ಗದಗ: ಪತಿಯನ್ನು ಜಿಲ್ಲಾಸ್ಪತ್ರೆಗೆ ತಳ್ಳುಗಾಡಿಯಲ್ಲಿ ಕರೆತಂದ ಪತ್ನಿ
Team Udayavani, May 28, 2021, 9:10 PM IST
ಗದಗ: ಜಿಲ್ಲಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಣೆಯಾಗಿದ್ದರಿಂದ ವಾಹನ ಸಿಗದೇ ಮಹಿಳೆಯೊಬ್ಬರು ಪತಿಯನ್ನು ಸುಮಾರು 4 ಕಿ.ಮೀ. ದೂರದ ಜಿಲ್ಲಾ ಆಸ್ಪತ್ರೆಗೆ ತಳ್ಳುಗಾಡಿಯಲ್ಲೇ ಕರೆದೊಯ್ದ ಮನಕಲುಕುವ ಘಟನೆ ನಗರದಲ್ಲಿ ಗುರುವಾರ ನಡೆದಿದೆ.
ಇಲ್ಲಿನ ಸಿದ್ಧರಾಮೇಶ್ವರ ನಗರದ ಗೋವಿಂದಪ್ಪ ಎಂಬಾತ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಎರಡು ತಿಂಗಳ ಹಿಂದೆ ಶಸ್ತ್ರ ಚಿಕಿತ್ಸೆ ನಡೆಸಿದ್ದ ವೈದ್ಯರು ಒಂದು ಕಾಲು ತೆಗೆದಿದ್ದರು. ಇಂದು ಮತ್ತೆ ಚಿಕಿತ್ಸೆ ಪಡೆದು, ಕಾಲಿಗೆ ಡ್ರೆಸ್ಸಿಂಗ್ ಮಾಡಿಸಿಕೊಂಡು ಔಷಧತೆಗೆದುಕೊಂಡು ಹೋಗಲು ವೈದ್ಯರು ಸೂಚಿಸಿದ್ದರು. ಆದರೆ ಗುರುವಾರದಿಂದ ಜಿಲ್ಲಾದ್ಯಂತ ಸಂಪೂರ್ಣ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಆಟೋ ಸೇರಿದಂತೆ ಯಾವುದೇ ವಾಹನಗಳು ಸಿಕ್ಕಿಲ್ಲ.
ದಾರಿ ಮಧ್ಯೆ ಕಾಣಿಸಿಕೊಂಡ ಒಂದೆರಡು ಆಟೋ ಚಾಲಕರೂ 300-400 ರೂ. ಬಾಡಿಗೆ ಕೇಳಿದ್ದರಿಂದ ಬಡ ಮಹಿಳೆ ಹಾಗೂ ಮಗ ಕೂಡಿಕೊಂಡು ನೀರಿನ ಕೊಡ ಸಾಗಿಸುವ ತಳ್ಳುಗಾಡಿಯಲ್ಲೇ ಗೋವಿಂದಪ್ಪನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.