ ಗ್ರಾಮದ ಕರಿಯಪ್ಪ ರಾಠೊಡ ಎಂಬ ವ್ಯಕ್ತಿ ಆಂಧ್ರಪ್ರದೇಶಕ್ಕೆ ಕೆಲಸಕ್ಕೆಕೋತಬಾಳದ 20 ಕ್ಕೂ ಹೆಚ್ಚು ಕಾರ್ಮಿಕರನ್ನು ಕೆಲಸಕ್ಕೆ ಕರೆದುಕೊಂಡು ಹೋಗಿ ಸಂಬಳನೀಡದೆ ವಂಚನೆ ಮಾಡಿದ ಘಟನೆ ನಡೆದಿದೆ. ಈ ಕುರಿತು ಸಂಬಂಧಿ ಸಿದ ವ್ಯಕ್ತಿಯನ್ನು ಠಾಣೆಗೆ ಕರೆಸಿ ತನಿಖೆ ನಡೆಸಿ, ಬಡ ಕಾರ್ಮಿಕರಿಗೆ ನ್ಯಾಯ ಒದಗಿಸಲಾಗುವುದು ಎಂದು ರೋಣ ಪಿಎಸ್‌ಐ ವಿನೋದ ಪೂಜಾರ ತಿಳಿಸಿದರು.