ಅಧಿಕಾರಿಗಳು ಕಿರುಕುಳ ನೀಡಿದ್ರೆ ತಿಳಿಸಿ
ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರಿಗೆ ತಾಪಂ ಇಒ ಮಹಮ್ಮದ ಸಲಹೆ
Team Udayavani, May 1, 2021, 5:37 PM IST
ಗಜೇಂದ್ರಗಡ: ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಮಾಡುವ ಕಾರ್ಮಿಕರು ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕೆಲಸದಲ್ಲಿ ಪಾಲ್ಗೊಳ್ಳಬೇಕು. ಈ ನಿಟ್ಟಿನಲ್ಲಿ ಅ ಧಿಕಾರಿಗಳು ನಿಮ್ಮ ಮೇಲೆ ಒತ್ತಡ ಹಾಕಿ, ಕಿರುಕುಳ ನೀಡಿದರೆ ತಕ್ಷಣ ನನ್ನ ಗಮನಕ್ಕೆ ತರಬೇಕೆಂದು ತಾಪಂ ಕಾರ್ಯನಿರ್ವಾಹಕ ಅಧಿ ಕಾರಿ ಮಹಮ್ಮದ ಹೇಳಿದರು.
ಸಮೀಪದ ಗೋಗೇರಿ ಗ್ರಾಪಂ ವತಿಯಿಂದ ನಡೆಯುತ್ತಿರುವ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ದೇಶಾದ್ಯಂತ ಕೋವಿಡ್ ಎರಡನೇ ಅಲೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಸರ್ಕಾರ ಕೊರೊನಾ ನಿಯಂತ್ರಣ ಮಾಡಲು ಕರ್ಫ್ಯೂ ಹೇರಿದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರ ಬದುಕಿನ ಜತೆಗೆ ಜೀವನದ ಪ್ರಾಮುಖ್ಯತೆ ಅಡಗಿರುತ್ತದೆ. ನರೇಗಾ ಕರ್ತವ್ಯದಲ್ಲಿರುವ ಪ್ರತಿಯೊಬ್ಬ ಕೂಲಿಕಾರರ ಆರೋಗ್ಯದ ಹೊಣೆಗಾರಿಕೆ ಎಲ್ಲರ ಮೇಲಿದೆ. ಹೀಗಾಗಿ, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಬೇಕು. ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಜಾಗರೂಕತೆಯಿಂದ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಗ್ರಾಮೀಣ ಭಾಗದಿಂದ ಜನರು ಕೂಲಿ ಕೆಲಸಕ್ಕಾಗಿ ಅಲೆದಾಡುವುದನ್ನು ತಪ್ಪಿಸಿ, ಇಂತಹ ಸಂಕಷ್ಟದ ಸಂದರ್ಭದಲ್ಲಿ ಅವರ ಜೀವನಕ್ಕೆ ಆಸರೆ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿದೆ. ಅಲ್ಲದೇ, ಜಾಬ್ ಕಾರ್ಡ್ ಹೊಂದಿದ ಪ್ರತಿಯೊಬ್ಬರಿಗೂ ಕೂಲಿ ಕೆಲಸ ನೀಡಲಾಗುತ್ತಿದೆ. ಗ್ರಾಪಂ ಮಟ್ಟದ ಅ ಧಿಕಾರಿಗಳು ನಿಮಗೆ ಹಣ ಸಂದಾಯ, ಕೂಲಿ ನೀಡುವಲ್ಲಿ ತಾರತಮ್ಯ ಎಸಗಿದರೆ ನನ್ನ ಗಮನಕ್ಕೆ ತರಬೇಕು. ಅಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು. ಇಮಾಮಸಾಬ ಬಾಗವಾನ, ಕಟ್ಟೆಪ್ಪ ಮಾದರ, ಕಳಕಪ್ಪ ಭೋಸಲೆ, ಗ್ರಾಮಸ್ಥರಾದ ಮಲ್ಲಿಕಾರ್ಜುನ ಗಾರಗಿ, ಕೆ.ಎಸ್. ಕೊಡತಗೇರಿ ಇನ್ನಿತರರು ಹಾಜರಿದ್ದರು.