ಕಪ್ಪಲಿ ಗ್ರಾಮಸ್ಥರಿಗೆ ಸುರಕ್ಷತೆಯದ್ದೇ ಚಿಂತೆ

Team Udayavani, Sep 1, 2019, 11:00 AM IST

ಗದಗ: ಮೇಲಿಂದ ಮೇಲೆ ನೆರೆ ಹಾವಳಿಗೆ ಸಿಲುಕುತ್ತಿರುವ ಕಪ್ಪಲಿ ಗ್ರಾಮವನ್ನು ಮುಳುಗಡೆ ಗ್ರಾಮವನ್ನಾಗಿಸಿ ಸರ್ಕಾರ ಘೋಷಿಸಬೇಕು. ಸುರಕ್ಷಿತ ಸ್ಥಳದಲ್ಲಿ ಪುನರ್ವಸತಿ ಕಲ್ಪಿಸಬೇಕು ಎಂಬ ಸಂತ್ರಸ್ತರ ಕೂಗು ಜೋರಾಗಿದೆ.

ಮಲಪ್ರಭಾ ನದಿಯಿಂದ ಇತ್ತೀಚೆಗೆ ಉಂಟಾಗಿದ್ದ ಭೀಕರ ಪ್ರವಾಹದಿಂದ ಅಕ್ಷರಶಃ ನರಗುಂದ ತಾಲೂಕಿನ ಕಪ್ಪಲಿ ಗ್ರಾಮ ಜಲದಿಗ್ಬಂಧನಕ್ಕೊಳಗಾಗಿತ್ತು. ನವಿಲುತೀರ್ಥ ಜಲಾಶಯದಿಂದ ಸುಮಾರು 1.10 ಲಕ್ಷ ಕ್ಯೂಸೆಕ್‌ ನೀರು ಹರಿಸಿದ್ದರಿಂದ ನದಿ ದಂಡೆ ಯಲ್ಲಿರುವ ಕಪ್ಪಲಿ ಗ್ರಾಮಕ್ಕೆ ಅಪಾರ ಪ್ರಮಾಣದ ನೀರು ನುಗ್ಗಿದ್ದರಿಂದ ಸ್ಥಳೀಯ ಗ್ರಾಮಸ್ಥರಿಗೆ ಜೀವ ಉಳಿದರೆ ಸಾಕು ಎನ್ನುವಂತಾಗಿತ್ತು. ಹೇಗೋ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿರುವ ನೂರಾರು ಜನರು, ಇದೀಗ ತಮ್ಮ ಗ್ರಾಮವನ್ನು ಸ್ಥಳಾಂತರಿಸುವಂತೆ ಒತ್ತಾಯಿಸುತ್ತಿದ್ದಾರೆ.

50ಕ್ಕೂ ಹೆಚ್ಚು ಮನೆಗಳ ಕುಸಿತ: ಶಿರೋಳ ಗ್ರಾ.ಪಂ. ವ್ಯಾಪ್ತಿಯ ಕಪ್ಪಲಿ ಗ್ರಾಮದಲ್ಲಿ ಸುಮಾರು 150ಕ್ಕೂ ಹೆಚ್ಚು ಮನೆಗಳಿದ್ದು ಸುಮಾರು ಒಂದು ಸಾವಿರ ಜನಸಂಖ್ಯೆ ಹೊಂದಿದೆ. ಆದರೆ, ಇತ್ತೀಚೆಗೆ ಉಂಟಾಗಿದ್ದ ಪ್ರವಾಹದಲ್ಲಿ ಗ್ರಾಮದಲ್ಲಿ ಮೂರ್‍ನಾಲ್ಕು ದಿನ ಜಲಾವೃತಗೊಂಡಿತ್ತು. ಪರಿಣಾಮ 50ಕ್ಕೂ ಹೆಚ್ಚುಮನೆಗಳು ಕುಸಿದು ಬಿದ್ದಿವೆ. ದಿನ ಕಳೆದಂತೆ ಮನೆಯ ಗೋಡೆಗಳು ನೆಲಕ್ಕುರುಳುತ್ತಿವೆ.

ಹೊರಗಡೆಯಿಂದ ನೋಡಲು ಚೆನ್ನಾಗಿಯೇ ಕಂಡರೂ ಮಣ್ಣಿನ ಗೋಡೆಗಳು ನೀರು ನುಂಗಿದ್ದರಿಂದ ಇಂದೋ- ನಾಳೆಯೋ ಬೀಳುವಂತಿವೆ ಎನ್ನುತ್ತಾರೆ ಗ್ರಾಮದ ಕಲ್ಲಯ್ಯ ಪೂಜಾರ.

ಭಾಗಶಃ ಬಿದ್ದ ಮನೆಗಳಲ್ಲೇ ವಾಸ: ನೆರೆ ಆವರಿಸಿದ್ದಾಗ ಊರಿನ ಜನರು ಹೊಸ ಪ್ಲಾಟ್‌ಗಳಲ್ಲಿ ಸಂಬಂಧಿಕರು, ಸ್ನೇಹಿತರ ಮನೆಗಳಲ್ಲಿ ಆಶ್ರಯ ಪಡೆದಿದ್ದರೆ, ಇನ್ನಿತರರು ತಾಟಪಾಲ್ನಿಂದ ಟೆಂಟ್ ನಿರ್ಮಿಸಿಕೊಂಡಿದ್ದರು. ಪ್ರವಾಹ ಇಳಿದ ಬಳಿಕ ತಮ್ಮ ಅಳಿದುಳಿದ ಮನೆಗಳಲ್ಲೇ ಸ್ವಚ್ಛಗೊಳಿಸಿಕೊಂಡು ಜೀವನ ಕಟ್ಟಿಕೊಳ್ಳುತ್ತಿದ್ದಾರೆ.

ಗ್ರಾಮದ ಹಲವು ಮನೆಗಳು ಸಂಪೂರ್ಣ ಕುಸಿದಿದ್ದು, ನೆರೆ-ಹೊರೆಯರು ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಬೆರಳೆಣಿಕೆಯಷ್ಟು ಕುಟುಂಬಗಳು ಹೊಸ ಪ್ಲಾಟ್‌ನ ಸಂಬಂಧಿಕರ ಮನೆಗಳಲ್ಲೇ ಮುಂದುವರಿಯುತ್ತಿದ್ದಾರೆ. ಮತ್ತೂಬ್ಬರ ಮನೆಗಳಲ್ಲಿ ಆಶ್ರಯ ಸಿಕ್ಕಿದ್ದರೂ ಅದು ಅಡುಗೆ, ಊಟ ಹಾಗೂ ಒಬ್ಬರಿಗೆ ಮಾತ್ರ ಇರಲು ಜಾಗ ಸಾಲುತ್ತದೆ. ಇನ್ನುಳಿದವರು ಗ್ರಾಮದ ದೇವಸ್ಥಾನಗಳಲ್ಲೇ ರಾತ್ರಿ ಕಳೆಯುವಂತಾಗಿದೆ. ತಣ್ಣನೆಯ ಗಾಳಿ ಬೀಸುವುದರಿಂದ ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಹುಚ್ಚಪ್ಪ ಬ. ಚಿಕ್ಕನರಗುಂದ ತಮ್ಮ ಅಳಲು ತೋಡಿಕೊಂಡರು.

ಇನ್ನೂ ಕೆಲವರು ಭಾಗಶಃ ಬಿದ್ದಿರುವ ಮನೆಗಳಲ್ಲೇ ಜೀವ ಕೈಯಲ್ಲಿಡಿದು ದಿನ ಕಳೆಯುತ್ತಿದ್ದಾರೆ. ಇದು ಇಲ್ಲಿನ ನೆರೆ ಸಂತ್ರಸ್ತರ ದಯನೀಯ ಸ್ಥಿತಿಗೆ ಹಿಡಿದ ಕನ್ನಡಿ.

2007, 2009 ಹಾಗೂ ಅದಕ್ಕಿಂತ ಮುಂಚೆಯೂ ಸೇರಿದಂತೆ ನಾಲ್ಕು ಬಾರಿ ಗ್ರಾಮ ಪ್ರವಾಹಕ್ಕೆ ತುತ್ತಾಗಿದೆ. ಈ ಪೈಕಿ 2009 ಹಾಗೂ 2019ರ ಪ್ರವಾಹ ಭೀಕರವಾಗಿದೆ. 2009 ರಲ್ಲಿ ಭಾರೀ ಮಳೆ, ಪ್ರವಾಹ ಬಂದಾಗ ಕಪ್ಪಲಿ ಗ್ರಾಮವನ್ನು ಮುಳುಗಡೆ ಗ್ರಾಮವೆಂದು ಘೋಷಿಸಿ, ನವ ಗ್ರಾಮವನ್ನಾಗಿಸುತ್ತೇವೆ. ಹೊಸ ಮನೆ ಕಟ್ಟಿಕೊಡುತ್ತೇವೆ ಎಂದು ಅಧಿಕಾರಿಗಳ ಮಾತಿಗೆ ಸಮ್ಮತಿಸದೇ ನಾವು ತಪ್ಪು ಮಾಡಿದೆವು. ಯಾವತ್ತಾದರೂ ಈ ಗ್ರಾಮಕ್ಕೆ ಜಲ ಕಂಟಕ ತಪ್ಪಿದ್ದಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ.

ಈ ಹಿನ್ನೆಲೆಯಲ್ಲಿ ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಶೆಡ್‌ ನಿರ್ಮಿಸಿಕೊಡಬೇಕು. ಗ್ರಾಮವನ್ನು ಆದಷ್ಟು ಬೇಗ ಸ್ಥಳಾಂತರಿಸಬೇಕು. ಮಕ್ಕಳಿಗೆ ಶಾಲೆ, ಆಸ್ಪತ್ರೆಯನ್ನು ಒಳಗೊಂಡಿರುವಂತೆ ಸುಸಜ್ಜಿತ ನವಗ್ರಾಮವನ್ನು ನಿರ್ಮಿಸಬೇಕು ಎಂದು ಗ್ರಾಮಸ್ಥರು ಒಕ್ಕೋರಲಿನಿಂದ ಒತ್ತಾಯಿಸುತ್ತಿದ್ದಾರೆ.

 

•ವೀರೇಂದ್ರ ನಾಗಲದಿನ್ನಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ