ಸಾಂಕ್ರಾಮಿಕ ರೋಗಗಳ ತಡೆಗೆ ಒತ್ತಾಯ

•ನೆರೆ ಪರಿಹಾರ ಕ್ರಮ ಚರ್ಚಿಸಲು ಜಿಪಂ ವಿಶೇಷ ಸಭೆ •ಜಿಲ್ಲಾ ಆರೋಗ್ಯ ಅಧಿಕಾರಿ ವಿರುದ್ಧ ಸದಸ್ಯರು ಗರಂ

Team Udayavani, Aug 20, 2019, 1:10 PM IST

ಗದಗ: ಜಿಪಂ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷ ಎಸ್‌.ಪಿ. ಬಳಿಗಾರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಿತು.

ಗದಗ: ಜಿಲ್ಲೆಯಲ್ಲಿ ಉಂಟಾಗಿದ್ದ ಪ್ರವಾಹದಿಂದ ಜನಜೀವನ ಬೀದಿಗೆ ಬಂದಿದೆ. ನೆರೆ ಸಂತ್ರಸ್ತರಿಗೆ ಜಿಲ್ಲೆಯ ವಿವಿಧೆಡೆ ತಾತ್ಕಾಲಿಕ ಪರಿಹಾರ ಕೇಂದ್ರಗಳನ್ನು ಆರಂಭಿಸಿ ವೈದ್ಯಕೀಯ ಸಿಬ್ಬಂದಿಯನ್ನೂ ನೇಮಿಸಲಾಗಿತ್ತು. ಆದರೆ, ಅವರಿಗೆ ಹೆಚ್ಚಿನ ಮಾರ್ಗದರ್ಶನ ನೀಡಬೇಕಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಇತ್ತ ಸುಳಿದೇ ಇಲ್ಲ ಎಂದು ಜಿ.ಪಂ. ಸದಸ್ಯರು ಪಕ್ಷಾತೀತವಾಗಿ ಆರೋಪಿಸಿದರು.

ಮಲಪ್ರಭಾ ಮತ್ತು ತುಂಗಭದ್ರಾ ನದಿಗಳಿಂದ ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ, ನಂತರದ ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಲು ಇಲ್ಲಿನ ಜಿ.ಪಂ. ಸಭಾಂಗಣದಲ್ಲಿ ಜಿ.ಪಂ. ಅಧ್ಯಕ್ಷ ಎಸ್‌.ಪಿ. ಬಳಿಗಾರ ಅಧ್ಯಕ್ಷತೆಯಲ್ಲಿ ಸೋಮವಾರ ಜಿಪಂ ವಿಶೇಷ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ ನೀಲಗುಂದ ಹಾಗೂ ಪಡಿಯಪ್ಪ ಪೂಜಾರ, ರೋಣ ತಾಲೂಕಿನ ಹತ್ತಾರು ಗ್ರಾಮಗಳು ನೆರೆಯಿಂದ ಸಂಕಷ್ಟಕ್ಕೆ ಸಿಲುಕಿದೆ. ಪ್ರವಾಹ ಪೀಡಿತರು ಸಾಮಾನ್ಯ ಜ್ವರ ಸೇರಿದಂತೆ ಹಲವು ಗಂಭೀರ ಕಾಯಿಲೆಗಳು ಕಾಡುತ್ತಿವೆ. ಜಿಲ್ಲಾಡಳಿತದಿಂದ ಆರಂಭಿಸಿರುವ ಪರಿಹಾರ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ ನೀಡುತ್ತಿದ್ದಾರೆ. ಸಿಬ್ಬಂದಿಗೆ ಹೆಚ್ಚಿನ ಮಾರ್ಗದರ್ಶನ ನೀಡಬೇಕಿದ್ದ ಜಿಲ್ಲಾ ಆರೋಗ್ಯ ಅಧಿಕಾರಿ ವಿರೂಪಾಕ್ಷರೆಡ್ಡಿ ಮಾದಿನೂರ ಇತ್ತ ಸುಳಿದೇ ಇಲ್ಲ ಎಂದು ನೇರವಾಗಿ ಆರೋಪಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಅಧಿಕಾರಿ ವಿರೂಪಾಕ್ಷರೆಡ್ಡಿ ಮಾದಿನೂರ, ತಾವು ಜಿಲ್ಲೆಯ ಎಲ್ಲ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ. ಪ್ರವಾಹದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಒ ಅವರ ಜೊತೆಗೇ ಇದ್ದು ಕೆಲಸ ಮಾಡಿದ್ದೇನೆ. ಸುಮಾರು 7 ಲಕ್ಷ ರೂ. ಮೌಲ್ಯದ ಔಷಧಿಗಳನ್ನು ಸರಬರಾಜು ಮಾಡಿದ್ದಾಗಿ ಸಮರ್ಥಿಸಿಕೊಂಡರು.

ಅಷ್ಟಕ್ಕೆ ತೃಪ್ತರಾಗದ ಪಡಿಯಪ್ಪ ಪೂಜಾರ, ಯಾವ ದಿನದಂದು ಎಲ್ಲಿಗೆ ಭೇಟಿ ನೀಡಿದ್ದೀರಿ? ಸಭೆಗೆ ತಮ್ಮ ಡೈರಿ ಪ್ರದರ್ಶಿಸುವಂತೆ ಸವಾಲು ಹಾಕಿದರು.

ಈ ವೇಳೆ ಮಧ್ಯೆ ಪ್ರವೇಶಿಸಿದ ಜಿ.ಪಂ. ಸಿಇಒ ಮಂಜುನಾಥ ಚವ್ಹಾಣ, ಮೆಣಸಗಿ ಮತ್ತು ಹೊಳೆಆಲೂರು ಪರಿಹಾರ ಕೇಂದ್ರಗಳಿಗೆ ನಾವು ಭೇಟಿ ನೀಡಿದ್ದಾಗ ಅಲ್ಲಿ ಡಿಎಚ್ಒ ಇದ್ದರು. ಆದರೆ, ನಮ್ಮ ಜೊತೆಗಿದ್ದೆ ಎಂಬ ಮಾತು ಸರಿಯಲ್ಲ. ಸಭೆಗೆ ತಪ್ಪು ಮಾಹಿತಿ ನೀಡದೇ, ನೀವು ಮಾಡಿರುವ ಕೆಲಸವನ್ನು ಸದಸ್ಯರಿಗೆ ವಿವರಿಸಬೇಕು ಎಂದು ತರಾಟೆಗೆ ತೆಗೆದುಕೊಂಡರು.

ಅಲ್ಲದೇ, ನೆರೆ ಬಳಿಕ ಉಲ್ಬಣಿಸುವ ಸಾಂಕ್ರಾಮಿಕ ರೋಗಗಳ ತಡೆಗೆ ಆರೋಗ್ಯ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರಾದ ವಾಸಣ್ಣ ಕುರಡಗಿ, ಸಿದ್ಧುಪಾಟೀಲ, ಈಶ್ವರಪ್ಪ ಹುಲ್ಲಲ್ಲಿ, ಈರಪ್ಪ ನಾಡಗೌಡ್ರ, ಶಿವಕುಮಾರ ನೀಲಗುಂದ ಒತ್ತಾಯಿಸಿದರು.

ಹೊಳೆಆಲೂರಿನ ಅಂಧ ಮಕ್ಕಳ ಜ್ಞಾನ ಸಿಂಧು ಶಾಲೆ ಅನುದಾನ ಕಡಿತಗೊಳಿಸಿರುವುದಕ್ಕೆ ಆಕ್ಷೇಪಿಸಿ ಜಿ.ಪಂ. ಸದಸ್ಯ ಪಡಿಯಪ್ಪ ಪೂಜಾರ, ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ವಿರುದ್ಧ ಅಸಾಮಾಧಾನ ವ್ಯಕ್ತಪಡಿಸಿದರು. ಇತ್ತೀಚೆಗೆ ಹೊಳೆ ಉಕ್ಕಿ ಹರಿದಾಗಲೂ ಮಕ್ಕಳ ಬಗ್ಗೆ ಕನಿಷ್ಠ ಕಾಳಜಿ ತೋರಿಲ್ಲ ಎಂದು ಸಭೆಗೆ ದೂರಿದರು.

ಬಳಿಕ ಕೃಷಿ ಇಲಾಖೆಯ ತಾಡಪತ್ರಿ ಕುರಿತ ಚರ್ಚೆಯಲ್ಲಿ ಕಳೆದ ಸಾಲಿನ ತಾಡಪತ್ರಿಗಳ ವಿತರಣೆ ಬಾಕಿ ಇದೆ. 2019-20ನೇ ಸಾಲಿಗೆ ಇಲಾಖೆಯ ಆಯುಕ್ತರ ಹಂತದಲ್ಲಿ ಟೆಂಡರ್‌ ಪ್ರಕ್ರಿಯೆ ಮುಂದುವರಿದಿದೆ ಎಂದು ಕೃಷಿ ಜಂಟಿ ನಿರ್ದೇಶಕ ರುದ್ರೇಶ ಸಭೆಗೆ ವಿವರಿಸಿದರು.

ಈ ವೇಳೆ ಮಾತನಾಡಿದ ಜಿ.ಪಂ. ಸದಸ್ಯ ಸಿದ್ದುಪಾಟೀಲ, ಸದ್ಯ ಜಿಲ್ಲೆಯಲ್ಲಿ ನೆರೆ ಹಾವಳಿ ಆವರಿಸಿದ್ದು, ತಕ್ಷಣವೇ ಬಾಕಿ ಇರುವ ತಾಟಪಾಲ್ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಇದರಿಂದ ರೈತರು ಅಳಿದುಳಿದ ಕಾಳು-ಕಡಿಯನ್ನು ಸಂರಕ್ಷಿಸಿಕೊಳ್ಳುತ್ತಾರೆ ಎಂದು ಒತ್ತಾಯಿಸಿದರು.

ಕೇವಲ ಪಹಣ ಇರುವ ರೈತರಲ್ಲದೇ, ಮನೆಗೊಂದು ತಾಟಪಾಲ್ ಒದಗಿಸಬೇಕು. ಅದಕ್ಕಾಗಿ ಎನ್‌ಡಿಆರ್‌ಎಫ್‌ ನಿಧಿಯಡಿ ತಾಟಪಾಲ್ ಖರೀದಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದ ಜಿ.ಪಂ. ಅಧ್ಯಕ್ಷ ಎಸ್‌.ಪಿ.ಬಳಿಗಾರ, ತ್ವರಿಗತಿಯಲ್ಲಿ ಟೆಂಡರ್‌ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಶಿಕ್ಷಣ, ಕುಡಿಯುವ ನೀರು ಮತ್ತು ಸ್ವಚ್ಛತೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಜಿ.ಪಂ. ಉಪಾಧ್ಯಕ್ಷೆ ಶಕುಂತಲಾ ರವೀಂದ್ರ ಮೂಲಿಮನಿ ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ